ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ನೌಕಾ ಸಿಬ್ಬಂದಿ ಗುಂಡಿಗೆ ಭಾರತೀಯ ಮೀನುಗಾರ ಬಲಿ

Last Updated 17 ಜುಲೈ 2012, 20:00 IST
ಅಕ್ಷರ ಗಾತ್ರ

ನವದೆಹಲಿ/ದುಬೈ (ಪಿಟಿಐ): `ದುಬೈ ದಕ್ಷಿಣ ಸಮುದ್ರದಲ್ಲಿ ಭಾರತೀಯ ಮೀನುಗಾರರು ಇದ್ದ ದೋಣಿಯತ್ತ ಗುಂಡು ಹಾರಿಸಿದ್ದಕ್ಕೆ, ಅವರು ತನ್ನ ನೌಕಾ ಸಿಬ್ಬಂದಿಯ ಎಚ್ಚರಿಕೆಗಳನ್ನು ಉಪೇಕ್ಷಿಸಿದ್ದೇ ಕಾರಣ~ ಎಂದು ಅಮೆರಿಕ ಹೇಳಿದೆ. `ಯಾವುದೇ ಎಚ್ಚರಿಕೆ ನೀಡದೇ ಗುಂಡು ಹಾರಿಸಿದ್ದೇ ಮೀನುಗಾರ ಶೇಖರ್ (29) ಸಾವಿಗೆ ಕಾರಣ~ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

ಪುಟ್ಟ ದೋಣಿಯು ತನ್ನ ನೌಕಾ ಸಿಬ್ಬಂದಿ ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಅದರೆಡೆಗೆ ವೇಗವಾಗಿ ಧಾವಿಸಿದ್ದರಿಂದ ಗುಂಡು ಹಾರಿಸಲಾಗಿದೆ ಎಂದು ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಹೇಳಿಕೆ ಪ್ರಕಟಿಸಿದೆ.

ಆದರೆ, ಅರಬ್ ಅಮೀರರ ಒಕ್ಕೂಟದಲ್ಲಿರುವ ಭಾರತದ ರಾಯಭಾರಿ ಎಂ.ಕೆ.ಲೋಕೇಶ್ ಅವರು ಅಮೆರಿಕದ ಈ ಸ್ಪಷ್ಟನೆಯನ್ನು ಅಲ್ಲಗಳೆದಿದ್ದಾರೆ. `ಘಟನೆಯಲ್ಲಿ ಬದುಕುಳಿದಿರುವವರ ಪ್ರಕಾರ, ಯಾವುದೇ ಸೂಚನೆ ನೀಡದೆ ಗುಂಡು ಹಾರಿಸಲಾಗಿದೆ~ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಲೋಕೇಶ್ ಅವರು ಈಗಾಗಲೇ ಘಟನೆ ಕುರಿತು ಯುಎಇ ಸರ್ಕಾರದ ಗಮನ ಸೆಳೆದಿದ್ದಾರೆ.

ಈ ಮಧ್ಯೆ ತನ್ನ ನೌಕಾಪಡೆಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಭಾರತೀಯ ಮೀನುಗಾರ ಹತ್ಯೆಯಾಗಿರುವುದಕ್ಕೆ ಅಮೆರಿಕ ವಿಷಾದ ವ್ಯಕ್ತಪಡಿಸಿದೆ. ಮತ್ತೊಂದೆಡೆ ಯುಎಇ ಪ್ರಕರಣದ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಆ ರಾಷ್ಟ್ರದ ಕಾನೂನಿನ ಪ್ರಕಾರ ತನಿಖೆ ಆರಂಭವಾಗಿದೆ.

ವಿಷಾದ: ದುರ್ಘಟನೆ ನಡೆದಿರುವುದು ಖಚಿತವಾಗುತ್ತಿದ್ದಂತೆ, ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ನ್ಯಾನ್ಸಿ ಪೊವೆಲ್ ಅವರು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರನ್ನು ಸಂಪರ್ಕಿಸಿ ವಿಷಾದ ವ್ಯಕ್ತಪಡಿಸುವ ಜತೆಗೆ, ಘಟನೆ ಸಂಬಂಧ ಅಮೆರಿಕ ಸರ್ಕಾರ ಸಮಗ್ರ ತನಿಖೆ ನಡೆಸಲಿದೆ ಎಂದಿದ್ದಾರೆ.

ದುಬೈ ಸಮುದ್ರದಲ್ಲಿ ಸೋಮವಾರ ಅಮೆರಿಕದ ನೌಕಾಪಡೆಯು ಅನತಿ ದೂರದಲ್ಲಿದ್ದ ಪುಟ್ಟ ದೋಣಿಯತ್ತ ಗುಂಡು ಹಾರಿಸಿದಾಗ ಒಬ್ಬ ಮೀನುಗಾರ ಹತ್ಯೆಗೀಡಾಗಿ ಇತರ ಮೂವರು ಗಾಯಗೊಂಡಿದ್ದರು. ದೋಣಿಯಲ್ಲಿ ನಾಲ್ವರು ಭಾರತೀಯರು ಹಾಗೂ ಇಬ್ಬರು ಅರಬ್ ಪ್ರಜೆಗಳು ಇದ್ದರು. ಘಟನೆಯಲ್ಲಿ ಗಾಯಗೊಂಡ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡಿನ ಪೆರಿಯಪಟ್ಟಣಂ ಗ್ರಾಮದ ಶೇಖರ್ 10 ತಿಂಗಳ ಹಿಂದೆ ದುಬೈಗೆ ತೆರಳಿ ಅಲ್ಲಿನ ಮೀನುಗಾರಿಕಾ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ತನ್ನ ಸಹೋದರಿಯ ಮದುವೆಗಾಗಿ ಕುಟುಂಬದವರು ಮಾಡಿದ್ದ ಸಾಲ ತೀರಿಸಲೆಂದು ಆತ ಅಲ್ಲಿಗೆ ಹೋಗಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT