ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಮಣಿಯದ ಸ್ವಾಭಿಮಾನಿ ಹಸೀನಾ

Last Updated 2 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಪ್ರತ್ಯೇಕ ದೇಶ ರಚನೆ ಹೋರಾಟ ಪ್ರಾರಂಭವಾಗಿದ್ದು ಇಂದಿಗೆ ಬರೋಬ್ಬರಿ 40 ವರ್ಷಗಳ ಹಿಂದೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ 1971ರ ಮಾರ್ಚ್ 26ರಂದು.

ಪಾಕಿಸ್ತಾನದ ಸೇನಾ ಸರ್ವಾಧಿಕಾರಿಗಳು ತಮ್ಮ ರಾಕ್ಷಸಿ ಸೇನೆಯನ್ನು ಅಮಾಯಕ ಬಾಂಗ್ಲಾದೇಶೀಯರ ಮೇಲೆ ಛೂ ಬಿಟ್ಟು ಸಾಮೂಹಿಕ ನರಹತ್ಯೆ ಆರಂಭಿಸಿದ್ದು ಇದೇ ದಿನದಂದು. ಸ್ವಾಯತ್ತತೆ, ಅಧಿಕಾರದಲ್ಲಿ ನ್ಯಾಯಯುತ ಪಾಲು ಕೊಡಬೇಕು ಮತ್ತು ಆಗಿನ ಪಶ್ಚಿಮ ಪಾಕಿಸ್ತಾನ (ಈಗಿನ ಪಾಕಿಸ್ತಾನ) ಬಾಂಗ್ಲಾದಲ್ಲಿ ನಡೆಸುತ್ತಿದ್ದ ನೈಸರ್ಗಿಕ ಸಂಪನ್ಮೂಲದ ಲೂಟಿ ತಡೆಯಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದೇ ಈ ಅಮಾಯಕರ ‘ಮಹಾಪರಾಧ’.

1971ರ ವಿಮೋಚನೆಗೆ ಮೊದಲು ಈಗಿನ ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿತ್ತು. ಅದು ಸಹಸ್ರಾರು ಕಿಮಿ ದೂದಲ್ಲಿದ್ದರೂ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿತ್ತು. ಜನಸಂಖ್ಯೆ, ನೈಸರ್ಗಿಕ ಸಂಪತ್ತು ಹೀಗೆ ಎಲ್ಲ ದೃಷ್ಟಿಯಿಂದ ಮುಂದಿದ್ದರೂ ಅಧಿಕಾರ ಸೂತ್ರವೆಲ್ಲ ಪಶ್ಚಿಮ ಪಾಕಿಸ್ತಾನದವರ ಕೈಯಲ್ಲಿತ್ತು. ಹೀಗಾಗಿಯೇ ನಿರಂತರ ಶೋಷಣೆ, ತಾರತಮ್ಯಕ್ಕೆ ಒಳಗಾಗಿ ಕಡುಬಡತನವನ್ನೇ ಹಾಸಿ ಹೊದ್ದುಕೊಂಡಿತ್ತು.

ಆ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಪ್ರಮುಖ ಪಕ್ಷವಾಗಿದ್ದರೂ ಬಂಡಾಯ ಏಳುವಷ್ಟು, ಪಾಕ್ ಸೇನೆ ವಿರುದ್ಧ ಸಶಸ್ತ್ರ ಸಮರ ನಡೆಸುವಷ್ಟು ಸಂಘಟನಾ ಶಕ್ತಿ ಹೊಂದಿರಲಿಲ್ಲ. ಆದರೆ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ 300 ಸ್ಥಾನಗಳ ಪೈಕಿ 170ನ್ನು ಗೆದ್ದು ಬಹುಮತ ಗಳಿಸಿದರೂ ಕೂಡ ಅದಕ್ಕೆ ಅಧಿಕಾರ ನಿರಾಕರಿಸಿದಾಗ ಇಡೀ ಸನ್ನಿವೇಶ ಬದಲಾಯಿತು. ಅವಾಮಿ ಲೀಗ್ ಅಧ್ಯಕ್ಷ ಮತ್ತು ವಂಗಬಂಧು ಎಂದೇ ಜನಪ್ರಿಯರಾಗಿದ್ದ ಷೇಖ್ ಮುಜೀಬುರ್ ರೆಹ್ಮಾನ್ ಅವರು ಢಾಕಾದ ರಾಮ್ನಾ ಮೈದಾನದಲ್ಲಿ ನಡೆದ ಬೃಹತ್ ಐತಿಹಾಸಿಕ ಸಭೆಯಲ್ಲಿ ‘ಬಾಂಗ್ಲಾದೇಶ ಸ್ವತಂತ್ರವಾಗಿದೆ’ ಎಂದು ಘೋಷಿಸಿದರು.

ಇದನ್ನು ಸಹಿಸದೇ ಆಗಿನ ಅಧ್ಯಕ್ಷ ಜನರಲ್ ಯಾಹ್ಯಾಖಾನ್ ಮತ್ತು ಅವರ ಬಂಟ ಲೆ.ಜ. ಟಿಕ್ಕಾಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆ 8 ತಿಂಗಳು ನಡೆಸಿದ ಭೀಕರ ನರಮೇಧಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಬಲಿಯಾದರು. 5 ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು.

ಇದರಿಂದ ಕೆರಳಿದ ಬಾಂಗ್ಲಾ ಜನ ಭಾರತದ ಸಹಕಾರದೊಂದಿಗೆ ಪಾಕ್ ಸೇನೆ ವಿರುದ್ಧ ಸಶಸ್ತ್ರ ಸಮರ ನಡೆಸಿದರು. ಪಾಕ್ ಕಪಿಮುಷ್ಟಿಯಿಂದ ತಮ್ಮ ದೇಶದ ವಿಮೋಚನೆಯಲ್ಲಿ ಸಫಲರಾದರು.1972ರಲ್ಲಿ ಸ್ವತಂತ್ರ ಬಾಂಗ್ಲಾದೇಶ ಉದಯಿಸುವುದರೊಂದಿಗೆ ಧರ್ಮದ ಆಧಾರದ ಮೇಲೆ ಬ್ರಿಟಿಷರು ಮಾಡಿದ್ದ ದ್ವಿರಾಷ್ಟ್ರ ಸಿದ್ಧಾಂತ ನುಚ್ಚುನೂರಾಯಿತು.

ಆದರೆ ಮುಂದೆ ಮೂರೇ ವರ್ಷದಲ್ಲಿ ಏನು ನಡೆಯಬಾರದಿತ್ತೋ ಅದು ನಡೆಯಿತು. ಪಾಕಿಸ್ತಾನದ ಮಾದರಿಯಲ್ಲಿ ಬಾಂಗ್ಲಾದೇಶದಲ್ಲೂ ಸೇನಾ ಕ್ರಾಂತಿಯಾಗಿ ಮುಜಿಬುರ್ ಮತ್ತವರ ಕುಟುಂಬದ ಬಹುತೇಕ ಸದಸ್ಯರನ್ನು ಕಗ್ಗೊಲೆ ಮಾಡಲಾಯಿತು. ಅದರ ನಂತರ ಬಂದ ಎರಡು ಸೇನಾ ಸರ್ಕಾರಗಳು ಇಡೀ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಭಾರಿ ಮಾರ್ಪಾಡು ಮಾಡಿದವು. ಆದರೆ ಆಡಳಿತ ಮತ್ತು ರಾಜಕಾರಣವನ್ನು ಇಸ್ಲಾಮೀಕರಿಸುವ ಅವುಗಳ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. 1971ರ ಸ್ವಾತಂತ್ರ್ಯದ ಹಿಂದಿನ ಸ್ಫೂರ್ತಿಯನ್ನು ದಮನ ಮಾಡಲು ಸಾಧ್ಯವಾಗಲಿಲ್ಲ.

ಉಗ್ರವಾದಕ್ಕೆ ಕಡಿವಾಣ
ಅಂತರ್ರಾಷ್ಟ್ರೀಯ ಒತ್ತಡಕ್ಕೆ ಮಣಿದು ಸೇನಾ ನಿಯಂತ್ರಿತ ಹಂಗಾಮಿ ಸರ್ಕಾರ 2008ರಲ್ಲಿ ಸಂಸತ್ತಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಾಯಿತು. ಆಗ ಅವಾಮಿ ಲೀಗ್ 300ರಲ್ಲಿ 235 ಸ್ಥಾನ ಗೆದ್ದು ಅಭೂತಪೂರ್ವ ಜಯದೊಂದಿಗೆ ಅಧಿಕಾರಕ್ಕೆ ಬಂತು. ಅಲ್ಲಿಂದ ಹೊಸ ಸರ್ಕಾರ ಮಾಡಿದ ಮೊದಲ ಕೆಲಸ ಎಂದರೆ ಇಸ್ಲಾಮಿಕ್ ಉಗ್ರವಾದಿಗಳನ್ನು ಸದೆ ಬಡಿದದ್ದು, ತೀವ್ರವಾದಿ ಜಮಾತ್‌ನ ಸ್ಥಾಪಕ ಮೌಲಾನಾ ಮೌದಿದಿಯ ವೈಭವಕ್ಕೆ ತಡೆಯೊಡ್ಡಿದ್ದು, ಸೇನಾಡಳಿತದ ಕಾಲದಲ್ಲಿ ಬಾಂಗ್ಲಾದೇಶದಲ್ಲಿ ಆಶ್ರಯ ಕಂಡುಕೊಂಡಿದ್ದ ಭಾರತದ ಈಶಾನ್ಯ ರಾಜ್ಯಗಳ ಬಂಡುಕೋರ ಸಂಘಟನೆಗಳನ್ನು ವಾಪಸ್ ಅಟ್ಟಿದ್ದು, 1971ರ ಯುದ್ಧಾಪರಾಧಗಳ ವಿಚಾರಣೆಗೆ ಚಾಲನೆ ಕೊಟ್ಟಿದ್ದು. ಇದರಿಂದಾಗಿ ಸ್ವಾತಂತ್ರ್ಯ ಸಮರ ಕಾಲದಲ್ಲಿ ಪಾಕ್ ಸೇನೆ ಜತೆ ಸೇರಿ ನರಹತ್ಯೆ, ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಜಮಾತ್ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಅನೇಕ ಮುಖಂಡರ ಹಾರಾಟಕ್ಕೆ ಕಡಿವಾಣ ಬಿತ್ತು.

ಪ್ರಧಾನಿ ಷೇಖ್ ಹಸೀನಾ ವಾಜಿದ್ (ದಿ. ಮುಜೀಬುರ್ ರೆಹ್ಮಾನರ ಪುತ್ರಿ) ಅವರಂತೂ 1972ರ ಸಂವಿಧಾನವನ್ನು ಅಕ್ಷರಶಃ ಜಾರಿಗೆ ತರಲು ಶತಪ್ರಯತ್ನ ಮಾಡುತ್ತಿದ್ದಾರೆ. ಇದು ಸುಲಭವಲ್ಲ ಎಂದು ಅವರಿಗೂ ಗೊತ್ತು. ಏಕೆಂದರೆ ಅವರ ಹತ್ಯೆಗೆ ಆಗಾಗ ಪ್ರಯತ್ನ ನಡೆಯುತ್ತಿದೆ. ಆದರೂ ಎದೆಗುಂದಿಲ್ಲ. 

ಆದರೆ, ಹಸೀನಾ ಜನತಂತ್ರ ಮತ್ತು ಜಾತ್ಯತೀತತೆ ಮರುಸ್ಥಾಪನೆಗೆ ನಡೆಸುತ್ತಿರುವ ಯತ್ನದಲ್ಲಿ ಇತ್ತೀಚೆಗೆ ಅಮೆರಿಕ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿರುವುದು ಕಿರಿಕಿರಿಗೆ ಕಾರಣವಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ, ಕಿರು ಹಣಕಾಸು ಸಾಲ ಯೋಜನೆಯ ರೂವಾರಿ ಮೊಹಮ್ಮದ್ ಯುನೂಸ್ ಅವರನ್ನು ಬಾಂಗಾದೇಶ ಗ್ರಾಮೀಣ ಬ್ಯಾಂಕ್ ಅಧ್ಯಕ್ಷರಾಗಿ ಮರು ನೇಮಕ ಮಾಡುವಂತೆ ಅಮೆರಿಕ ಒತ್ತಡ ಹೇರಿದರೂ ಜಪ್ಪೆಂದಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಬಾಂಗ್ಲಾದೇಶ ಭೇಟಿಯನ್ನು ರದ್ದು ಮಾಡಿದ್ದಾರೆ. ಈ ತಿಂಗಳ ಕೊನೆಗೆ ವಿಶ್ವ ಇಸ್ಲಾಮಿಕ್ ವೇದಿಕೆ ಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್‌ಗೆ ಬಂದಿಳಿಯುವ ಹಸೀನಾ ಅವರನ್ನು ಅಧ್ಯಕ್ಷ ಒಬಾಮಾ ಭೇಟಿ ಮಾಡುತ್ತಿಲ್ಲ. ಇದ್ಯಾವುದರಿಂದಲೂ ಆಕೆ ವಿಚಲಿತರಾಗಿಲ್ಲ.

ಅಷ್ಟಕ್ಕೂ ಯುನೂಸ್ ಏನೂ ಕಮ್ಮಿಯಿಲ್ಲ. ಸರ್ಕಾರಕ್ಕೂ ಕೂಡ ತಿಳಿಸದೆ, ಗಪ್‌ಚುಪ್ಪಾಗಿ ನಾರ್ವೆಯಿಂದ ತಮ್ಮ ಬ್ಯಾಂಕ್‌ಗೆ 480 ಲಕ್ಷ ನಾರ್ವೇಜಿಯನ್ ಪೌಂಡ್ ನೆರವು ಪಡೆದುಕೊಂಡಿದ್ದಾರೆ. ಇದು ಕಳೆದ ನವೆಂಬರ್‌ನಲ್ಲಿ ಬೆಳಕಿಗೆ ಬಂದ ನಂತರ ಸರ್ಕಾರ ಮತ್ತು ಮಾಧ್ಯಮಗಳು ಅವರ ವಿರುದ್ಧ ಗರಂ ಆಗಿವೆ. ಹಸೀನಾ ಅವರಂತೂ ಯುನೂಸ್‌ರನ್ನು ‘ರಕ್ತ ಹೀರುವ ಜಿಗಣೆ’ ಎಂದು ತರಾಟೆಗೆ ತೆಗೆದುಕೊಂಡು ನಿಖೆಗೆ ಆದೇಶಿಸಿದ್ದಾರೆ.

ನಿಯಮಾವಳಿಯಂತೆ ತನ್ನ ಅನುಮತಿ ಪಡೆಯದೇ ಇರುವುದಕ್ಕಾಗಿ ಯುನೂಸ್ ಅವರು ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಸ್ಥಾನ ತೆರವು ಮಾಡಬೇಕು ಎಂದು ಬಾಂಗ್ಲಾದೇಶ ಕೇಂದ್ರೀಯ ಬ್ಯಾಂಕ್ ಆದೇಶ ಹೊರಡಿಸಿ ಜಾರಿಗೆ ತಂದಿದೆ. 12 ವರ್ಷ ಸುಮ್ಮನಿದ್ದು ಈಗ ತನ್ನ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ವಾದಿಸುತ್ತಿರುವ ಯುನೂಸ್ ಕೋರ್ಟ್ ಮೆಟ್ಟಲೇರಿದ್ದಾರೆ. ವಿಷಯ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಆದರೆ ಅದರ ತೀರ್ಪಿಗೆ ಕಾಯದೇ ಯುನೂಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಮರು ನೇಮಕ ಮಾಡುವಂತೆ ಹಸೀನಾ ಸರ್ಕಾರದ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಕಾನೂನಿನ ಆಡಳಿತವೇ ಶ್ರೇಷ್ಠ ಎಂದು ವಿಶ್ವದೆಲ್ಲೆಡೆ ಬೊಂಬಡಾ ಬಜಾಯಿಸುವ ಅಮೆರಿಕ, ಬಾಂಗ್ಲಾದೇಶದ ನ್ಯಾಯಾಂಗ ಪದ್ಧತಿಗೆ ಕೊಡುತ್ತಿರುವ ಗೌರವ ಇದು. ಅದರ ಎಡಬಿಡಂಗಿ ನೀತಿಗೆ ಬೇರೆ ಕನ್ನಡಿ ಬೇಕೆ?

ರಾಜಕೀಯ ಕಾರಣಕ್ಕಾಗಿ ಗ್ರಾಮೀಣ ಬ್ಯಾಂಕನ್ನು ಕೈವಶ ಮಾಡಿಕೊಳ್ಳಲು ಸರ್ಕಾರ ಈ ರೀತಿ ಇಲ್ಲ ಸಲ್ಲದ ಕುತಂತ್ರ ನಡೆಸುತ್ತಿದೆ ಎನ್ನುವುದು ಯುನೂಸ್ ಆರೋಪ. ಆದರೆ ತಾನು ಹೈಕೋರ್ಟ್ ಆದೇಶವನ್ನು ಪಾಲಿಸುತ್ತಿದ್ದೇನೆ ಎನ್ನುವುದು ಸರ್ಕಾರದ ಸಮರ್ಥನೆ. ಒಂದಂತೂ ನಿಜ. 2007ರಲ್ಲಿ ನೊಬೆಲ್ ಪ್ರಶಸ್ತಿ ಬಂದ ನಂತರ ಯುನೂಸ್ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲು ಯತ್ನಿಸಿದ್ದರು. ರಾಜಕೀಯ ಭ್ರಷ್ಟಾಚಾರ ತೊಡೆದು ಹಾಕುವುದು ತನ್ನ ಗುರಿ ಎಂದು ಹೇಳಿಕೊಂಡಿದ್ದರು. ಅಂದಿನಿಂದಲೂ ಹಸೀನಾ ಮತ್ತವರ ಅವಾಮಿ ಪಕ್ಷ ಯುನೂಸ್ ವಿರುದ್ಧ ಕತ್ತಿ ಮಸೆಯುತ್ತಿವೆ. ‘ಅವರು ಅಧಿಕಾರ ಕಳೆದುಕೊಂಡ ಸೇನೆ ಮತ್ತು ಅಮೆರಿಕದ ಮುಖವಾಡ’ ಎಂದು ಆರೋಪಿಸುತ್ತಿವೆ. ಯುನೂಸ್‌ಗೆ ಅಮೆರಿಕದ ಬೆಂಬಲ ನೋಡಿದರೆ ಹಸೀನಾ ಆರೋಪ ಉತ್ಪ್ರೇಕ್ಷೆ ಎಂದು ಅನಿಸುತ್ತಿಲ್ಲ.

ಪಾಶ್ಚಾತ್ಯ ಬುದ್ಧಿಜೀವಿಗಳು ಮತ್ತು ಒಬಾಮಾ ಆಡಳಿತದ ಅನೇಕ ಹಿರಿ ತಲೆಗಳ ಪ್ರಕಾರ ಹಸೀನಾ- ಯುನೂಸ್ ಸಂಘರ್ಷಕ್ಕೆ ವೈಯಕ್ತಿಕ ಈರ್ಷೆ ಕಾರಣ. ಆದರೆ ಅದು ನಿಜವಲ್ಲ. ಏಕೆಂದರೆ ‘ಯುನೂಸ್ ಕಡೆಯಿಂದ ನಾನೇನೂ ಸಾಲ ತೆಗೆದುಕೊಂಡಿಲ್ಲ. ನನಗ್ಯಾಕೆ ಅವರ ಬಗ್ಗೆ ದ್ವೇಷ’ ಎಂದು ಹಸೀನಾ ನನ್ನ ಬಳಿ ಒಮ್ಮೆ ಹೇಳಿದ್ದರು. ತನ್ನ ಸರ್ಕಾರವನ್ನು ಮಣಿಸಲು ಅಮೆರಿಕ ಮತ್ತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯುನೂಸ್ ಅವರನ್ನು ದಾಳವಾಗಿ ಬಳಸುತ್ತಿವೆ ಎಂಬ ಅನುಮಾನ ಅವರಿಗಿದೆ. ಅಮೆರಿಕದ ನಡವಳಿಕೆ ಕೂಡ ಈ ಅನುಮಾನಕ್ಕೆ ಪುಷ್ಟಿ ಕೊಡುವಂತಿದೆ.

ಯುನೂಸ್‌ಗೆ ದೇಶದೊಳಗೆ ಬೆಂಬಲಿಗರೂ ಇರಬಹುದು, ಅಮೆರಿಕದಂಥ ಶಕ್ತಿಗಳ ಕುಮ್ಮಕ್ಕೂ ಸಿಗಬಹುದು. ಆದರೆ ಅದನ್ನೇ ನಂಬಿಕೊಂಡು ಅವರು ಕ್ಲಿಂಟನ್, ಒಬಾಮಾರಂಥವರ ಜಾಲದಲ್ಲಿ ಸಿಕ್ಕುಬಿದ್ದರೆ ವಿಲಿವಿಲಿ ಒದ್ದಾಡಬೇಕಾಗುತ್ತದೆ. ಅದರಿಂದ ಅವರಿಗೇ ಜಾಸ್ತಿ ಹಾನಿ. ಯಾಕೆಂದರೆ ಬಾಂಗ್ಲಾದೇಶ ಮುಸ್ಲಿಂ ಪ್ರಾಬಲ್ಯದ ದೇಶ ಹೇಗೋ ಬಂಗಾಲಿ ಭಾಷಿಕರೇ ಹೆಚ್ಚಿರುವ ದೇಶವೂ ಹೌದು. ಆ ಜನ ಬಡವರಾಗಿರಬಹುದು; ಆದರೆ ಸ್ವಾಭಿಮಾನಿಗಳು. ವಸಾಹತುಶಾಹಿ ವಿರುದ್ಧದ ಕೋಪ ಅವರಲ್ಲಿ ಈಗಲೂ ಕಮ್ಮಿಯಾಗಿಲ್ಲ.

ಒಬ್ಬರು (ಹಸೀನಾ) ಸ್ವಾತಂತ್ರ್ಯದ ಸಂಕೇತ. ಇನ್ನೊಬ್ಬರು (ಯುನೂಸ್) ಸಾಮಾಜಿಕ- ಆರ್ಥಿಕ ನ್ಯಾಯದ ಪ್ರತಿಪಾದಕ. ಇಬ್ಬರೂ ಸೇರಿದರೆ ಬಡ ದೇಶಕ್ಕೆ ಶಕ್ತಿ ತುಂಬಬಲ್ಲಂಥವರು. ಹೀಗಿರುವಾಗ ಈ ಎರಡು ದಿಗ್ಗಜರ ಮಧ್ಯೆ ಜಗಳಕ್ಕೆ ಕುಮ್ಮಕ್ಕು ಕೊಡುವುದು ಹುಚ್ಚುತನದ್ದು. ತಾನು ‘ಭಯೋತ್ಪಾದನೆ ವಿರುದ್ಧ ಸಮರ’ದ ಮುಂಚೂಣಿಯಲ್ಲಿದ್ದೇನೆ ಎಂದು ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುವ ಅಮೆರಿಕಕ್ಕಂತೂ ಖಂಡಿತವಾಗಿಯೂ ಶೋಭೆ ತರುವಂಥದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT