ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಕೋಪ ಶಮನಕ್ಕೆ ಪಾಕಿಸ್ತಾನ ಯತ್ನ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

 ಇಸ್ಲಾಮಾಬಾದ್, (ಪಿಟಿಐ): ಹಖಾನಿ ಭಯೋತ್ಪಾದಕ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸಿ ಅಮೆರಿಕದ ಜತೆಗಿನ ಬಾಂಧವ್ಯ ಗಟ್ಟಿ ಮಾಡಿಕೊಳ್ಳಲು ಪಾಕಿಸ್ತಾನದ ಸೇನೆ ನಿರ್ಧರಿಸಿದೆ. ಆದರೆ, ತಾಲಿಬಾನ್ ಉಗ್ರರ ನೆಲೆಯಾದ ಉತ್ತರ ವಜಿರಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುವ ಬಗ್ಗೆ ಅದು ಆಸಕ್ತಿ ತೋರಿಲ್ಲ.

ರಾವಲ್ಪಿಂಡಿಯಲ್ಲಿ ಸೇನೆಯ ಮುಖ್ಯಸ್ಥ ಜ. ಅಶ್ಫಾಕ್ ಪರ್ವೇಜ್ ಕಯಾನಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಉನ್ನತ ಕಮಾಂಡರ್‌ಗಳ ಸಭೆಯಲ್ಲಿ, ಹಖಾನಿ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಂಡು ಅಮೆರಿಕದ ಆತಂಕವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದು `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ವರದಿ ಮಾಡಿದೆ.

ಹಖಾನಿ ಸಂಘಟನೆ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಲಾಗಿದ್ದರೂ, ತಾಲಿಬಾನ್ ಉಗ್ರರ ಬಗ್ಗೆ ಮೃದು ಧೋರಣೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಗುರುತು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಬಲ ಪ್ರಯೋಗವೇ ಎಲ್ಲ ಸಮಸ್ಯೆಗಳಿಗೆ ಉತ್ತರವಲ್ಲ ಎಂಬ ಕಯಾನಿ ಅವರ ಇತ್ತೀಚಿನ ಹೇಳಿಕೆಯನ್ನು ಪುನರುಚ್ಚರಿಸಿರುವ ಈ ಅಧಿಕಾರಿ, ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸುವುದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಮೆರಿಕದ ಒತ್ತಡಕ್ಕೆ ಮಣಿದು ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂಬ ಇಂಗಿತವನ್ನು ಕಯಾನಿ ಅವರು ಪಾಕಿಸ್ತಾನ ಮತ್ತು ಸೌದಿ ಅರೇಬಿಯ ಸೇನೆಯ ಜಂಟಿ ಕವಾಯತು ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.
 
`ಸೇನಾ ಕಮಾಂಡರ್‌ಗಳ ಸಭೆಗೆ ವಿಶೇಷ ಅರ್ಥ ಕಲ್ಪಿಸಬಾರದು. ಇದೊಂದು ಮಾಮೂಲಿ ಸಭೆ. ವೃತ್ತಿಪರತೆಯ ಪರಾಮರ್ಶೆಗಾಗಿ ಇಂತಹ ಸಭೆಯನ್ನು ನಡೆಸಲಾಗುತ್ತದೆ~ ಎಂದು ಐಎಸ್‌ಐ ಸಾರ್ವಜನಿಕ ಸಂಪರ್ಕ ವಿಭಾಗ ಸಮಜಾಯಿಷಿ ನೀಡಿದೆ.

ಸಂಬಂಧ ಸುಧಾರಣೆಗೆ ಕಸರತ್ತು

ವಾಷಿಂಗ್ಟನ್, (ಎಪಿ): ಪಾಕಿಸ್ತಾನ ಸರ್ಕಾರವು ಕೆಲವು ಅಲ್‌ಖೈದಾ ಭಯೋತ್ಪಾದಕರನ್ನು ಬಂಧಿಸಿದ್ದು, ಇವರ ವಿಚಾರಣೆಗೆ ಅಮೆರಿಕದ ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಬುಡಕಟ್ಟು ಪ್ರದೇಶದಲ್ಲಿ ಚಾಲಕ ರಹಿತ ಡ್ರೋನ್ ವಿಮಾನ ದಾಳಿಯನ್ನು ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಮುಂದುವರಿಸದಿರಲು ಸಹ ಅದು ನಿರ್ಧರಿಸಿದೆ.
 

ಹೆಡ್ಲಿ ವಿಚಾರಣೆ: ವಿಡಿಯೊಗೆ ಕೋರಿಕೆ

ಷಿಕಾಗೊ, (ಪಿಟಿಐ): ಮುಂಬೈ ಮೇಲಿನ ದಾಳಿಯ ಪ್ರಮುಖ ರೂವಾರಿ ಡೇವಿಡ್ ಹೆಡ್ಲಿ ವಿಚಾರಣೆಯನ್ನು ಸೆರೆ ಹಿಡಿದ ವಿಡಿಯೊ ದೃಶ್ಯಾವಳಿ ಒದಗಿಸುವಂತೆ ಕೋರಿ ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆ ಇಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಈ ಮೊದಲು, ಮಾಧ್ಯಮಗಳಿಗೆ ವಿಚಾರಣಾ ದೃಶ್ಯಗಳನ್ನು ಒಳಗೊಂಡ ವಿಡಿಯೊ ನೀಡಲು ಸಾಧ್ಯವಿಲ್ಲ ಎಂದು ಹೆಡ್ಲಿ ವಿಚಾರಣೆ ನಡೆಸುತ್ತಿರುವ ಎಫ್‌ಬಿಐ ತನಿಖಾ ಸಂಸ್ಥೆ ಸ್ಪಷ್ಟವಾಗಿ ನಿರಾಕರಿಸಿತ್ತು.

ಮುಂಬೈ ಮೇಲಿನ ದಾಳಿಗೂ ಮೊದಲು ಐಎಸ್‌ಐ, ಅಲ್‌ಖೈದಾ ಹಾಗೂ ಎಲ್‌ಇಟಿಯಿಂದ ತರಬೇತಿ ಪಡೆದಿದ್ದಾಗಿ ಹೆಡ್ಲಿ ತಿಳಿಸಿರುವುದನ್ನು ವಿಡಿಯೊ ದೃಶ್ಯ ಒಳಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT