ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್‌ಬಾಯಿ ಮತ್ತು ಗಾಂಧಿ ಚಳವಳಿ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಮೂವತ್ತು ನಲವತ್ತರ ದಶಕದ ಹಿನ್ನೆಲೆಗಾಯಕಿ ಅಮೀರ್‌ಬಾಯಿ ಕರ್ನಾಟಕಿ ಅವರನ್ನು ಬಾಲ್ಯದಲ್ಲಿ ಕಂಡಿರುವ ಬೀಳಗಿಯ ಹನುಮಂತರಾವ್ ಕಂಠಿ, ವೃತ್ತಿರಂಗಭೂಮಿಯ ನಾಟಕಕವಿ. ಅಮೀರ್ ಚಿತ್ರಗಳನ್ನು ಟಾಕೀಸಿನಲ್ಲಿ ಆಪರೇಟರ್ ಆಗಿ ಜನರಿಗೆ ತೋರಿಸಿದವರು. ಕಂಠಿಯವರು `ಚಂದ್ರಹಾಸ' ಚಿತ್ರದಲ್ಲಿನ ಅಮೀರ್‌ಬಾಯಿಯವರ ಒಂದು ಹಾಡನ್ನು ಹಾಡಿ ತೋರಿಸಿದರು. ಅನಾಥ ಶಿಶುವಾದ ಚಂದ್ರಹಾಸನನ್ನು ಸಾಕುವ ರಾಣಿ ಪಾತ್ರದಲ್ಲಿರುವ ಅಮೀರ್‌ಬಾಯಿ ಇದನ್ನು ತಮ್ಮ ಸ್ವಾಭಿನಯಕ್ಕಾಗಿ ಹಾಡಿರುವರು: 

ತ್ರಿಪುರದೈತ್ಯ ಮದದಮನ ನಿಪುಣ ಶ್ರೀಶಿವನ ಧರ್ಮಜಾಯೆ!
ಕೃಪೆಯ ಕಿರಣಗಳ ಕವಚವಿತ್ತು ನಮ್ಮನ್ನು ಕಾಯೆ ತಾಯೆ
ಘೋರಯುದ್ಧ ರಕ್ತಾಗ್ನಿ ತಾಗುತಿದೆ ನಮ್ಮ ನಾಡಗಡಿಗೆ
ವೈರಿರಾಹು ಮುನ್ನುಗ್ಗುತಿಹನು ಸ್ವಾತಂತ್ರ್ಯ ಸೂರ್ಯನೆಡೆಗೆ
ದೈನ್ಯದಾಸ್ಯಗಳು ನಮ್ಮ ದೇಶದೊಳು ಸುಳಿಯದಂತೆ ಮಾಡೆ

ಪೌರಾಣಿಕ ಚಿತ್ರದ ಈ ಹಾಡಿನಲ್ಲಿ ಬಂದಿರುವ ನಾಡಗಡಿ, ಘೋರಯುದ್ಧ, ರಕ್ತಾಗ್ನಿ, ವೈರಿರಾಹು, ಸ್ವಾತಂತ್ರ್ಯಸೂರ್ಯ- ಮುಂತಾದ ರಾಜಕೀಯ ಪರಿಭಾಷೆಯನ್ನು ಗಮನಿಸಬೇಕು. ರಾಹುವಿನಂತಿರುವ ವೈರಿಯು ಸ್ವಾತಂತ್ರ್ಯಸೂರ್ಯನನ್ನು ಹಿಡಿಯಲು ನುಗ್ಗುತ್ತಿರುವಾಗ, ದೈನ್ಯದಾಸ್ಯಗಳು ಸುಳಿಯದಂತೆ ಮಾಡು ಎಂದರೆ, ಹೋರಾಡುವ ದಿಟ್ಟತನ ಕೊಡು ಎಂಬುದು ಇಲ್ಲಿನ ಪ್ರಾರ್ಥನೆ.

ಈ ಪ್ರಾರ್ಥನೆಯನ್ನು ತ್ರಿಪುರದೈತ್ಯರ ಮದವನ್ನು ದಮನಿಸಿದ ಶಿವನ ಮಡದಿಯ ಮುಂದಿಡಲಾಗುತ್ತಿದೆ. ನಾಡಗೀತೆಯಂತೆ ತೋರುವ ಈ ಹಾಡನ್ನು ರಚಿಸಿದವರು ನಲವಡಿ ಶ್ರೀಕಂಠಶಾಸ್ತ್ರಿ. ನಾಟಕ ಕವಿಯಾದ ಶಾಸ್ತ್ರಿಗಳು, ಹೈದರಾಬಾದ್ ಪ್ರಾಂತ್ಯದಲ್ಲಿ ಎದ್ದಿದ್ದ ರಜಾಕಾರ್ ದಂಗೆಯ (1948) ವಿರುದ್ಧ ಲಾವಣಿ ರಚಿಸಿ ಹಾಡಿದವರು.

ಅವರು ಬರೆಯುತ್ತಿದ್ದ ರಾಜಕೀಯ ಆಶಯದ ಹಾಡುಗಳನ್ನು ಮೆಲುದನಿಯಲ್ಲಿ ಹಾಡಲು ಸಾಧ್ಯವಿಲ್ಲ. ಕೆಚ್ಚಿನಿಂದಲೇ ಹಾಡಬೇಕು. ಇದಕ್ಕಾಗಿ ಥಿಯೇಟರಿನ ಕೊನೆಯಲ್ಲಿ ಕುಳಿತವರಿಗೂ ಕೇಳುವಂತೆ ಹಾಡಬಲ್ಲ ತಾಲೀಮು ಪಡೆದಿದ್ದ ಅಮೀರ್‌ಬಾಯಿಯಂತಹ ಕಂಚಿನಕಂಠದ ಗಾಯಕಿಯರು ಅಗತ್ಯವಾಗಿದ್ದರು.

ಹಾಡಿನಲ್ಲಿರುವ ಅನಾಥ ಮಗುವನ್ನು ರಕ್ಷಿಸುವ ಕಾಳಜಿ ಮತ್ತು ವೈರಿರಾಹು ಕುರಿತ ಆಕ್ರೋಶಗಳನ್ನು `ಚಂದ್ರಹಾಸ' (1947) ನಿರ್ಮಾಣವಾದ ವರ್ಷದ ಹಿನ್ನೆಲೆಯಲ್ಲಿಟ್ಟು ನೋಡಬೇಕು. ಅಮೀರ್‌ಬಾಯಿ ಅವರ ಮೊದಲ ಕನ್ನಡಚಿತ್ರ `ಚಿರಂಜೀವಿ'ಯಲ್ಲೂ (1935) ಚಿಕ್ಕಹುಡುಗನಾದ ಮಾರ್ಕಂಡೇಯನನ್ನು ಯಮನ ಆಪತ್ತಿನಿಂದ ಪಾರುಗಾಣಿಸುವ ಆಶಯವಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಕಿಯ (ಮಳವಳ್ಳಿ ಸುಂದರಮ್ಮ) ಹಿನ್ನೆಲೆಯಲ್ಲಿ ಚರಕವನ್ನು ತೋರಿಸುವುದು. ಈ ಚಿತ್ರದಲ್ಲಿ ನಟಿಸಿದ್ದ ದೇವುಡು ಹಾಗೂ ಮುದವೀಡು ಕೃಷ್ಣರಾವ್, ಕಾಂಗ್ರೆಸ್ ಚಳವಳಿಯಲ್ಲಿ ತೊಡಗಿಕೊಂಡಿದ್ದವರು. ಚಿತ್ರದ ನಿರ್ದೇಶಕರಾದ ಕೆ.ಪಿ.ಭಾವೆ ಸಹ ಬ್ರಿಟೀಷ್ ವಿರೋಧಿ ಚಳವಳಿಯ ಪರವಾಗಿದ್ದವರು.

ವ್ಯಂಗ್ಯವೆಂದರೆ, ಬೆಂಗಳೂರಿನ `ಮೆಜೆಸ್ಟಿಕ್' ಥಿಯೇಟರಿನಲ್ಲಿ `ಚಿರಂಜೀವಿ'ಯ ಪ್ರಥಮ ಪ್ರದರ್ಶನ ಏರ್ಪಟ್ಟಾಗ, ಚಿತ್ರಕಲಾವಿದರ ಸನ್ಮಾನವನ್ನು ಗಾಂಧಿ ಚಳವಳಿಯ ಬಗ್ಗೆ ನಿರಾಸಕ್ತರಾಗಿದ್ದ ಪ್ರೊ. ಬಿ.ಎಂ.ಶ್ರೀಕಂಠಯ್ಯನವರು ಮಾಡಿದ್ದು.

ರಾಜಕೀಯ ಬಿಡುಗಡೆಗಾಗಿ ತುಡಿಯುವುದು ಅಮೀರ್‌ಬಾಯಿ ನಟಿಸಿ ಹಾಡಿದ ಎರಡು ಚಿತ್ರಗಳ ವಿಶಿಷ್ಟತೆಯಲ್ಲ. 1930-40ರ ದಶಕಗಳಲ್ಲಿ ತಯಾರಾದ ಬಹುತೇಕ ಭಾರತೀಯ ನಾಟಕ ಮತ್ತು ಸಿನಿಮಾಗಳಲ್ಲಿದ್ದ ಲಕ್ಷಣ ಕೂಡ. ಈ ಬಿಡುಗಡೆಯ ತುಡಿತಕ್ಕೆ ಎರಡು ಆಯಾಮಗಳಿದ್ದವು. 1.ಬ್ರಿಟಿಷರ ಆಳ್ವಿಕೆಯ ವಿರೋಧ. 2.ಗಾಂಧಿ ಚಳವಳಿಯ ಭಾಗವಾಗಿದ್ದ ಅಸ್ಪೃಶ್ಯತೆ ನಿವಾರಣೆ, ಸ್ವದೇಶಿ ಚಳವಳಿ ಇತ್ಯಾದಿ ಕಾರ್ಯಕ್ರಮಗಳಿಗೆ ಸ್ಪಂದಿಸುವುದು.

ಸಿನಿಮಾಗಳಿಗೆ ಸಮಕಾಲೀನ ರಾಜಕೀಯ ಆಶಯಗಳನ್ನು ಅಳವಡಿಸುವ ಈ ಗುಣ ವಾಸ್ತವವಾಗಿ ಬಂದಿದ್ದು ರಂಗಭೂಮಿಯಿಂದ. ಆಗಿನ ನಾಟಕಗಳಲ್ಲಿ ಕಥೆಗೆ ಸಂಬಂಧ ಇಲ್ಲದಿದ್ದರೂ ನಾಂದಿಪದ್ಯ ಮತ್ತು ಭರತವಾಕ್ಯಗಳಲ್ಲಿ ಭರತಮಾತೆ ಮತ್ತು ಗಾಂಧಿಸ್ತುತಿ ಇರುತ್ತಿದ್ದವೆಂದು ತಿಳಿದುಬರುತ್ತದೆ.

ಗಾಂಧೀಜಿ ಬೆಳಗಾವಿಗೆ ಬಂದಾಗ ಚಿಕ್ಕೋಡಿ ಶಿವಲಿಂಗಸ್ವಾಮಿಯವರು `ಪವಿತ್ರಖಾದಿ' ನಾಟಕವನ್ನೇ ಬರೆದು ಆಡಿಸಿದರು. ಸ್ವಾಮಿಯವರ `ಅಸ್ಪೃಶ್ಯತಾ ನಿವಾರಣೆ' ನಾಟಕಕ್ಕೆ (1932) ಅಮೀರ್‌ಬಾಯಿ ಸೋದರಮಾವ ಬೇವೂರ ಬಾದಶಾಸಾಬ್ ಮಾಸ್ತರರು ಸಂಗೀತ ಸಂಯೋಜನೆ ಮಾಡಿದರು.

ಪ್ರಖರ ಗಾಂಧಿವಾದಿಯಾಗಿದ್ದ ಕಂದಗಲ್ ಹಣಮಂತರಾಯರ `ಮಾತಂಗಕನ್ಯೆ' ನಾಟಕದ ವಸ್ತು ಕೂಡ ಅಸ್ಪೃಶ್ಯತಾ ನಿವಾರಣೆಗೆ ಸಂಬಂಧಪಟ್ಟಿತ್ತು. ಬ್ರಿಟಿಷ್ ವಿರೋಧವಿದ್ದ ಪ್ರಮುಖ ನಾಟಕಗಳೆಂದರೆ- `ನರಗುಂದ ಮುತ್ತಿಗೆ' `ಕಿತ್ತೂರ ಚೆನ್ನಮ್ಮ', `ಟಿಪ್ಪುಸುಲ್ತಾನ್', `ಸಂಗೊಳ್ಳಿ ರಾಯಣ್ಣ', `ಚಲೇಜಾವ್'. ಕೊನೆಯ ನಾಟಕದ ರಾಜಕೀಯ ಪ್ರತಿರೋಧವಂತೂ ಗೋಡೆಬರಹದಂತಿತ್ತು.

`ಬೆಳವಡಿ ಮಲ್ಲಮ್ಮ', `ಕಿತ್ತೂರ ರುದ್ರಮ್ಮ' ನಾಟಕಗಳಲ್ಲಿ ಎದುರಾಳಿಗಳು ಬ್ರಿಟಿಷರಲ್ಲ. ಆದರೆ ಪುಟ್ಟರಾಜ್ಯವನ್ನು ಬಲಿಷ್ಠ ರಾಜ್ಯ ಆಕ್ರಮಿಸಲು ಬರುವುದು, ಅದಕ್ಕೆ ಪುಟ್ಟರಾಜ್ಯ ಪ್ರತಿರೋಧ ಮಾಡುವುದು ಅವುಗಳ ವಸ್ತುವಾಗಿತ್ತು. ಚೆನ್ನಮ್ಮ, ಮಲ್ಲಮ್ಮ, ರುದ್ರಮ್ಮ- ಈ ಮೂರೂ ರಾಣಿಯರು ನಾಟಕದಲ್ಲಿ ಹೋರಾಟದ ಡೈಲಾಗುಗಳನ್ನು ಆಡಿ, ಪ್ರೇಕ್ಷಕರಲ್ಲಿ ಪ್ರತಿರೋಧದ ಕಿಡಿ ಎಬ್ಬಿಸುತ್ತಿದ್ದರು.

`ಬಳೆತೊಟ್ಟ ಹೆಂಗಸರು ಕತ್ತಿಹಿಡಿದು ಕದನಕ್ಕೆ ಧುಮುಕಿರುವಾಗ ಗಂಡಸರು ಸುಮ್ಮನೆ ಕೂತಿರುವುದು ನಾಚಿಕೆಗೇಡು' ಎಂಬ ಪುರುಷವಾದಿ ಪರಿಭಾಷೆಯ ಡೈಲಾಗುಗಳು ಅಲ್ಲಿ ಸಾಮಾನ್ಯವಾಗಿದ್ದವು. ನಾಡನ್ನು ಹೊರಗಿನಿಂದ ಬಂದವರು ಆಕ್ರಮಿಸಿಕೊಂಡು ಇಟ್ಟುಕೊಳ್ಳುವುದು ಮಾತ್ರವಲ್ಲ, ಅದರ ವಿರುದ್ಧ ಹೋರಾಟ ಮಾಡದಿರುವುದು ಕೂಡ ಅಪರಾಧ ಎಂಬ ದನಿ ಅಲ್ಲಿರುತ್ತಿತ್ತು. ಮೊದಲಿಗೆ ಬ್ರಿಟಿಷ್ ಸರ್ಕಾರ, ರಾಜಕೀಯ ಉದ್ದೇಶವುಳ್ಳ ಚಾರಿತ್ರಿಕ ನಾಟಕಗಳ ಪ್ರದರ್ಶನವನ್ನು ನಿಷೇಧಿಸಿತು.

ಮರಾಠಿಯಲ್ಲಿ ಖಾಡಿಲ್ಕರ್ ಅವರ `ಕೀಚಕವಧೆ' ಆಗಲೇ ನಿಷೇಧಕ್ಕೆ ಒಳಗಾಗಿತ್ತು. ಕನ್ನಡದಲ್ಲಿ `ನರಗುಂದದ ಮುತ್ತಿಗೆ', `ಸಂಗೊಳ್ಳಿ ರಾಯಣ್ಣ', `ಕಿತ್ತೂರ ಚೆನ್ನಮ್ಮ' ನಿಷೇಧಕ್ಕೆ ಒಳಗಾದವು. ಆಗ ರಂಗಭೂಮಿಯು ತನ್ನ ರಾಜಕೀಯ ಉದ್ದೇಶಕ್ಕೆ ಪೌರಾಣಿಕ ನಾಟಕಗಳನ್ನು ಬಳಸತೊಡಗಿತು. ಅವೆಂದರೆ- `ಕಂಸವಧೆ', `ಲಂಕಾದಹನ', `ಕೀಚಕವಧೆ', `ಅಕ್ಷಯಾಂಬರ', `ಪಾದುಕಾ ಪಟ್ಟಾಭಿಷೇಕ'.

ಅಮೀರ್‌ಬಾಯಿ ಹಾಡಿದ ಬಹುತೇಕ ಕನ್ನಡ ಹಾಡುಗಳ ಕರ್ತೃವಾದ ನಲವಡಿಯವರು ಸಹ `ದ್ರೌಪದಿ ವಸ್ತ್ರಾಪಹರಣ' ಬರೆದರು. ಈ ನಾಟಕಗಳಲ್ಲಿ ರಾಜಸಭೆಯಲ್ಲಿ ಅಪಮಾನಿತಳಾಗುವ ದ್ರೌಪದಿಯ ಮೇಲಣ ಸಹಾನುಭೂತಿಗಿಂತ ಮುಖ್ಯವಾದುದು ದುಶ್ಶಾಸನನ ಮೇಲೆ ಆಕ್ರೋಶ ಹುಟ್ಟಿಸುವುದು. ಇಲ್ಲಿ ಬರುವ ರಾವಣ, ಕಂಸ, ಕೀಚಕ, ದುಶ್ಯಾಶನ, ಕೈಕೇಯಿ ಇವರು ಬ್ರಿಟಿಷರ ಪ್ರತಿರೂಪಗಳು.

ಕೀಚಕನು ದ್ರೌಪದಿಗೆ ಕೊಡುವ ಕಿರುಕುಳ ಮತ್ತು ಭೀಮನು ಕೀಚಕನಿಗೆ ಮಾಡುವ ಶಿಕ್ಷೆ, ಸಿನಿಮಾಗಳಿಗೂ ಜನಪ್ರಿಯ ವಸ್ತುವಾಗಿತ್ತು. ಪ್ರಖರ ರಾಜಕೀಯ ಪ್ರಜ್ಞೆಯ ಸಿನಿಮಾಕರ್ತೃ ವಿ.ಶಾಂತಾರಾಂ `ಸೈರಂಧ್ರಿ' ಸಿನಿಮಾ ತೆಗೆದರು. ಸೈರಂಧ್ರಿ ಎಂದರೆ ಅಜ್ಞಾತವಾಸದಲ್ಲಿರುವ ದ್ರೌಪದಿ. ಮಹಾರಾಣಿಯಂತೆ ಮೆರೆಯಬೇಕಿದ್ದ ಆಕೆ ಮತ್ತೊಬ್ಬರ ಅರಮನೆಯ ಊಳಿಗ ಮಾಡಿ ಬದುಕುವ ದುಃಸ್ಥಿತಿಗೆ ತಲುಪಿರುವುದು, ಭಾರತದ ಪರಾಧೀನತೆಯ ಪ್ರತೀಕವಾಗಿತ್ತು.

ಗಾಂಧಿ ಚಳವಳಿಯ ಉಗ್ರ ಪ್ರತಿಪಾದಕರಾದ ಕಂದಗಲ್ ಹಣಮಂತರಾಯರ `ಅಕ್ಷಯಾಂಬರ' ನಾಟಕದಲ್ಲಿ ಬರುವ ಕೃಷ್ಣನ-ದ್ರೌಪದಿಯರ ಸನ್ನಿವೇಶವು ತನ್ನ ರಾಜಕೀಯ ಸಂದೇಶಕ್ಕೆ ಪ್ರಸಿದ್ಧವಾಗಿತ್ತು. ಅಲ್ಲಿ ಗಾಯಗೊಂಡ ಕೃಷ್ಣನ ಬೆರಳಿಗೆ ದ್ರೌಪದಿ (ಬಹುಶಃ ಖಾದಿಸೀರೆ) ಸೆರಗು ಹರಿದು ಕಟ್ಟುತ್ತಾಳೆ. ಆಗ ಕೃಷ್ಣನು “ಪ್ರಿಯ ಭಗಿನಿ! ಸುದರ್ಶನ ಚಕ್ರದ ಪವಿತ್ರತೆಗೆ ಸಮಾನವಾದ ರಾಟಿಯನ್ನು ಯಾವ ಆರ್ಯಕುಮಾರಿ ಸದಾ ತನ್ನ ಮನೆಯಲ್ಲಿ ತಿರುಗಿಸುವಳೊ, ಆಕೆಗೆ ವಸ್ತ್ರಾದಿಗಳ ಕೊರತೆಯಾಗದಂತೆ ಈ ಕೃಷ್ಣನು ಕಾಯುವನು.

ಇದನ್ನು ಈ ಭರತಭೂಮಿಯ ಸಾಕ್ಷಿಯಾಗಿ ಸಾರಿಸಾರಿ ಹೇಳುವೆ” ಎಂದು ಘೋಷಿಸುತ್ತಿದ್ದನು. ಸ್ವಾರಸ್ಯವೆಂದರೆ, ಹಸ್ತಿನಾವತಿಯ ನೇಕಾರರೆಲ್ಲ ಸೇರಿ `ಗಾಂಧಾರ ದೇಶದಿಂದ ಬಂದಿರುವ ಶಕುನಿ ಅಲ್ಲಿನ ಬಟ್ಟೆತಂದು ಮಾರುತ್ತ ತಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾನೆಂದು' ಕೃಷ್ಣನಿಗೆ ದೂರು ನೀಡುವುದು ಹಾಗೂ ಅವನಿಗೆ ತಾವು ನೇದ ಬಟ್ಟೆಯನ್ನು ಅರ್ಪಿಸುವುದು. ಗಾಂಧಿಯ ಪ್ರತಿರೂಪದಂತೆ ಕೃಷ್ಣನನ್ನು ಬಿಂಬಿಸಲು ನಾಟಕ ಯತ್ನಿಸುತ್ತಿತ್ತು.

ಇಂಗ್ಲೆಂಡಿನಿಂದ ಜವಳಿ ತಂದು ಭಾರತದ ಮಾರುಕಟ್ಟೆಗೆ ಸುರಿದು, ಸ್ಥಳೀಯ ನೇಕಾರಿಕೆಯ ಮೇಲಾಗಿರುವ ಘಾತಕ ಪರಿಣಾಮವನ್ನು ಕಾಣಿಸುವುದು ಈ ದೃಶ್ಯದ ಉದ್ದೇಶ. ಹೀಗಾಗಿ ಕರ್ನಾಟಕದ ಕೈಮಗ್ಗಗಳಿರುವ ಬಿಜಾಪುರ ಬೆಳಗಾವಿ ಪ್ರದೇಶಗಳಲ್ಲೆಲ್ಲ ಈ ನಾಟಕ ಜನರ ಕಷ್ಟದೊಂದಿಗೆ ನೇರವಾಗಿ ಸ್ಪಂದಿಸುತ್ತ ಜನಪ್ರಿಯತೆ ಪಡೆದಿತ್ತು.

ನಾಟಕ ಮತ್ತು ಸಿನಿಮಾಗಳಲ್ಲಿ ಅಡಗಿಸಿಟ್ಟ ರಾಜಕೀಯ ದನಿಗಳನ್ನು ಗ್ರಹಿಸುವುದರಲ್ಲಿ ಆಗಿನ ಪ್ರೇಕ್ಷಕರೂ ಪಳಗಿದ್ದರು. ಅವರು ಅಂತಹ ಸನ್ನಿವೇಶ ಬಂದೊಡನೆ ಎದ್ದುನಿಂತು, ಭಾರತಮಾತೆಗೂ ಗಾಂಧಿಗೂ ಜೈಕಾರ ಹಾಕುತ್ತಿದ್ದರು.

`ಕಿಸ್ಮತ್' (1943) ಚಿತ್ರದಲ್ಲಿ ಅಮೀರ್‌ಬಾಯಿ ಹಾಡಿದ `ದೂರ್ ಹಟೊ' ಹಾಡಿನ ಸನ್ನಿವೇಶ ಬಂದಾಗ ಟಾಕೀಸಿನೊಳಗಿದ್ದ ಪ್ರೇಕ್ಷಕರು ಎದ್ದುನಿಂತು ಘೋಷಣೆ ಕೂಗುತ್ತಿದ್ದರಂತೆ. ಅಮೀರ್‌ಬಾಯಿ ರುದ್ರಮ್ಮನ ಪಾತ್ರದಲ್ಲಿ ನಟಿಸುತ್ತಿದ್ದ ವಾಣಿವಿಲಾಸ ಕಂಪನಿಯ `ಕಿತ್ತೂರು ರುದ್ರಮ್ಮ' (1929) ನಾಟಕದಲ್ಲೂ ಇದೇ ತರಹ ಆಗುತಿತ್ತು. ಈ ನಾಟಕವನ್ನು ಚಿಕ್ಕೋಡಿ ಶಿವಲಿಂಗಸ್ವಾಮಿಯವರೇ ರಚಿಸಿದ್ದರು.

ಅವರು ಬರೆದ `ಕಿತ್ತೂರು ಚೆನ್ನಮ್ಮ' ನಾಟಕ ನೋಡಿಕೊಂಡು ಮನೆಗೆ ಹೋಗುವಾಗ ಪ್ರೇಕ್ಷಕರು, ದಾರಿಯಲ್ಲಿದ್ದ ಈಚಲುಗಿಡ ಕಡಿದುಹಾಕಿ ಸರ್ಕಾರಕ್ಕೆ ಪ್ರತಿಭಟನೆ ತೋರಿಸುತ್ತಿದ್ದರು. ಈ ನಾಟಕ ನೋಡಿದ ಒಬ್ಬ ಮಹಿಳೆ ಜಿಲ್ಲಾ ಕಲೆಕ್ಟರ್ ಊರೊಳಗೆ ಬಂದಾಗ, ಅವನಿಗೆ ಚಪ್ಪಲಿ ತೋರಿಸಿದ ಪ್ರಕರಣವೂ ನಡೆಯಿತು.

ನಾಟಕ ಮುಗಿದ ಬಳಿಕ ಪ್ರೇಕ್ಷಕರು ತಾವು ಉಟ್ಟಿದ್ದ ವಿದೇಶೀ ಬಟ್ಟೆ ಸುಡುತ್ತಿದ್ದುದು ಆಗ ಸಾಮಾನ್ಯವಾಗಿತ್ತು. ಗರೂಡ ಸದಾಶಿವರಾಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿದೇಶಿ ಬಟ್ಟೆ ಸುಡುವ ಮೂಲಕ ನಾಟಕ ಆರಂಭಿಸುತ್ತಿದ್ದರು. ನಾಟಕ ಕಂಪನಿಗಳು ತಮ್ಮ ಕಲೆಕ್ಷನ್‌ನ ಚಿಕ್ಕಭಾಗವನ್ನು ಚಳವಳಿಗಾರರಿಗೆ ಕೊಡುತ್ತಿದ್ದವು. ಅವು ವೇಷಹಾಕಿ ಭೂಗತ ಚಳವಳಿಗಾರರನ್ನು ಪೊಲೀಸರಿಂದ ರಕ್ಷಿಸುತ್ತಿದ್ದರು.

ಅಮೀರ್‌ಬಾಯಿ ಅವರ ಜತೆ ನಾಟಕ ಮತ್ತು ಸಿನಿಮಾ ಎರಡರಲ್ಲೂ ಪಾತ್ರವಹಿಸುತ್ತಿದ್ದ ಬಸವರಾಜ ಮನ್ಸೂರರು ಹಾಗೂ ನಲವಡಿ ಶ್ರೀಕಂಠಶಾಸ್ತ್ರಿ ಸ್ವತಃ ಹೋರಾಟಗಾರರಾಗಿದ್ದರು ಮತ್ತು ಜೀವನದುದ್ದಕ್ಕೂ ಖಾದಿ ಧರಿಸುತ್ತಿದ್ದರು.

ನಾಟಕಗಳು ಬೀರುತ್ತಿರುವ ಪ್ರಭಾವ ಕಂಡ ಬ್ರಿಟಿಷ್ ಸರ್ಕಾರವು, ಐತಿಹಾಸಿಕ ನಾಟಕಗಳ ಪ್ರದರ್ಶನಗಳ ಮೇಲೆ ನಿರ್ಬಂಧ ಹಾಕಲು ಆರಂಭಿಸಿತು.

ಎರಡನೇ ಹಂತದಲ್ಲಿ ಸರ್ಕಾರವು ಪ್ರದರ್ಶನ ಪೂರ್ವದಲ್ಲಿ ಕಂಪನಿಯು ಅಧಿಕಾರಿಗಳಿಗೆ ನಾಟಕದ ಕತೆಯ ಹಸ್ತಪ್ರತಿ ಕೊಟ್ಟು ಲೈಸೆನ್ಸ್ ಪಡೆಯುವ ಪದ್ಧತಿ ಜಾರಿಮಾಡಿತು. ಆದರೆ ಸರ್ಕಾರಿ ನಿಷೇಧವನ್ನು ನಿಷ್ಫಲಗೊಳಿಸುವ ಗುಪ್ತಹಾದಿಗಳನ್ನು ರಂಗಭೂಮಿ ಹುಡುಕಿಕೊಂಡಿತು. ಇದನ್ನು ಕುರ್ತಕೋಟಿ `ರಂಗಭೂಮಿ ಕಂಡುಕೊಂಡ ಪ್ರಭುತ್ವಕ್ಕೆ ಅರ್ಥವಾಗದ ಗುಪ್ತಭಾಷೆ' ಎಂದು ಕರೆಯುತ್ತಾರೆ.

ಅಮೀರ್‌ಬಾಯಿ ರಂಗಪ್ರವೇಶಕ್ಕೆ ಕಾರಣವಾದ ಯರಾಸಿ ಭರಮ್ಮಪ್ಪನವರ `ವಾಣೀವಿಲಾಸ ಸಂಗೀತ ನಾಟಕ ಮಂಡಳಿ'ಯೆ ಬ್ರಿಟಿಷ್ ವಿರೋಧಿ ಸಂವೇದನೆಯಿಂದ ಕೂಡಿತ್ತು. ಇದಕ್ಕೆ ಪ್ರಮಾಣವಾಗಿದ್ದ ಅದರ ಅಂಕಪರದೆಯನ್ನು ಬಸವರಾಜ ಮನ್ಸೂರ್ ಹೀಗೆ ಬಣ್ಣಿಸುತ್ತಾರೆ:

“ಅಂಕಪರದೆಯನ್ನು ಪೂರ್ತಿ ವ್ಯಾಪಿಸಿದ ಭಾರತದ ನಕ್ಷೆ. ಮಧ್ಯೆ ಮಹಾತ್ಮಾ ಗಾಂಧಿಯವರ ಚಿತ್ರ. ಅವರ ಸುತ್ತಮುತ್ತ ಜವಾಹರಲಾಲ, ಸರ್ದಾರ, ಟಿಳಕ, ರಾನಡೆ ಮೊದಲಾದ ಧುರೀಣರ ಚಿತ್ರ. ಭಾರತಾಂಬೆಯ ಕೈಯಲ್ಲಿ ರಾಷ್ಟ್ರೀಯ ತ್ರಿವರ್ಣಧ್ವಜ. ಅದು ರಾಷ್ಟ್ರೀಯ ಭಾವನೆಯ ಕುರುಹು.

ಅಂಕಪರದೆಯನ್ನು ನೋಡಲು ಜನಜಾತ್ರೆ. ಅಂಕಪರದೆಯನ್ನು ನೋಡಿ, ಭಯ-ಭಕ್ತಿಯಿಂದ ಕೈಮುಗಿಯುವ ಮುಗ್ಧ ರಾಷ್ಟ್ರಪ್ರೇಮಿಗಳು”. ಈ ಅಂಕಪರದೆ, ಕಂಪನಿ ಬೆಳಗಾವಿ ಕ್ಯಾಂಪಿನಲ್ಲಿದ್ದಾಗ, ನಾಟಕದಾರಂಭಕ್ಕೆ ಸಾಂಬ್ರಾಣಿ ಹೊಗೆ ಹಾಕುವ ಹೊತ್ತಲ್ಲಿ ಸುಟ್ಟುಹೋಯಿತು. ಜನಮಾತ್ರ ಈ ಬೆಂಕಿ ಪ್ರಕರಣದ ಹಿಂದೆ ಪೊಲೀಸರ ಪಿತೂರಿಯಿತ್ತು ಎಂದೇ ವ್ಯಾಖ್ಯಾನಿಸಿಕೊಂಡರು.

ರಾಷ್ಟ್ರೀಯ ಹೋರಾಟಗಳು ತೀವ್ರಗೊಂಡಿದ್ದ ಕಾಲಘಟ್ಟದಲ್ಲಿ ರಂಗಭೂಮಿ ಹಾಗೂ ಸಿನಿಮಾ ಪ್ರವೇಶಿಸಿದ ಅಮೀರ್‌ಬಾಯಿ, ಇದರ ಪ್ರಭಾವದಿಂದ ಹೊರಗುಳಿಯಲು ಸಾಧ್ಯವಾಗಲಿಲ್ಲ. ಅವರ ರಂಗಪ್ರವೇಶಕ್ಕೆ ಕಾರಣವಾದ `ಕಿತ್ತೂರ ರುದ್ರಮ್ಮ' ನಾಟಕವು, ಪುಟ್ಟಪ್ರಾಂತ್ಯವೊಂದು ತನ್ನ ಮೇಲೆ ಎರಗಿಬಂದ ಬಲಿಷ್ಠ ದೊರೆಗೆ ದಿಟ್ಟತನ ಮತ್ತು ಸ್ವಾಭಿಮಾನದಿಂದ ಜವಾಬು ಕೊಡುವ ಆಶಯವನ್ನು ಒಳಗೊಂಡಿತ್ತು. ಅಮೀರ್‌ಬಾಯಿ ರುದ್ರಮ್ಮನ ಪಾತ್ರ ಮಾಡುತ್ತಿದ್ದರು. ರುದ್ರಮ್ಮ ತೋರುವ ದಿಟ್ಟತನ, ವಸಾಹತುಶಾಹಿ ವಿರೋಧಿ ಹೋರಾಟದ ಚೈತನ್ಯದ ದ್ಯೋತಕದಂತಿತ್ತು.

ಎದುರಾಳಿ ಸೈನ್ಯ ಬರುತ್ತಿದೆ ಎಂದರಿತಾಗ ರಾಣಿರುದ್ರಮ್ಮ ತವರು ಮನೆಗೆ ಹೋಗಲು ನಿರಾಕರಿಸುತ್ತಾಳೆ. ನಾಟಕ-ಸಿನಿಮಾಗಳಲ್ಲಿ ಕೆಲಸ ಮಾಡುವವರನ್ನು ಹಗುರ ದೃಷ್ಟಿಕೋನದಿಂದ ನೋಡುತ್ತಿದ್ದ ದಿನಗಳಲ್ಲಿ ಈ ಕಲಾವಿದೆಯರು ತಮ್ಮ ಸ್ವಾಭಿಮಾನ ಪ್ರಕಟಿಸುವ ಕಿತ್ತೂರ ರುದ್ರಮ್ಮ, ಚೆನ್ನಮ್ಮ, ದ್ರೌಪದಿಯಂತಹ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ಅವರ ಏರುದನಿಯ ಮಾತು ಮತ್ತು ಹಾಡಿಕೆಗೆ ಕಾರಣ, ಕಥೆಯ ಸನ್ನಿವೇಶದ ಅಗತ್ಯ ಮಾತ್ರವಾಗಿರಲಿಲ್ಲ, ಅಥವಾ ಮೈಕ್ರೊಫೋನ್ ಇಲ್ಲದಿರುವಿಕೆ ಮಾತ್ರವಾಗಿರಲಿಲ್ಲ. ಸಾಮಾಜಿಕ ಬಿಡುಗಡೆಗಾಗಿ ಅವರು ಮಾಡುತ್ತಿದ್ದ ಸೆಣಸಾಟವೂ ಆಗಿರುತ್ತಿತ್ತು. ರಂಗಭೂಮಿ ಮತ್ತು ಸಿನಿಮಾ ಅವರ ಬಿಡುಗಡೆಯ ಮಾಧ್ಯಮವೂ ಆಗಿತ್ತು.

`ಕಿಸ್ಮತ್' (1943) ಚಿತ್ರದಲ್ಲಿ ಅಮೀರ್‌ಬಾಯಿ ಹಾಡುವ `ದೂರ್‌ಹಟೊ' ಹಾಡಿನ ಹಿನ್ನೆಲೆಯಲ್ಲೂ ಭಾರತದ ನಕ್ಷೆಯಿದೆ. ಅದರಲ್ಲಿ ಮೊದಲು ಆಜಾದ್‌ಹಿಂದ್‌ನ ಸೈನಿಕರು ಹೆಗಲಮೇಲೆ ತುಪಾಕಿ ಇಟ್ಟುಕೊಂಡು ಕದನಕ್ಕೆ ಹೊರಟವರಂತೆ ಬರುತ್ತಾರೆ. ನಂತರ ಎಲ್ಲ ಧರ್ಮಗಳಿಗೆ ಸೇರಿದ ಹಲವು ಪ್ರಾಂತ್ಯದ ವೇಷಧರಿಸಿದ ತರುಣ-ತರುಣಿಯರು ಹಿನ್ನೆಲೆಯಲ್ಲಿ ಚಲಿಸುತ್ತ, ಸಂಕಲ್ಪ ಮಾಡುವರಂತೆ ಮುಷ್ಟಿಗಟ್ಟಿದ ಕೈಯನ್ನು ಗಾಳಿಯಲ್ಲಿ ಬೀಸುತ್ತ ಕೋರಸ್ ಹಾಡುವರು:

ಜಹಾಂ ಹಮಾರ ತಾಜ್ ಮಹಲ್ ಹೈ ಓರ್ ಕುತುಬ್ ಮೀನಾರಾ ಹೈ
ಜಹಾಂ ಹಮಾರೆ ಮಸ್ಜಿದ್ ಮಂದಿರ್ ಸಿಖ್ಖೋಂಕ ಗುರುದ್ವಾರಾ ಹೈ
ಧರತೀ ಪರ್ ಖದಂ ಬಡಾನಾ ಅತ್ಯಾಚಾರ್ ತುಮಾರಾ ಹೈ
ಆಜ್ ಹಿಮಾಲಯಾಕೆ ಚೋಟೀಸೇ ಫಿರ್ ಹಮ್ನೆ ಲಲ್‌ಕಾರಾ ಹೈ
ದೂರ್‌ಹಟೊ ದೂರ್‌ಹಟೊ, ಅಯ್ ದುನಿಯಾ ವಾಲೊ, ಹಿಂದೂಸ್ತಾನ್ ಹಮಾರಾ ಹೈ

ಎಲ್ಲ ಧರ್ಮಗಳ ಪವಿತ್ರ ಸ್ಮಾರಕಗಳಿರುವ ನೆಲವನ್ನು ಆಕ್ರಮಿಸಿಕೊಳ್ಳುವುದು ಅತ್ಯಾಚಾರಕ್ಕೆ ಸಮಾನ ಎಂಬ ಇಲ್ಲಿನ ಹೇಳಿಕೆ ಮುಖ್ಯವಾದುದು. ಇಲ್ಲಿರುವ `ದೂರ್‌ಹಟೋ' ಎಂಬ ಪದವು ಕ್ವಿಟ್‌ಇಂಡಿಯಾ (ಚಲೇಜಾವ್) ಪದದ ನೇರ ಅನುವಾದ.

ಚಿತ್ರದಲ್ಲಿ ಈ ಹಾಡನ್ನು ಕಥಾನಾಯಕಿ ಒಂದು ಥಿಯೇಟರಿನಲ್ಲಿ ಹಾಡುವಳು. ಆಗ ಥಿಯೇಟರಲ್ಲಿದ್ದ ಪ್ರೇಕ್ಷಕರು ಹಾಡಿಗೆ ದನಿಗೂಡಿಸಿ `ದೂರ್‌ಹಟೊ' ಎಂದು ಘೋಷಿಸುವರು. ಒಬ್ಬರ ಹಾಡು ಎಲ್ಲರ ಹಾಡೂ ಆಗಿಬಿಡುವ ವಿಶಿಷ್ಟ ಸನ್ನಿವೇಶವಿದು.

ಬಂಗಾಳದ ಕ್ರಾಂತಿಕವಿ ಖಾಜಿನಜರುಲ್ ಇಸ್ಲಾಮರ ಶಿಷ್ಯನಾಗಿದ್ದ ಅನಿಲ್ ಬಿಸ್ವಾಸ್ ಇದಕ್ಕೆ ಸಂಗೀತ ನೀಡಿದ್ದರು. ಕವಿ ಪ್ರದೀಪ್ ರಚಿಸಿದ ಈ ಗೀತೆ ಸೆನ್ಸಾರ್ ಮಂಡಳಿಯಿಂದ ಕಣ್ತಪ್ಪಿಸಿ ಬಂದಿತ್ತು. ಇದರ ಅರಿವು ಸರ್ಕಾರಕ್ಕೆ ನಂತರ ಗೊತ್ತಾಯಿತು.

ಆದರೆ ಅದು ಕ್ರಮವಹಿಸುವುದಕ್ಕೆ ತೀರ ತಡವಾಗಿತ್ತು. ಈ ಹಾಡು 40ರ ದಶಕದಲ್ಲಿ ಸಂಚಲನಕ್ಕೆ ಕಾರಣವಾಯಿತು. ಚಳವಳಿಯಲ್ಲಿ ಸ್ವಯಂಸೇವಕರು ಈ ಹಾಡನ್ನು ಹಾಡುತ್ತ ಪ್ರಭಾತ್ ಫೇರಿ ಮಾಡುತ್ತಿದ್ದರು. ಈಗಲೂ ಆಗಸ್ಟ್ 15 ಮತ್ತು ಜನವರಿ 26ರಂದು ಇದನ್ನು ದೂರದರ್ಶನ ಬಿತ್ತರಿಸುವುದುಂಟು; ಸಿಲೋನ್ ರೇಡಿಯೊ ಹಾಕುವುದುಂಟು.

ಸಿನಿಮಾ-ನಾಟಕದಂತಹ ಮಾಧ್ಯಮಗಳಲ್ಲಿ ಕಲಾವಿದರು ರಾಜಕೀಯ ಸಂದೇಶಗಳನ್ನು ನೇರವಾಗಿ ಜನರಿಗೆ ಮುಟ್ಟಿಸಬಲ್ಲವರಾಗಿದ್ದರು. ಬೆಂಗಳೂರು ನಾಗರತ್ನಮ್ಮನವರು ರಾಜಕೀಯ ಚಳವಳಿಯಲ್ಲಿ ಭಾಗವಹಿಸಿದರು; ಗಜಲ್‌ರಾಣಿ ಎನಿಸಿದ್ದ ಬೇಗಂ ಅಖ್ತರ್, ಸರೋಜಿನಿ ನಾಯ್ಡು ಸಂಗ್ರಹಿಸುತ್ತಿದ್ದ ಭೂಕಂಪನಿಧಿಗೆ ಹಾಡಿದರು; ಉಸ್ತಾದ್ ಅಬ್ದುಲ್ ಕರೀಂಖಾನರು ಗಾಂಧಿ ಚಳವಳಿಗೆ ಗಾಯನ ಕಛೇರಿ ನಡೆಸಿಕೊಡುತ್ತಿದ್ದರು; ಇವುಗಳ ತಾರ್ಕಿಕ ಕೊನೆಯಂತೆ, 1947 ಆಗಸ್ಟ್ 15ರ ದೆಹಲಿ ಕಾರ್ಯಕ್ರಮದಲ್ಲಿ ಕರೀಂಖಾನರ ಮಗಳಾದ ಹೀರಾಬಾಯಿ ಬಡೋದೆಕರ್ `ವಂದೇಮಾತರಂ' ಹಾಡಿದರು.

ವೈರುಧ್ಯವೆಂದರೆ, ಕಂಚಿನಕಂಠದ ಕಲಾವಿದೆಯರು ಮತ್ತು `ಮುಕ್ತಮಹಿಳೆ'ಯರು ನಾಡಿನ ಮತ್ತು ತಮ್ಮ ಬಿಡುಗಡೆಯನ್ನು ಏಕಕಾಲಕ್ಕೆ ಪಡೆಯುವಂತೆ ಹಾಡುತ್ತ ನಟಿಸುತ್ತ, ಸಾಂಪ್ರದಾಯಿಕ ವಿವಾಹ ಮತ್ತು ಕುಟುಂಬಗಳ ಚೌಕಟ್ಟು ಮೀರಿ ಬದುಕುತ್ತಿರುವ ಹೊತ್ತಲ್ಲಿ, ಮಹಿಳೆಯರನ್ನು ಪತಿನಿಷ್ಠೆಗೂ ಕುಟುಂಬಕ್ಕೂ ಕಟ್ಟಿಹಾಕುವಂತಹ ನಾಟಕ-ಸಿನಿಮಾಗಳೂ ತಯಾರಾಗುತ್ತಿದ್ದವು.

ಕನ್ನಡದ ಮೊಟ್ಟಮೊದಲ ವಾಕ್ಚಿತ್ರ `ಸತಿಸುಲೋಚನಾ' (1934), ಗಂಡನ ಶವದೊಂದಿಗೆ ಸತಿಹೋಗುವ ಮಹಿಳೆಯ ಕಥೆಯಾಗಿರುವುದು ಗಮನಾರ್ಹ. ನಂತರ ಬಂದ `ಹರಿಶ್ಚಂದ್ರ' (1943), `ಹೇಮರೆಡ್ಡಿ ಮಲ್ಲಮ್ಮ' (1945), `ಭಕ್ತ ಕುಂಬಾರ' (1949) ಚಿತ್ರಗಳು ಕೂಡ ಪತಿವ್ರತಾ ಪ್ರಧಾನ ಆಶಯದ ಚಿತ್ರಗಳೇ.

ಇದು ಮಹಿಳೆಯರ ಸಾರ್ವಜನಿಕ ಬದುಕಿಗೆ ಪ್ರವೇಶವನ್ನು ನಿರ್ಬಂಧಿಸುವ ತುಡಿತವನ್ನು ಸಣ್ಣಗೆ ಒಳಗೊಂಡಿದ್ದವು. 30-40ರ ದಶಕಗಳ ಕನ್ನಡ ರಂಗಭೂಮಿ ಮತ್ತು ಮುಂಬೈ ಸಿನಿಮಾಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗವು ರಾಷ್ಟ್ರೀಯ ಚಳವಳಿಗೆ ಸ್ಪಂದಿಸಿದ್ದು ಕಡಿಮೆ.

ಗಿರೀಶ್ ಕಾಸರವಳ್ಳಿಯವರು ಕನ್ನಡದ `ವಸಂತಸೇನೆ'ಯ ವಸ್ತು ಪುರಾಣಕತೆಯಾದರೂ ಅದರಲ್ಲಿ ಕೆಟ್ಟದೊರೆ ಮತ್ತು ಅವನ ವಿರುದ್ಧ ಜನರ ಪ್ರತಿರೋಧ ಅದರ ಮುಖ್ಯ ದನಿ ಎಂದು ವ್ಯಾಖ್ಯಾನಿಸುವುದುಂಟು.

ಇದು ಕೆಲಮಟ್ಟಿಗೆ ನಿಜ. ಆದರೂ ಹಿಂದಿ-ಮರಾಠಿ ಚಿತ್ರಗಳಿಗೆ ಹೋಲಿಸಿದರೆ, (ಬಿಜಾಪುರ ಮೂಲದ ವಿ.ಶಾಂತಾರಾಂ ಅವರ ಬಹುತೇಕ ಚಿತ್ರಗಳು ರಾಜಕೀಯ ಆಶಯವುಳ್ಳವು) ಕನ್ನಡ ಚಿತ್ರಗಳಲ್ಲಿ ಪ್ರತಿರೋಧಿ ರಾಜಕೀಯ ದನಿ ಕಡಿಮೆ. ಹಳೇಮೈಸೂರು ಭಾಗದಲ್ಲಿ ಮಹಾರಾಜರ ಆಡಳಿತದಲ್ಲಿ ಕ್ಷೀಣವಾಗಿದ್ದ ಬ್ರಿಟಿಷ್ ವಿರೋಧಿ ಆಂದೋಲನವೂ ಇದಕ್ಕೆ ಒಂದು ಕಾರಣ.

ಈ ಹಿನ್ನೆಲೆಯಲ್ಲಿ, ಅಮೀರ್‌ಬಾಯಿ ನಟಿಸಿದ `ಚಿರಂಜೀವಿ' ಮತ್ತು `ಚಂದ್ರಹಾಸ'ಗಳು ಮುಂಬೈ ಕರ್ನಾಟಕಕ್ಕೆ ಸೇರಿದ್ದ ಮುಧೋಳಕರ್ ಹಾಗೂ ಶಾಂತೇಶ ಪಾಟೀಲರಿಂದ, ಪುಣೆ-ಮುಂಬೈಗಳಲ್ಲಿ ನಿರ್ಮಾಣವಾದವು. ಇದು ಮಾರ್ಮಿಕವಾದ ಸಂಗತಿ. ಅಮೀರ್‌ಬಾಯಿ 1947ರ ನಂತರ ನಟಿಸಿದ ಕನ್ನಡ ಚಿತ್ರಗಳಲ್ಲಿ ಗಾಂಧಿಚಳವಳಿಯ ಆಯಾಮ ಇನ್ನೊಂದು ರೂಪದಲ್ಲಿ ಮುಂದುವರೆಯಿತು.

ಅವರು ನಟಿಸಿ ಹಾಡಿದ `ಶ್ರೀನಿವಾಸ ಕಲ್ಯಾಣ'ವು (1952) ಡಿ.ಶಂಕರ್‌ಸಿಂಗರ `ಮಹಾತ್ಮ ಪಿಕ್ಚರ್ಸ್' ಲಾಂಛನದಡಿ ತಯಾರಾಯಿತು. ತಮ್ಮ ಸಿನಿಮಾ ಸಂಸ್ಥೆ ಸ್ಥಾಪಿಸುವ ಮುನ್ನ ಶಂಕರ್‌ಸಿಂಗ್, `ನೆಹರೂ ಟೂರಿಂಗ್ ಟಾಕೀಸ್', `ಮಹಾತ್ಮ ಟೂರಿಂಗ್ ಟಾಕೀಸ್' ನಡೆಸುತ್ತಿದ್ದವರು. ಇಲ್ಲಿರುವ `ಟೂರಿಂಗ್' ಪದವು ಸಾಂಕೇತಿಕವಾಗಿದ್ದು, ಅದು ಗಾಂಧೀಜಿ ನಾಡಿನಾದ್ಯಂತ ಮಾಡುತ್ತಿದ್ದ ಸಂಚಾರಗಳ ರೂಪಕದಂತಿದೆ.

ಸಿನಿಮಾದ ಲಾಂಛನದಲ್ಲೂ ಗಾಂಧೀಜಿ ಕೋಲು ಹಿಡಿದು ನಡೆಯುತ್ತಿರುವ ಚಿತ್ರವಿದೆ. ಶಂಕರ್‌ಸಿಂಗ್ ಹಾಗೂ ಅವರ ತಂಡದ ಬಿ. ವಿಠಲಾಚಾರ್ಯ ಮುಂತಾದವರು ಚಲೇಜಾವ್ ಚಳವಳಿಯಲ್ಲಿ ಜೈಲುವಾಸ ಕಂಡವರು; ಖಾದಿಧಾರಿಗಳು. ಅಮೀರ್‌ಬಾಯಿ ಕೂಡ ಸದಾ ಬಿಳೀಸೀರೆ ಉಡುತ್ತಿದ್ದರು. ಈ ಸಮಾನ ಹಿನ್ನೆಲೆಯೇ ಇವರೆಲ್ಲ `ಮಹಾತ್ಮಾ ಪಿಕ್ಚರ್ಸ್' ಚಿತ್ರಗಳಲ್ಲಿ ಒಗ್ಗೂಡಲು ಕಾರಣವಾಗಿರಬಹುದು.

ಅಮೀರ್‌ಬಾಯಿ ನಟಿಸಿದ ಹೆಚ್ಚಿನ ಚಿತ್ರಗಳು ರಾಷ್ಟ್ರೀಯ ಆಂದೋಲನದ ಆಶಯದವು. ಉದಾಹರಣೆಗೆ- `ಭಾರತ್ ಕೆ ಬೇಟಿ' (1935), `ಫಿದಾ ಎ ವತನ್' (1936), `ಹಮಾರ ದೇಶ್' (1940), `ವಿದ್ಯಾ' (1948), `ಹಂ ಪಂಛಿ ಏಕ್ ಡಾಲ್‌ಕೆ' (1957), `ಶಹೀದೆ ಆಜಂ ಭಗತಸಿಂಗ್' (1954). ಈ ಚಿತ್ರಗಳ ನಿರ್ಮಾಪಕ ಹಾಗೂ ನಿರ್ದೇಶಕರೂ ಸಾಮಾನ್ಯವಾಗಿ ಬ್ರಿಟಿಷ್ ವಿರೋಧಿ ಚಳವಳಿ ಹಿನ್ನೆಲೆಯವರು.

ಅಮೀರ್‌ಬಾಯಿ ಮುಖ್ಯಪಾತ್ರದಲ್ಲಿ ನಟಿಸಿರುವ `ವಿದ್ಯಾ' ಅಸ್ಪೃಶ್ಯತಾ ನಿವಾರಣೆಯ ಪ್ರತಿಪಾದನೆ ಮಾಡುವ ಚಿತ್ರವಾಗಿದೆ. ಇಲ್ಲಿ ಚಮ್ಮಾರ ಕುಟುಂಬದಿಂದ ಬಂದ ತರುಣ ಚಂದೂ (ದೇವಾನಂದ್) ಸ್ವಂತಕ್ಕೆ ವಿದ್ಯೆ ಕಲಿಯುವುದು ಮಾತ್ರವಲ್ಲ, ಗಾಂಧೀಜಿಯ ಕರೆಯಂತೆ ಹಳ್ಳಿಗೆ ಮರಳಿ ದಲಿತರಿಗೆ ಶಿಕ್ಷಣ ಕೊಡಲಾರಂಭಿಸುತ್ತಾನೆ. ಅವನ ಆದರ್ಶದಲ್ಲಿ ಬೆನ್ನಿಗೆನಿಲ್ಲುವುದು ಅವನನ್ನು ಪ್ರೇಮಿಸಿದ ವಿದ್ಯಾ ಎಂಬ ತರುಣಿ (ಸುರಯ್ಯಾ); ಶ್ರೀಮಂತ ಮನೆತನ ಮತ್ತು ಉಚ್ಚಜಾತಿಯ ಹಿನ್ನೆಲೆಯಿಂದ ಬರುವ ವಿದ್ಯಾ, ಅಪ್ಪನ ನಿಬರ್ಂಧ ಲೆಕ್ಕಿಸದೆ ಹೊರಬರುತ್ತಾಳೆ.

ಚಿತ್ರದ ಬಹುತೇಕ ಫ್ರೇಂಗಳಲ್ಲಿ ರಾಷ್ಟ್ರನಾಯಕರ ಫೋಟೊಗಳಿವೆ. ಪ್ರೇಮಿಗಳಾದ ಚಂದೂ ಮತ್ತು ವಿದ್ಯಾ ಕೂಡ ಪರಸ್ಪರ ವಂದನೆಯನ್ನು `ಜೈಹಿಂದ್' ಎಂದೇ ಮಾಡುತ್ತಾರೆ. ಇವರ ಮದುವೆ 12ನೇ ಶತಮಾನದ ಕಲ್ಯಾಣದಲ್ಲಿ ಹಾರುವ ಮತ್ತು ದಲಿತ ತರುಣತರುಣಿಯರ ಕಲ್ಯಾಣ ಪ್ರಸಂಗವನ್ನು ನೆನಪಿಸುತ್ತದೆ.

ಇವರ ಲಗ್ನಕ್ಕೆ ವಿದ್ಯಾಳ ತಾಯಿ (ಅಮೀರ್‌ಬಾಯಿ) ಗಂಡನ ವಿರೋಧ ಲೆಕ್ಕಿಸದೆ ಬೆಂಬಲಿಸುತ್ತಾಳೆ. ಕುಡುಕ ಗಂಡನ ಹೆಂಡತಿಯಾದ ಈಕೆ ಹಾಡುವ ಹಾಡುಗಳು ರಾಮಭಕ್ತಿಯವು ಮತ್ತು ಪಾರಾಯಣ ಮಾಡುವುದು ರಾಮಾಯಣ. ಪಾನವಿರೋಧ, ರಾಮಾಯಣ- ಇವು ಗಾಂಧೀಜಿಗೆ ಪ್ರಿಯವಾದುವಷ್ಟೆ. ಚಿತ್ರದಲ್ಲಿ ಅಮೀರ್‌ಬಾಯಿ ನಟಿಸುತ್ತ ಹಾಡುವ ದೃಶ್ಯದಲ್ಲಿ ಗಾಂಧಿ ಚಿತ್ರವನ್ನು ತೋರಿಸಲಾಗುವುದು.

ಅಮೀರ್‌ಬಾಯಿ ನಟಿಸಿದ `ಹಂ ಪಂಛಿ ಏಕ್ ಡಾಲಕೆ' (1957) ಕೂಡ ಇಂತಹುದೇ ಚಿತ್ರ; ವರ್ಗಭೇದ ಉಣಗೋಲು ದಾಟಿ ಮಕ್ಕಳು ಸಮಾಜವನ್ನು ಮರುನಿರ್ಮಾಣ ಮಾಡುವ ಭಾವನೆಯಿಂದ ಒಗ್ಗೂಡುವ ಕಥೆಯುಳ್ಳದ್ದು. ಮನೆಬಿಟ್ಟು ಬಂದು ಬಡವರ ಸೇವೆ ಮಾಡುವ ಮಗನ ವರ್ತನೆಯಿಂದ, ಆತನ ಶ್ರೀಮಂತ ತಂದೆಯ ಮನಃಪರಿವರ್ತನೆ ಆಗುತ್ತದೆ. ಕೆಟ್ಟ ತಂದೆಯಂದಿರ ವಿರುದ್ಧ ಬಂಡೆದ್ದ ಮಕ್ಕಳು, ಹೊಸಮಾಜ ಕಟ್ಟುವುದಕ್ಕೆ ಯತ್ನಿಸುವ ಥೀಮಿನ ಚಿತ್ರಗಳು 40ರ ದಶಕದಲ್ಲಿ ಸಾಮಾನ್ಯವಾಗಿದ್ದವು. ಅಮೀರ್‌ಬಾಯಿ ಬಡಹುಡುಗನ ತಾಯಿ ಪಾತ್ರದಲ್ಲಿದ್ದಾರೆ.

15ನೇ ಶತಮಾನದ ಗುಜರಾತಿ ಕವಿ ನರಸಿಮೆಹ್ತಾನ ಬದುಕಿಗೆ ಸಂಬಂಧಪಟ್ಟ `ನರಸೀಭಗತ್' (1940) ಚಿತ್ರದಲ್ಲಿ ಅಮೀರ್‌ಬಾಯಿ ನಟಿಸಿದರು. ನರಸಿ ಅಸ್ಪೃಶ್ಯತೆ ವಿರೋಧಿಸುತ್ತಿದ್ದ ಸಮಾಜ ಸುಧಾರಕ ಕೂಡ. ಗಾಂಧಿಗೆ ಅವನ ಚಿಂತನೆ ಹಾಗೂ ಅವನ `ವೈಷ್ಣವ ಜನತೋ' ಗೀತೆ ಪ್ರೇರಣೆ ಕೊಟ್ಟಿದ್ದವು. ಈ ಗೀತೆಯನ್ನು ಅಮೀರ್‌ಬಾಯಿ ಅದ್ಭುತವಾಗಿ ಹಾಡಿದರು.

ನಿಜವಾದ ಭಕ್ತರು ಪರರಿಗೆ ಪೀಡೆ ಕೊಡುವುದಿಲ್ಲ (ಪೀಡಪರಾಯಣ ನ ಜಾಣೆರೆ) ಎಂದು ಈ ಹಾಡು ಭಕ್ತಿಯನ್ನು ವ್ಯಾಖ್ಯಾನಿಸುತ್ತದೆ. ಈ ವ್ಯಾಖ್ಯಾನವು ಚಿತ್ರದಲ್ಲಿ ಬರುವ ಅಸ್ಪೃಶ್ಯರ ಮತ್ತು ಬಡವರ ಮೇಲೆ ಮೇಲ್ಜಾತಿ ಅಧಿಕಾರಸ್ಥರು ಮಾಡುವ ದಬ್ಬಾಳಿಕೆಗೆ ನೇರ ಲಗತ್ತಾಗಿದೆ. ಆದರೆ ಈ ವ್ಯಾಖ್ಯಾನವು ಭಾರತೀಯರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಬ್ರಿಟಿಷರನ್ನೂ ಒಳಗೊಳ್ಳುತ್ತದೆ. ಚಿತ್ರದ ಕೊನೆಗೆ, ಅಧಿಕಾರಸ್ಥರನ್ನು ಸಿಟ್ಟಿಗೆದ್ದ ಜನ ಬೀದಿಯಲ್ಲಿ ಓಡಾಡಿಸಿ ಹೊಡೆಯುವ ದೃಶ್ಯವಿದೆ. ಕ್ವಿಟ್ ಇಂಡಿಯಾ ಚಳವಳಿಯ ಎರಡು ವರ್ಷ ಮುಂಚೆ ಈ ಸಿನಿಮಾ ಬಂದಿತು ಎನ್ನುವುದು ಮುಖ್ಯವಾಗಿದೆ.

ಈ ಚಿತ್ರವನ್ನು ನಿರ್ದೇಶಿಸಿದ ವಿಜಯಭಟ್, ಅಮೀರ್‌ಬಾಯಿ ಅವರ ಮೊದಲ ಕನ್ನಡ ಚಿತ್ರ `ಚಿರಂಜೀವಿ'ಯ ನಿರ್ದೇಶಕರಾದ ಕೆ.ಪಿ.ಭಾವೆಯ ಗರಡಿಯಲ್ಲಿ ಪಳಗಿದವರು. ಅವರು ರಾಮಾಯಣದ ಮೇಲೆ (ಭರತ್‌ಮಿಲಾಪ್ 1942; ರಾಮರಾಜ್ಯ 1943; ರಾಮಬಾಣ್ 1948; ರಾಮಾಯಣ್ 1954) ಸರಣಿ ಚಿತ್ರಗಳನ್ನು ಮಾಡಿದವರು.

ಈ ಎಲ್ಲ ಚಿತ್ರಗಳಲ್ಲೂ ಅಮೀರ್‌ಬಾಯಿ ನಟಿಸಿ ಹಾಡಿದರು. ಗಾಂಧೀಜಿಯವರಿಗೆ ವಿಜಯಭಟ್ ತಮ್ಮ `ರಾಮರಾಜ್ಯ'ವನ್ನು ತೋರಿಸಿದರು; ಅಮೀರ್‌ಬಾಯಿ ಗಾಂಧಿಯವರನ್ನು ಆಗ ಭೇಟಿ ಮಾಡಿರುವ ಸಾಧ್ಯತೆಯಿದೆ. ಅವರು ಹಾಡಿದ `ವೈಷ್ಣವ ಜನತೊ' ಗುಜರಾತಿ ಮನೆಮಾತಿನ ಗಾಂಧೀಜಿಗೆ ಪ್ರಿಯವಾಯಿತು.

ಅಮೀರ್‌ಬಾಯಿ ಅವರ ಜನಪ್ರಿಯ ಹಾಡುಗಳ ಧಾಟಿಯನ್ನು ಅನುಸರಿಸಿ 1947ರ ಬಳಿಕ ಅನೇಕ ನಾಡಗೀತೆಗಳು ಹುಟ್ಟಿಕೊಂಡವು. ಸಾರ್ವಜನಿಕ ಸಭೆಗಳಲ್ಲಿ ಮತ್ತು ಶಾಲಾದಿನಗಳಲ್ಲಿ ಹಾಡಲಾಗುತ್ತಿದ್ದ `ಭಾರತದ ಕಣ್ಮಣಿ ನೀ ಪೂಜ್ಯ ಮಹಾತ್ಮಾ, ಎ್ಲ್ಲಲಿ ಹೋದೆ ನಮ್ಮನಗಲಿ ಗಾಂಧಿ ಮಹಾತ್ಮಾ' ಎಂಬ ಹಾಡು `ಕಿಸ್ಮತ್' ಚಿತ್ರದಲ್ಲಿ ಅಮೀರ್‌ಬಾಯಿ ಹಾಡಿದ `ಅಬ್ ತೇರೆ ಸಿವಾ ಕೌನಮೇರಾ ಕೃಷ್ಣಕನ್ಹಯ್ಯಾ' ಎಂಬ ಪ್ರಸಿದ್ಧ ಹಾಡಿನ ಧಾಟಿಯಲ್ಲಿತ್ತು.

40ರ ದಶಕದ ನಾಟಕ, ಸಿನಿಮಾಗಳು ಅವುಗಳ ಕತೆ ಮತ್ತು ಹಾಡುಗಳು ಭಾರತದ ರಾಷ್ಟ್ರೀಯ ಚಳವಳಿಯನ್ನು ಬೇರೊಂದು ನಿಟ್ಟಿನಲ್ಲಿ ನೋಡಲು ಒತ್ತಾಯಿಸುತ್ತವೆ. ಈ ಸಂದರ್ಭದಲ್ಲಿ ಸಿನಿಮಾ ಚಿಂತಕ ಅಜೀಜ್ ಅಶ್ರಫ್, 40ರ ದಶಕದ ನೂರ್‌ಜಹಾನ್, ಅಮೀರ್‌ಬಾಯಿ, ಶಂಶಾದ್‌ಬೇಗಂ ಮುಂತಾದ ಗಟ್ಟಿದನಿಯ ಗಾಯಕಿಯರ ಬಗ್ಗೆ ಮಾಡುವ ವ್ಯಾಖ್ಯಾನ ಸ್ವಾರಸ್ಯಕರವಾಗಿದೆ.

ಭಾರತದ ಪ್ರಥಮ ವಾಕ್ಚಿತ್ರ `ಆಲಂ ಆರಾ' (1931) ಗಾಂಧೀಜಿಯವರ ದಂಡಿ ಸತ್ಯಾಗ್ರಹದ ಆಸುಪಾಸಿನಲ್ಲಿ ನಿರ್ಮಾಣವಾಗಿದ್ದು ಸಾಂಕೇತಿಕ. ಯಾಕೆಂದರೆ ಅಲ್ಲಿತನಕ ಮೂಕಿಗಳಾಗಿದ್ದ ಸಿನಿಮಾಗಳು ದನಿ ಪಡೆದುಕೊಂಡು ಟಾಕಿಗಳಾದವು. ಈ ದನಿಪಡೆವ ಪ್ರಕ್ರಿಯೆ, ವಸಾಹತುಶಾಹಿ ವಿರುದ್ಧ ಭಾರತೀಯರು ದನಿ ಪಡೆದುಕೊಂಡದ್ದರ ಭಾಗವಾಗಿದೆ.

ಅದೇ ಹೊತ್ತಲ್ಲಿ ರಂಗಭೂಮಿ, ತಾಯಿಫಾ, ಮೆಹಫಿಲ್‌ಗಳಿಂದ ಬಂದ ಗಾಯಕಿಯರು ಹಾಡಲಾರಂಭಿಸಿದರು. ಕಂಚಿನಕಂಠದ ಈ ಗಾಯಕನಟಿಯರಿಗೆ ಅವರ ಹಾಡಿಕೆಯ ಏರುಸ್ವರವು, ತಮ್ಮನ್ನು ಬಂಧಿಸಿದ್ದ ಸಾಮಾಜಿಕ ಸನ್ನಿವೇಶಗಳಿಗೆ ತೋರುತ್ತಿದ್ದ ಪ್ರತಿಕ್ರಿಯೆಯೂ ಸ್ವಾತಂತ್ರ್ಯ ಪಡೆಯುವ ಪ್ರಕ್ರಿಯೆಯೂ ಆಗಿತ್ತು.

 ಆದರೆ 1947ರ ರಾಜಕೀಯ ಸ್ವಾತಂತ್ರ್ಯ ಹಾಗೂ ದೇಶವಿಭಜನೆಗಳು ಈ ಕಸುವಿನ ಗಾಯಕಿಯರ ದನಿಯನ್ನೇ ಬದಿಗೆ ಸರಿಸಿದವು. ಮಹಿಳೆಯರು ಇಂತಹ ಏರುದನಿಯಲ್ಲಿ ಹಾಡುವುದು, ಸಾರ್ವಜನಿಕ ಬದುಕಿನಲ್ಲಿ ಇಳಿಯುವುದು ಪುರುಷವಾದಿ ಚಿಂತಕರಿಗೆ ಸಹನವಾಗಲಿಲ್ಲ. ಇವರಿಗೆ ಪರ್ಯಾಯ ದನಿಯನ್ನು ಅವರು ಹುಡುಕುತ್ತಿದ್ದರು.

ಆಗ ಅವರಿಗೆ `ಮಹಲ್' ಚಿತ್ರದ (1948) ಮೂಲಕ ಹೊಮ್ಮಿದ ಲತಾಮಂಗೇಶ್ಕರ್ ಅವರ ಕೋಮಲ ದನಿ ಸಿಕ್ಕಿತು. ಅದನ್ನು ಅವರು ಸ್ವಾಗತಿಸುತ್ತ ಈ ತೀಕ್ಷ್ಣಕಂಠದ  ಗಾಯಕಿಯರನ್ನು ಅಪ್ರಸ್ತುತಗೊಳಿಸಿದರು. ಹೀಗಾಗಿ ದೇಶದ ರಾಜಕೀಯ ಸ್ವಾತಂತ್ರ್ಯದ ಜತೆಗೆ ಈ ಗಾಯಕಿಯರೂ ತಮ್ಮ ದನಿಯನ್ನೂ ಕಳೆದುಕೊಂಡರು. 

ಹಾಡಿನ ದನಿಯನ್ನು ಇಟ್ಟುಕೊಂಡು ಮಾಡಿರುವ ಈ ವಿಶ್ಲೇಷಣೆ ಅಮೀರ್‌ಬಾಯಿ ಅವರು ಚಿತ್ರರಂಗ ಪ್ರವೇಶಿಸಿದ ಮತ್ತು ಹೊರಬಿದ್ದ ವಿದ್ಯಮಾನವನ್ನು ವಿಶ್ಲೇಷಿಸಲು ನೆರವಾಗುತ್ತದೆ. ಬಿಜಾಪುರ ಜಿಲ್ಲೆಯ ಬೀಳಗಿ ಎಂಬ ಪುಟ್ಟ ಊರಿಂದ `ಆಲಂ ಆರಾ' ಬಿಡುಗಡೆಯಾಗುವ ಹೊತ್ತಿಗೆ ಅಮೀರ್‌ಬಾಯಿ ಮುಂಬೈಗೆ ಹೋದವರು; 30-40ರ ದಶಕದ ಮುಖ್ಯ ಗಾಯಕಿಯಾಗಿ ಮೆರೆದವರು. ಆದರೆ 1950ರ ನಂತರ ಅಮೀರ್‌ಬಾಯಿ ಅವರು ಸಂಪೂರ್ಣ ಕಡೆಗಣಿಸಲ್ಪಟ್ಟರು. ಒಂದರ `ಬಿಡುಗಡೆ' ಮತ್ತೊಂದರ ಬಂಧನವಾಗುವುದು ಒಂದು ವಿಚಿತ್ರ ವಿದ್ಯಮಾನ.

ಇದು 1947ರ ಸ್ವಾತಂತ್ರ್ಯ ಯಾರಿಗೆ ಬಂತು ಮತ್ತು ಯಾರ ಸ್ವಾತಂತ್ರ್ಯ ಕಸಿದುಕೊಂಡಿತು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. `ಸ್ವಾತಂತ್ರ್ಯ ಸೂರ್ಯ'ನನ್ನು ಮರೆಮಾಚುವ ಅಥವಾ `ದೈನ್ಯದಾಸ್ಯ'ಗಳನ್ನು ಹೇರುವ ಕಾರ್ಯ ವಿದೇಶಿ ಆಳ್ವಿಕೆಗಳಿಂದ ಮಾತ್ರ ನಡೆಯುವುದಿಲ್ಲ, ಸ್ವದೇಶೀಯರಿಂದಲೂ ನಡೆಯಬಲ್ಲದು ಎಂಬ ಜಿಜ್ಞಾಸೆಯನ್ನು ಹುಟ್ಟುಹಾಕಬಲ್ಲದಾಗಿದೆ.

ಈ ಬರಹ ರಹಮತ್ ತರೀಕೆರೆ ಅವರ `ಅಮೀರ್‌ಬಾಯಿ ಕರ್ನಾಟಕಿ' ಪುಸ್ತಕದ ಒಂದು ಭಾಗ. `ಪಲ್ಲವ ಪ್ರಕಾಶನ' ಪ್ರಕಟಣೆಯ ಈ ಪುಸ್ತಕ ಜ.28ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT