ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಂಸ್ಕೃತಿಕ ಒಡೆತನ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಡೆತನದ ನಿಲುವುಗಳು ನೆಲ, ಜಲ ಮುಂತಾದವುಗಳಿಗೆ ಮಾತ್ರ ಸೀಮಿತವಾದವುಗಳಲ್ಲ. ಅವುಗಳು  ಸಾಂಸ್ಕೃತಿಕ ತಿಳಿವಿನವರೆಗೂ ಚಾಚಿಕೊಂಡಿವೆ.  ಸಂಸ್ಕೃತಿ ಇಲ್ಲವೇ ಸಾಹಿತ್ಯಕ ವಿದ್ಯಮಾನವನ್ನು ಹೀಗೆ ಯಾವುದೇ ಒಂದು ಜಾತಿ, ಮತ, ಧರ್ಮಗಳಿಗೆ ಸೇರಿದ ಆಸ್ತಿಯೆಂದು ತಿಳಿಯುವ ಬಗೆಯೇ ಅತ್ಯಂತ ಅಪಾಯಕಾರಿ ನಿಲುವಾಗಿದೆ. ಈ ಬಗೆಯ ಸಾಂಸ್ಕೃತಿಕ, ಸಾಹಿತ್ಯಕ ಬೆಳವಣಿಗೆಗಳ ಮೇಲೆ ಒಡೆತನವನ್ನು ಹೊಂದುವ ಹಪಾಪಿತನಕ್ಕೆ ಇವತ್ತಿಗೂ ಕೊರತೆಯಿಲ್ಲ. ಇದೊಂದು ರಾಜಕೀಯ ಒತ್ತಾಯದ ನೆಲೆಯಾಗಿ ಮೇಲ್ನೋಟಕ್ಕೆ ಕಂಡರೂ, ಅದು ರಾಜಕೀಯ ಉದ್ದೇಶವನ್ನು ಮಾತ್ರ ಹೊಂದಿರದೇ, ಆಯಾ ಧರ್ಮಗಳ ಒಳ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಇರಾದೆಯನ್ನು ಹೊಂದಿರುತ್ತದೆ.

ಒಂದೊಂದು ಧರ್ಮಕ್ಕೂ ತಾನು ನಿರಂತರವಾಗಿ ಕಾಪಾಡಿ ಕೊಂಡು ಬಂದಿರುವ ತನ್ನ ಅಧಿಕಾರದ ಹಾಗೂ ಯಜಮಾ ನಿಕೆಯ ನೆಲೆಗಳನ್ನು ಹಾಗೇ ಉಳಿಸಿಕೊಳ್ಳಬೇಕು ಎನ್ನುವ ಹಟಮಾರಿತನದ ಕಾರಣಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಡೆಗಳು ಈಗಲೂ ಮೊದಲಾಗುತ್ತವೆ. ಇಂತಹ ಧರ್ಮರಾಜಕಾರಣಕ್ಕೆ ಯಾವುದೇ ಬಗೆಯ ಸಾಮಾಜಿಕ ಕಾಳಜಿಗಿಂತ ತನ್ನ ಕರ್ಮಠ ಸಿದ್ಧಾಂತವೇ ಮುಖ್ಯವಾಗುತ್ತದೆ. ಇಂತಹ ಜನವಿರೋಧಿ ನಿಲುವುಗಳನ್ನೇ ಆಯಾ ಧರ್ಮದ ಮೇಲ್ಮೆಯ ಸಂಕೇತವನ್ನಾಗಿಯೂ ಬಿಂಬಿಸಲಾಗುತ್ತದೆ. ಇದೊಂದು ಚಾರಿತ್ರಿಕ ವಿಪರ್ಯಾಸವೇ ಸರಿ. ಈ ಹೊತ್ತಿ ನಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿಲುವುಗಳು ಈ ಒಡೆತನದ ಪ್ರಶ್ನೆಗಳೇ ಆಗಿರುತ್ತವೆ ಎಂಬುದು ಮಾತ್ರ ದಿಟ.    

ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಬಹುಸಾಂಸ್ಕೃತಿಕ ಸಮು ದಾಯಗಳಲ್ಲಿ ಸಾಮಾಜೀಕರಣ ಇಲ್ಲವೇ ಸಾಮಾಜಿಕ ನಂಟನ್ನು ನೆಲೆಗೊಳಿಸುವ ಬಗೆಯಾಗಿರುತ್ತದೆ. ಇದು ಸಮೂಹಗಳ ನಡುವೆ ಒಡಕುಗಳನ್ನು ಉಂಟುಮಾಡುವ ಕ್ರಮವಲ್ಲ. ಬದಲಾಗಿ ಸಮೂಹಗಳ ಅರಿವಿನ ಎಲ್ಲೆಗಳನ್ನು ಹಿಗ್ಗಿಸುವ, ಬದುಕಿನ ವಿನ್ಯಾಸಗಳನ್ನು ಮರುರೂಪಿಸಿಕೊಳ್ಳುವ ಮಾದರಿಯೂ ಆಗಿರುತ್ತದೆ. ದಿಟ, ಕೆಲವು ಬರಹಗಾರರು ಸಾಮಾಜಿಕ ಒಡಕನ್ನು ಉಂಟುಮಾಡಲೆಂದೇ ಸಾಹಿತ್ಯಕ ಇಲ್ಲವೇ ಇತರೆ ಬರಹಗಳನ್ನು ಬಳಸಿಕೊಳ್ಳುತ್ತಾರೆ.

ಕನ್ನಡ ಸಾಹಿತ್ಯ ಇಲ್ಲವೇ ಅರಿವಿನ ಲೋಕಕ್ಕೆ ಇದೇನು ಹೊಸದಾದ ಸಂಗತಿಯಲ್ಲ. ಹಾಗಂತ ಈ ನಿಲುವುಗಳು ಹೀಗೇ ಮುಂದುವರೆ ಯಬೇಕು ಎಂಬುದು ನನ್ನ ವಾದವಲ್ಲ. ಬದಲಾಗಿ ಒಂದು ಸಮುದಾಯದ ಬದುಕಿನ ಕ್ರಮ ಮತ್ತೊಂದು ಸಮುದಾಯಕ್ಕೆ ಹೇಗೆ ದಾರಿಯಾಗಬಲ್ಲದು ಎಂಬುದನ್ನು ಅರಿವ ಜರೂರಿದೆ. ಇಂತಹ ಬದುಕಿನ ಕ್ರಮಗಳೇ ತಿಳಿವಿನ ಮಾದರಿ ಹಾಗೂ ತಾತ್ವಿಕ ವಿನ್ಯಾಸಗಳಾಗಿ ನೆಲೆಗೊಳ್ಳುತ್ತವೆ. ತಿಳಿವು ಹಾಗೂ ತತ್ವಗಳು ಆಕಾಶದಿಂದ ಈ ನೆಲಕ್ಕೆ ಉದುರುವುದಿಲ್ಲ. ಅವು ಸಮೂಹದ ಒಳಗಿಂದಲೇ ಹುಟ್ಟುತ್ತವೆ.

ಒಂದೊಂದು ಸಮುದಾಯಕ್ಕೂ ಇಂತಹ ತಿಳಿವು ಮತ್ತು ತತ್ವಗಳು ವಿಶಿಷ್ಟವಾಗಿರುತ್ತವೆ. ಈ ವಿಶಿಷ್ಟತೆ ಎಂಬುದು ಆಯಾ ಸಮುದಾ ಯದ ಗುರುತುಗಳೂ ಆಗಿರುತ್ತವೆ. ಆದರೆ ಧರ್ಮರಾಜಕಾರಣವು ಈ ಗುರುತುಗಳ ನಡುವೆಯೇ ಅಸಮಾನತೆಯ ನೆಲೆಗಳನ್ನು ಹುಟ್ಟು ಹಾಕುತ್ತದೆ. ಗುರುತು ಎಂಬು ವುದು ಒಂದು ಸಂಕರಗೊಂಡ ನೆಲೆಯಾಗಿ ರುತ್ತದೆ ಎನ್ನುವ ದಿಟವನ್ನೇ ಇಂತಹ ಧರ್ಮರಾಜಕಾರಣವು ಮರೆಯುತ್ತದೆ. ಶುದ್ಧತೆ, ಪಾವಿತ್ರ್ಯ ಹಾಗೂ ಮಡಿವಂತಿಕೆಗಳೇ ಇಂತಹ ಧರ್ಮದ ಚಹರೆಗಳು ಎಂದು ಈ ಧರ್ಮರಾಜಕಾರಣಿಗಳು ಯಾವತ್ತೂ ಭ್ರಮಿಸು ತ್ತಾರೆ. ಹಾಗೂ ಅದೇ ನಿಲುವನ್ನು ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನವನ್ನು ಮಾಡುತ್ತಾರೆ. ಹಾಗಾಗಿ ಸಾಮಾಜಿಕ ಸೀಳುಗಳು ಇನ್ನಷ್ಟು ಬಿಗಡಾಯಿಸುವುದಕ್ಕೆ ಇಂತಹ ರಾಜಕಾರಣವೇ ಮೂಲ ಕಾರಣವಾಗುತ್ತದೆ.

ಸಾಮಾಜಿಕ ಸನ್ನಿವೇಶಗಳು ಒಂದಕ್ಕೊಂದು ಬೆರೆತುಕೊಂಡು ಬದುಕಿನ ಏಳ್ಗೆಯ ತತ್ವಗಳಾಗಿ ರೂಪುಗೊಳ್ಳುತ್ತವೆ. ಈ ತಾತ್ವಿಕ ವಿನ್ಯಾಸಗಳನ್ನೇ ಸಾಮಾಜೀಕರಣವೆಂದು ಕರೆಯಲಾಗುತ್ತದೆ. ಅಂದರೆ ಸಾಮಾಜೀಕರಣ ಎಂಬುದು ನಂಟಿನ ನೆಲೆಯೇ ಹೊರತು ಒಡಕಿನ ಮೂಲವಲ್ಲ. ಆದಾಗ್ಯೂ ಯಾಕೆ ಸಮೂಹ ಗಳಲ್ಲಿ ಒಡಕುಗಳು ಉಂಟಾಗುತ್ತವೆ. ಏಕೆಂದರೆ ಕೆಲವು ಜಾತಿ, ಧರ್ಮಗಳು ಆಳದಲ್ಲಿ ಶ್ರೇಷ್ಠತೆಯ ಕಲ್ಪನೆಯನ್ನು ಹುಟ್ಟಿಸಿಕೊಂಡು, ತಮ್ಮೊಟ್ಟಿಗೆ ಬದುಕುವ ಇತರೆ ಸಮೂಹ ಗಳನ್ನು ಕೀಳಾಗಿ ಕಾಣುತ್ತವೆ. ಅದಕ್ಕಾಗಿಯೇ ಒಂದು ಜಾತಿಯು ಮತ್ತೊಂದು ಜಾತಿಗಿಂತ ಮೇಲು ಇಲ್ಲವೇ ಕೀಳು ಎನ್ನುವ ರೂಪಕವಾಗಿ ಬಳಕೆಯಾಗುತ್ತದೆ. ದಿಟದಲ್ಲಿ ಒಳಿತು ಇಲ್ಲವೇ ಕೆಡುಕಿನ ನೆಲೆಗಳು ಹೀಗೆ ಯಾವುದೇ ಜಾತಿ ಇಲ್ಲವೇ ಪ್ರಾಣಿಗಳ ಸ್ವರೂಪದಲ್ಲಿ ಇರುವುದಿಲ್ಲ. ಆದರೂ ಯಾವುದೇ ಪ್ರಾಣಿಯನ್ನು ಹಾಗೂ ಜಾತಿಯನ್ನು, ಇನ್ನ್ಯಾವುದೇ ಜಾತಿಯ ಕೇಡಿನ ಲಕ್ಷಣವನ್ನಾಗಿ ಕಂಡರಿಸಲಾ ಗುತ್ತದೆ. ಇದನ್ನು ಆಯಾ ಧರ್ಮ, ಜಾತಿ, ವ್ಯಕ್ತಿಯ ಅಹಂ ಎಂದೇ ಗುರುತಿಸಬೇಕಾ ಗುತ್ತದೆ. ಪ್ರಜಾಪ್ರಭುತ್ವದ ಈ ಹೊತ್ತಿ ನಲ್ಲೂ ಇಂತಹ ಅಪಚಾರಗಳು ಯಾವುದೇ ಸಾಮಾಜಿಕ ಮುಜುಗರ ವಿಲ್ಲದೆ ನಡೆಯುತ್ತವೆ. ಆಯಾ ಧರ್ಮ, ಜಾತಿ ಹಾಗೂ ವ್ಯಕ್ತಿಗಳು ಅಳವಡಿಸಿ ಕೊಂಡಿರುವ ಶ್ರೇಷ್ಠತೆಯ ವ್ಯಸನವೇ ಇದಕ್ಕೆಲ್ಲ ಕಾರಣ.

ಈಗ ‘ಢುಂಡಿ’ ಕಾದಂಬರಿಗೆ ಸಂಬಂಧಿಸಿದಂತೆ, ಒಟ್ಟಾರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಹತ್ತಿಕ್ಕುವ ಪ್ರಯತ್ನಗಳ ನಡೆಯುತ್ತವೆ ಎನ್ನುವುದರ ಬಗೆಗೆ ಚರ್ಚೆಗಳು ನಡೆಯುತ್ತಿರುವ, ಈ ವೇಳೆಯಲ್ಲಿಯೇ   ಡಾ. ಕೆ. ವೈ. ನಾರಾಯಣಸ್ವಾಮಿ ಅವರ ಈಚಿನ ನಾಟಕ ‘ಚಕ್ರರತ್ನ’ದ ನಿಲುವುಗಳನ್ನು ಜೈನ ಸಮುದಾಯದವರು ವಿರೋಧಿಸುತ್ತಿದ್ದಾರೆ. ಕಾರಣ ಈ ನಾಟಕದಲ್ಲಿ ಬಾಹುಬಲಿಯನ್ನು ಲೋಕದ ಗಾಯಗಳನ್ನು ಹೊಲೆಯುವ ಚಮ್ಮಾರನನ್ನಾಗಿ ಚಿತ್ರಿಸಲಾಗಿದೆ. ಇದು ಬಾಹುಬಲಿಯನ್ನು ಸಾಂಸ್ಕೃತಿಕ ರೂಪಕವನ್ನಾಗಿ ರೂಪಿಸಿದ ಕ್ರಮ ಮಾತ್ರ. ಅಂದರೆ ಯುದ್ಧ ವಿರೋಧಿ ನೀತಿಯನ್ನು ಪಾಲಿಸುವ ಹಾಗೂ ಜಗಕ್ಕೆಲ್ಲ ಶಾಂತಿಯನ್ನು ಬಯಸುವ ಬಾಹುಬಲಿಯು, ಸಮುದಾಯಗಳ ನಡುವಿನ ಬಿರುಕು ಇಲ್ಲವೇ ಗಾಯಗಳನ್ನು ಹೊಲೆಯುವ ಚಮ್ಮಾರನಾಗಿದ್ದಾನೆ. ಪ್ರಭುತ್ವದ ಹಿಂಸೆಯ ನಿಲುವುಗಳನ್ನು ಸೂಚಿಸುವ ರೂಪಕವಾಗಿ ಚಕ್ರರತ್ನದ ನಿಲುವುಗಳನ್ನು ರೂಪಿಸಲಾಗಿದೆ. ಈ ನಿಲುವು ಸಮುದಾಯದ ಒಗ್ಗಟ್ಟನ್ನು ರೂಪಿಸುವುದರ ಸೂಚಕವೇ ಹೊರತು ಅದು ಸಾಮಾಜಿಕ ಹಾಗೂ ಭಾವನಾ ತ್ಮಕವಾಗಿ ಅವಮಾನಿಸುವ ನೆಲೆಯಾಗಿಲ್ಲ. ಈ ದಿಟವನ್ನು ಚಕ್ರರತ್ನ ನಾಟಕದ ನಿಲುವುಗಳನ್ನು ವಿರೋಧಿಸುವವರಿಗೆ ಅರಿಯಲು ಸಾಧ್ಯವಾಗಿಲ್ಲ. ಸಾಂಸ್ಕೃತಿಕ ರೂಪಕಗಳ ರಾಜಕಾರಣವು ಶುರುಗೊಂಡಿರುವುದೇ ಜೈನ ಸಾಹಿತ್ಯದ ಮೂಲಕ ಎನ್ನುವ ದಿಟವನ್ನು ತಿಳಿಯದೆ ಇರುವುದು ಅಚ್ಚರಿಯ ಸಂಗತಿಯೇ ಸರಿ.

  ಸಾಂಸ್ಕೃತಿಕ ರೂಪಕಗಳನ್ನು ಮೇಲ್ಚಲನೆಯ ನೆಲೆಯಾಗಿ ಬಳಸಿದರೆ, ಬಹುತೇಕವಾಗಿ ಯಾವುದೇ ತಕರಾರುಗಳು ಇರಲಾರವು. ಆದರೆ ಕೆಳ್ಚಲನೆಯ ನೆಲೆಯಾಗಿ ಇಂತಹ ರೂಪಕಗಳನ್ನು ಬಳಸಿದರೆ ತಕರಾರುಗಳು ಶುರುವಾಗುತ್ತವೆ. ‘ಜಲಗಾರ’ ನಾಟಕದಲ್ಲಿ ಶಿವನನ್ನೇ ಜಲಗಾರನನ್ನಾಗಿಸಿದಾಗ ಸಿಕ್ಕ ಸಾಂಸ್ಕೃತಿಕ ಒಪ್ಪಿಗೆ, ‘ಶೂದ್ರತಪಸ್ವಿ’ ನಾಟಕದಲ್ಲಿ ಶಂಭುಕನನ್ನು ಉನ್ನತೀಕರಿಸುವಲ್ಲಿ ಕುವೆಂಪು ಅವರಿಗೆ ಸಿಗಲಿಲ್ಲ. ಬದಲಾಗಿ ವಿರೋಧಗಳು ಎದುರಾದವು. ನೀರನ್ನು ತೀರ್ಥವೆಂದು ಕರೆದರೆ ಒಪ್ಪುವ ಮನಸ್ಸುಗಳು, ತೀರ್ಥವನ್ನು ನೀರೆಂದು ಕರೆದರೆ ಇಂತಹ ಮನಸ್ಸುಗಳು ಒಪ್ಪಿದ ಬಗೆಗಳನ್ನು ಇಡೀ ಚರಿತ್ರೆಯಲ್ಲಿಯೇ ಕಾಣಲು ಸಾಧ್ಯವಿಲ್ಲ.
ಹಾಗಾಗಿ ತೀರ್ಥವನ್ನು ನೀರು ಎಂದು ಕರೆದರೆ ಏನೆಲ್ಲ ಅಪಚಾರಗಳನ್ನು ಕಲ್ಪಿಸಲಾಗುತ್ತದೆಯೋ, ಅದೇ ಬಗೆಯ ಕಲ್ಪನೆಯನ್ನೂ ಚಕ್ರರತ್ನ ನಾಟಕದ ಚಮ್ಮಾರನ ರೂಪಕಕ್ಕೂ ಕಲ್ಪಿಸಲಾಗಿದೆ. ಧರ್ಮ, ಜಾತಿ, ಪ್ರಭುತ್ವದ ಹಿತಾಸಕ್ತಿಗಳೇ ಮುನ್ನೆಲೆಗೆ ಬರುತ್ತಿರುವ ಎಲ್ಲ ಸನ್ನಿವೇಶದಲ್ಲಿಯೂ, ಅಭಿವ್ಯಕ್ತಿ
ಸ್ವಾತಂತ್ರ್ಯವು ಹರಣಗೊಳ್ಳದೇ ಬೇರೆ ದಾರಿಗಳುಂಟೇ?

ಜೈನ ಪರಂಪರೆಯ ಕವಿ ಪಂಪನು ಹೇಳಿದಂತೆ, ‘ಅರಿವನ್ನು ಹೊಸದು ಮಾಡುವುದೇ ಧರ್ಮ. ಹೊಸದನ್ನು ನೋಡುವ
ಬಗೆಯನ್ನು ತಡೆಯುವುದೇ ಅಧರ್ಮ’. ಈ ವಿವೇಕದ ಮಾತುಗಳು ಇವತ್ತಿಗೂ ನಮ್ಮ ಬದುಕಿನ ದಾರಿಗಳನ್ನು ತೋರಿಸುವ ದೀಪವಾಗಿವೆ. ಈ ದಿಟವನ್ನು ಅರಿತರೆ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸಲು ಸಾಧ್ಯವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT