ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ-ವಿಷಾದ

Last Updated 7 ಡಿಸೆಂಬರ್ 2012, 20:09 IST
ಅಕ್ಷರ ಗಾತ್ರ

ಬೆಂಗಳೂರು: `ಮುಂಬೈ ಬಂದ್ ವಿರುದ್ಧ ಫೇಸ್‌ಬುಕ್ ಮೂಲಕ ಧ್ವನಿ ಎತ್ತಿದ್ದಕ್ಕೆ ಇಬ್ಬರು ಯುವತಿಯರನ್ನು ಬಂಧಿಸಿ ಜೈಲಿಗೆ ಅಟ್ಟಲಾಯಿತು. ಮಂಗಳೂರಿನಲ್ಲಿ ಯುವತಿಯರ ಮೇಲೆ ರೌಡಿ ಗ್ಯಾಂಗ್ ದೌರ್ಜನ್ಯ ನಡೆಸಿದ್ದನ್ನು ವರದಿ ಮಾಡಿದ ಪತ್ರಕರ್ತನನ್ನೇ ಬಂಧಿಸಲಾಯಿತು. ಈ ಘಟನೆಗಳು ನನಗೆ ತುಂಬಾ ನೋವುಂಟು ಮಾಡಿದೆ' ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ತಿಳಿಸಿದರು.

ಬೆಂಗಳೂರು ಸಾಹಿತ್ಯ ಹಬ್ಬ ಸಂಘಟನಾ ಸಮಿತಿಯ ಆಶ್ರಯದಲ್ಲಿ ನಗರದ ಜಯಮಹಲ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ `ಬೆಂಗಳೂರು ಸಾಹಿತ್ಯ ಹಬ್ಬ-2012' ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ದೇಶದಲ್ಲಿ ವಿದೇಶಿಯರ ಆಳ್ವಿಕೆಯಲ್ಲಿ ಇದ್ದಾಗಲೂ ಸಾಹಿತಿಗಳು ಸ್ವತಂತ್ರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ರವೀಂದ್ರನಾಥ ಟ್ಯಾಗೋರ್ ಮೊದಲಾದ ಲೇಖಕರು ಸತ್ಯ ವಿಚಾರಗಳನ್ನು ಯಾವುದೇ ಅಂಜಿಕೆ ಇಲ್ಲದೆ ಬರಹ ರೂಪಕ್ಕೆ ಇಳಿಸಿದ್ದರು. ನವಾಬರ ಕಾಲದಲ್ಲೂ ಇದೇ ಪರಿಸ್ಥಿತಿ ಇತ್ತು' ಎಂದು ಅವರು ಅಭಿಪ್ರಾಯಪಟ್ಟರು.

`ಕೆಲವು ಬಾರಿ ಸತ್ಯವನ್ನು ನೇರವಾಗಿ ಹೇಳಲು ಆಗದಿದ್ದಾಗ ರೂಪಕಗಳ ಮೂಲಕ ಅವರು ಪ್ರತಿಕ್ರಿಯಿಸಿದರು. ಲೇಖಕರು ಸತ್ಯದ ರಕ್ಷಣೆ ಮಾಡಿದ್ದರು. ಬರಹಗಾರರ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿರಲಿಲ್ಲ' ಎಂದು ಅವರು ನೆನಪಿಸಿಕೊಂಡರು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, `ದೇಶದಲ್ಲಿ ಈಗ ಪ್ರತಿ ಭಾಷೆಯನ್ನು ಇಂಗ್ಲಿಷ್‌ಗೆ ಸಮಾನಾಂತರವಾಗಿ ಕಾಣುವ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಭಾಷೆಯ ಸಾಹಿತ್ಯ ಇಂಗ್ಲಿಷ್ ಸಾಹಿತ್ಯದಷ್ಟೇ ಬೆಳೆದಿದೆ. ಈಗ ನಾವು ಕೀಳರಿಮೆ ಪಡುವ ಅಗತ್ಯ ಇಲ್ಲ' ಎಂದರು.

`ಕೆಲವು ವರ್ಷಗಳ ಹಿಂದೆ ಸಾಹಿತ್ಯದಲ್ಲಿ ಪಶ್ಚಿಮ ರಾಷ್ಟ್ರಗಳಿಂದ ಬೇಕಾದಷ್ಟು ಮಾದರಿಗಳನ್ನು ತರುತ್ತಿದ್ದೆವು. ಈಗ ಅಂತಹ ಸ್ಥಿತಿ ಇಲ್ಲ. ವಿದೇಶಿ ಸಾಹಿತ್ಯದ ಜತೆಗೆ ನಮ್ಮ ಸಾಹಿತ್ಯವನ್ನು ಸಮಾನವಾಗಿ ಕಾಣುವ ಸ್ಥಿತಿ ನಿರ್ಮಾಣವಾಗಿರುವುದು ಉತ್ತಮ ಬೆಳವಣಿಗೆ' ಎಂದರು.

`ವಿದೇಶದಲ್ಲಿ ಪುಸ್ತಕವನ್ನು ಓದಿ ಎಸೆದು ಬಿಡುತ್ತಾರೆ. ನಾವು ಪುಸ್ತಕವನ್ನು ಓದಿದ ಬಳಿಕ ಜತನದಿಂದ ಕಾಪಾಡುತ್ತೇವೆ. ರಾಮಾಯಣ ಹಾಗೂ ಮಹಾಭಾರತದ ಕೃತಿಗಳನ್ನು ಆಸ್ತಿಯ ಹಾಗೆ ಕಾಪಾಡುತ್ತಿದ್ದೇವೆ. ಪುಸ್ತಕ ಪ್ರೀತಿಯ ದೇಶ ನಮ್ಮದು' ಎಂದು ಅವರು ಶ್ಲಾಘಿಸಿದರು.

ಲೇಖಕಿ ಶಶಿ ದೇಶಪಾಂಡೆ ಮಾತನಾಡಿ, `ಕನ್ನಡ ಹಳೆಯ ಹಾಗೂ ಶ್ರೀಮಂತ ಭಾಷೆ. ಇಂಗ್ಲಿಷ್ ಯುವ ಭಾಷೆ. ಕೆಲವು ಸಮಯದಲ್ಲಿ ಇಂಗ್ಲಿಷ್ ಭಾಷೆ ಬೆಳೆದು ಶ್ರೀಮಂತ ಭಾಷೆಯಾಗಲಿದೆ. ನಮ್ಮ ಭಾಷೆಯೇ ಶ್ರೇಷ್ಠ ಎಂಬ ಭಾವನೆ ಸರಿಯಲ್ಲ' ಎಂದರು.
`ಸಾಹಿತ್ಯ ಹಬ್ಬವನ್ನು ಆಯೋಜಿಸಿರುವುದು ಶ್ಲಾಘನೀಯ. ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಪ್ರತಿಭಾ ಪ್ರದರ್ಶನ ಮಾಡಲು ಯುವ ಸಾಹಿತಿಗಳಿಗೆ ಇದೊಂದು ಉತ್ತಮ ಅವಕಾಶ' ಎಂದು ಅವರು ತಿಳಿಸಿದರು.

ಸಂಘಟಕ, ಲೇಖಕ ವಿಕ್ರಂ ಸಂಪತ್ ಮಾತನಾಡಿ, `ಈ ಹಬ್ಬ ಭಾರತ ಹಾಗೂ ಅಂತರರಾಷ್ಟ್ರೀಯ ಸಾಹಿತ್ಯ ವಲಯದ ಕಲೆ, ಸಂಸ್ಕೃತಿಗಳ ಕಾರ್ಯಕ್ರಮ. ಆಧುನಿಕ ಚಿಂತಕರ ಚರ್ಚೆಯ ವೇದಿಕೆಯಾಗಲಿದೆ. ಭಾರತ ಹಾಗೂ ಭಾರತೀಯ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ' ಎಂದರು.

ಈ ಸಂದರ್ಭದಲ್ಲಿ `ಬೀನ್ ಟೌನ್' ಪತ್ರಿಕೆ ಬಿಡುಗಡೆ ಮಾಡಲಾಯಿತು. `ಪ್ರಜಾವಾಣಿ' ಹಾಗೂ `ಡೆಕ್ಕನ್ ಹೆರಾಲ್ಡ್' ಸಹಯೋಗದಲ್ಲಿ ಸಾಹಿತ್ಯ ಹಬ್ಬವನ್ನು ಆಯೋಜಿಸಲಾಗಿದೆ. ಭಾನುವಾರದವರೆಗೂ ಸಾಹಿತ್ಯ ಹಬ್ಬ ಮುಂದುವರಿಯಲಿದೆ.

`ಭ್ರಷ್ಟರಾಗದೆ ಉಳಿದಿರುವುದು ಸಾಹಿತಿಗಳು ಮಾತ್ರ'
`ಎಲ್ಲ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಆದರೆ, ಭ್ರಷ್ಟರಾಗದೆ ಪರಿಶುದ್ಧರಾಗಿ ಉಳಿದಿರುವುದು ಸಾಹಿತಿಗಳು ಮಾತ್ರ' ಎಂದು ಹಿರಿಯ ಕವಿ ಗುಲ್ಜಾರ್ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಕೆಲವು ವರ್ಷಗಳ ಮೊದಲೇ ನಗರದಲ್ಲಿ ಸಾಹಿತ್ಯ ಹಬ್ಬ ನಡೆಯಬೇಕಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೆ ಕನ್ನಡದ ನೆಲ ಕೇಂದ್ರಸ್ಥಾನ ಇದ್ದಂತೆ. ಇಲ್ಲಿ ಸಾಹಿತ್ಯೋತ್ಸವ ನಡೆಸುವುದರಿಂದ ಭಾಷೆಗಳ ನಡುವೆ ಸಂವಾದ, ಸಂವಹನ ನಡೆಸಿ ಭಾಷೆಗಳ ಶ್ರೀಮಂತಿಕೆಯನ್ನು ತಿಳಿದುಕೊಳ್ಳಲು ಅವಕಾಶ ದೊರಕಿದಂತೆ ಆಗುತ್ತದೆ' ಎಂದರು.

`ಮಕ್ಕಳ ಸಾಹಿತ್ಯ ಚಟುವಟಿಕೆಗಳು ಅಧಿಕ ಪ್ರಮಾಣದಲ್ಲಿ ನಡೆದು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಕೆಲಸ ಆಗಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಪಂಪ, ರನ್ನ ಸಾಹಿತ್ಯದ ವಿಸ್ಮಯಗಳು'
`ಪಂಪ ಹಾಗೂ ರನ್ನ ಜಗತ್ತಿನ ಯಾವ ಭಾಷೆಯ ಸಾಹಿತ್ಯದಲ್ಲೂ ಕಾಣದ ವಿಸ್ಮಯಗಳು' ಎಂದು ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇದೆ. ದೇಶದ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳು ಅದ್ಭುತ ಸೃಜನಶೀಲ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಬರಹಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದರೆ ಅವರು ವಿಶ್ವದ ಶ್ರೇಷ್ಠ ಸಾಹಿತಿಗಳ ಪಟ್ಟಿಯಲ್ಲಿ ಹೆಸರು ಸೇರುತ್ತಿದ್ದರು' ಎಂದರು.

`ಒಂದು ಕಾಲದಲ್ಲಿ ಇಂಗ್ಲಿಷ್ ಕಾಡುಭಾಷೆ ಆಗಿತ್ತು. 16ನೇ ಶತಮಾನದವರೆಗೂ ಲ್ಯಾಟೀನ್ ಭಾಷೆ ಇಂಗ್ಲೆಂಡಿನ ರಾಜಭಾಷೆ ಆಗಿತ್ತು. ಬಳಿಕ ಇಂಗ್ಲಿಷ್ ಭಾಷೆ ಪ್ರಖ್ಯಾತಿಗೆ ಬಂತು. ಕನ್ನಡ ಭಾಷೆಗೆ ಈಗಲೂ ದೊಡ್ಡ ಮಾನ್ಯತೆ ಇದೆ. ಭವಿಷ್ಯದಲ್ಲೂ ಹಿಂದಿಯ ಒತ್ತಡ ಹಾಗೂ ಇಂಗ್ಲಿಷ್ ಭಾಷೆಯ ಪ್ರಭಾವದ ನಡುವೆಯೂ ಕನ್ನಡ ಭಾಷೆ ಅಜೇಯ ಭಾಷೆಯಾಗಿ ನಿಲ್ಲಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT