ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ್ಜಾ ನೀರು; ಶಾಸಕರಿಂದ ರಸ್ತೆ ತಡೆ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ಆಳಂದ: ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಶುಕ್ರವಾರವೂ ಪೊಲೀಸ್‌ರ ಸರ್ಪಗಾವಲಿನಲ್ಲಿ ಅಮರ್ಜಾ ಆಣೆಕಟ್ಟೆಯಿಂದ ಸರಡಗಿ (ಡಿ) ಡ್ಯಾಮ್‌ಗೆ ನೀರು ಬಿಡಲಾಯಿತು. ಈ ಕ್ರಮವನ್ನು ಖಂಡಿಸಿ ಶಾಸಕ  ಸುಭಾಷ ಆರ್. ಗುತ್ತೇದಾರ ನೇತೃತ್ವದಲ್ಲಿ ಐದು ಗಂಟೆಗಳ ಕಾಲ ಆಳಂದ-ಗುಲ್ಬರ್ಗ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ  ಐವತ್ತು ಜನ ಧರಣಿ ನಿರತರನ್ನು ಪೊಲೀಸರು ಬಂಧಿಸಿದರು.

ಶಾಸಕರು ಗುರುವಾರ ಸಂಜೆಯಷ್ಟೇ ಅಮರ್ಜಾ ಆಣೆಕಟ್ಟೆಗೆ ಭೇಟಿ ನೀಡಿ ನೀರು ಬಿಡುಗಡೆ ಮಾಡುವುದನ್ನು ತಡೆ ಹಿಡಿದಿದ್ದರು. ಶುಕ್ರವಾರ ಮತ್ತೆ ನೀರು ಹರಿಸಲಾಗುತ್ತಿದೆ ಎಂಬ ಸುದ್ದಿ ತಿಳಿದ ನೂರಾರು ರೈತ ಮುಖಂಡರ ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕರು ಮುಖ್ಯರಸ್ತೆ ಮೇಲೆ ಧರಣಿ ನಡೆಸಿದರು.

ಶಾಸಕರು ಸೇರಿದಂತೆ ಧರಣಿಯಲ್ಲಿ ಭಾಗವಹಿಸಿದ ಅನೇಕ ಮುಖಂಡರು ಮಾತನಾಡಿ ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಕಿಡಿ ಕಾರಿದರು. ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಸುಭಾಷ ರಾಠೋಡ, ಲಕ್ಷ್ಮಣ ಬೀಳಗಿ, ಮಲ್ಲಣ್ಣಾ ನಾಗೂರೆ, ಮಲ್ಲಿಕಾರ್ಜುನ ಜಮಾದಾರ, ರೈತ ಮುಖಂಡರಾದ ರಾಜಶೇಖರ ಮಲಶೆಟ್ಟಿ, ಅಶೋಕ ಸಾವಳೇಶ್ವರ, ವಿಜಯಕುಮಾರ ಕೋಥಳಿಕರ, ಸಲಾಂ ಸಗರಿ, ಸುನೀಲ ನಿಪ್ಪಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ರಸ್ತೆ ತಡೆಯಿಂದ  ಗುಲ್ಬರ್ಗ, ಸೋಲಾಪೂರ, ಉಮರ್ಗಾ ಸೇರಿದಂತೆ ಅನೇಕ ಪಟ್ಟಣಗಳ ಸಂಚಾರಕ್ಕೆ ಅಡೆ ತಡೆ ಉಂಟಾಯಿತು. ಧರಣಿ ನಿರತರನ್ನು ಪೊಲೀಸರು ಬಂಧಿಸಲು ಮುಂದಾದಾಗ ಉದ್ವಿಗ್ನ ವಾತಾವರಣ ಉಂಟಾಯಿತು.

ಪೊಲೀಸರು ಶಾಸಕರನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿ ಗುಲ್ಬರ್ಗ ಜೈಲಿಗೆ ಕಳುಹಿಸಿದರು. ಗುಲ್ಬರ್ಗ ಪಟ್ಟಣದ ಕುಡಿಯುವ ನೀರಿನ ಅಗತ್ಯಕ್ಕೆ 0.15ಟಿಎಂಸಿ ನೀರು ಬಿಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರಿಂದ ಶುಕ್ರವಾರ ಸಂಜೆವರೆಗೆ 900 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT