ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾವಾಸ್ಯೆ ಭಯದಲ್ಲಿ ಅಭ್ಯರ್ಥಿಗಳು

Last Updated 4 ಜನವರಿ 2011, 10:35 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ 34 ಜಿಲ್ಲಾ ಪಂಚಾಯ್ತಿ ಹಾಗೂ 129 ತಾಲ್ಲೂಕು ಪಂಚಾಯ್ತಿ ಸ್ಥಾನಗಳಿಗೆ  ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಮಧ್ಯಾಹ್ನದ ಒಳಗೆ ದೊರೆಯಲಿದ್ದು, ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಿರುವ 139 ಮಂದಿ ಅಭ್ಯರ್ಥಿಗಳು ಹಾಗೂ ತಾಲ್ಲೂಕು ಪಂಚಾಯ್ತಿ ಸ್ಪರ್ಧಿಸಿರುವ 457 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಮಂಗಳವಾರ ಅಮಾವಾಸ್ಯೆ ಇರುವುದು ಬಹುತೇಕ ಅಭ್ಯರ್ಥಿಗಳಿಗೆ ಬೇಸರ ತಂದಿದೆ.ಒಂದು ವೇಳೆ ಗೆಲುವು ದೊರೆತರೂ, ಅಮಾವಾಸ್ಯೆಯ ದಿನ ಶುಭ ಸುದ್ದಿ ಕೇಳುವುದು ಅಪಶಕುನ ಎಂಬ ಮಾತು ಕೆಲ ಅಭ್ಯರ್ಥಿಗಳಿಂದ ಕೇಳಿಬಂತು.

‘ಮತ ಎಣಿಕೆಯನ್ನು ಆಯೋಗ ಬೇರೆ ದಿನ ನಿಗದಿ ಮಾಡಬಹುದಿತ್ತು. ಬೆಳಿಗ್ಗೆ ಬೇಗನೆ ಎದ್ದು, ಅಮಾವಾಸ್ಯೆ ಪೂಜೆ ಮುಗಿಸಿಕೊಂಡೇ ಕೇಂದ್ರಕ್ಕೆ ಬರುತ್ತೇವೆ’ ಎಂದು ಕೆಲವರು, ‘ನಾವು ನಾಳೆ ಮತ ಎಣಿಕೆ ಕೇಂದ್ರಕ್ಕೆ ಬರುವುದಿಲ್ಲ. ಮನೆಯಲ್ಲೇ ಇದ್ದು, ಏಜೆಂಟರ ಮೂಲಕ ಫಲಿತಾಂಶ ಕೇಳುತ್ತೇವೆ’ ಎಂದು ಇನ್ನೂ ಕೆಲವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಜಿಲ್ಲೆಯ ಎಲ್ಲ ಆರು ತಾಲ್ಲೂಕು ಕೇಂದ್ರಗಳಲ್ಲೂ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಎಲ್ಲ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರಿಗೂ ಪಾಸ್ ವಿತರಿಸಲಾಗಿದ್ದು, ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ.

ಜಗಳೂರು

 ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಿ.ಬಿ. ಸರೋಜಾ ಅವರು ತಿಳಿಸಿದ್ದಾರೆ.
 4 ಜಿಲ್ಲಾ ಪಂಚಾಯ್ತಿ ಹಾಗೂ 15 ತಾ.ಪಂ. ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಣಿಕೆ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 4 ಜಿ.ಪಂ. ಕ್ಷೇತ್ರಗಳಿಗೆ 2 ಕೊಠಡಿಗಳಲ್ಲಿ 16 ಟೇಬಲ್‌ಗಳು ಹಾಗೂ 15 ತಾ.ಪಂ. ಕ್ಷೇತ್ರಗಳ ಮತ ಎಣಿಕೆಗೆ 4 ಕೊಠಡಿಗಳಲ್ಲಿ 31 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಸಲಾಗುವುದು.

ಮತ ಎಣಿಕಾ ಕಾರ್ಯಕ್ಕೆ 31 ಮೇಲ್ವಿಚಾರಕರು ಮತ್ತು 31 ಎಣಿಕಾ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಕ್ಷಿಪ್ರವಾಗಿ ಫಲಿತಾಂಶ ವರದಿ ನೀಡುವ ಸಲುವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಮಾಧ್ಯಮ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.  ಬೆಳಿಗ್ಗೆ 8ಕ್ಕೆ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಚನ್ನಗಿರಿ

ತಾಲ್ಲೂಕಿನ 7 ಜಿ.ಪಂ. ಹಾಗೂ 28 ತಾ.ಪಂ. ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ.  7 ಜಿ.ಪಂ. ಕ್ಷೇತ್ರಗಳ 27 ಹಾಗೂ 28 ತಾ.ಪಂ. ಕ್ಷೇತ್ರಗಳ 91 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಪ್ರಥಮ ಸುತ್ತಿನಲ್ಲಿ ಹೊನ್ನೇಬಾಗಿ, ಹೊದಿಗೆರೆ, ಹೊಸಕೆರೆ ಜಿ.ಪಂ. ಕ್ಷೇತ್ರಗಳ ಹಾಗೂ ಅಗರಬನ್ನಿಹಟ್ಟಿ, ಬೆಳಲಗೆರೆ, ಚಿಕ್ಕಗಂಗೂರು, ಚಿರಡೋಣಿ ತಾ.ಪಂ. ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಎರಡನೇ ಸುತ್ತಿನಲ್ಲಿ ನಲ್ಲೂರು, ಸಂತೇಬೆನ್ನೂರು, ತಾವರೆಕೆರೆ ಜಿ.ಪಂ ಹಾಗೂ ದಾಗಿನಕಟ್ಟೆ, ದೇವರಹಳ್ಳಿ, ಗೊಪ್ಪೇನಹಳ್ಳಿ, ಹರೋನಹಳ್ಳಿ ತಾ.ಪಂ. ಕ್ಷೇತ್ರ,

ಮೂರನೇ ಸುತ್ತಿನಲ್ಲಿ ತ್ಯಾವಣಿಗೆ ಜಿ.ಪಂ ಹಾಗೂ ಹಿರೇಮಳಲಿ, ಹೊದಿಗೆರೆ, ಹೊಸಕೆರೆ, ಕಾಕನೂರು ತಾ.ಪಂ ಕ್ಷೇತ್ರ, ನಾಲ್ಕನೇ ಸುತ್ತಿನಲ್ಲಿ ಕರೇಕಟ್ಟೆ, ಕತ್ತಲಗೆರೆ, ಕೆರೆಬಿಳಚಿ, ಕೋಗಲೂರು, ಐದನೇ ಸುತ್ತಿನಲ್ಲಿ ಕೊಂಡದಹಳ್ಳಿ, ಲಿಂಗದಹಳ್ಳಿ, ಮರವಂಜಿ, ಮುದಿಗೆರೆ, ಆರನೇ ಸುತ್ತಿನಲ್ಲಿ ನಲ್ಕುದುರೆ, ನಲ್ಲೂರು, ಪಾಂಡೋಮಟ್ಟಿ, ಸಂತೇಬೆನ್ನೂರು, ಏಳನೇ ಹಾಗೂ ಅಂತಿಮ ಸುತ್ತಿನಲ್ಲಿ ಸಿದ್ದನಮಠ, ಸೋಮಲಾಪುರ, ತಾವರೆಕೆರೆ ಹಾಗೂ ತ್ಯಾವಣಗಿ ತಾ.ಪಂ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 104 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT