ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ತಂತ್ರಜ್ಞಾನಕ್ಕೂ ಬಗ್ಗದ ಗುಂಡಿಗಳು!

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಹಲವು ವರ್ಷಗಳಿಂದ ಹೊಸ, ಹೊಸ ಪ್ರಯೋಗ ನಡೆಸುತ್ತಲೇ ಇದೆ. ಮುಳುಗುವ ಹಡಗಿನಲ್ಲಿ ಒಂದು ಕಡೆ ತೂತು ಮುಚ್ಚುತ್ತಿದ್ದಂತೆಯೇ ಮತ್ತೊಂದು ಕಡೆ ಕಾಣಿಸಿಕೊಳ್ಳುವಂತೆ ರಸ್ತೆಗಳ ಮೇಲಿನ ಹೊಂಡಗಳು ಮಾತ್ರ ಹೆಚ್ಚಾಗುತ್ತಲೇ ಇವೆ.

ಅಮೆರಿಕ ತಂತ್ರಜ್ಞಾನದ ಪೈಥಾನ್‌–5000 ಎಂಬ ಯಂತ್ರವು ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಬೀದಿಗಳಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಈ ಯಂತ್ರವನ್ನು ತಂದಿರುವ ‘ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆ’ (ಆರ್ಟ್ಸ್)ಗೆ ನಗರದ ರಸ್ತೆಗಳ ಗುಂಡಿ ಮುಚ್ಚುವ ಹೊಣೆಯನ್ನು ಬಿಬಿಎಂಪಿ ಗುತ್ತಿಗೆ ನೀಡಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪೈಥಾನ್‌–5000 ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಯಂತ್ರದ ಕೆಲಸ ಆರಂಭವಾಗಿ ತಿಂಗಳಾದರೂ ಗುಂಡಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

ಒಟ್ಟು 1,940 ಕಿ.ಮೀ. ಉದ್ದದ ರಸ್ತೆಗಳನ್ನು ಪೈಥಾನ್‌–5000 ದುರಸ್ತಿ ಮಾಡಬೇಕಿದೆ. ಈ ಕೆಲಸವನ್ನು ಆರ್ಟ್ಸ್‌ ಸಂಸ್ಥೆ ₨ 15.5 ಕೋಟಿ ಮೊತ್ತಕ್ಕೆ ಗುತ್ತಿಗೆ ಪಡೆದಿದೆ. ಗುಂಡಿಗಳನ್ನು ಮುಚ್ಚಲು ಪ್ರತಿಯೊಂದು ಕಿ.ಮೀ. ಉದ್ದದ ರಸ್ತೆಗೆ ಬಿಬಿಎಂಪಿ ಸರಾಸರಿ ₨ 80,000 ಖರ್ಚು ಮಾಡುತ್ತಿದೆ.

ಪೈಥಾನ್‌–5000 ಯಂತ್ರಕ್ಕೆ ಒಂದು ಗುಂಡಿ ಮುಚ್ಚಲು ಕೇವಲ ಎರಡು ನಿಮಿಷ ಸಾಕು, ತಿಂಗಳಿಗೆ 3,000 ಕಿ.ಮೀ. ಉದ್ದದ ರಸ್ತೆಯನ್ನು

ದುರಸ್ತಿಗೊಳಿಸುವ ಸಾಮರ್ಥ್ಯ ಅದಕ್ಕಿದೆ ಎಂಬ ಪ್ರಚಾರ ನೀಡಲಾಗಿತ್ತು. ಆದರೆ, ಅದು ರಸ್ತೆಗಿಳಿದು ಒಂದು ತಿಂಗಳು ಪೂರ್ಣಗೊಂಡಿದ್ದರೂ ಸರಿಯಾಗಿ ನೂರು ಕಿ.ಮೀ. ಉದ್ದದ ರಸ್ತೆಯೂ ದುರಸ್ತಿಗೊಂಡಿಲ್ಲ.

1,940 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ರಸ್ತೆಗಳ ಜಾಲವೇ ನಗರದ ಶೇ 70ರಷ್ಟು ಸಂಚಾರದ ಭಾರವನ್ನು ಹೊರುತ್ತಿದೆ. ಅವುಗಳನ್ನು ಗುಂಡಿಮುಕ್ತಗೊಳಿಸಲು ಬಿಬಿಎಂಪಿ ಹೆಣಗಾಡುತ್ತಿದೆ.

ಎಲ್ಲೆಲ್ಲಿ ಕಾರ್ಯಾಚರಣೆ?: ‘ಪೈಥಾನ್‌–5000 ಯಂತ್ರ ಇದುವರೆಗೆ ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಿದೆ?’

ಈ ಪ್ರಶ್ನೆಯನ್ನು ಬಿಬಿಎಂಪಿ ಸೂಪರಿಂಟೆಂಡಿಂಗ್ ಎಂಜಿನಿಯರ್ (ರಸ್ತೆ ಮೂಲಭೂತ ಸೌಕರ್ಯ) ಕೆ.ಟಿ. ನಾಗರಾಜ್‌ ಅವರಿಗೆ ಹಾಕಿದಾಗ, ಸುದೀರ್ಘವಾದ ವಿವರಣೆಯನ್ನೇ ಅವರು ನೀಡುತ್ತಾರೆ. ಸಿ.ವಿ. ರಾಮನ್‌ ರಸ್ತೆ, ಭೂಪಸಂದ್ರ ರಸ್ತೆ, ರಾಜಭವನ ರಸ್ತೆ, ಮೇಖ್ರಿ ಸರ್ಕಲ್‌ನಿಂದ ಸಿಬಿಐ ಕಚೇರಿವರೆಗಿನ ರಸ್ತೆ, ಕುಮಾರಕೃಪಾದಿಂದ ಮೌಂಟ್‌ ಕಾರ್ಮೆಲ್‌ ಶಾಲೆವರೆಗಿನ ರಸ್ತೆ, ಶಿರಸಿ ಸರ್ಕಲ್‌ ಹತ್ತಿರದ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳುತ್ತಾರೆ.

‘ಹಾಗಾದರೆ ಈ ರಸ್ತೆಗಳಲ್ಲಿ ಈಗ ಗುಂಡಿಗಳೇ ಇಲ್ಲವೆ?’ ಎಂದು ಮರುಪ್ರಶ್ನೆ ಹಾಕಿದರೆ, ‘ಹಾಗೆಂದು ಹೇಳುವ ಧೈರ್ಯ ಇಲ್ಲ. ಜಲಮಂಡಳಿ ಹಾಗೂ ದೂರ ಸಂಪರ್ಕ ಇಲಾಖೆ ತೆಗೆದ ಕೆಲವು ಗುಂಡಿಗಳು ಈ ರಸ್ತೆಗಳಲ್ಲಿ ಈಗಲೂ ಇವೆ. ಉಳಿದ ಗುಂಡಿಗಳನ್ನಷ್ಟೇ ನಾವು ಮುಚ್ಚಿಸಿದ್ದೇವೆ’ ಎಂದು ಉತ್ತರಿಸುತ್ತಾರೆ. ‘ಮತ್ತೆ  ಗುಂಡಿಮುಕ್ತ ರಸ್ತೆಗಳು ಸಿಗುವುದು ಯಾವಾಗ?’ ಎಂಬ ಸಾರ್ವಜನಿಕರ ಕಾತುರಕ್ಕೆ ಅವರ ಬಳಿ ಉತ್ತರವಿಲ್ಲ.

‘ಜಲಮಂಡಳಿಯೂ ಸೇರಿದಂತೆ ವಿವಿಧ ಇಲಾಖೆಗಳು ತೋಡಿದ ಗುಂಡಿಗಳನ್ನು ಶೀಘ್ರವಾಗಿ ಮುಚ್ಚುವುದು ಆಗದ ಕೆಲಸ. ಆಯಾ ಇಲಾಖೆಗಳ ಕೆಲಸ ಸಂಪೂರ್ಣವಾಗಿ ಮುಗಿವವರೆಗೆ ಕಾಯಲೇಬೇಕು’ ಎಂದು ಅವರು ಹೇಳುತ್ತಾರೆ.

ಕಳಪೆ ಗುಣಮಟ್ಟ: ‘ರಸ್ತೆಗಳ ಗುಂಡಿಗಳನ್ನು ಮುಚ್ಚುವಲ್ಲಿ ಇದುವರೆಗೆ ನಗರದಲ್ಲಿ ಅನುಸರಿಸಿದ ಕ್ರಮ ಭಾರತೀಯ ರಸ್ತೆ ಕಾಂಗ್ರೆಸ್‌ನ ಮಾರ್ಗಸೂಚಿಗೆ ಅನುಗುಣವಾಗಿ ಇಲ್ಲ’ ಎಂಬ ಆರೋಪ ಸಾಮಾನ್ಯವಾಗಿದೆ. ಗುಂಡಿಗಳನ್ನು ಮುಚ್ಚುವಾಗ ರಸ್ತೆ ಮೇಲ್ಮೈ ಸಮತಟ್ಟಾಗಿರಬೇಕು ಎನ್ನುವುದು ನಿಯಮ. ಆದರೆ, ನಗರದ ಗುಂಡಿ ಮುಚ್ಚಲಾದ ರಸ್ತೆಗಳನ್ನು ಅವಲೋಕಿಸಿದಾಗ ಈ ನಿಯಮ ಪಾಲನೆ ಆಗದಿರುವುದು ಎದ್ದು ಕಾಣುತ್ತದೆ. ಗುಂಡಿಗಳನ್ನು ಮುಚ್ಚಿದಾಗ ಟಾರಿನ ಪದರು ರಸ್ತೆ ಮೇಲ್ಮೈಗಿಂತ ಒಂದು ಇಂಚಿಗೂ ಅಧಿಕ ದಪ್ಪವಾಗಿರುತ್ತದೆ. ಇಂತಹ ಉಬ್ಬು–ತಗ್ಗುಗಳು ರಸ್ತೆಯುದ್ದಕ್ಕೂ ಹರಡಿಕೊಂಡ ಕಾರಣ ಸವಾರರು –ವಿಶೇಷವಾಗಿ ದ್ವಿಚಕ್ರವಾಹನ ಸವಾರರು– ಅಪಾಯದ ಸನ್ನಿವೇಶ ಎದುರಿಸಬೇಕಾಗಿದೆ.

ಪಾಲನೆಯಾಗದ ಮಾರ್ಗಸೂಚಿ
ರಸ್ತೆಗಳ ಗುಂಡಿ ಮುಚ್ಚುವುದು, ದುರಸ್ತಿ ಹಾಗೂ ನಿರ್ವಹಣೆ ಮಾಡುವುದಕ್ಕಾಗಿ ಭಾರತೀಯ ರಸ್ತೆ ಕಾಂಗ್ರೆಸ್‌ನಲ್ಲಿ ಸ್ಪಷ್ಟವಾದ ನಿಯಮಾವಳಿಯೇ ಇದೆ. ಸೆಕ್ಷನ್‌ 3000ರಲ್ಲಿ ಈ ವಿಷಯವಾಗಿ ವಿವರವಾದ ಮಾರ್ಗಸೂಚಿಯನ್ನು ರೂಪಿಸಲಾಗಿದೆ.

ರಸ್ತೆಗಳ ಗುಂಡಿಗಳನ್ನು ಮುಚ್ಚುವ ಮೊದಲು ರಸ್ತೆಯನ್ನು ಶಿಥಿಲಗೊಳಿಸಿದ ಮತ್ತು ಸಡಿಲಗೊಂಡ ಎಲ್ಲ ಸಾಮಗ್ರಿಯನ್ನು ಅಲ್ಲಿಂದ ತೆರವುಗೊಳಿಸಬೇಕು. ಗುಂಡಿಗಳ ಮೂಲದವರೆಗೆ ಎಲ್ಲ ಕಲ್ಮಶವನ್ನು ಸ್ವಚ್ಛಗೊಳಿಸಬೇಕು. ರಸ್ತೆಯನ್ನು ನಿರ್ಮಿಸುವಾಗ ಬಳಸಿದ ಸಾಮಗ್ರಿಗಿಂತ ಗುಂಡಿಯನ್ನು ಮುಚ್ಚಲು ಬಳಸುವ ಸಾಮಗ್ರಿ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗೆ ತುಂಬಿದ ಸಾಮಗ್ರಿ ಯಾವುದೇ ಕಾರಣಕ್ಕೂ ರಸ್ತೆ ಮೇಲ್ಮೈಗಿಂತ ಮೇಲೆ ಇಲ್ಲವೆ ಕೆಳಗೆ ಇರಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ನಗರದಲ್ಲಿ ಗುಂಡಿಗಳನ್ನು ಮುಚ್ಚುವಾಗ ಈ ಮಾರ್ಗಸೂಚಿಯನ್ನು ಎಲ್ಲಿಯೂ ಅನುಸರಿಸಲಾಗಿಲ್ಲ.

ಓದುಗರ ಗಮನಕ್ಕೆ
ನಗರದ ರಸ್ತೆಗಳು ತೀರಾ ಹಾಳಾಗಿವೆ. ಇಂತಹ ರಸ್ತೆಗಳ ಚಿತ್ರಗಳನ್ನು ಓದುಗರು ಈ ಮೇಲ್‌ ಮೂಲಕ ಕಳುಹಿಸಿದರೆ ‘ಪ್ರಜಾವಾಣಿ’ ಆಯ್ದ ಚಿತ್ರಗಳನ್ನು ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿದೆ. ಗುಂಡಿ ಬಿದ್ದ ರಸ್ತೆಗಳು ಹಾಗೂ ನಿಂತು ಹೋದ ಬಿಬಿಎಂಪಿ, ಜಲಮಂಡಳಿ ಕಾಮಗಾರಿಗಳ ಬಗ್ಗೆ ಓದುಗರು ಮಾಹಿತಿಯನ್ನೂ ನೀಡಬಹುದು.

ಈ ಮೇಲ್‌: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT