ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನವೀಯ: ಬರಗೂರು ವಿಷಾದ

Last Updated 12 ಫೆಬ್ರುವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಸರ್ಕಾರ ತನ್ನ ಒಪ್ಪಂದದಂತೆ ಕಂಪ್ಯೂಟರ್ ಶಿಕ್ಷಕರಿಗೆ ನಾಲ್ಕು ತಿಂಗಳ ಸಂಬಳ ನೀಡದೆ ಸತಾಯಿಸುತ್ತಿರುವುದು ಅಮಾನವೀಯವಾಗಿದೆ~ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಎನ್‌ಜಿಒ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಶಾಲಾ- ಕಾಲೇಜುಗಳ ಕಂಪ್ಯೂಟರ್ ಶಿಕ್ಷಕರ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.

`ಕಂಪ್ಯೂಟರ್ ಶಿಕ್ಷಣವನ್ನು ಐಚ್ಛಿಕ  ವಿಷಯವನ್ನಾಗಿ ಮಾಡಿದ್ದರೆ ಬೇಕಾದವರು ಮಾತ್ರ ಕಲಿಯುತ್ತಿದ್ದರು. ಆದರೆ, ಅದನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಿರುವುದರಿಂದ ಶಿಕ್ಷಕರನ್ನು ಕಾಯಂಗೊಳಿಸಬೇಕು. ದಿನಗೂಲಿ ಎಂದು ರೂಪಿಸಿರುವ ಸರ್ಕಾರ 148 ರೂಪಾಯಿ ನೀಡುತ್ತಿದ್ದರೆ, ಕಂಪ್ಯೂಟರ್ ಶಿಕ್ಷಕರೆಂದು ಹೇಳಿರುವ ಶಿಕ್ಷಕರಿಗೆ 110 ರೂಪಾಯಿ ನೀಡುತ್ತಿರುವುದು ಅಕ್ಷಮ್ಯವಾಗಿದೆ~ ಎಂದು ಹೇಳಿದರು.

 `ಮಠ- ಮಾನ್ಯಗಳಿಗೆ ಸುರಿಯಲು ಹಣವಿದೆ. ಆದರೆ, ದುಡಿಯುವವರಿಗೆ ನೀಡಲು ಹಣವಿಲ್ಲ. ಈ ರೀತಿಯಾಗಿ ಸರ್ಕಾರವು ದುಡಿಯುವವರ ಶೋಷಣೆ ಮಾಡುತ್ತಿದೆ~ ಎಂದರು.

`ಶಾಲೆಗಳಿಗೆ ಕಂಪ್ಯೂಟರ್ ನೀಡಿ ಉದ್ದಿಮೆಗಳಿಗೆ ಲಾಭ ಮಾಡಿ ಕೈ ತೊಳೆದುಕೊಂಡಿದೆ.  ಈ ಶಿಕ್ಷಕರ ಬಗ್ಗೆ ಯೋಚಿಸಿದರೆ, ಯಾವುದೇ ಮತ ಅವರಿಗೆ ಬರುವುದಿಲ್ಲ. ಆದರೆ, ಸೀರೆ, ಸೈಕಲ್‌ನ್ನು ನೀಡಿದರೆ ಮತಗಳು ಬರುತ್ತವೆ ಎಂಬುದು ಸರ್ಕಾರದ ಲೆಕ್ಕಾಚಾರ~ ಎಂದು ನುಡಿದರು.

`ಸರ್ಕಾರ ಯಾವುದೇ ನೀತಿಯನ್ನು ಅನುಸರಿಸಿ, ದೂರಗಾಮಿಯಾಗಿ ಯೋಚಿಸಿ ಕಾಯಂ ಆಗುವಂತೆ ಯೋಜನೆ ತರುವುದಿಲ್ಲ. ಅವರದು ಐದು ವರ್ಷದ ಸರ್ಕಾರವಾಗಿರುವುದರಿಂದ, ಬರೀ ಐದು ವರ್ಷಗಳಿಗಾಗಿ ಕಂಪ್ಯೂಟರ್ ಶಿಕ್ಷಣವವನ್ನು ನಿಗದಿಗೊಳಿಸಿದೆ. ಐದು ವರ್ಷಗಳ ನಂತರ ಕಂಪ್ಯೂಟರ್ ಶಿಕ್ಷಣದ ಅಗತ್ಯ ಇರುವುದಿಲ್ಲವೇ   ಎಂದು ಕೇಳಿದರು.

ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನ ಕುಮಾರ್ ಮಾತನಾಡಿ, `ರಾಜ್ಯ ಸರ್ಕಾರ ಶಿಕ್ಷಕರನ್ನು ಸರಕುಗಳಂತೆ ಒಪ್ಪಂದ ಮಾಡಿಕೊಂಡಿದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ದುಡಿಯುವ ವರ್ಗದ ದುಡಿಮೆಗೆ ಯಾವುದೇ ಬೆಲೆ ಇಲ್ಲದಂತಾಗಿದೆ~ ಎಂದರು.

ಕಾರ್ಯಕ್ರಮದಲ್ಲಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಕಾರ್ಯದರ್ಶಿ ಎಸ್.ವರಲಕ್ಷ್ಮಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ ಮೂರ್ತಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT