ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಆಖೈರು: ಕೊನೆಗೊಳ್ಳದ ಕಸರತ್ತು

ವಿಧಾನಸಭೆ ಚುನಾವಣೆ 2013
Last Updated 2 ಏಪ್ರಿಲ್ 2013, 5:49 IST
ಅಕ್ಷರ ಗಾತ್ರ

ಹಾಸನ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಏಳು ಕ್ಷೇತ್ರಗಳ ಚಿತ್ರಣ ನಿಧಾ ನಕ್ಕೆ ತಿಳಿಗೊಳ್ಳಲು ಆರಂಭವಾಗಿದೆ. ಚುನಾ ವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲು, ಮತ್ತು ನಂತರದ ದಿನಗಳಲ್ಲಿ ಎದ್ದಿರುವ ಊಹಾಪೋಹಗಳು, ಗಾಳಿ ಸುದ್ದಿಗಳಿಗೆ ಪೂರ್ಣವಿರಾಮ ಬಿದ್ದಿಲ್ಲವಾದರೂ, ಟಿಕೆಟ್ ಯಾರಿಗೆ, ಕಣದಲ್ಲಿ ಯಾರ‌್ಯಾರು ಉಳಿಯಬಹುದು ಎಂಬ ವಿಚಾರ ನಿಚ್ಚಳವಾಗುತ್ತಿವೆ.

ಜಿಲ್ಲೆಯಲ್ಲಿ ಅಧಿಪತ್ಯ ಸ್ಥಾಪಿಸಿರುವ ಜೆಡಿಎಸ್ ಬಹುತೇಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಬೇಲೂರು ಮತ್ತು ಹಾಸನದ ಸ್ಥಿತಿ ಇನ್ನೂ ಸ್ವಲ್ಪ ಡೋಲಾಯಮಾನವಾಗಿದೆ. ಬೇಲೂರಿನಲ್ಲಿ ಈಚಿನ ಕೆಲವು ದಿನಗಳಲ್ಲಿ ನಡೆದ ವಿದ್ಯಮಾನಗಳು ಅಲ್ಲಿನ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುವಂತಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜವರೇಗೌಡ ಅವರ ಹೆಸರು ವರ್ಷದ ಹಿಂದಿನಿಂದಲೇ ಕೇಳಿ ಬಂದಿದ್ದರೂ ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಜತೆಗೆ ಭವಾನಿ ರೇವಣ್ಣ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ವದಂತಿ ಕುತೂಹಲ ಉಳಿಯುವಂತೆ ಮಾಡಿದೆ.

ಇತ್ತ ಕಾಂಗ್ರೆಸ್ ಸಹ ಅಭ್ಯರ್ಥಿಗಳ ಪಟ್ಟಿ  ಅಂತಿಮಗೊಳಿಸುತ್ತಿದೆ. ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು ಅರಸೀಕೆರೆಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹಾಸನ ಕ್ಷೇತ್ರದ ರೇಸ್‌ನಲ್ಲಿ ಎಸ್.ಎಂ.ಆನಂದ್  ಮುಂಚೂಣಿಯಲ್ಲಿದ್ದಾರೆ. ಸಕಲೇಶಪುರ ಕ್ಷೇತ್ರ ದಿಂದ ಡಿ. ಮಲ್ಲೇಶ್ ಕಣಕ್ಕಿಳಿಯುವುದು ಖಚಿತ ಎಂಬುದು ಕಾಂಗ್ರೆಸ್ ಕಾರ್ಯಕರ್ತರು ನುಡಿ.

ಹಾಲಿ ಶಾಸಕರಾಗಿರುವ ಎ. ಮಂಜು ಹಾಗೂ ವೈ.ಎನ್. ರುದ್ರೇಶಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದೇ ಎಂಬುದು ಕುತೂಹಲ ಮೂಡಿ ಸಿದೆ. ವಿಶೇಷವಾಗಿ ಅರಕಲಗೂಡು ಕ್ಷೇತ್ರದಲ್ಲಿ ಪುಟ್ಟಸ್ವಾಮಿ ರಂಗಪ್ರವೇಶದಿಂದ ಕಾಂಗ್ರೆಸ್ ಒಳಗೇ ಸ್ಪರ್ಧೆ ಉಂಟಾಗಿದೆ. ಅತ್ತ ಪೊಟ್ಯಾಟೋ ಕ್ಲಬ್‌ನ ಯೋಗಾ ರಮೇಶ್ ಅವರ ಓಟವೂ ಜೋರಾಗಿದೆ. ಎ.ಟಿ. ರಾಮಸ್ವಾಮಿ (ಜೆಡಿಎಸ್) ಅವರ ಸಾಮರ್ಥ್ಯ ಏನೆಂಬುದು ಜಿಲ್ಲೆಯ ಜನರಿಗೆ ತಿಳಿದದೆ.
ಬಿಜೆಪಿಗೆ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಹಿಡಿತ ಇಲ್ಲ. ಆದರೆ ಕೆಜೆಪಿ ಸ್ಥಾನಗಳನ್ನು ಗೆಲ್ಲದಿದ್ದರೂ ಒಂದೆರಡು ಕ್ಷೇತ್ರಗಳಲ್ಲಿ ಫಲಿತಾಂಶ ಏರುಪೇರು ಮಾಡುವ ಶಕ್ತಿ ಸಂಪಾದಿಸಿದೆ.

ಅರಸೀಕೆರೆ ಕ್ಷೇತ್ರದಿಂದ ಡಾ. ಲೋಕೇಶ್ ಅವರಿಗೆ ಟಿಕೆಟ್ ನೀಡಿದ್ದರಿಂದ ಹೆಚ್ಚು ಪೈಪೋಟಿ ಉಂಟಾಗಿರುವುದು ನಿಜ. ಈಚೆಗೆ ನಡೆದ ಪುರಸಭೆಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಇಲ್ಲಿ ಹಿನ್ನಡೆಯಾಗಿದೆ. ಲಿಂಗಾಯಿತ ಸಮುದಾಯ ಇಲ್ಲಿ ದೊಡ್ಡ ಪ್ರಮಾಣದಲ್ಲಿರುವುದರಿಂದ ಲೋಕೇಶ್ ಗೆದ್ದರೆ ಅಥವಾ ಅವರ ಕಾರಣದಿಂದ ಹಾಲಿ ಶಾಸಕರು ಸೋತರೆ ಅಚ್ಚರಿ ಇಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಚನ್ನರಾಯಪಟ್ಟಣ (ಶ್ರವಣ ಬೆಳಗೊಳ ಕ್ಷೇತ್ರ) ಹಾಗೂ ಹೊಳೆನರಸೀಪುರಗಳಲ್ಲಿ ಜೆಡಿಎಸ್ ಟಿಕೆಟ್ ಬಗ್ಗೆ ಮಾತನಾಡಬೇಕಾಗಿಲ್ಲ. ಆದರೆ ಕಾಂಗ್ರೆಸ್ ಎರಡೂ ಕಡೆ ಗೊಂದಲಗಳನ್ನು ಸೃಷ್ಟಿಸಿಕೊಂಡಿದೆ. ಚನ್ನರಾಯಪಟ್ಟಣದಲ್ಲಿ ಪುಟ್ಟೇಗೌಡರಿಗೆ ಕಾಂಗ್ರೆಸ್‌ನ ಕೆಲವರಿಂದಲೇ ಅಡ್ಡಿಯಾಗುತ್ತಿದೆ. ಹೊಳೆನರಸೀಪುರದಲ್ಲಿ ಅನುಪಮಾ ಅವರದ್ದೂ ಇದೇ ಕತೆ.

ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಇನ್ನೂ ಉಳಿದುಕೊಂಡಿದೆ ಎನ್ನಬಹುದಾದರೂ ಕಾಂಗ್ರೆಸ್ ಅಲೆಯನ್ನು ನಿರ್ಲಕ್ಷಿಸುವಂತೆಯೂ ಇಲ್ಲ. `ನಮ್ಮ ಮುಖಂಡರ ನಿರ್ಲಕ್ಷ್ಯದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ವಲಸೆ ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಕಾರ್ಯಪಡೆಯೇ ಇಲ್ಲದಂತಾಗಿದೆ. ಇದನ್ನು ಸರಿಪಡಿಸಿದರೆ ಕೆಲವು ಕ್ಷೇತ್ರಗಳನ್ನು ಖಂಡಿತವಾಗಿ ಪಡೆಯಬಹುದು' ಎಂದು ಕಾಂಗ್ರೆಸ್ ಮುಖಂಡರು ನುಡಿಯುತ್ತಾರೆ.

ಮತದಾರರ ಜಾಗೃತಿಗೆ ಕಾಲ್ನಡಿಗೆ ಜಾಥಾ ಇಂದು
ಹಾಸನ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಉಂಟುಮಾಡಲು `ಸ್ವೀಪ್' (ಖಠಿಛಿಞಠಿಜ್ಚಿ ಟಠಿಛ್ಟಿ ಛಿಛ್ಠ್ಚಠಿಜಿಟ್ಞ ಚ್ಞ ಛ್ಝಿಛ್ಚಿಠಿಟ್ಟಚ್ಝ ಚ್ಟಠಿಜ್ಚಿಜಿಠಿಜಿಟ್ಞ) ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಅನ್ವಯ ಮಂಗಳವಾರ (ಏ.2) ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ.

ಜಾಥಾದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಕಲಾ ತಂಡಗಳು, ಸ್ತ್ರೀಶಕ್ತಿ  ಸ್ವಸಹಾಯ ಸಂಘಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವರು.

ಜಿಲ್ಲೆಯ ಎಲ್ಲ ಇಲಾಖೆಗಳ ಪ್ರತಿಯೊಬ್ಬ ನೌಕರನೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಗೈರು ಹಾಜರಾದರೆ ಜನತಾ ಪ್ರತಿನಿಧಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ.

ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು, ಜನರಿಗೆ ಮತದಾನದ ಮಹತ್ವವನ್ನು ತಿಳಿಸುವುದು, ಕಡ್ಡಾಯವಾಗಿ ಮತದಾನ ಮಾಡುವಂತೆ ಮನವೊಲಿಸುವುದೇ ಈ ಜಾಥಾದ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.

ಆಯುಧ ಒಪ್ಪಿಸಲು: ಜಿಲ್ಲಾಧಿಕಾರಿ ಆದೇಶ
ಹಾಸನ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪರವಾನಗಿ ಪಡೆದು ಆಯುಧ ಹೊಂದಿರುವಂಥ ಜಿಲ್ಲೆಯ ನಾಗರಿಕರು ಅವುಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆ ಅಥವಾ ಡೀಲರ್‌ಗಳ  ಕೈಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇದರಿಂದ ವಿನಾಯಿತಿ ಪಡೆಯಲು ಬಯಸುವ ಮಲೆನಾಡಿನ ಗುಡ್ಡಗಾಡು ಪ್ರದೇಶದ ಒಂಟಿ ಮನೆಗಳ ನಿವಾಸಿಗಳು ಬಂದೂಕುಗಳನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಮತ್ತು  ಬೇರೆಯವರಿಗೆ ಉಪಯೋಗಿಸಲು ನೀಡುವುದಿಲ್ಲ, ಚುನಾವಣಾ ಪ್ರಕ್ರಿಯೆಗೆ ಯಾವುದೇ ರೀತಿಯ ಭಂಗ ತರುವುದಿಲ್ಲ ಎಂಬುದಾಗಿ ಆಯಾಯಾ ವ್ಯಾಪ್ತಿ ಪ್ರದೇಶದ ಪೊಲೀಸ್ ಉಪ ನಿರೀಕ್ಷಕರಿಗೆ ಲಿಖಿತ ಮನವಿ ಸಲ್ಲಿಸಬಹುದು. ಇಂಥ ಅರ್ಜಿದಾರರ ಪೂರ್ವಾಪರ ಪರಿಶೀಲಿಸಿ ವಿನಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT