ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಸಾವನ್ನಪ್ಪಿರುವ ಟೆಕ್ಕಿ ಪವನ್‌ಕುಮಾರ್:ಶವ ಹಸ್ತಾಂತರ ದಾಖಲೆಗೆ ಸಹಿ ಹಾಕದ ಕುಟುಂಬ

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಮೆರಿಕದಲ್ಲಿ ಸಾವನ್ನಪ್ಪಿರುವ ಸಂಸ್ಥೆಯ ಉದ್ಯೋಗಿ ಪವನ್‌ಕುಮಾರ್ ಶವವನ್ನು ದೇಶಕ್ಕೆ ತರಿಸುವ ನಿಟ್ಟಿನಲ್ಲಿ ಕೆಲ ದಾಖಲೆ ಪತ್ರಗಳಿಗೆ ಅವರ ಕುಟುಂಬ ಸದಸ್ಯರ ಸಹಿಯ ಅಗತ್ಯವಿದೆ. ಆದರೆ, ಕುಟುಂಬ ಸದಸ್ಯರು ಕೆಲ ಬೇಡಿಕೆಗಳನ್ನು ಮುಂದಿಟ್ಟು ಸಹಿ ಹಾಕಲು ನಿರಾಕರಿಸುತ್ತಿದ್ದಾರೆ~ ಎಂದು ಕಾಗ್ನಿಜಂಟ್ ಟೆಕ್ನಾಲಜಿಸ್ ಕಂಪೆನಿ ಅಧಿಕಾರಿಗಳು ಹೇಳಿದ್ದಾರೆ.

`ಪವನ್‌ಕುಮಾರ್ ಕುಟುಂಬ ಸದಸ್ಯರು ಮತ್ತು ಅವರ ಕಾನೂನು ಸಲಹೆಗಾರರು ಶುಕ್ರವಾರ ಸಂಜೆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ, ಪವನ್‌ಕುಮಾರ್ ಶವವನ್ನು ತರಿಸಲು ಕೆಲ ದಾಖಲೆಪತ್ರಗಳಿಗೆ ನಿಮ್ಮ ಸಹಿಯ ಅಗತ್ಯವಿದೆ.

ಆ ದಾಖಲೆಪತ್ರಗಳನ್ನು ಕಳುಹಿಸಿದ ನಂತರವಷ್ಟೇ ನ್ಯೂಜೆರ್ಸಿ ವೈದ್ಯಕೀಯ ಕಚೇರಿ ಅಧಿಕಾರಿಗಳು ಶವವನ್ನು ಹಸ್ತಾಂತರಿಸುತ್ತಾರೆ ಎಂದು ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಯಿತು. ಆದರೂ, ಅವರು ಸಹಿ ಮಾಡಲಿಲ್ಲ~ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶವದ ಜತೆಗೆ ಮರಣೋತ್ತರ ಪರೀಕ್ಷೆಯ ವರದಿ, ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಪವನ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದಾನೆ ಎನ್ನಲಾದ ಪತ್ರವನ್ನು ತರಿಸಿ ಕೊಡಬೇಕು. ಅಲ್ಲದೇ ಪವನ್‌ನ ಬ್ಯಾಂಕ್ ಖಾತೆಯ ವಿವರ, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಸಹ ತರಿಸಲು ವ್ಯವಸ್ಥೆ ಮಾಡಬೇಕು. ಆ ಎಲ್ಲಾ ದಾಖಲೆಗಳ ಖುದ್ದು ಪರಿಶೀಲನೆಗೆ ಅವಕಾಶ ಕಲ್ಪಿಸಬೇಕು.

ಪವನ್‌ನ ವೈಯಕ್ತಿಕ ಸಾಲಗಳನ್ನು ತೀರಿಸುವುದಾಗಿ ಲಿಖಿತ ಭರವಸೆ ನೀಡಬೇಕು. ಜತೆಗೆ ಕಾನೂನು ಸಲಹೆಗಾರರೊಂದಿಗೆ ಕುಟುಂಬದ ಇಬ್ಬರಿಗೆ ಅಮೆರಿಕಕ್ಕೆ ಹೋಗಿ ಬರಲು ಹಣಕಾಸು ನೆರವು ನೀಡಬೇಕೆಂಬ ಷರತ್ತುಗಳನ್ನು ವಿಧಿಸಿ ದಾಖಲೆಪತ್ರಗಳಿಗೆ ಸಹಿ ಮಾಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಶವ ತರಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.

ಪವನ್ ಕುಟುಂಬದವರ ಬೇಡಿಕೆಗಳ ಬಗ್ಗೆ ಅಮೆರಿಕ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಮಾಹಿತಿ ಕೋರಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಕೆಲ ಮಾಹಿತಿಗಳನ್ನು ಒದಗಿಸಲು ಸಾಧ್ಯವಿಲ್ಲವೆಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಆದರೂ, ಕುಟುಂಬದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಕಂಪೆನಿಯ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮರಣಪತ್ರ ಒದಗಿಸಲಿ: `ಅಮೆರಿಕದಲ್ಲಿರುವ ಕಂಪೆನಿಯ ಮುಖ್ಯಸ್ಥರನ್ನು ಪೊಲೀಸ್ ಠಾಣೆಗೆ ಕಳುಹಿಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವಂತೆ ಕಾಗ್ನಿಜಂಟ್ ಕಂಪೆನಿಯ ನಗರ ಶಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಪವನ್ ನಿಜಕ್ಕೂ ತಪ್ಪಿತಸ್ಥನೆ ಎಂಬುದು ದೇಶದ ಜನತೆಗೆ ತಿಳಿಯಬೇಕು. ಆದ್ದರಿಂದ ಆತನ ಮರಣ ಪತ್ರವನ್ನು ಮಾಧ್ಯಮದವರಿಗಾದರೂ ನೀಡಲಿ ಎಂದು ಆಗ್ರಹಿಸಿದ್ದೇವೆ~ ಎಂದು ಪವನ್ ಚಿಕ್ಕಪ್ಪ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ಮಾನವೀಯತೆ ದೃಷ್ಟಿಯಿಂದ ಪವನ್‌ನ ಕೆಲಸವನ್ನು ಆತನ ಅಕ್ಕ ಗುಣಶೀಲಾಗೆ ನೀಡಬೇಕು ಎಂದು ಕಂಪೆನಿಗೆ ಬೇಡಿಕೆ ಸಲ್ಲಿಸಿದ್ದೇವೆ. ಆದರೆ, ಪರಿಹಾರ ಹಣ ನೀಡಬೇಕೆಂದು ನಾವು ಒತ್ತಾಯಿಸಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT