ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಸಂಗೀತ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

“ಸಂಸಾರ ಸಾರಸರ್ವಸ್ವಂ” ಎಂದು ಕರೆಸಿಕೊಂಡ ಮಾವು ಮಲ್ಲಿಗೆಯೊಂದಿಗೆ ಬೇಸಿಗೆ ಬಂದಿದೆ. ಅವುಗಳೊಂದಿಗೆ ಬಂದಿದೆ ಸಂಗೀತೋತ್ಸವಗಳ ಸುಗ್ಗಿ. ಹಗಲ ಹೊತ್ತು ಬಿಸಿಲು ಎಷ್ಟಾದರೂ ಉರಿಯಲಿ, ಸಂಜೆಗೆ  ಸಂಗೀತದ ತಂಗಾಳಿ ಇದ್ದೇ ಇರುತ್ತದೆ.

ಶ್ರೀರಾಮನಿಗೂ ಕರ್ನಾಟಕ ಸಂಗೀತಕ್ಕೂ ಏನು ಸಂಬಂಧ ಎಂದು ಊಹಿಸಲು ಕಷ್ಟ ಪಡಬೇಕಿಲ್ಲ. ಎಲ್ಲ ಕೆಲಸಗಳ ನಡುವೆ ಕೃಷ್ಣ ಕೊಳಲು ನುಡಿಸಿದರೆ, ಶಿವ ಡಮರುಗ ಹಿಡಿಯುತ್ತಿದ್ದ. ಆದರೆ ಹೆಂಡತಿಯನ್ನು ಕಳೆದುಕೊಂಡು ಹದಿನಾಲ್ಕು ವರ್ಷ ಕಾಡಿನಲ್ಲಿ ಒಬ್ಬನೇ ಅಲೆದ ರಾಮನಿಗೆ ಸಂಗೀತಕ್ಕೆ ಕಿವಿಗೊಡಲು ಪುರಸೊತ್ತೇ ಇರಲಿಲ್ಲ.

ಆದರೆ ರಾಮನೊಬ್ಬನೇ “ಜಗದಾನಂದಕಾರಕ” ಎಂದು ದೃಢವಾಗಿ ನಂಬಿದ್ದ ತ್ಯಾಗರಾಜರು ಎರಡು ಸಾವಿರದಷ್ಟು ಕೃತಿಗಳಲ್ಲಿ ಅವನನ್ನು ಹಾಡಿ ಹೊಗಳಿದ ಮೇಲೆ ಇನ್ನೇನು ಬೇಕು! ಶ್ರೀರಾಮನವಮಿ ಎಂಬುದು ನೆಪ, ರಸಿಕರಿಗೆ ತಿಂಗಳಿಗೂ ಹೆಚ್ಚು ಕಾಲ ಸಂಗೀತದ ಹಬ್ಬವೋ ಹಬ್ಬ. ಕರ್ನಾಟಕದ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಹಾಸನ, ಚಿಕ್ಕಮಗಳೂರು, ಹಿರಿಯೂರು ಮೊದಲಾದ ಹಲವು ಊರುಗಳಲ್ಲಿ ಸಂಜೆ ಆಯಿತೆಂದರೆ  ರಾಮೋತ್ಸವಗಳದೇ ವೈಭವ. ರಾಮನ ಕೀರ್ತನೆಗಳೇ ಪಾನಕ ಪನಿವಾರ, ರಾಮನಾಮವೇ ಪಾಯಸ.

ಬೆಂಗಳೂರಂತೂ ರಾಮನವಮಿ ಸಂಗೀತೋತ್ಸವಗಳ ರಾಜಧಾನಿ. ಈ ಸಂಗೀತೋತ್ಸವಗಳ ಪೈಕಿ ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಲಿಯ “ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವ” ಕ್ಕೆ ಮಿಗಿಲಿಲ್ಲದ ಮಾಧುರ್ಯ. ಈ ವರ್ಷ ಅದಕ್ಕೆ ಅಮೃತ ಮಹೋತ್ಸವದ ಇಂಪೂ ಸೇರಿಕೊಂಡಿದೆ.

ಕಲಾವಂತರ ಮನೆಗಳಲ್ಲಿ ಬಿಟ್ಟರೆ ಗುರುಮನೆ, ಅರಮನೆಗಳ್ಲ್ಲಲೇ ಸುಳಿಯುತ್ತಿದ್ದ ಸಂಗೀತವನ್ನು ಸಮುದಾಯದ ನಡುವೆ ತಂದು ಅರಳಿಸಿದ್ದು ರಾಮನವಮಿಯೇ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಶ್ರೀರಾಮ ಸೇವಾ ಮಂಡಲಿ ಈ ಎಪ್ಪತ್ತೈದು ವರ್ಷಗಳಲ್ಲಿ ಆ ಕೆಲಸವನ್ನು ಒಬ್ಬ ಸಂಗೀತಗಾರನಿಗಿರುವ ಸ್ವರನಿಷ್ಠೆಯಂತೆ, ಕಲಾತಪಸ್ಸಿನಂತೆ ಮಾಡುತ್ತ ಬಂದಿದೆ. ಈ ಸಂಗೀತೋತ್ಸವದಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುವುದು ಹಿರಿಯ ಕಲಾವಿದರಿಗೆ ಜನಪ್ರಿಯತೆಯ ಸಂಕೇತವಾದರೆ, ಉದಯೋನ್ಮುಖರಿಗೆ ಅದೇ ಘಟಿಕೋತ್ಸವ. ಅದು ಸಂಗೀತ ರಸಿಕರ ಪಾಲಿಗಿರಲಿ, ಸಂಗೀತಗಾರರ ಪಾಲಿಗೂ ಪ್ರತಿಷ್ಠೆಯ ಉತ್ಸವ.

ರಾಮನವಮಿ ಸಂಗೀತೋತ್ಸವವನ್ನು ಆ ತಾರಸ್ಥಾಯಿಗೆ ಕೊಂಡೊಯ್ದ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರಿಗೆ ಸಂಗೀತವೇ ಧರ್ಮವಾಗಿತ್ತು. ಹದಿಹರೆಯದಲ್ಲಿ ಅವರು ಚಾಮರಾಜಪೇಟೆಯ ಗೆಳೆಯರೊಡನೆ ಕೂಡಿಕೊಂಡು 1939 ರಲ್ಲಿ “ಶ್ರೀ ರಾಮಸೇವಾ ಮಂಡಲಿ” ಯನ್ನು ಕಟ್ಟಿದರು. ನಂತರ ತ್ಯಾಗರಾಜರಿಗೆ ಸಂಗೀತವೇ ರಾಮಭಕ್ತಿ ಇದ್ದ ಹಾಗೆ, ಅವರಿಗೆ ಸಂಗೀತೋತ್ಸವ ನಡೆಸುವುದೇ ರಾಮಭಕ್ತಿ. ಇಡೀ ಬದುಕನ್ನೇ ಮಂಡಲಿಗೆ ಮೀಸಲಾಗಿಟ್ಟ ನಾರಾಯಣಸ್ವಾಮಿ ರಾವ್ ಅವರು ಬೆಂಗಳೂರಿನ ಜನರಲ್ಲಿ ಸಂಗೀತ ಸಂಸ್ಕೃತಿ ಮತ್ತಷ್ಟು ಪಸರಿಸಲು ಕೊಟ್ಟ ಕೊಡುಗೆಗೆ ಎಂಥವರೂ “ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು” ಎಂದು ನಮಿಸಬೇಕು.

ಆರಂಭದಲ್ಲೇ ನಾರಾಯಣಸ್ವಾಮಿ ರಾವ್ ಅವರಿಗೆ ಬೆಂಬಲ ಕೊಟ್ಟ ಟಿ. ಚೌಡಯ್ಯನವರು “ಬನ್ನಿ, ನಾನೇ ನಿಮಗೆ ಪಿಟೀಲು ಪಕ್ಕವಾದ್ಯ ನುಡಿಸುತ್ತೇನೆ” ಎಂದಾಗ, ಟಿ.ಆರ್. ಮಹಾಲಿಂಗಂ ಅವರಂಥ ಇನ್ನಿತರ ಸ್ಥಳೀಯ ಪ್ರಚಂಡರೂ ಕರೆದಾಗ, ದಕ್ಷಿಣ ಭಾರತದ ಸಿದ್ಧಪ್ರಸಿದ್ಧ ಕಲಾವಿದರೆಲ್ಲ ಇದರತ್ತ ಆಕರ್ಷಿತರಾದರು. “ಶ್ರೀ ರಾಮಸೇವಾ ಮಂಡಲಿ”ಯ ರಾಮನವಮಿ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳದೆ ತಮ್ಮ ವರ್ಷದ ಸಂಗೀತ ಸಂಚಾರ ಮುಗಿಯುವುದಿಲ್ಲ ಎಂದು ತಮಿಳುನಾಡಿನ ಕಲಾವಿದರು ಭಾವಿಸುವಂತೆ ಮಾಡಿದ್ದೇ ಒಂದು ಹೆಗ್ಗಳಿಕೆ. ದ್ವಾರಂ ವೆಂಕಟಸ್ವಾಮಿ ನಾಯ್ಡು, ಜಿ.ಎನ್. ಬಾಲಸುಬ್ರಹ್ಮಣ್ಯಂ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈ ವೈದ್ಯನಾಥ ಭಾಗವತರ್, ಮಧುರೈ ಮಣಿ ಅಯ್ಯರ್, ಪಾಲ್ಘಾಟ್ ಮಣಿ ಅಯ್ಯರ್, ಎಂ.ಡಿ. ರಾಮನಾಥನ್, ಎಂ.ಕೆ. ತ್ಯಾಗರಾಜ ಭಾಗವತರ್, ಪಟ್ಟಮ್ಮಾಳ್, ವಸಂತಕೋಕಿಲ, ಅವರ ಮಗಳು ಎಂ. ಎಲ್. ವಸಂತಕುಮಾರಿ ಮೊದಲಾದ ಕಲಾವಿದರ  ಸಂಗೀತ ಕೇಳಿದ್ದು ಬೆಂಗಳೂರಿನ ಸೌಭಾಗ್ಯವಾಯಿತು. ಇನ್ನು ವೇದಿಕೆಯ ಮೇಲೆ ನಕ್ಷತ್ರವಲ್ಲ- ಒಂದು ನಕ್ಷತ್ರ ಪುಂಜದ ಹಾಗೆ ಮಿನುಗುತ್ತಿದ್ದ ಎಂ.ಎಸ್. ಸುಬ್ಬುಲಕ್ಷ್ಮಿ  “ಕಣ್ಗಂ ಮನಕ್ಕಂ ಸೊಗಯಿಸಿ” ಕೇಳುವ ಸಂಗೀತ ಮಾತ್ರವಲ್ಲ, ನೋಡುವ ಸಂಗೀತವೂ ಇದೆ ಎಂದು ಶ್ರುತಪಡಿಸಿದರು!

ಕರ್ನಾಟಕ ಸಂಗೀತದ ಮೂರು ತಲೆಮಾರುಗಳ ಕಲಾವಿದರ ಪ್ರತಿಭೆಯನ್ನು ಮಂಡಲಿಯ ರಾಮನವಮಿ ಸಂಗೀತೋತ್ಸವ ಆರಾಧಿಸಿದೆ. ಆರ್.ಕೆ. ಶ್ರೀಕಂಠನ್, ಎಸ್. ಬಾಲಚಂದರ್, ಬಾಲಮುರಳಿಕೃಷ್ಣ, ಈಮನಿ ಶಂಕರಶಾಸ್ತ್ರಿ, ಮಹಾರಾಜಪುರಂ ಅಪ್ಪ ಮಕ್ಕಳು, ಕುನ್ನಕುಡಿ ವೈದ್ಯನಾಥನ್, ಎನ್. ರಮಣಿ, ಎಂ.ಎಸ್. ಗೋಪಾಲಕೃಷ್ಣನ್, ಜೇಸುದಾಸ್, ಕದ್ರಿ ಗೋಪಾಲನಾಥ್, ಎ.ಕೆ.ಸಿ. ನಟರಾಜನ್, ರವಿಕಿರಣ್, ಯು. ಶ್ರೀನಿವಾಸ್, ನಾಗಮಣಿ ಶ್ರೀನಾಥ್, ಸುಮಾ ಸುಧೀಂದ್ರ, ಸುಧಾ ರಘುನಾಥನ್, ಎಂ.ಎಸ್. ಶೀಲಾ - ಮಂಡಲಿಯ ವೇದಿಕೆಯಲ್ಲಿ ಹಾಡಿದ, ನುಡಿಸಿದ ಕಲಾವಿದರ ಹೆಸರುಗಳನ್ನು ಬರೆಯುತ್ತ ಹೋದರೆ ಅದು  ಕರ್ನಾಟಕ ಸಂಗೀತದ ಎಲ್ಲ ಕಲಾವಿದರ ಪಟ್ಟಿಯೇ ಆಗುತ್ತದೆ. ಇವರಲ್ಲಿ ಅನೇಕರು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಸತತವಾಗಿ ಇಲ್ಲಿ ಕಛೇರಿ ಮಾಡಿದ್ದಾರೆಂಬುದೇ ಒಂದು ವಿಶೇಷ.

ಕರ್ನಾಟಕ ಸಂಗೀತವಷ್ಟೇ ಅಲ್ಲ, ಹಿಂದೂಸ್ತಾನಿ ಸಂಗೀತವೂ ರಾಮೋತ್ಸವದ ಭಾಗವಾಗಿದೆ. ಬಡೇ ಗುಲಾಂ ಅಲಿ ಖಾನ್, ಬಿಸ್ಮಿಲ್ಲಾ ಖಾನ್, ಅಲ್ಲಾ ರಖಾ, ರವಿಶಂಕರ್ ಅವರಿಂದ ಹಿಡಿದು ಯಾರು ಇಲ್ಲಿಗೆ ಬಂದಿಲ್ಲ! ದೇಶದ ಯಾವ ಮುಸ್ಲಿಂ ಕಲಾವಿದ ಇಲ್ಲಿಗೆ ಬಂದು ರಾಮನಿಗೆ ಸಂಗೀತ ಸೇವೆ ಸಲ್ಲಿಸಿಲ್ಲ? 

ಕನ್ನಡ ಚಳವಳಿಯನ್ನು ರೂಪಿಸಿದ ಅನಕೃ ಅವರು, ಅದರ ಅಂಗವಾಗಿ ಹಿಂದೊಮ್ಮೆ ಈ ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಛೇರಿಯ ನಡುವೆ ಕನ್ನಡನಾಡಿನ ಕಲಾವಿದರಿಗೆ, ಕನ್ನಡದ ಹಾಡುಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ಕನ್ನಡದ ಕಹಳೆ ಮೊಳಗಿಸಿದ್ದರು. ಆದರೂ ನಮಗೆ ಒಳ್ಳೆಯ ಸಂಗೀತ ಮಾತ್ರ ಬೇಕು ಕಲಾವಿದರ ಊರುಕೇರಿ ಮತ್ತು ಅವರಾಡುವ ಭಾಷೆ ಅಲ್ಲ ಎಂದು ಸಂಗೀತ ಪ್ರೇಮಿಗಳು ಅದನ್ನು ಅಪಸ್ವರದಂತೆ ಮರೆತುಬಿಟ್ಟರು. 

ದೇವರು, ಧರ್ಮ, ಭಾಷೆಯ ಗಡಿಗಳನ್ನು ಮೀರಿ ಹತ್ತಾರು ಸಾವಿರ ಮಂದಿ ಒಂದೇ ಚಪ್ಪರದಡಿ ಕುಳಿತು ಸಂಗೀತವನ್ನು ಸವಿಯುವ ಅವಕಾಶವನ್ನು ಮುಕ್ಕಾಲು ಶತಮಾನದಿಂದ ಕಲ್ಪಿಸುತ್ತಿರುವ ಶ್ರೀ ರಾಮಸೇವಾ ಮಂಡಲಿ ನಮಗಿರಲಿ. ಆ ಅಯೋಧ್ಯೆಯಲ್ಲಿ ಏನು ಬೇಕಾದರೂ ಆಗಿರಲಿ ಬಿಡಿ!

ಶ್ರೀರಾಮಸೇವಾ ಮಂಡಲಿ ಸಂಗೀತೋತ್ಸವಏಪ್ರಿಲ್ 11ರಿಂದ ಮೇ 16ರವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT