ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಮಹಲ್ ಕಾವಲು ಒತ್ತುವರಿ:ಜಿಲ್ಲೆಗೆ ಅಗ್ರಸ್ಥಾನ

Last Updated 27 ಆಗಸ್ಟ್ 2011, 19:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರ್ಕಾರಿ, ಅರಣ್ಯ ಭೂಮಿ ಒತ್ತುವರಿಯಲ್ಲಷ್ಟೇ ಅಲ್ಲ, ಅಮೃತ ಮಹಲ್ ಕಾವಲು ಭೂಮಿ ಒತ್ತುವರಿಯಲ್ಲೂ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನ ಪಡೆದ ಕುಖ್ಯಾತಿಗೆ ಒಳಗಾಗಿದೆ.
ಪಶ್ಚಿಮಘಟ್ಟಗಳ ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ನಂತರದ ಸ್ಥಾನದಲ್ಲಿ ಹಾಸನ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಇವೆ.

ರಾಜ್ಯದ ದಕ್ಷಿಣ ಒಳನಾಡಿನ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಆರು ಜಿಲ್ಲೆಗಳ 62 ಗ್ರಾಮಗಳಲ್ಲಿ ಅಮೃತ್ ಮಹಲ್ ಕಾವಲುಗಳಿದ್ದವು. 27,468.90 ಹೆಕ್ಟೇರ್ ಕಾವಲಿನಲ್ಲಿ 12,521.60 ಹೆಕ್ಟೇರ್ ಒತ್ತುವರಿಯಾಗಿದೆ. ಭೂ ಕಬಳಿಕೆದಾರರಿಂದ ಅಮೃತ ಮಹಲ್ ಕಾವಲು ಜಾಗ ಒಂದರ್ಧ ಒತ್ತುವರಿಯಾಗಿದ್ದರೆ, ಇನ್ನು ರಾಜ್ಯ ಸರ್ಕಾರವೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಅನಧಿಕೃತವಾಗಿ ಪರಭಾರೆ ಮಾಡಿರುವುದರಿಂದ ಕಾವಲು ಕ್ಷೀಣಿಸಿದೆ.

ಇದು ಪಶ್ಚಿಮಘಟ್ಟ ಕಾರ್ಯಪಡೆ ತಿಪಟೂರಿನ ಮೈತ್ರಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರದ ಮೂಲಕ ನಡೆಸಿರುವ `ಅಮೃತ ಮಹಲ್ ಜಾನುವಾರು, ಕಾವಲು (ಹುಲ್ಲುಗಾವಲು) ಹಾಗೂ ಅಲ್ಲಿನ ಜೀವವೈವಿಧ್ಯ ಸಂರಕ್ಷಣೆ ಮತ್ತು ನಿರ್ವಹಣೆ ಅಧ್ಯಯನ ವರದಿ~ಯಲ್ಲಿ ಬಹಿರಂಗಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 5582.79 ಹೆಕ್ಟೇರ್ ಅಮೃತ್ ಮಹಲ್ ಕಾವಲು ಜಾಗದಲ್ಲಿ 2997.39 ಹೆಕ್ಟೇರ್ ಒತ್ತುವರಿಯಾಗಿದೆ. ಇದರಲ್ಲಿ ಅಯ್ಯನಕೆರೆ (1104 ಹೆಕ್ಟೇರ್), ದೇವನೂರು (39.27 ಹೆ), ಎಮ್ಮೆದೊಡ್ಡಿ (1452.80 ಹೆಕ್ಟೇರ್)ಯಲ್ಲಿ ಕಾವಲು ಜಾಗ ಸಂಪೂರ್ಣ ಒತ್ತುವರಿಯಾಗಿವೆ.

ಹಾಸನ ಜಿಲ್ಲೆಯ 4493.63 ಹೆಕ್ಟೇರ್‌ನಲ್ಲಿ 1926.95 ಹೆಕ್ಟೇರ್ ಒತ್ತುವರಿಯಾಗಿದೆ. ಜಿಲ್ಲೆಯ ಕಂದಾಯ ಇಲಾಖೆ ಮತ್ತು ಬಗರ್‌ಹುಕುಂ ಸಮಿತಿ 1994ರಿಂದ 2003ರವರೆಗೆ ಕಾನೂನು ಉಲ್ಲಂಘಿಸಿ 340.07 ಎಕರೆ ಅಮೃತ್ ಮಹಲ್ ಕಾವಲು ಜಾಗವನ್ನು ಉಳುವವರಿಗೆ ಸಕ್ರಮ ಮಾಡಿಕೊಟ್ಟಿದೆ. ಚಿತ್ರದುರ್ಗ ಜಿಲ್ಲೆಯ 14680.09 ಹೆಕ್ಟೇರ್ ಕಾವಲಿನಲ್ಲಿ 5990.26 ಹೆಕ್ಟೇರ್ ಒತ್ತುವರಿಯಾಗಿದೆ. ಇದರಲ್ಲಿ ಚಳ್ಳಕೆರೆಯಲ್ಲಿ 8 ಸಾವಿರ ಎಕರೆ ಕಾವಲನ್ನು ಬಾಬಾ ಅಣು ಸಂಶೋಧನಾ ಕೇಂದ್ರ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಗೆ ಸರ್ಕಾರ ನೀಡಿದೆ. ಅಲ್ಲದೆ ಈ ವರದಿ ಸಿದ್ಧವಾದ ನಂತರ ಹೊಳಲ್ಕೆರೆ ತಾಲ್ಲೂಕಿನಲ್ಲಿ 600 ಎಕರೆಯನ್ನು ಕೆಐಎಡಿಬಿಗೆ ಸರ್ಕಾರ ನಿಯಮ ಉಲ್ಲಂಘಿಸಿ ನೀಡಿದೆ ಎನ್ನಲಾಗಿದೆ.

ತುಮಕೂರು ಜಿಲ್ಲೆಯ 1370.68 ಹೆಕ್ಟೇರ್ ಕಾವಲಿನಲ್ಲಿ 394.97 (ಗುಬ್ಬಿಯ ಬಿದರೆಹಳ್ಳ ಕಾವಲ್) ಹೆಕ್ಟೇರ್ ಒತ್ತುವರಿಯಾಗಿದೆ. ತುರುವೇಕೆರೆ ತಾಲ್ಲೂಕಿನ ದುಂಡಮಾರನಹಳ್ಳಿಯ 66.13 ಹೆಕ್ಟೇರ್ ಪೂರ್ಣ ಒತ್ತುವರಿಯಾಗಿದೆ. ಮಂಡ್ಯ ಜಿಲ್ಲೆಯ 140.90 ಹೆಕ್ಟೇರ್‌ನಲ್ಲಿ 12 ಹೆಕ್ಟೇರ್ ಮಾತ್ರ ಒತ್ತುವರಿಯಾಗಿದೆ.

ಒತ್ತುವರಿ ಸೇರಿ ಬಾಬಾ ಅಣು ಸಂಶೋಧನಾ ಕೇಂದ್ರ, ಡಿಆರ್‌ಡಿಒ, ಐಎನ್‌ಎಸ್‌ಗೆ ಒಟ್ಟು 12521.60 ಹೆಕ್ಟೇರ್, ಕೆರೆ ಭಾಗ 1340.90 ಹೆಕ್ಟೇರ್, ಅರಣ್ಯೀಕರಣಕ್ಕೆ 4283.84 ಹೆಕ್ಟೇರ್, ಸಂಘ-ಸಂಸ್ಥೆಗಳಿಗೆ 860.65 ಹೆಕ್ಟೇರ್, ಗಣಿಗಾರಿಕೆಗೆ 526.54 ಹೆಕ್ಟೇರ್ ಹರಿದು ಹಂಚಿ ಹೋಗಿದೆ. ಜಾನುವಾರು ಮೇವಿಗೆ 6570.02 ಹೆಕ್ಟೇರ್ ಮಾತ್ರ ಉಳಿದಿದೆ. ಇನ್ನು 1366 ಹೆಕ್ಟೇರ್ ಬಗ್ಗೆ ಮಾಹಿತಿ ಸಿಗುತ್ತಿಲ್ಲ.

ಸ್ವಾತಂತ್ರ್ಯ ನಂತರದಲ್ಲಿ ಯಾವುದೇ ಸರ್ಕಾರಗಳು ಅಮೃತ್ ಮಹಲ್ ಕಾವಲುಗಳ ಸಂರಕ್ಷಣೆಗೆ ಆದ್ಯತೆ ನೀಡದೆ ಅಪರೂಪದ ಅಮೃತ್ ಮಹಲ್ ತಳಿ ರಾಸುಗಳು ಅವನತಿ ಅಂಚಿಗೆ ಬಂದಿವೆ. ಈಗ ಕೇವಲ 1298 ಜಾನುವಾರು(177 ಹೋರಿ, 1031 ಹಸು) ಇವೆ. 

 ರಾಜ್ಯದ ಅಮೃತ ಮಹಲ್ ಕಾವಲುಗಳು ಈಗ ಜೀವವೈವಿಧ್ಯ ತಾಣಗಳಾಗಿದ್ದು, ಅಳಿವನಂಚಿನಲ್ಲಿರುವ ಕೃಷ್ಣಮೃಗ, ತೋಳ, ಕತ್ತೆ ಕಿರುಬ, ನರಿ, 40ಕ್ಕೂ ಹೆಚ್ಚು ವೈವಿಧ್ಯಮ ಚಿಟ್ಟೆ, 70ಕ್ಕೂ ಹೆಚ್ಚು ಪಕ್ಷಿ ಸಂಕುಲ, 278ಕ್ಕೂ ಹೆಚ್ಚು ಸಸ್ಯ ಸಂಕುಲಕ್ಕೆ ಆವಾಸ ಸ್ಥಾನವೆನಿಸಿವೆ.

ರಾಜಾ ಮಹಾರಾಜರು, ಬ್ರಿಟಿಷರು ಪೋಷಿಸಿಕೊಂಡು ಬಂದಿದ್ದ ಅಮೃತ ಮಹಲ್ ಕಾವಲುಗಳನ್ನು ಸಂರಕ್ಷಿಸಬೇಕೆಂದು ಪರಿಸರಾಸಕ್ತರು ಮತ್ತು ವನ್ಯಜೀವಿ ಪ್ರೇಮಿಗಳು ಎತ್ತಿದ್ದ ಧ್ವನಿಗೆ ಪಶ್ಚಿಮಘಟ್ಟ ಕಾರ್ಯಪಡೆ ಸರ್ಕಾರಕ್ಕೆ ಮಾಡಿರುವ ಶಿಫಾರಸು ಬಲನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT