ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಕ್ಕಾಗಿ ಹಾರಿದ ಗರುಡ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಹೋಜೀ ಹರೀ ಕಿತಗಯೋ... ನೇಹಾ ಲಗಾಯೆ, ಮನ ಹರ್ ಲೀಯೋ..’- ಮೀರಾಳನ್ನು ಅರಸುತ್ತಾ, ತಿಳಿಯುತ್ತಾ ಹಾಡುತ್ತಾ ಅವರೂ ಮೀರಾಳೇ ಆಗಿದ್ದರು. ‘ಅವನ ರಥ ಈಗಷ್ಟೇ ಈ ದಾರಿಯಲ್ಲಿ ಹೋಯಿತು... ದೂಳೆಬ್ಬಿಸುತ್ತಾ. ಒಂದು ಮಾತಾಡಲೂ ಆಗಲಿಲ್ಲವಲ್ಲ.. ಸಖೀ.. ನನ್ನ ನಾಚಿಕೆಯೇ ನನಗೆ ಮುಳುವಾಯಿತಲ್ಲ’ ಎಂದು, ಮೀರಾಳ ವಿರಹವನ್ನು ಪ್ರೇಮವನ್ನು, ಪಟದೀಪದಲ್ಲಿ ಅಥವಾ ದೇಸ್‌ನಲ್ಲಿ ಹಾಡಿದಾಗ ಮೀರಾಳ ಜಗತ್ತೇ ನಮ್ಮೆದುರಿಗೆ. ತಿಲಕ್ ಕಾಮೋದ್‌ನಲ್ಲಿ ‘ಪತಿಯಾ.. ಮೈ ಕೈಸೆ ಲಿಖೂಂ.. ಲಿಖಿಹೂ ನ ಜಾಯೆ..’ ಎಂದಾಗ ಅವರೇ ಚಡಪಡಿಸುತ್ತಿದ್ದರು.

ಮೀರಾಳನ್ನು ಅರಿಯಲು ಬೃಜ್ ಭಾಷೆ, ಹಿಂದಿ ಕಲಿತರು. ಹಿಂದೀ ಪುಸ್ತಕಗಳನ್ನು ತರಿಸಿ, ರಾತ್ರಿ ಪೂರಾ ಕೂತು ಓದಿದರು. ಹಿಂದಿ ಕಾಪಿ ಪುಸ್ತಕ ಬರೆದರು. ಮೀರಾಳ ಬಗ್ಗೆ ತಿಳಿಯಲು, ಅವಳ ಬಗ್ಗೆ ಇರುವ ಕೃತಿಗಳನ್ನು ತರಿಸಿ ಓದಿಕೊಂಡು, ಮತ್ತೆ ಅವಳ ಪದ್ಯಗಳನ್ನು ಓದುತ್ತಾ- ‘..ಝೂಲತ ರಾಧಾ ಸಂಗ್.. ಗಿರಿಧರ್’ ಎಂದವರು ಮಿಶ್ರ ಮಾಂಡ್‌ನಲ್ಲಿ ಹಾಡುತ್ತಿದ್ದರೆ, ಕೃಷ್ಣನ ಕೊಳಲು ನುಡಿಯುವಂತಿತ್ತು, ‘ಝೂಲಾ’ ಆಡುವ ಮನಸಾಗುತ್ತಿತ್ತು. ‘ಜಹಾ ಬೈಠಾವೇ ತಿತ್ ಹೀ ಬೈಠೂ.. ಬೇಜೇ ತೋ ಬಿಖ್ ಜಾವೂ.. ಮೇರೀ ಉನ್‌ಕೀ ಪ್ರೀತ್ ಪುರಾನೀ, ಉಣ್ ಬಿನ್ ಪಲ್ ನ ರಹಾವೂಂ..’- ಅವನೇನು ಮಾಡಿದರೂ ಸರಿಯೇ, ಬಾಗೇಶ್ರೀಯಲ್ಲಿ ಕೃಷ್ಣನಲ್ಲಿ ಒಂದಾಗುತ್ತಿದ್ದರು.

‘ದತ್ತಪ್ಪ’ನೆಂದು ಹಿಂದೂಸ್ತಾನಿ ಸಂಗೀತ ಜಗತ್ತಿನ ಅನೇಕರಿಗೆ ಪ್ರೀತಿಪಾತ್ರರಾಗಿದ್ದ ಪಂ. ದತ್ತಾತ್ರೇಯ ಸದಾಶಿವ ಗರುಡರು ತಮ್ಮ ಸಂಗೀತ ಹಾಗೂ ಜೀವನದ ಮೂಲಕ ಕಂಡುಕೊಂಡ, ನಮಗೆಲ್ಲರಿಗೆ ತೆರೆದಿಟ್ಟ ಜಗತ್ತುಗಳು ಅನನ್ಯ. ಮೀರಾ ಹೊಸಬಗೆಯ ಭಕ್ತಿಯನ್ನು ಬಿಂಬಿಸುತ್ತಾಳೆ.ಅವಳದ್ದು ಪ್ರೇಮಮಯ ಭಕ್ತಿ. ಅವಳು ಪ್ರೇಮಮಯಿಯೂ ಹೌದು, ಸಂಪೂರ್ಣ ವಿರಾಗಿಯೂ ಹೌದು. ಅವಳು ಪರಿಪೂರ್ಣಳು ಎನ್ನುತ್ತಿದ್ದರು ಗರುಡರು.

ತಬಲಾ ಅವರ ನಿತ್ಯ ಸಂಗಾತಿಯಾಗಿತ್ತು. ಸಿಕಂದರಾಬಾದ್, ಚೆನ್ನೈ, ಮುಂಬಯಿ ಎಂದು ಹಲವಾರು ವರ್ಷ ಊರೂರು ಅಲೆದಾಗ,   ಊಟ ನಿದ್ದೆಯೂ ಇಲ್ಲದೆ, ನುಡಿಸುತ್ತಾ ನುಡಿಸುತ್ತಾ ಅವರು ಲಯ ಸ್ವರೂಪವೇ ಆಗಿದ್ದರು. ಹಣದ ಯೋಚನೆಯೇ ಅವರಿಗಿರಲಿಲ್ಲ. ಅವರದ್ದು ತಪಸ್ಸೇ ಸರಿ. ಏನೇ ಮಾಡಿದರೂ ಅದರಲ್ಲಿ ಒಂದಾಗುವ ಪರಿ. ಒಂದು ಅಂದರೆ ಒಂದೇ ಆಗಿಬಿಡುವುದು. ‘ಅನನ್ಯಾಶ್ಚಿಂತಯಂತೋಮಾಃ...’.

ಗರುಡರು ಬಹಳವಾಗಿ ನಂಬುತ್ತಿದ್ದ ಭಗವದ್ಗೀತೆ ನಾಲಿಗೆ ತುದಿಯಲ್ಲೇ ಇರುತ್ತಿತ್ತು. ಏನೇ ಮಾತು, ಚರ್ಚೆ, ಕ್ಲಿಷ್ಟ ಸಂದರ್ಭ ಬಂದರೆ ಉತ್ತರ ಅದರಿಂದ ತೆಗೆಯುತ್ತಿದ್ದರು. ಅವರು ಭಕ್ತಿಯಿಂದ ಆದರೆ ಅಮೂರ್ತವಾಗಿ ದೇವಿ ದುರ್ಗೆಯನ್ನು ಆರಾಧಿಸುತ್ತಿದ್ದರು. ಇಚ್ಛಾ- ಸಂಕಲ್ಪ-ಕ್ರಿಯಾ ಶಕ್ತಿ ನೀಡುವಾಕೆ ಅವಳು ಎಂದು ನಂಬಿದ್ದರು. ಸ್ವರ ಸಾಧನೆಗೆ ಓಂಕಾರವನ್ನು ಹಾಡಿಸುತ್ತಿದ್ದ ಅವರು, ಓಂಕಾರದ ಕೊನೆಗೆ ದೇವಿಯನ್ನು ಮನಸ್ಸಲ್ಲಿ ತಂದುಕೊಳ್ಳುವಂತೆ ಹೇಳುತ್ತಿದ್ದರು. ‘ಪೂರ್ಣ’ ‘ಇದೆ’ ಎನ್ನುವ ನಂಬಿಕೆಯೂ ಇಲ್ಲದೆ, ‘ಸಂಪೂರ್ಣ ‘ಇಲ್ಲ’ ಎನ್ನುವ ವಿಶ್ವಾಸವೂ ಇಲ್ಲದೆ, ಯಾವ ರೀತಿ ನಂಬಿಕೆಯೂ ಇಲ್ಲದೆ ತೊಳಲಾಡುತ್ತಿರುವ ಯುವ ಜನಾಂಗಕ್ಕೆ ಹೇಗೆ ಗುರಿ ತೋರಿಸುವುದು, ಎಂಬ ಹವಣಿಕೆಯೂ ಅವರಲ್ಲಿತ್ತೇನೋ!

ಕೀರ್ತಿ, ಹಣ- ಯಾವುದರ ಯೋಚನೆಯೂ ಇಲ್ಲದೆ ಸಂಗೀತ ಉಳಿಸಿ ಬೆಳೆಸುವ ಒಂದೇ ಧ್ಯೇಯದಿಂದ ಬೆಂಗಳೂರನ್ನು ಮನೆಯಾಗಿಸಿಕೊಂಡ ಅವರು ತಮ್ಮ ಸಂದೇಶ ಸಾರಲು ಎಲ್ಲಾ ಪ್ರಯತ್ನಪಟ್ಟರು. ‘ಹಿಂದೂಸ್ತಾನೀ ಸಂಗೀತ-ಕೆಲವು ಅನಿಸಿಕೆಗಳು’ ಎಂಬ ತಮ್ಮ ಲೇಖನದಲ್ಲವರು- ‘ಸಂಗೀತ ಆತುರದಲ್ಲಿ ಕಲಿಯಲಾಗದ ವಿದ್ಯೆ. ಮೊದಲನೆಯದಾಗಿ ಸಹನೆ, ಎರಡನೆಯದಾಗಿ ಸಾಧಿಸಬೇಕೆಂಬ ಹಟ, ಮೂರನೆಯದಾಗಿ ಹಿನ್ನೆಲೆ, ಮತ್ತು ಕೊನೆಯದಾಗಿ ಉತ್ತಮ ಗುರು- ಇವೆಲ್ಲ ಮೇಳೈಸಿ ಬಂದರೇನೇ ಈ ಮಹಾವಿದ್ಯೆ ಸಾಧಿಸಬಹುದು. ಸತತ ಅಭ್ಯಾಸ, ಸಾಧಿಸಲೇಬೇಕೆಂಬ ಹಟ ಬೇಕು. ಅಭ್ಯಾಸ ಮಾಡುತ್ತಿದ್ದೇನೆ, ಸಾಧಿಸಲೊಲ್ಲದು ಅನ್ನುವುದು ನಿರ್ಧಾರದ ಕೊರತೆ ತೋರಿಸುತ್ತದೆ’ ಎಂದಿದ್ದಾರೆ.

ಸಂಗೀತದಲ್ಲಿ ಸಾಹಿತ್ಯಕ್ಕೆ ಇರುವ ಮಹತ್ವ ದೊಡ್ಡದು ಎಂದು ಭಾವಿಸಿದ್ದ ಗರುಡರು ಬಿಲಾಸ್‌ಖಾನೀ ತೋಡಿ, ಭೂಪಾಲೀ ತೋಡಿ, ಕಲಾವತಿ, ಮಧುವಂತಿ, ಅಹಿರ್ ಭೈರವ್, ಬೈರಾಗೀ ಭೈರವ್ ಮುಂತಾದ ರಾಗಗಳಲ್ಲಿ ಛೋಟಾ ಖ್ಯಾಲ್ ಹಾಗೂ ಬಡಾ ಖ್ಯಾಲ್‌ಗಳನ್ನು ರಚಿಸಿದ್ದಾರೆ.ರಾಗ ಸರಪರ್ದಾದಲ್ಲಿ ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು ಹಾಡಿರುವ ‘ಗೋಪಾಲಾ ಮೋರೀ ಕರುಣಾಯೀ..’ ಗರುಡರ ಕಣ್ಣಲ್ಲಿ ನೀರು ತರಿಸುತ್ತಿತ್ತು. ಕರೀಂ ಖಾನ್ ಸಾಹೇಬರನ್ನು ಅವರು ಬಹು ಹತ್ತಿರದಿಂದ ಬಲ್ಲವರಾಗಿದ್ದರು. ಹಿರಿಯ ಡಾಗರ್ ಬಂಧುಗಳ ರಾಗ ರಾಮಕಲಿ ಕೇಳುತ್ತಾ ತನ್ಮಯರಾಗಿ, ಅವರಿಗೆ ತಾವು ತಬಲಾ ಸಾಥ್ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ, ‘ಅವರ ಸಂಗೀತಕ್ಕೆ ದೇವ ಗುಣವಿತ್ತು, ಅದು ನಮ್ಮನ್ನು ಬೇರೆ ಸ್ಥರಕ್ಕೆ ಒಯ್ಯಬಲ್ಲುದು’ ಎನ್ನುತ್ತಿದ್ದರು.

ಮಲ್ಲಿಕಾರ್ಜುನ ಮನ್ಸೂರು ಒಬ್ಬ ‘ವಲಿ’ಯೆ ಆಗಿದ್ದರು ಅನ್ನುತ್ತಿದ್ದ ಅವರು ಹಲವಾರು ಬಾರಿ ಅವರಿಗೆ ತಬಲಾ ಸಾಥ್ ನೀಡಿದ್ದರು. ಪಂ.ಭೀಮಸೇನ ಜೋಶಿಯವರು, ಗರುಡರು ಒಂದೇ ಊರಿನವರು, ಗದುಗಿನವರು, ಬಾಲ್ಯ ಸ್ನೇಹಿತರು. ಭೀಮಸೇನರಿಗೂ ಇವರು ತಬಲಾ ಸಾಥ್ ನೀಡಿದ್ದರು. ಈ ಎಲ್ಲಾ ಮಹಾನ್ ಸಾಧಕರು ಸಂಗೀತವನ್ನು ತಮ್ಮ ಜೀವದ ಉಸಿರಾಗಿ, ದೈವವಾಗಿ, ಭಕ್ತಿಯಾಗಿ ಕಂಡವರು. ನಮ್ಮ ಕಾಲದ, ಜೀವನದ ಯಾವುದೇ ಮಾಪನಗಳಿಗೆ ದಕ್ಕದ, ಬೇರೆಯೇ ಕಾಲಮಾನಕ್ಕೆ ಸೇರಿದವರಾಗಿದ್ದರು.

ಐಷಾರಾಮವಿಲ್ಲದ ಪುಟ್ಟ ಮನೆಯಲ್ಲಿ ಶುಭ್ರ ಬಿಳಿ ಬಟ್ಟೆಯ, ಚಿಕ್ಕ ದೇಹದ ಆದರೆ ಸಿಂಹ ಗಾಂಭೀರ್ಯದ, ಋಷಿಯಂಥ ಮನುಷ್ಯ. ಅವರ ಸಾಧನೆ ತಪಸ್ಸಿಗೆ ಶಕ್ತಿಯಾಗಿ ನಿಂತ ದೇವಿಯಂತಹ ಮಾತೆ- ಶ್ರೀಮತಿ ಗೌರಾಂಬಾ. ಯಾವತ್ತೂ ಬತ್ತದ ಸಂಗೀತದ ಅಲೆ, ಸಹೃದಯರ, ಚಿಕ್ಕ-ದೊಡ್ಡ ಸಂಗೀತಗಾರರ ನೆಲೆ, ಇದು ಪಂ.ಗರುಡರ ಮನೆ. ಈಗ ಪಂ.ಗರುಡರಿಲ್ಲ, ಅವರೊಂದಿಗೆ ಒಂದು ಯುಗವೂ ತೀರಿಹೋಯಿತೇನೋ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT