ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತ್‌ ಬ್ಯಾಂಕ್‌ ವಿಲೀನಕ್ಕೆ ಹೈಕೋರ್ಟ್‌ಗೆ ಅರ್ಜಿ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಅಮಾನತ್‌ ಸಹಕಾರಿ ಬ್ಯಾಂಕನ್ನು ಯಾವುದಾದರೊಂದು ರಾಷ್ಟ್ರೀಕೃತ ಬ್ಯಾಂಕ್‌ ಜೊತೆ ವಿಲೀನಗೊಳಿಸಬೇಕು ಎಂದು ಕೋರಿ ‘ಅಮಾನತ್‌ ಬ್ಯಾಂಕ್‌ ಸದಸ್ಯರ ಕಲ್ಯಾಣ ಸಂಘ’ದ ಅಧ್ಯಕ್ಷ ಮಹಮ್ಮದ್‌ ವಜೀರ್‌ ಬೇಗ್‌ ಅವರು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ಅಮಾನತ್‌ ಬ್ಯಾಂಕನ್ನು ಕೆನರಾ ಬ್ಯಾಂಕ್‌ ಜೊತೆ ವಿಲೀನಗೊಳಿಸುವ ಪ್ರಸ್ತಾವ ವಿರೋಧಿಸಿ ಕಾಂಗ್ರೆಸ್‌ ಮುಖಂಡ ಸಿ.ಕೆ. ಜಾಫರ್ ಷರೀಫ್‌ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಬೇಗ್‌ ಈ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಇದರ ವಿಚಾರಣೆ ನಡೆಸುತ್ತಿದ್ದಾರೆ.

ಅಮಾನತ್‌ ಬ್ಯಾಂಕ್‌ನಲ್ಲಿ ಅಂದಾಜು ರೂ 400 ಕೋಟಿ ಅವ್ಯವಹಾರ ನಡೆದಿದೆ. ಈ ಮೊತ್ತವನ್ನು ಭರ್ತಿ ಮಾಡಿಕೊಡಲು ಸಿದ್ಧ ಎಂದು ಷರೀಫ್‌ ಅವರು ಈ ಹಿಂದೆ ಪೀಠಕ್ಕೆ ತಿಳಿಸಿದ್ದರು. ‘ಅಷ್ಟು ಹಣವನ್ನು ಎಲ್ಲಿಂದ ತರುತ್ತೀರಿ ಎಂಬುದನ್ನು ತಿಳಿಸಿ’ ಎಂದು ನ್ಯಾಯಪೀಠ ಸೂಚಿಸಿತ್ತು.

‘ಮುಸ್ಲಿಂ ಸಮುದಾಯ ನೀಡಿದ ಹಣದಿಂದ ಅಮಾನತ್‌ ಬ್ಯಾಂಕ್‌ ಆರಂಭವಾಗಿದೆ. ಬ್ಯಾಂಕನ್ನು ಖಾಸಗಿ ವ್ಯಕ್ತಿಗಳ ಕೈಗೆ ಹಸ್ತಾಂತರಿಸಬಾರದು’ ಎಂದು ಮಧ್ಯಂತರ ಅರ್ಜಿಯಲ್ಲಿ ಕೋರಲಾಗಿದೆ.

ಷರೀಫ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೋಪಣ್ಣ ಅವರು, ಬ್ಯಾಂಕ್‌ ವಿಲೀನಕ್ಕೆ ಸಂಬಂಧಿಸಿದಂತೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಶೀಘ್ರ ನಿಲುವು ತಿಳಿಸಬೇಕು ಎಂದು ಸೂಚಿಸಿದರು.

ತ್ವರಿತ ಕ್ರಮಕ್ಕೆ ಸಲಹೆ
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಹುದ್ದೆ 16 ತಿಂಗಳಿಂದ ಖಾಲಿ ಇದೆ. ಈ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಕೋರಿ ಸಲ್ಲಿ­ಸಿದ್ದ ಅರ್ಜಿಯನ್ನು ಹೈಕೋರ್ಟ್‌  ಇತ್ಯರ್ಥಪಡಿಸಿದೆ.

ಮಾನವ ಹಕ್ಕುಗಳ ರಕ್ಷಣಾ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್.ವಘೇಲಾ ನೇತೃತ್ವದ ವಿಭಾಗೀಯ ಪೀಠ, ‘ಅಧ್ಯಕ್ಷರ ಸ್ಥಾನಕ್ಕೆ ಅರ್ಹರನ್ನು ನೇಮಕ ಮಾಡುವ ವಿಚಾರದಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂಬ ಅನಿಸಿಕೆ ವ್ಯಕ್ತಪಡಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದವರನ್ನು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡ­ಬಹುದು. ನ್ಯಾಯಮೂರ್ತಿ ಎಸ್.ಆರ್‌. ನಾಯಕ್‌ ಅವರ ಅವಧಿ ಪೂರ್ಣಗೊಂಡ ನಂತರ ಆಯೋಗಕ್ಕೆ ಹೊಸಬರ ನೇಮಕ ಆಗಿಲ್ಲ.

ರೇಣುಕಾ ಷುಗರ್ಸ್‌ ಅರ್ಜಿ
ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ರೈತರಿಗೆ ರೂ 2,500 ನೀಡಬೇಕು ಎಂದು ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಿರುವುದನ್ನು ಪ್ರಶ್ನಿಸಿ ಬೆಳಗಾವಿ ಮೂಲದ ರೇಣುಕಾ ಷುಗರ್ಸ್‌ ಕಾರ್ಖಾನೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರು ಸರ್ಕಾರಕ್ಕೆ ನೋಟಿಸ್‌ ಜಾರಿಗೆ  ಸೋಮವಾರ ಆದೇಶಿಸಿದ್ದಾರೆ. ವಿಚಾರಣೆ­ಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘಟನೆ (ಸಿಸ್ಮಾ) ಸಲ್ಲಿಸಿರುವ ಅರ್ಜಿಯ ಜೊತೆ ನ್ಯಾಯಪೀಠ ಈ ಅರ್ಜಿಯನ್ನೂ ಕೈಗೆತ್ತಿಕೊಳ್ಳಲಿದೆ.

ಅನ್ನಪ್ರಸಾದ: ಅರ್ಜಿ ವಜಾ
ಬೆಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಒಳ ಆವರಣದಲ್ಲಿ (ಮಡೆ ಸ್ನಾನ ನಡೆಯುವ ಜಾಗ) ಚಂಪಾ ಷಷ್ಠಿಯ ದಿನ ಬ್ರಾಹ್ಮಣರಿಗೆ ಮಾತ್ರ ಅನ್ನ ಪ್ರಸಾದ ವಿತರಿಸುವ ಪದ್ಧತಿ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕರುಣಾಕರ ಎಣ್ಣೆಮಜಲು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯ­­ಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೋಮವಾರ ನಡೆಸಿತು. ಒಳ ಆವರಣದಲ್ಲಿ ಚಂಪಾ ಷಷ್ಠಿಯ ದಿನ ಬ್ರಾಹ್ಮಣರಿಗೆ ಮಾತ್ರ ಅನ್ನ ಪ್ರಸಾದ ನೀಡ­ಲಾಗುತ್ತಿದೆ. ಇನ್ನುಳಿದ ಜಾತಿಯವರಿಗೆ ನೀಡು­ವುದಿಲ್ಲ. ಇದು ತಾರ­ತಮ್ಯದ ನಡೆ. ಇದನ್ನು ನಿಷೇಧಿಸ­ಬೇಕು ಎಂದು ಕರುಣಾಕರ ಅವರು ಅರ್ಜಿಯಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT