ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸೇನೆಯಿಂದ ಪರಿಹಾರ ಕಾರ್ಯ

Last Updated 17 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸುನಾಮಿ ಮತ್ತು ಭೂಕಂಪ ಪೀಡಿತ ಜಪಾನ್‌ನಲ್ಲಿ ಅಮೆರಿಕದ ಸೇನಾಪಡೆಯು ವ್ಯಾಪಕ ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಸುಮಾರು 17 ಸಾವಿರ ಸಿಬ್ಬಂದಿ ಮತ್ತು 15 ಹಡಗುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದೆ.

ಏರುತ್ತಿರುವ ಸಾವಿನ ಸಂಖ್ಯೆ
ಟೋಕಿಯೊ (ಎಎಫ್‌ಪಿ): ಭೂಕಂಪ ಮತ್ತು ಸುನಾಮಿಯಿಂದಾಗಿ ಜಪಾನ್‌ನಲ್ಲಿ ಅಸುನೀಗಿದವರು ಮತ್ತು ನಾಪತ್ತೆಯಾದವರ ಸಂಖ್ಯೆ ದಿನದಿನಕ್ಕೆ ಏರುತ್ತಿದೆ. ಈ ಸಂಖ್ಯೆ ಆಧಿಕೃತವಾಗಿಯೇ ಈಗ 13 ಸಾವಿರ ದಾಟಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ. ವರದಿಗಳು ಇನ್ನೂ ಬರುತ್ತಿದ್ದು ಅಂತಿಮವಾಗಿ ಈ ಸಂಖ್ಯೆ ಬಹಳ ಹೆಚ್ಚುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.


ಜಪಾನ್‌ನ ಸಂತ್ರಸ್ತರಿಗಾಗಿ ನೌಕಾಪಡೆಯ 14 ಹಡಗುಗಳು ಈಗಾಗಲೇ ಜಪಾನ್ ಕರಾವಳಿಯನ್ನು ತಲುಪಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಪೆಂಟಗಾನ್ ವಕ್ತಾರ ದವೆ ಲಪಾನ್ ಹೇಳಿದ್ದಾರೆ.

ಇನ್ನೂ ಒಂದು ಹಡಗು ಸದ್ಯದಲ್ಲೇ ಜಪಾನ್ ತಲುಪಲಿದ್ದು ಒಟ್ಟಾರೆ 15 ಹಡುಗುಗಳು ಕಾರ್ಯಾಚರಣೆ ನಡೆಸಲಿವೆ.

ಒಟ್ಟು 17 ಸಾವಿರ ಮಂದಿ ನೌಕಾ ಯೋಧರು ಮತ್ತು ಸಿಬ್ಬಂದಿ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಬುಧವಾರ ಬೆಳಿಗ್ಗೆಯವರೆಗೆ ಸುಮಾರು 129 ಸಾವಿರ ಗ್ಯಾಲನ್ ನೀರು ಮತ್ತು 4,200 ಪೌಂಡ್‌ಗಳ ಆಹಾರ ಸರಬರಾಜು ಮಾಡಲಾಗಿದೆ ಎಂದಿದ್ದಾರೆ. ಮನವಿ ಮೇರೆಗೆ ಅಗ್ನಿಶಾಮಕದ ಎರಡು ಟ್ರಕ್‌ಗಳನ್ನು ಕೂಡ ಒದಗಿಸಿದ್ದು ಇವುಗಳ ನಿರ್ವಹಣೆಯನ್ನು ಜಪಾನಿ ಸಿಬ್ಬಂದಿಯೇ ನೋಡಿಕೊಳ್ಳಲಿದ್ದಾರೆ.

ಆದರೆ ಹಾನಿಗೊಳಗಾದ ರಿಯಾಕ್ಟರುಗಳಿಗೆ ಸಂಬಂಧಿಸಿದಂತೆ ನೆರವು ನೀಡುವಲ್ಲಿ ಪೆಂಟಗಾನ್ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಪರಮಾಣು ನಿಯಂತ್ರಣ ಆಯೋಗ ಈ ನೆರವನ್ನು ನೀಡಲಿದೆ ಎಂದು ಹೇಳಿದ್ದಾರೆ.
‘ಸೇನಾಪಡೆಯಲ್ಲಿ ನಾವು ಸಾಧನೋಪಕರಣಗಳಿಂದ ಹಿಡಿದು ತರಬೇತಿ ಪಡೆದ ಸಿಬ್ಬಂದಿವರೆಗೆ ಎಲ್ಲಾ ಬಗೆಯ ಸಾಮರ್ಥ್ಯ ಹೊಂದಿದ್ದೇವೆ. ಆದರೆ ಜಪಾನ್ ಕೋರುವ ನೆರವಿಗೆ ತಕ್ಕಂತೆ ಇವುಗಳ ಬಳಕೆ ಮಾಡಲಾಗುವುದು’ ಎಂದು ಲಪಾನ್ ತಿಳಿಸಿದ್ದಾರೆ.

‘ನೆನಪಿಡಿ- ನಾವು ಅಮೆರಿಕದ ಸೇನಾಪಡೆ ಬಗ್ಗೆ ಮಾತನಾಡುತ್ತಿದ್ದೇವೆ- ಎಲ್ಲಾ ರೀತಿಯ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸುವಂತೆ ನಮ್ಮ ಜನರನ್ನು ನಾವು ತರಬೇತಿಗೊಳಿಸಿರುತ್ತೇವೆ. ಹಾಗಾಗಿ ನಮಗೆ ಹೇಗೆ ಕ್ರಮ ಕೈಗೊಳ್ಳಬೇಕು, ಹೇಗೆ ಪರೀಕ್ಷಿಸಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಮುನ್ನೆಚ್ಚರಿಕೆ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

ಹಾನಿಗೊಳಗಾಗಿರುವ ಅಣು ಸ್ಥಾವರ ಘಟಕಗಳು ಹೊರಸೂಸಬಹುದಾದ ವಿಕಿರಣದಿಂದ ತಮ್ಮ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆಗಳ ನಿರ್ಮಾಣ: ತೀವ್ರ ಹಾನಿಗೊಳಗಾಗಿದ್ದ ಇವಟೆ ಪ್ರಾಂತ್ಯದ ರಿಕುಝೆಂಟಕಟ ಹಾಗೂ ಮತ್ತಿತರ ನಗರಗಳಲ್ಲಿ ಭಗ್ನಾವಶೇಷಗಳನ್ನು ತೆಗೆಯುವ ಕಾರ್ಯ ಚುರುಕುಗೊಂಡಿದ್ದು, ಎಸ್‌ಡಿಎಫ್ ಅಲ್ಲಿ ರಸ್ತೆಗಳನ್ನು ನಿರ್ಮಿಸಿದೆ. ಇದರಿಂದ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿರುವ ವಾಹನಗಳಿಗೆ ಸಂಚಾರ ಸುಲಭವಾಗುತ್ತಿದೆ.

ಆದರೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಇಂಧನದ ಕೊರತೆ ಮುಂದುವರಿದಿದೆ. ಅಡುಗೆ ಮಾಡಲು, ಯಂತ್ರೋಪಕರಣಗಳನ್ನು ಚಾಲನೆ ಮಾಡಲು, ಪರಿಹಾರ ಸಾಮಗ್ರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ತೀವ್ರ ತೊಂದರೆಯಾಗಿದೆ ಎಂದು ಜನ ಹಾಗೂ ಜನಪ್ರತಿನಿಧಿಗಳು ತಿಳಿಸಿದ್ದಾರೆ.

ರಕ್ಕಸ ಸುನಾಮಿಯಿಂದಾಗಿ ಮುಳುಗಿಹೋಗಿದ್ದ ಸೆಂಡಾಯ್ ವಿಮಾನ ನಿಲ್ದಾಣ ಒಂದು ಭಾಗವನ್ನು ಸಂಚಾರಕ್ಕೆ ತೆರವುಗೊಳಿಸಲಾಗಿದ್ದು, ಪೊಲೀಸ್ ಹಾಗೂ ಎಸ್‌ಡಿಎಫ್ ವಿಮಾನಗಳು ಅಲ್ಲಿಂದ ಪರಿಹಾರ ಸಾಮಗ್ರಿ ಹೊತ್ತೊಯ್ಯುತ್ತಿವೆ. ಸರಕು ವಿಮಾನಗಳ ಸಂಚಾರ ಯಾವಾಗ ಆರಂಭವಾಗುತ್ತದೆಂಬುದು ಇನ್ನೂ ಖಚಿತಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT