ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಮೊರೆ

ಭಯೋತ್ಪಾದನೆಗೆ ‘ರಾ’ ಕುಮ್ಮಕ್ಕು: ಪಾಕ್‌ ಆರೋಪ
Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ):  ‘ಪಾಕಿಸ್ತಾ­ನ­­ದಲ್ಲಿ ನಡೆಯುತ್ತಿರುವ ಭಯೋತ್ಪಾ­ದನಾ ದಾಳಿಗಳ ಹಿಂದೆ ಭಾರತದ ಗುಪ್ತಚರ ಸಂಸ್ಥೆ ‘ರಾ’ ದ ಕೈವಾಡ ಇದೆ’ ಎಂದು ಆರೋಪಿಸುತ್ತಿರುವ ಪಾಕಿಸ್ತಾನ ಈ ವಿಷಯವನ್ನು ಅಮೆರಿಕದ ಗಮನಕ್ಕೆ ತರಲು ನಿರ್ಧರಿಸಿದೆ.

‘ಪಾಕ್‌ ವಿದೇಶಾಂಗ ಕಾರ್ಯದರ್ಶಿ ಐಜಾಜ್‌ ಅಹ್ಮದ್‌ ಚೌಧರಿ ಅಮೆರಿಕ ಭೇಟಿ­ಯಲ್ಲಿದ್ದು, ಈ ವೇಳೆ ಅಲ್ಲಿನ ಅಧಿ­ಕಾ­ರಿಗಳೊಂದಿಗೆ ಈ  ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ’ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

‘ರಾ’ ‍ಭಯೋತ್ಪಾದನೆಗೆ ಪ್ರಚೋ­ದನೆ ನೀಡುತ್ತಿದೆ ಎಂಬ ಆರೋಪವನ್ನು ಪಾಕ್‌ ಉನ್ನತ ಅಧಿಕಾರಿಗಳು ಮಾಡು­ತ್ತಲೇ ಬಂದಿದ್ದಾರೆ. ಆದರೆ ಭಾರತ ಇಂತಹ ಆರೋಪಗಳನ್ನು ನಿರಾಕರಿಸಿದೆ.

ಚೌಧರಿ ನೇತೃತ್ವದ ಪಾಕ್‌ ಅಧಿಕಾರಿ­ಗಳ ನಿಯೋಗ ವಾಷಿಂಗ್ಟನ್‌ನಲ್ಲಿ ಮಂಗಳ­ವಾರ ಅಮೆರಿಕದ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡು­ವಿನ ಸಂಬಂಧ ಅಲ್ಲದೆ ಶಸ್ತ್ರಾಸ್ತ್ರ ನಿಯಂ­ತ್ರಣ, ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಚೌಧರಿ ಇದೇ ವೇಳೆ ಅಮೆರಿಕದ ಉನ್ನತ ಅಧಿಕಾರಿಗಳನ್ನೂ ಭೇಟಿ ಮಾಡ­ಲಿ­ದ್ದಾರೆ. ‘ಭಾರತವು ಪಾಕ್‌ನಲ್ಲಿ ಭಯೋ­ತ್ಪಾ­ದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ವಿಷಯವನ್ನು ಒಬಾಮ ಆಡಳಿ­ತದ ಗಮನಕ್ಕೆ ತರಬೇಕು ಎಂಬ ಸೂಚನೆಯನ್ನು ಪಾಕ್‌ ಸರ್ಕಾರ ಚೌಧರಿಗೆ ನೀಡಿದೆ’ ಎಂದು ಪತ್ರಿಕೆ ತಿಳಿಸಿದೆ.

ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಇತ್ತೀಚೆಗೆ ನೀಡಿದ್ದ ಹೇಳಿಕೆ­ಯನ್ನು ಕೂಡಾ ಪಾಕ್‌ ಅಮೆರಿಕದ ಗಮ­ನಕ್ಕೆ ತರುವ ಸಾಧ್ಯತೆ­ಯಿದೆ ಎನ್ನಲಾಗಿದೆ. ‘ಭಯೋತ್ಪಾದ­ಕ­ರನ್ನು ಭಯೋ­ತ್ಪಾ­ದಕ­ರಿಂದಲೇ ಎದು­ರಿ­ಸಬೇಕು’ ಎಂದು ಪರಿಕ್ಕರ್‌ ಹೇಳಿ­ದ್ದರು. ಇದಕ್ಕೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.

‘ಭಾರತವು ಪಾಕ್‌ ನೆಲದಲ್ಲಿ ಭಯೋ­­ತ್ಪಾದನೆಗೆ ಪ್ರಚೋದನೆ ನೀಡು­ತ್ತಿ­ರು­ವುದು ಪರಿಕ್ಕರ್‌ ಹೇಳಿಕೆಯಿಂದ ಸಾಬೀತಾಗಿದೆ’ ಎಂದು ಪಾಕ್‌ ಹೇಳಿತ್ತು.  ‘ಭಯೋತ್ಪಾದನಾ ದಾಳಿಗಳಲ್ಲಿ ಭಾರತದ ಕೈವಾಡ ಇದೆ ಎಂಬ ವಿಷಯವನ್ನು ಲಭ್ಯ­ವಿರುವ ಎಲ್ಲ ಅಂತರರಾಷ್ಟ್ರೀಯ ವೇದಿ­ಕೆಗಳಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಲಿದೆ’ ಎಂದು ಪಾಕ್‌ ಪ್ರಧಾನಿಯ ಸಲಹೆಗಾರ ಸರ್ತಾಜ್‌ ಅಜೀಜ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT