ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ-ಇಸ್ರೇಲ್ ಜಂಟಿ ಕ್ಷಿಪಣಿ ಪರೀಕ್ಷೆ

ಮೆಡಿಟರೇನಿಯನ್ ಸಮುದ್ರದಿಂದ ಉಡಾವಣೆ * ಸಿರಿಯಾ ಸುತ್ತಮುತ್ತ ಹೆಚ್ಚಿದ ಉದ್ವಿಗ್ನತೆ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಮೆಡಿಟರೇನಿಯನ್ ಸಮುದ್ರದಲ್ಲಿ ಅಮೆರಿಕ ಮತ್ತು ಇಸ್ರೇಲ್, ಮಂಗಳವಾರ ಜಂಟಿಯಾಗಿ ಕ್ಷಿಪಣಿ ಪರೀಕ್ಷೆ ನಡೆಸಿವೆ.

ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿರುವ ಆರೋಪ ಹೊತ್ತಿರುವ ಸಿರಿಯಾದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಅನುಮತಿ ನೀಡುವಂತೆ ಕೋರಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಾಂಗ್ರೆಸ್‌ಗೆ ಮನವಿ ಸಲ್ಲಿಸಿರುವಂತೆಯೇ, ಸೇನಾ ಸಾಮರ್ಥ್ಯ ಪ್ರದರ್ಶಿಸಲು ಈ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿದೆ.

ಅಮೆರಿಕದ ರಕ್ಷಣಾ ಇಲಾಖೆಯ ಜೊತೆಯಲ್ಲಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಹೇಳಿದೆ. ಸ್ಪ್ಯಾರೋ ಕ್ಷಿಪಣಿಯೊಂದನ್ನು ಮಂಗಳವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 9.15ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು. ಕ್ಷಿಪಣಿಯು ತನ್ನ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು ಎಂದು ಸಚಿವಾಲಯ ಹೇಳಿದೆ.

ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯ ಪಥವನ್ನು ಹಾಗೂ ಅದರ ಗುರಿಯನ್ನು ಯಶಸ್ವಿಯಾಗಿ ಪತ್ತೆ ಹಚ್ಚಿತು ಎಂದು ಸಚಿವಾಲಯ ಹೇಳಿದೆ. ಆದರೆ, ನಂತರ ಕ್ಷಿಪಣಿಯನ್ನು ನಾಶಪಡಿಸಲಾಯಿತೇ ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ.

ಸ್ಪ್ಯಾರೋ ಕ್ಷಿಪಣಿಯು ಮಧ್ಯಮ ವ್ಯಾಪ್ತಿಯ ಕ್ಷಿಪಣಿಯಾಗಿದ್ದು, ಅದನ್ನು ನೆಲದಿಂದ ಅಥವಾ ಆಗಸದಿಂದ ವೈಮಾನಿಕ ಗುರಿಗಳತ್ತ ಉಡಾಯಿಸಬಹುದು ಎಂದು ಕ್ಷಿಪಣಿ ತಯಾರಕರು ಹೇಳಿದ್ದಾರೆ.


ಆದರೆ, ಕ್ಷಿಪಣಿ ಪರೀಕ್ಷೆ ಕುರಿತಂತೆ ಅಮೆರಿಕ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಿರಿಯಾ ವಿರುದ್ಧ ಸಮುದ್ರದ ಮೂಲಕ ಅಮೆರಿಕ ದಾಳಿ ನಡೆಸಲು ಉತ್ಸುಕತೆ ತೋರಿರುವ ಬೆನ್ನಲ್ಲೇ ಈ ಜಂಟಿ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಅಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬೇಸಿಗೆಯ ತಾತ್ಕಾಲಿಕ ವಿರಾಮದ ನಂತರ, ಅಂದರೆ ಮುಂದಿನ ವಾರವಷ್ಟೇ ಅಮೆರಿಕ ಕಾಂಗ್ರೆಸ್‌ನ ಕಲಾಪ ನಡೆಯಲಿರುವುದರಿಂದ ಅಲ್ಲಿಯವರೆಗೆ ಸಿರಿಯಾದ ಮೇಲೆ ಒಬಾಮ ಆಡಳಿತ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿಲ್ಲ.

ಇದಕ್ಕೂ ಮುನ್ನ, ಮೆಡಿಟರೇನಿಯನ್ ಸಮುದ್ರದಿಂದ ಪೂರ್ವ ದಿಕ್ಕಿನತ್ತ ಎರಡು ಕ್ಷಿಪಣಿಗಳು ಉಡಾವಣೆಗೊಂಡಿರುವುದನ್ನು ರಷ್ಯಾದ ರೇಡಾರ್ ವ್ಯವಸ್ಥೆ ಪತ್ತೆ ಹಚ್ಚಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.


ಅಮೆರಿಕ ಸಿರಿಯಾವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಆದರೆ, ತಾನು ಯಾವುದೇ ದಾಳಿ ನಡೆಸಿಲ್ಲ ಎಂದು ಅಮೆರಿಕ ಸ್ಪಷ್ಟ ಪಡಿಸಿತ್ತು.

ಮತ್ತೆ ಯುದ್ಧ ಬೇಡ: ಪೋಪ್
ವ್ಯಾಟಿಕನ್ ಸಿಟಿ (ಐಎಎನ್‌ಎಸ್/ಎಕೆಐ): ಎಲ್ಲಾ ರೀತಿಯ ಯುದ್ಧಗಳಿಗೆ ಅಂತ್ಯ ಹಾಡುವಂತೆ ಮನವಿ ಮಾಡಿರುವ ಪೋಪ್ ಫ್ರಾನ್ಸಿಸ್, ಸಿರಿಯಾದಲ್ಲಿ ನಡೆದಿದೆ ಎನ್ನಲಾದ ರಾಸಾಯನಿಕ ಅಸ್ತ್ರಗಳ ದಾಳಿಯನ್ನು ಖಂಡಿಸಿದ್ದಾರೆ.

`ಯುದ್ಧ ಮತ್ತೆ ಬೇಡ!  ಮತ್ತೆ ಯುದ್ಧ ನಡೆಯುವುದೇ ಬೇಡ!' ಎಂದು ಪೋಪ್ ಅವರು ಕಿರು ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಬರೆದಿದ್ದಾರೆ.
`ಸಿರಿಯಾದಲ್ಲಿ ನಡೆಯುತ್ತಿರುವ ಘಟನಾವಳಿಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ' ಎಂದು ಪೋಪ್ ಹೇಳಿದ್ದಾರೆ.


`ರಾಸಾಯನಿಕ ಅಸ್ತ್ರಗಳ ಬಳಕೆಯನ್ನು ನಾನು ಖಂಡಿಸುತ್ತೇನೆ. ಇತ್ತೀಚೆಗೆ ಪ್ರಕಟಗೊಂಡಿರುವ ಭಯಾನಕ ಛಾಯಾಚಿತ್ರಗಳಿಂದ ಮನಸ್ಸಿಗೆ ಮತ್ತು ಹೃದಯಕ್ಕೆ ತೀವ್ರ ಘಾಸಿಯಾಗಿದೆ' ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT