ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿಗೆ ಅಂಕುಶ: ಹಿತ ಕಾಯುವುದೋ ಹದ್ದುಬಸ್ತಿನಲ್ಲಿಡುವುದೋ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ


ಪತ್ರಿಕೆಗಳನ್ನು ಅಂಕೆಯಲ್ಲಿಡುವ ಅಥವಾ ಅಂಕುಶದಿಂದ ನಿಯಂತ್ರಿಸುವ ಪ್ರಯತ್ನ ಅಥವಾ ಪ್ರಸ್ತಾವನೆ ಹೊಸದಲ್ಲ. ಭಾರತದಲ್ಲಿ ಪತ್ರಿಕೆಗಳು ಆರಂಭವಾದಾಗಲಿಂದ (ಅಂದರೆ ದೇಶದ ಪ್ರಥಮ ಪತ್ರಿಕೆ `ಬಂಗಾಳ ಗೆಜೆಟ್~ 1780ರ ಜನವರಿಯಲ್ಲಿ ಹೊರಬಂದ ದಿನದಿಂದ) ಪತ್ರಿಕೆಗಳ ಮೇಲೆ ಒಂದಲ್ಲ ಒಂದು ರೀತಿ ನಿಯಂತ್ರಣ ಹೇರುವ ಪ್ರಸ್ತಾವನೆಗಳು ಹಾಗೂ ಪ್ರಯತ್ನಗಳು ನಡೆದೇ ಇವೆ.

ಈಗ ಭಾರತದ ಪತ್ರಿಕಾ ಮಂಡಳಿಯ ನೂತನ ಅಧ್ಯಕ್ಷರಾದ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ಸರದಿ ಎಂದು ತೋರುತ್ತದೆ. ಇತ್ತೀಚೆಗೆ ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನ್ಯಾಯಮೂರ್ತಿ ಖಟ್ಜು ಅವರು ಭಾರತೀಯ ಸಮೂಹ ಮಾಧ್ಯಮದ ಕಾರ‌್ಯವೈಖರಿ ಬಗ್ಗೆ ನಿರಾಶೆ ತೋಡಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮ ಜನರ ಹಿತ ಕಡೆಗಣಿಸುತ್ತಿದೆ ಎಂದು ದೂರಿದ್ದಾರೆ. ಪರಿಸ್ಥಿತಿಯನ್ನು ಸಭೆ, ಸಂಧಾನ ಮತ್ತು ಜನತಾಂತ್ರಿಕ ವಿಧಾನಗಳ ಮೂಲಕ ತಿದ್ದಲು ಸಾಧ್ಯವಿಲ್ಲದಿದ್ದರೆ ಕೆಲವು ಪ್ರಕರಣಗಳಲ್ಲಿ ಕಠಿಣ ಕ್ರಮಗಳ ಅವಶ್ಯಕತೆ ಬೀಳಬಹುದು ಎಂದು ಎಚ್ಚರಿಸಿದ್ದಾರೆ ಎಂದು ವರದಿ ಆಗಿದೆ. ಅವರ ಚಿಂತನೆಯಲ್ಲಿ ಕೆಲವು ಕ್ರಮಗಳ ಸೂಚನೆ ಇದೆ. ಅವುಗಳಲ್ಲಿ ಕೆಲವು ಸರ್ಕಾರಿ ಜಾಹೀರಾತು ಖೋತಾ, ಲೈಸನ್ಸ್ ಅಥವಾ ಮಾನ್ಯತೆ ರದ್ದು ಮತ್ತು ದಂಡ ಶುಲ್ಕ. ನ್ಯಾಯಮೂರ್ತಿ ಖಟ್ಜುರವರ ಯೋಚನೆಯ ಜಾಡಿನಲ್ಲಿಯೇ ಹಿಂದೆ ಅನೇಕ ಅಧಿಕಾರಾರೂಢರು ಪತ್ರಿಕೆಗಳನ್ನು `ಸರಿದಾರಿಗೆ ತಂದು ಹದ್ದುಬಸ್ತಿನಲ್ಲಿ ಇಡಬೇಕು~ ಎಂದು ಹೊರಟಿದ್ದರು.

ಭಾರತದ ಪತ್ರಿಕಾ ಇತಿಹಾಸದತ್ತ ಕಣ್ಣು ಹಾಯಿಸಿದರೆ 1780 ರಿಂದ 1980 ರವರೆಗೆ, ಅಂದರೆ ದೇಶದ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರಾ ನಂತರದ ಅವಧಿಯಲ್ಲಿ ಪತ್ರಿಕೆಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಪ್ರಯತ್ನಗಳು ಮತ್ತು ಅಧಿಕಾರಾರೂಢರ ಕೆಂಗಣ್ಣಿಗೆ ಗುರಿಯಾದ ಪತ್ರಿಕೆಗಳ ಹುಟ್ಟಡಗಿಸುವ ಯತ್ನ ವಿಫಲವಾದ ಉದಾಹರಣೆಗಳು ಕಾಲಗರ್ಭದಲ್ಲಿ ಕಣ್ಮರೆಯಾಗಿವೆ. ಕೆಲವು ಶಾಸನಗಳನ್ನು ಉದಾಹರಿಸಬಹುದಾದರೆ, 1931ರಲ್ಲಿ ತಂದ ಇಂಡಿಯನ್ ಪ್ರೆಸ್ (ಎಮರ್‌ಜೆನ್ಸಿ) ಶಾಸನ, 1951ರಲ್ಲಿ ತಂದ `ಪ್ರೆಸ್ ಅಬ್ಜಕ್ಷನಬಲ್ ಮ್ಯಾಟರ್ಸ್‌~ ಶಾಸನ ರಾಷ್ಟ್ರದಲ್ಲಿ 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಜಾರಿಗೆ ತಂದ `ಡಿಫೆನ್ಸ್ ಆಫ್ ಇಂಡಿಯಾ~ ಕಟ್ಟಲೆಗಳ ಅಡಿಯಲ್ಲಿ ಪತ್ರಿಕೆಗಳ ವರದಿಗಳ ಮೇಲೆ ಪೂರ್ವಪರಿಶೀಲನ (ಸೆನ್ಸಾರ್‌ಶಿಪ್) ನಿಯಂತ್ರಣ ಮತ್ತು ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ 1988ರಲ್ಲಿ ತಂದ ಡಿಫಮೇಷನ್ ಕಾಯ್ದೆ (ಅದನ್ನು ವ್ಯಾಪಕ ವಿರೋಧದ ನಡುವೆ ವಾಪಸು ಪಡೆಯಲಾಯಿತು) ಮತ್ತು 1975ರಲ್ಲಿ  ಇಂದಿರಾಗಾಂಧಿಯವರ ಸರ್ಕಾರ ಪತ್ರಿಕೆಗಳ ಏಕಸ್ವಾಮ್ಯವನ್ನು ಕೊನೆಗೊಳ್ಳುವ ಪ್ರಯತ್ನ, ನಮ್ಮ ಸ್ಮರಣೆಯಲ್ಲಿ ಇನ್ನೂ ಉಳಿದಿವೆ.

ಈಗ ನ್ಯಾಯಮೂರ್ತಿ ಖಟ್ಜು ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಮಾಧ್ಯಮ ಕ್ಷೇತ್ರದಲ್ಲಿ ಎಬ್ಬಿಸಿದ ಬಿರುಗಾಳಿ, ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಅರ್ಧ ಶತಮಾನದ ಕಾಲ ಸಂಬಂಧ ಹೊಂದಿರುವಂಥ ನಮ್ಮಂಥವರಿಗೆ ವಿಸ್ತೃತ ಸುದ್ದಿ ಮಾಧ್ಯಮದ ಮುಂದಿನ ಬೆಳವಣಿಗೆ ಮತ್ತು ಅದು ಪಡೆದುಕೊಂಡಿದ್ದ ಸಮಾಜದ ವಿಶ್ವಾಸಾರ್ಹತೆ, ಅದು ಬಿತ್ತರಿಸುವ ಸುದ್ದಿಯ ಬಗೆಗಿನ ನಂಬಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿರುವವರ ನಡೆ ನುಡಿಗಳ ಬಗ್ಗೆ ಚಿಂತನೆಗೆ ಒಳ್ಳೆಯ ಗ್ರಾಸ ಒದಗಿಸಿದೆ ಎನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಮೌಲ್ಯಗಳ ಅಧಃಪತನವಾಗಿದೆ, ಪತ್ರಿಕಾ ಸ್ವಾತಂತ್ರ್ಯ ಒಂದು ಜವಾಬ್ದಾರಿರಹಿತ ಪರವಾನಗಿ (ಲೈಸೆನ್ಸ್) ಆಗಿ ಪರಿವರ್ತನೆಯಾಗಿದೆ ಎಂಬ ದೂರು ವ್ಯಾಪಕವಾಗುತ್ತಿದೆ ಮತ್ತು ಇದು ಹೆಚ್ಚಾಗಿ ರಾಜಕೀಯ ಕ್ಷೇತ್ರಗಳಲ್ಲಿರುವವರಿಂದ ಬರುತ್ತಿದೆ. ಜನಸಾಮಾನ್ಯರು, ಇಂತಹ ಆಪಾದನೆ ಮಾಡುತ್ತಿಲ್ಲ. ಇದು ಉತ್ಪ್ರೇಕ್ಷೆ ಎಂದು ತಳ್ಳಿಹಾಕಲಾಗುವುದಿಲ್ಲ. ಪ್ರಾಜ್ಞ ವರ್ಗ ಮತ್ತು ಹಲವು ಬುದ್ಧಿಜೀವಿಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕಾವಲು ನಾಯಿಯಂತೆ ಜನಹಿತದ ಕಡೆ ಸದಾ ಜಾಗರೂಕತೆಯಿಂದ ಇರಬೇಕು; ಆದರೆ ಈಗ ಮಾಧ್ಯಮಕ್ಕೆ ಒಂದು ಕಾವಲುನಾಯಿ ಹಾಕಬೇಕೆಂಬ ಪರಿಸ್ಥಿತಿ ಉಂಟಾಗಿದೆ ಎಂಬ ವ್ಯಂಗ್ಯದ ಮಾತು ಆಡಲು ಆರಂಭಿಸಿದ್ದಾರೆ. ಇದು ಪತ್ರಿಕೆಗಳು ಶತಮಾನಗಳಿಂದ ಸಮಾಜದಲ್ಲಿ ಗಳಿಸಿದ ಗೌರವ, ಅವುಗಳ ಉಜ್ವಲ ಪರಂಪರೆ ಮತ್ತು ಜನತೆ ಅವುಗಳ ಬಗ್ಗೆ ಇರುವ ವಿಶ್ವಾಸಾರ್ಹತೆಗೆ ಕುಠಾರಪ್ರಾಯವಾಗುವ ಭಯ ನಮ್ಮನ್ನು ಕಾಡುತ್ತಿದೆ.

ಪತ್ರಿಕಾ ಸ್ವಾತಂತ್ರ ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯ. ಅದು ದುರಾಡಳಿತದ ವಿರುದ್ಧ ಶಕ್ತಿಯುತವಾದ ಗುರಾಣಿ ಇದ್ದಂತೆ ಎಂದು ಈಗಲೂ ವ್ಯಾಪಕವಾದ ನಂಬಿಕೆ ಇದೆ.
ಚರಿತ್ರೆಯ ಪುಟಗಳನ್ನು ತಿರುವಿದರೆ ಹೆಸರಾಂತ ನಾಯಕರು, ಆಡಳಿತಗಾರರು ಯಾವ ಕಾರಣಕ್ಕೂ ಪತ್ರಿಕಾ ಸ್ವಾತಂತ್ರ ಮೊಟಕಾಗಬಾರದು, ಮುಕ್ಕಾಗಬಾರದು ಎಂಬ ನಿಲುವು ತಳೆದಿದ್ದರು. ಉದಾಹರಣೆಗೆ ಜವಾಹರಲಾಲ್ ನೆಹರೂ ಅವರು ಪತ್ರಿಕೆಗಳು ತೆಗೆದುಕೊಳ್ಳುವ ಸ್ವಾತಂತ್ರ್ಯ ಸರ್ಕಾರಕ್ಕೆ ಇಷ್ಟವಾಗದೆ ಇದ್ದರೂ ಮತ್ತು ಅದು ಅಪಾಯ ಅನ್ನಿಸಿದರೂ ಕೂಡ ಪತ್ರಿಕಾ ಸ್ವಾತಂತ್ರ ವಿಷಯದಲ್ಲಿ ಸರ್ಕಾರ ಪ್ರವೇಶಿಸುವುದು ತಪ್ಪು ಎಂದು ಸಾರಿದ್ದರು. ಅವರು `ಶಂಕರ್ಸ್‌ ವೀಕ್ಲಿ~ ವಾರಪತ್ರಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತ ತಾವು ಕರ್ತವ್ಯಲೋಪ ಮಾಡಿದಾಗ ತಮ್ಮನ್ನು ಬಿಡಕೂಡದು ಎಂದು ಪತ್ರಿಕೆಗಳಿಗೆ ಕರೆಕೊಟ್ಟಿದ್ದರು.

ಪತ್ರಿಕೆಗಳು ಹಾಗೂ ಪತ್ರಿಕಾಕ್ಷೇತ್ರ ಸುಮಾರು 230 ವರ್ಷಗಳು ಭಾರತದಲ್ಲಿ ಬೆಳೆದುಬಂದ ಪರಿಯನ್ನು ವಿಶ್ಲೇಷಿಸಿದರೆ ಹಲವಾರು ಪತ್ರಿಕೆಗಳು ತಮ್ಮ ನಿರ್ಭೀತ ಧೋರಣೆಯಿಂದ ಮತ್ತು ಸರ್ಕಾರದ ದುರ್ವರ್ತನೆ ಹಾಗೂ ಅಧಿಕಾರಾರೂಢರ ದುರಾಡಳಿತಗಳನ್ನು ಖಂಡಿಸಿದಾಗ ಅಂದಿನ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾದವು.

ಅನೇಕ ಸಂದರ್ಭಗಳಲ್ಲಿ ತಮ್ಮ ಮುದ್ರಣ ಯಂತ್ರಗಳನ್ನು ಸರ್ಕಾರ ವಶಪಡಿಸಿಕೊಂಡಾಗ ಅಸಹಾಯಕತೆಯಿಂದ ವೀಕ್ಷಿಸಿದರು. ಆದರೂ ಅಂದಿನ ಆಡಳಿತ ಪತ್ರಕರ್ತರ ಅಥವಾ ಪತ್ರಿಕೆಗಳ ಚಾರಿತ್ರ್ಯದ ಬಗ್ಗೆ ಒಂದು ಕೆಟ್ಟ ಶಬ್ದವನ್ನು ಆಡಿದ ಉದಾಹರಣೆಗಳಿಲ್ಲ. ಅಂದಿನ ಪತ್ರಕರ್ತರು ಎಷ್ಟೇ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿದರೂ, `ಕಾಸಿಗಾಗಿ ಸುದ್ದಿ” ಎಂಬ ಪರಿಸ್ಥಿತಿಗೆ ಅವಕಾಶ ಕೊಡಲಿಲ್ಲ. ಪತ್ರಿಕಾ ಸ್ವಾತಂತ್ರ್ಯ್ರ ಮೊಟಕುಗೊಳಿಸಿದಾಗ ಜಗ್ಗಲಿಲ್ಲ ಮತ್ತು ಅವರ ಅವಿರತ ಹೋರಾಟದಿಂದ ಅಂದಿನ ಸರ್ಕಾರಗಳನ್ನು ಮಣಿಸಿದರು.

ಸ್ವಾತಂತ್ರ್ಯ ಬಂದ ನಂತರ ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ರೂಪಿಸದೆ ಅದು ಮೂಲಭೂತ ಹಕ್ಕಾದ ವಾಕ್‌ಸ್ವಾತಂತ್ರ್ಯದಲ್ಲಿ ಅಡಕವಾಗಿದೆ ಎಂದು ಘೋಷಿಸಲಾಗಿದೆ. ಈ ಸ್ವಾತಂತ್ರ್ಯ ಭ್ರಷ್ಟವಾಗಬಾರದು.

ಪತ್ರಿಕಾಸ್ವಾತಂತ್ರ ಮತ್ತು ಜವಾಬ್ದಾರಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸತ್ಯಾಧಾರಿತ, ನಂಬಿಕೆಗೆ ಅರ್ಹವಾದ, ವಾಸ್ತವವಾದ ಮತ್ತು ನಿಷ್ಪಕ್ಷವಾದ ವರದಿಗಳನ್ನು ಪತ್ರಕರ್ತರು ಜನತೆಗೆ  ಒದಗಿಸಲು ಸಹಕಾರಿಯಾಗಲಿ ಎಂಬುದು ಈ ಪತ್ರಿಕಾ ಸ್ವಾತಂತ್ರ್ಯದ ಮೂಲ ಉದ್ದೇಶ.

ನ್ಯಾಯಮೂರ್ತಿ ಖಟ್ಜು ತಾವು ಹೊಸದಾಗಿ ವಹಿಸಿಕೊಂಡಿರುವ ಪತ್ರಿಕಾ ಮಂಡಳಿಯ ಅಧ್ಯಕ್ಷಗಿರಿ ಅವಧಿಯಲ್ಲಿ ಮಾಧ್ಯಮ ಕ್ಷೇತ್ರವನ್ನು `ಶುದ್ಧ~ಗೊಳಿಸಲು ಹೊರಟ ಅವರ ಚಿಂತನಾಲಹರಿ ಪತ್ರಿಕಾ ಸಂಪಾದಕರ ಕೂಟ, ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ ಹಾಗೂ ನ್ಯಾಷನಲ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್‌ಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ಮಾಧ್ಯಮ ಧುರೀಣರು ಚೇಳು ಕಡಿದಂತೆ ವರ್ತಿಸದೆ ನ್ಯಾಯಮೂರ್ತಿ ಖಟ್ಜು ಅವರ ಅಭಿಪ್ರಾಯ ಎಷ್ಟು ಸರಿ? ಮತ್ತು ವಸ್ತುಸ್ಥಿತಿ ಏನು ಎಂದು ಅವಲೋಕಿಸಬೇಕು. ಪತ್ರಿಕೆಗಳು ಮತ್ತು ಪತ್ರಕರ್ತರು ಪತ್ರಿಕಾಧರ್ಮದ ಚೌಕಟ್ಟಿನಿಂದ ಜಾರುತ್ತಿದ್ದಾರೆಯೆ? ಎಲೆಕ್ಟ್ರಾನಿಕ್ ಮಾಧ್ಯಮ ಜನಹಿತ ಕಡೆಗಣಿಸಿ, ಹಲವು ಸಲ ಜನವಿರೋಧಿಯಂತೆ ನಡೆದುಕೊಳ್ಳುತ್ತಿದೆಯೆ? ಎಲೆಕ್ಟ್ರಾನಿಕ್ ಮಾಧ್ಯಮವನ್ನೂ ಕೂಡ ಪತ್ರಿಕಾ ಮಂಡಳಿ ವ್ಯಾಪ್ತಿಗೆ ತರುವ ಅಥವಾ ಪ್ರತ್ಯೇಕ ಮಂಡಳಿ ರಚಿಸುವ ಸಾಧಕ ಬಾಧಕಗಳೇನು? ನ್ಯಾಯಮೂರ್ತಿ ಖಟ್ಜು ಅವರು ಸೂಚಿಸಿರುವ ಅತಿರೇಕದ ಪ್ರಕರಣಗಳಿಗೆ ಕಠಿಣ ದಂಡನಾತ್ಮಕ ಕ್ರಮಗಳು ಸಮಂಜಸವೆ, ಕಾರ್ಯಸಾಧುವೆ?  ಎಂಬ ಈ ಎಲ್ಲ ವಿಷಯಗಳು ಕುರಿತಾಗಿ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಕೂಲಂಕುಷ ಚರ್ಚೆಗೆ ಮುಂದಾಗಬೇಕು. ನ್ಯಾಯಮೂರ್ತಿ ಖಟ್ಜು ಅವರೆ ಸೂಚಿಸಿರುವಂತೆ ಪತ್ರಕರ್ತರ ಸಭೆ, ಚರ್ಚೆ, ಸಂವಾದ ಮತ್ತು ಜನತಾಂತ್ರಿಕ ವಿಧಾನಗಳಲ್ಲಿ ಪ್ರಸಕ್ತ ಪರಿಸ್ಥಿತಿಯ ವಿಶ್ಲೇಷಣೆ ಮತ್ತು ಪರಿಹಾರ ಮಾರ್ಗ ಹುಡುಕುವ ಕಾರ್ಯವಾಗಬೇಕು.

ಜನಹಿತ ಪತ್ರಿಕೆಗಳ ಮತ್ತು ಮಾಧ್ಯಮದ ಇತರ ವರ್ಗಗಳ ಪರಮೋಚ್ಚ ಧ್ಯೇಯವೆಂದು ಒಪ್ಪಿ ಮಾಧ್ಯಮದ ಮೇಲೆ ನಿಯಂತ್ರಣ ಹೇರುವ ಅಥವಾ ಅಂಕುಶ ಝಳಪಿಸುವ ಕ್ರಮಕ್ಕಿಂತ, ಮಾಧ್ಯಮ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರು, ತಮ್ಮ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ತಾವೇ ಸ್ವಯಂ ನಿಯಂತ್ರಣ ಮಾಡಿಕೊಂಡು, ತಾವೇ ಪರಿಣಾಮಕಾರಿ ನೀತಿ ಸಂಹಿತೆಯನ್ನು ರೂಪಿಸಿಕೊಂಡು ಆ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಸಮೂಹ ಮಾಧ್ಯಮ ಕ್ಷೇತ್ರದ ಉನ್ನತಿಗೆ ಹಾಗೂ ಪಾವಿತ್ರ್ಯತೆಗೆ ಸಾಧಕವಾಗಬಹುದು ಎಂಬುದು ಸಾರ್ವತ್ರಿಕ ನಂಬಿಕೆ.

ಇನ್ನೊಂದು ವಿಷಯ ಪ್ರಸ್ತಾಪ ಮಾಡಬೇಕಾದ ಅನಿವಾರ್ಯತೆ. ನ್ಯಾಯಮೂರ್ತಿ ಖಟ್ಜು ಅವರು ಪತ್ರಕರ್ತರ ಕಳಪೆ ಬೌದ್ಧಿಕ ಗುಣಮಟ್ಟದ ಬಗ್ಗೆ ಅನವಶ್ಯಕ ಟೀಕೆ ಮಾಡಿದ್ದಾರೆ ಎನ್ನಿಸುತ್ತದೆ. ಅವರು ಬಹುತೇಕ ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜನೀತಿ, ಸಾಹಿತ್ಯ ಮತ್ತು ತತ್ವಶಾಸ್ತ್ರದ ತಿಳುವಳಿಕೆ ಇಲ್ಲ ಎಂದು ಕುಹಕವಾಡಿದ್ದಾರೆ ಎಂದು ವರದಿ ಆಗಿದೆ. ಹಾಗಿದ್ದಲ್ಲಿ ನ್ಯಾಯಮೂರ್ತಿಗಳು ಬಂದಂತ ಕ್ಷೇತ್ರದಲ್ಲಿರುವವರೆಲ್ಲ ಪ್ರಖಾಂಡ ಪಂಡಿತರೆ ಮತ್ತು ನ್ಯಾಯಾಂಗದಲ್ಲಿಯೂ ಇರಬಹುದಾದ ಕಳಪೆ ಗುಣಮಟ್ಟ ಅವರ ಅವಗಾಹನೆಗೆ ಬಂದಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ.

ನಾನು ಒಬ್ಬ ಪತ್ರಕರ್ತನಾಗಿ, 45 ವರ್ಷಗಳಷ್ಟು ಕಾಲ ವಿವಿಧ ಕ್ಷೇತ್ರಗಳ ರಾಜ್ಯದ ಉಚ್ಚ ನ್ಯಾಯಾಲಯದ ತೀರ್ಪುಗಳೂ ಸೇರಿ ವರದಿಯನ್ನು ಯಶಸ್ವಿಯಾಗಿ ಮಾಡಿಲ್ಲವೆ? ನನ್ನಂತಹ ನೂರಾರು ಪತ್ರಕರ್ತರಿದ್ದಾರೆ. ಪತ್ರಕರ್ತನಿಗೆ ಬೇಕಾದ್ದು. ಸತತ ತಯಾರಿ ಮತ್ತು ಎಲ್ಲ ವಿಷಯಗಳ ಮತ್ತು ಘಟನೆಗಳ ಯಥಾವತ್ತಾದ ವರದಿಗಳನ್ನು ಕೊಡುವ ಸಾಮರ್ಥ್ಯ ಮತ್ತು ಕಲೆ. ನ್ಯಾಯಮೂರ್ತಿ ಖಟ್ಜು ಅವರು ಒಂದೊಮ್ಮೆ ಉದ್ದೇಶಪೂರ್ವಕವಲ್ಲದ ಟೀಕೆ ಮಾಡಿದ್ದರೆ ಅದನ್ನು ಹಿಂತೆಗೆದುಕೊಳ್ಳಲು ಅವರು ಹಿಂಜರಿಯುವುದಿಲ್ಲವೆಂದು ನಂಬಿದ್ದೇನೆ. ಪತ್ರಕರ್ತರ ಹಿತವನ್ನು ಕಾಯಬೇಕಾದ ಹುದ್ದೆ ವಹಿಸಿಕೊಂಡವರಿಂದ ಇಂತಹ ಅಭಿಪ್ರಾಯಗಳು ಅನಪೇಕ್ಷಿತ.
(ಲೇಖಕರು: ಹಿರಿಯ ಪತ್ರಕರ್ತರು ಮತ್ತು ಮಾಜಿ ಎಂ.ಎಲ್.ಸಿ.)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT