ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭೇದ್ಯ ದೌಲತಾಬಾದ್!

Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಶತ್ರುಗಳಿಂದ ರಕ್ಷಿಸಿಕೊಳ್ಳಲು ಹಿಂದೆ ರಾಜ ಮಹಾರಾಜರುಗಳು ಕೋಟೆಗಳನ್ನು ಕಟ್ಟುತ್ತಿದ್ದರು. ಇಂಥ ಕೋಟೆಗಳ್ಲ್ಲಲಿ ವಿಶಿಷ್ಟವಾದುದು ದೌಲತಾಬಾದ್ ಕೋಟೆ. ಇದು ಮಹಾರಾಷ್ಟ್ರದ ಔರಂಗಾಬಾದ್‌ನಿಂದ 13 ಕಿ.ಮೀ. ದೂರದಲ್ಲಿದೆ. ಬೆಟ್ಟದ ಮೇಲೆ ನಿರ್ಮಿಸಲಾದ 12ನೇ ಶತಮಾನದ ಈ ರಚನೆ `ಅಭೇದ್ಯ ಕೋಟೆ' ಎಂದೇ ಪ್ರಸಿದ್ಧವಾಗಿದೆ.

ದಕ್ಷಿಣ ಪ್ರಸ್ಥಭೂಮಿಯಿಂದ 600 ಅಡಿ ಎತ್ತರದಲ್ಲಿ ಈ ಕೋಟೆಯನ್ನು ನಿರ್ಮಿಸಿರುವುದರಿಂದಲೇ ಇದಕ್ಕೆ ವಿಪರೀತ ಮಹತ್ವ. ಮಧ್ಯಕಾಲೀನ ಕೋಟೆಗಳ ಪೈಕಿ ಈಗಲೂ ಹಾಳಾಗದೆ ಉಳಿದ ಜಗತ್ತಿನ ಅತ್ಯುತ್ತಮ ಕೋಟೆಗಳಲ್ಲಿ ಒಂದೆನ್ನುವುದು ಇದರ ಹೆಗ್ಗಳಿಕೆ.

ಈ ಕೋಟೆಯನ್ನು ಹಿಂದೆ ದೇವಗಿರಿ ಎಂದು ಕರೆಯುತ್ತಿದ್ದರು. ಎಲ್ಲೋರಾದ ಪ್ರಸಿದ್ಧ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದ್ದ ರಾಷ್ಟ್ರಕೂಟ ದೊರೆಗಳೇ ಈ ಕೋಟೆಯನ್ನೂ ಕಟ್ಟಿರಬಹುದೆಂದು ಕೆಲ ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. 12 ಮತ್ತು 13ನೇ ಶತಮಾನಗಳಲ್ಲಿ ಸುಮಾರು 131 ವರ್ಷಗಳ ಕಾಲ ಯಾದವರು ಈ ಕೋಟೆಯಲ್ಲಿ ಆಳ್ವಿಕೆ ನಡೆಸಿದ್ದರು ಎಂಬ ದಾಖಲೆಗಳು ಲಭ್ಯವಿವೆ.

ಅಲ್ಲಾವುದ್ದೀನ್ ಖಿಲ್ಜಿ, ಮಲ್ಲಿಕಾಫರ್, ಕುತ್ಬುದ್ದೀನ್ ಮುಬಾರಕ್ ಖಿಲ್ಜಿ ಮುಂತಾದ ದೆಹಲಿ ಸುಲ್ತಾನರು ಈ ಕೋಟೆಯ ಮೇಲೆ ಸತತ ದಾಳಿ ನಡೆಸಿದರು. ಮಹಮ್ಮದ್ ಬಿನ್ ತುಘಲಕ್ ದೆಹಲಿಯಿಂದ ತನ್ನ ರಾಜಧಾನಿಯನ್ನು ದೇವಗಿರಿಗೆ ವರ್ಗಾಯಿಸಿದಾಗ, ಈ ಪ್ರದೇಶಕ್ಕೆ ದೌಲತಾಬಾದ್ ಎಂಬ ಹೆಸರಿಟ್ಟ. ಇದು ಕೆಲ ಕಾಲ ದೇಶದ ರಾಜಧಾನಿಯೂ ಆಗಿತ್ತು. ಆದರೆ ನೀರಿನ ಅಭಾವದಿಂದ ರಾಜಧಾನಿ ನಗರವಾಗಿಯೇ ಅದು ಬಹಳ ಕಾಲ ಉಳಿಯಲಿಲ್ಲ.
ಬಹಮನಿ ಸುಲ್ತಾನರು, ಮೊಘಲ್ ದೊರೆ ಷಹಜಹಾನ್, ಔರಂಗಜೇಬ, ಹೈದರಾಬಾದ್ ನಿಜಾಮರು, ಮರಾಠರು ಈ ಕೋಟೆಯನ್ನು ಆಳಿದ್ದಾರೆ.

ದೌಲತಾಬಾದ್ ಕೋಟೆಯನ್ನು ಆಕ್ರಮಿಸುವುದು ವೈರಿಗಳಿಗೆ ಕಷ್ಟದ ವಿಚಾರವಾಗಿತ್ತು. ಏಕೆಂದರೆ ಇದನ್ನು ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರದ ಏಕಮೇವ ಶಿಲಾ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಕಲ್ಲಿನ ಬೆಟ್ಟವನ್ನು ವೈರಿಗಳು ಹತ್ತಲಾಗದಂತೆ ಕಡಿದಾಗಿಸಲಾಗಿದೆ. 40 ಅಡಿ ಆಳದ ಕಂದಕ ಕೋಟೆಯ ಸುತ್ತಲೂ ಇದೆ. ಆ ಕಂದಕಗಳಲ್ಲಿ ಮೊಸಳೆಗಳನ್ನು ಬಿಡಲಾಗುತ್ತಿತ್ತಂತೆ. 5 ಕಿಮೀ ಉದ್ದಕ್ಕೆ ಚಾಚಿಕೊಂಡಿರುವ ಭದ್ರ ಗೋಡೆ ದೌಲತಾಬಾದ್‌ಗೆ ಭದ್ರತೆ ಒದಗಿಸಿತ್ತು. ಇದರಲ್ಲಿ ಅಂಬರ್‌ಕೋಟ್, ಮಹಾಕೋಟ್ ಮತ್ತು ಖಾಲಾಕೋಟ್ ಎಂಬ ಮೂರು ರಕ್ಷಣಾ ಕೋಟೆಗಳಿವೆ.

ಆನೆಗಳು ಮತ್ತು ಕುದುರೆಗಳು ನಡೆಯಲು ಕಷ್ಟವಾಗುವಂತಹ ಹಾದಿಗಳ ನಿರ್ಮಾಣ, ಆನೆಗಳು ದ್ವಾರವನ್ನು ಭೇದಿಸಲು ಗುದ್ದದಿರಲಿ ಎಂದು ಚೂಪಾದ ಉಕ್ಕಿನ ರಚನೆಗಳನ್ನು ಹೊದಿಸಿರುವ ಬಾಗಿಲುಗಳು, ಶತ್ರುಗಳನ್ನು ದಿಕ್ಕುತಪ್ಪಿಸಲೆಂದು ನಿರ್ಮಿಸಿರುವ ಪ್ರವೇಶದ್ವಾರಗಳು, ವೀಕ್ಷಣಾ ಗೋಪುರಗಳು, ಶತ್ರುಗಳ ಕಣ್ಣಿಗೆ ಕತ್ತಲೆ ಕವಿಸಿ ತಮ್ಮವರನ್ನೇ ಕೊಂದುಕೊಳ್ಳುವಂತೆ ನಿರ್ಮಿಸಿದ ಕತ್ತಲ ಹಾದಿ, ಶತ್ರುಗಳ ಮೇಲೆ ಕಾದ ಎಣ್ಣೆ ಸುರಿಯಲು ಹಾಗೂ ಪಿರಂಗಿಗಳಿಂದ ಕೊಲ್ಲಲು ಸೈನಿಕರು ಕೂರುವ ರಹಸ್ಯ ತಾಣಗಳು- ಇವೆಲ್ಲ ಕಾರಣಗಳು ಸೇರಿ ದೌಲತಾಬಾದ್‌ನ ಕೋಟೆ ಅಭೇದ್ಯ ಎನಿಸಿದೆ.

ಸದಾ ಕಾಲ ನೀರು ಇರುವಂತೆ ನಿರ್ಮಿಸಲಾದ ಮೆಟ್ಟಿಲುಗಳುಳ್ಳ ಬಾವಿಗಳು ಕೋಟೆಯಲ್ಲಿನ ಜನರ ಅಗತ್ಯವನ್ನು ಪೂರೈಸುತ್ತಿದ್ದವು. ಈ ಬಾವಿಗಳು ಒಂದಕ್ಕೊಂದು ಸಂಪರ್ಕವನ್ನು ಹೊಂದಿವೆ ಹಾಗೂ ಕಂದಕದಲ್ಲಿಯೂ ಸದಾ ನೀರಿರುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಾರತ ಸ್ವಾತಂತ್ರ್ಯಗೊಂಡ ಒಂದು ವರ್ಷದ ನಂತರ ನಿಜಾಮರ ಆಳ್ವಿಕೆಯಿಂದ ಈ ಕೋಟೆ ಸ್ವತಂತ್ರವಾದ ಮೇಲೆ, ಕೋಟೆಯೊಳಗೆ ಭಾರತಮಾತಾ ದೇವಾಲಯವೊಂದನ್ನು ನಿರ್ಮಿಸಲಾಗಿದೆ.

ದೌಲತಾಬಾದ್ ಕೋಟೆಯೊಳಗೆ ಮೂರು ಅಂತಸ್ತುಳ್ಳ 65 ಮೀಟರ್ ಎತ್ತರದ ಚಾಂದ್ ಮಿನಾರ್, ಜಾಮಿ ಮಸೀದಿ, ಅರಮನೆ, ಟಗರಿನ ತಲೆಯ ಆಕಾರದ 180 ಡಿಗ್ರಿ ಕೋನದಲ್ಲಿ ತಿರುಗುವ ಮೆಂಧಾ ತೋಪ್ ಎಂಬ ಬೃಹತ್ ಪಿರಂಗಿ, ಆನೆ ಕೊಳದಂತಹ ಪ್ರಮುಖ ಸ್ಮಾರಕಗಳಿವೆ.    

1447ರಲ್ಲಿ ಅಲಾ ಉ್ದ್ದದೀನ್ ಬಹಮನಿ ನಿರ್ಮಿಸಿದ್ದ ಚಾಂದ್‌ಮಿನಾರ್ 65 ಮೀಟರ್ ಎತ್ತರ, 21 ಮಿಟರ್ ಸುತ್ತಳತೆಯ ಸ್ಮಾರಕ. ಇದನ್ನು ಪರ್ಶಿಯಾದ ಹೊಳಪಿನ ಟೈಲ್ಸ್‌ಗಳಿಂದ ಸಿಂಗರಿಸಲಾಗಿತ್ತು. ಇಲ್ಲಿನ ಚಿನಿ ಮಹಲ್‌ನಲ್ಲಿ ಗೋಲ್ಕಂಡದ ಕೊನೆಯ ಕುತುಬ್ ಷಾಹಿ ದೊರೆ ಅಬ್ದುಲ್ ಹಸನ್‌ತಾನಾ ಷಾನನ್ನು ಔರಂಗಜೇಬ 13 ವರ್ಷ ಕಾಲ ಬಂಧಿಸಿ ಇರಿಸಿದ್ದ. 1318ರಲ್ಲಿ ಕುತುಬ್ ಉದ್ದೀನ್ ಮುಬಾರಕ್ ನಿರ್ಮಿಸಿದ 106 ಕಂಬಗಳ ಜಾಮಿ ಮಸೀದಿಯೂ ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ.

ಪ್ರಕೃತಿ, ವಾಸ್ತುಶಿಲ್ಪ, ತಂತ್ರಗಾರಿಕೆ, ಚಾಣಾಕ್ಷತೆ ಎಲ್ಲವೂ ಮೇಳೈಸಿರುವ ದೌಲತಾಬಾದ್ ಕೋಟೆ ಭಾರತದಲ್ಲಿರುವ ಕೋಟೆಗಳಿಗೆಲ್ಲ ಶಿಖರಪ್ರಾಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT