ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಉಪದೇಶ ಭಾರತದ ತಿರುಗೇಟು

Last Updated 12 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪರಿಣಾಮಕಾರಿ ಲೋಕಪಾಲ ಮಸೂದೆಗಾಗಿ ಒತ್ತಾಯಿಸಿ ಅಣ್ಣಾ ಹಜಾರೆ ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲು ಇನ್ನು ಮೂರು ದಿನ ಮಾತ್ರ ಉಳಿದಿದ್ದು, ಉಪವಾಸ ನಡೆಯುವ ಸ್ಥಳದ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಇದೇ ವೇಳೆ ಕೇಂದ್ರ ಸರ್ಕಾರ ಹಜಾರೆ ಅವರ ಉಪವಾಸ ಈ ಹಂತದಲ್ಲಿ ಸಮರ್ಥನೀಯವಲ್ಲ ಎಂದು ಟೀಕಿಸಿದೆ.

ಈ ನಡುವೆ, ಶಾಂತಿಯುತ ಪ್ರತಿಭಟನೆಗಳನ್ನು ಭಾರತ ಸರ್ಕಾರ ಸಂಯಮದಿಂದ ನಿಭಾಯಿಸಬೇಕು ಎಂದು ಅಮೆರಿಕ ಉಪದೇಶ ಮಾಡಿರುವುದು, ಭಾರತ ಸರ್ಕಾರವನ್ನು ಕೆರಳಿಸಿದೆ. ನಮ್ಮ ವಿಷಯದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಅದು ಅಮೆರಿಕಕ್ಕೆ ತಿರುಗೇಟು ನೀಡಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಮೆರಿಕವು ಭಾರತಕ್ಕೆ ಶುಭ ಕೋರಿ, 21ನೇ ಶತಮಾನದ ಮಾರ್ಗದರ್ಶಿ ಸಹಭಾಗಿತ್ವ ಹೊಂದುವ ಆಶಯ ವ್ಯಕ್ತಪಡಿಸಿರುವ ಸಂದರ್ಭದಲ್ಲೇ ಈ ಸನ್ನಿವೇಶ ಉದ್ಭವಿಸಿದೆ.

`ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಶಾಂತಿಯುತ ಪ್ರತಿಭಟನೆಗಳ ಬಗ್ಗೆ ಭಾರತ ಸಂಯಮದಿಂದ ನಡೆದುಕೊಳ್ಳುತ್ತದೆ ಎಂಬುದು ನಮ್ಮ ನಿರೀಕ್ಷೆ~ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರಾದ ವಿಕ್ಟೋರಿಯಾ ನುಲ್ಯಾಂಡ್ ವಾಷಿಂಗ್ಟನ್‌ನಲ್ಲಿ ಪ್ರತಿಕ್ರಿಯಿಸಿದ್ದರು. ಆ.16ರಿಂದ ಉಪವಾಸ ಕೈಗೊಳ್ಳಲು ಮುಂದಾಗಿರುವ ಹಜಾರೆ ಅವರ ನಿರ್ಧಾರದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅವರು ಹೀಗೆ ಹೇಳಿದ್ದರು.
ಅಮೆರಿಕದ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಷ್ಣು ಪ್ರಕಾಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಇದೊಂದು ಅನಗತ್ಯ ಹೇಳಿಕೆ ಎಂದಿದ್ದಾರೆ.

`ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಹೋರಾಟಗಳಿಗೆ ನಮ್ಮ ಸಂವಿಧಾನ ಭಾರಿ ಮಹತ್ವ ನೀಡಿದೆ. ರಾಷ್ಟ್ರದ 120 ಕೋಟಿ ಜನ ಇದನ್ನು ಅನುಭವಿಸುತ್ತಿದ್ದಾರೆ~ ಎಂದೂ ಅವರು ತಿರುಗೇಟು ನೀಡಿದ್ದಾರೆ.

ಸಿಗದ ಅನುಮತಿ: ರಾಜಧಾನಿಯ ಜಂತರ್ ಮಂತರ್‌ನಲ್ಲಿ ಆ.16ರಿಂದ ಉಪವಾಸ ಕೂರುವುದಾಗಿ ನಾಗರಿಕ ಸಮಿತಿಯ ಮುಂದಾಳು ಹಜಾರೆ ಈ ಮುನ್ನ ಘೋಷಿಸಿದ್ದರು. ಅದಕ್ಕೊಪ್ಪದ ದೆಹಲಿ ಪೊಲೀಸರು ಜಯಪ್ರಕಾಶ್ ನಾರಾಯಣ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಸೂಚಿಸಿದ್ದರು. ಆದರೆ ಈ ಜಾಗದ ಒಡೆತನ ಹೊಂದಿರುವ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಹಜಾರೆ ಅವರಿಗೆ ಅಲ್ಲಿ ಉಪವಾಸ ನಡೆಸಲು ಇನ್ನೂ ಅನುಮತಿ ನೀಡಿಲ್ಲ.

ಹಜಾರೆ ತಂಡದವರು ಗುರುವಾರ ಸಿಪಿಡಬ್ಲ್ಯುಡಿ ಕಚೇರಿಗೆ ತೆರಳಿ ಜೆ.ಪಿ ಉದ್ಯಾನದಲ್ಲಿ ಉಪವಾಸ ನಡೆಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಸಿಪಿಡಬ್ಲ್ಯುಡಿ ನಿಯಂತ್ರಣ ಹೊಂದಿರುವ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಹಜಾರೆ ಅವರು ಗುರುವಾರ ಗುಡಗಾಂವ್‌ನಲ್ಲಿನ ವೇದಾಂತ ಮೆಡಿಸಿಟಿಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪ್ರತಿ ಬಾರಿ ಉಪವಾಸ ಕೂರುವ ಮುನ್ನ ಅವರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಉಪವಾಸ ಕೂರಲು ಹಜಾರೆ ಸಂಪೂರ್ಣ ಸಮರ್ಥರಿರುವುದನ್ನು ದೃಢೀಕರಿಸಿ ವೈದ್ಯರು ಪ್ರಮಾಣಪತ್ರ ನೀಡಿದ್ದಾರೆ ಎಂದು ಹಜಾರೆ ಬಳಗದ ಸದಸ್ಯ ಮನೀಶ್ ಸಿಸೋಡಿಯ ತಿಳಿಸಿದ್ದಾರೆ.

ಕಾಲೆಳೆದ ಕೇಂದ್ರ: ಲೋಕಪಾಲ ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆಯಲು ಸರ್ಕಾರ ಯತ್ನಿಸುತ್ತಿರುವ ಸಂದರ್ಭದಲ್ಲಿ, ಅದಕ್ಕಾಗಿ ಹೋರಾಟ ಮುನ್ನಡೆಸಿದ ಹಜಾರೆ ಅವರು ಉಪವಾಸ ಕೂರುವುದು ಸಮರ್ಥನೀಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಹಿಂದೆ ಕರಡು ಮಸೂದೆಯೇ ರಚನೆ ಆಗದಿದ್ದಾಗ ಹಜಾರೆ ಅವರು ಉಪವಾಸ ಕುಳಿತಿದ್ದು ಸರಿ. ಆದರೆ, ಇದೀಗ ಸಂಪುಟ ಅನುಮೋದಿಸಿರುವ ಕರಡು ಮಸೂದೆ ಸಂಸತ್ತಿನ ಸ್ಥಾಯಿ ಸಮಿತಿ ಮುಂದಿರುವಾಗ ಉಪವಾಸದ ಅಗತ್ಯವಿಲ್ಲ ಎಂದು ಗೃಹ ಸಚಿವ ಪಿ.ಚಿದಂಬರಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೋಕಪಾಲ ಮಸೂದೆ ಸಂಬಂಧ ಸ್ಥಾಯಿ ಸಮಿತಿ ಹಲವಾರು ಸಲಹೆಗಳನ್ನು ಕ್ರೋಡೀಕರಿಸುತ್ತಿದೆ. ನಂತರ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಕೂಡ ಈ ಬಗ್ಗೆ ತಮ್ಮದೇ ನಿಲುವು ಮಂಡಿಸಿ, ಸಲಹೆಗಳನ್ನು ನೀಡಲಿವೆ. ಹೀಗಾಗಿ ಕರಡು ಮಸೂದೆಯಲ್ಲಿನ ಕೆಲವಾರು ಅಂಶಗಳು ಮಾರ್ಪಾಡಾಗಲಿವೆ ಎಂದು ಸಚಿವರು ವಿವರಿಸಿದರು.

ಈಗ ಸಿದ್ಧಗೊಂಡಿರುವ ಲೋಕಪಾಲ ಮಸೂದೆ ಹಾಗೂ ಈ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ರಾಷ್ಟ್ರದ ಜನತೆಗೆ ಸಮಾಧಾನವಿದೆ ಎಂದೂ ಚಿದಂಬರಂ ಇದೇ ಸಂದರ್ಭದಲ್ಲಿ ಸಮರ್ಥಿಸಿಕೊಂಡರು.

ಪ್ರತಿಭಟನೆ ನಡೆಸಲು ಪ್ರತಿಯೊಬ್ಬರೂ ಹಕ್ಕು ಹೊಂದಿದ್ದಾರೆ. ಆದರೆ ಸಂದರ್ಭ ಮತ್ತು ಸನ್ನಿವೇಶಗಳನ್ನು ಆಧರಿಸಿ ಅದು ಸೂಕ್ತವೋ, ಅಲ್ಲವೋ ಎಂದು ತೀರ್ಮಾನಿಸಬೇಕಾಗುತ್ತದೆ ಎಂದೂ ಅವರು ಹೇಳಿದರು.

ಹಜಾರೆ ಅವರ ಆರೋಗ್ಯದ ಕಾರಣ ಮುಂದಿಟ್ಟುಕೊಂಡು ಸರ್ಕಾರ ಪ್ರತಿಭಟನೆಯನ್ನು ತಡೆಯಲಿದೆಯೇ ಎಂದು ಕೇಳಿದಾಗ, `ಯಾರದ್ದೇ ಜೀವಕ್ಕೆ ಅಪಾಯವಿದ್ದರೂ ನಿಶ್ಚಿತವಾಗಿಯೂ ಸರ್ಕಾರ ಮಧ್ಯಪ್ರವೇಶಿಸಲಿದೆ. ಇದು ಸರ್ಕಾರದ ಕರ್ತವ್ಯ ಮಾತ್ರವಲ್ಲ, ಹಕ್ಕು ಕೂಡ ಆಗಿದೆ~ ಎಂದು ಅವರು ಹೇಳಿದರು.

ತಕ್ಷಣವೇ, `ಹಜಾರೆ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೀಗೆ ಹೇಳುತ್ತಿಲ್ಲ. ಇದು ಯಾರಿಗಾದರೂ ಅನ್ವಯಿಸುವ ನಿಯಮ~ ಎನ್ನಲು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT