ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೇರಿಕಕ್ಕೆ ತಿರುಗೇಟು

ದೇವಯಾನಿ ಬಂಧನಕ್ಕೆ ಭಾರತದ ಪ್ರತೀಕಾರ, ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನ್ಯೂಯಾರ್ಕ್‌­ನಲ್ಲಿಯ ತನ್ನ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿ ಅವಮಾನಕಾರಿ­ಯಾಗಿ ನಡೆಸಿಕೊಂಡಿ­ರು­ವುದನ್ನು ತೀವ್ರವಾಗಿ ಪ್ರತಿಭಟಿಸಿರುವ ಭಾರತ, ಪ್ರತೀಕಾರದ  ಕ್ರಮವಾಗಿ ಅಮೆರಿಕದ ರಾಜ­ತಾಂತ್ರಿಕರು ಹಾಗೂ ರಾಯಭಾರ ಕಚೇರಿ,  ಕಾನ್ಸುಲ್‌ ಕಚೇರಿಗಳ ಸಿಬ್ಬಂದಿಗೆ ನೀಡಲಾದ ಹಲವು ವಿನಾಯ್ತಿ ಹಾಗೂ ಸೌಲಭ್ಯಗಳನ್ನು ವಾಪಸ್‌ ಪಡೆದಿದೆ.

ಅಮೆರಿಕದ ಈ ಕ್ರಮಕ್ಕೆ ರಾಜ­ತಾಂತ್ರಿಕ ಮಾರ್ಗದಲ್ಲಿಯೇ ಭಾರತ ಕಟುವಾದ ಉತ್ತರ ನೀಡಿದೆ.

ಭಾರತದಿಂದ ಕರೆದುಕೊಂಡು ಹೋದ ಮನೆಗೆಲಸದವಳ ವೀಸಾ ನಿಯಮ ಉಲ್ಲಂಘಿಸಿರುವ ಕಾರಣ ನೀಡಿ, ಅಮೆರಿಕದ ಭದ್ರತಾ ಅಧಿಕಾರಿ­ಗಳು ಕಳೆದ ಶುಕ್ರವಾರ ದೇವಯಾನಿ ಅವರನ್ನು ಕೈಕೋಳ ತೊಡಿಸಿ ಬಂಧಿಸಿದ್ದರು.

 ರಾಜತಾಂತ್ರಿಕ ರಕ್ಷಣೆ ಇದ್ದರೂ ಅವರನ್ನು  ವಿವಸ್ತ್ರಗೊಳಿಸಿ ತಪಾಸಣೆ ನಡೆಸಿ, ಪೊಲೀಸ್‌ ಠಾಣೆಯಲ್ಲಿ ಮಾದಕ ವ್ಯಸನಿಗಳ ಜತೆ ಕೂಡಿಟ್ಟಿದ್ದರು.
ಪ್ರತೀಕಾರದ ಮೊದಲ ಹಂತವಾಗಿ ಭಾರತದಲ್ಲಿರುವ ಅಮೆರಿಕದ ರಾಜ­ತಾಂತ್ರಿಕ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರಿಗೆ ನೀಡಲಾಗಿರುವ ಗುರುತಿನ ಪತ್ರಗಳನ್ನು ತಕ್ಷಣ ವಾಪಸ್‌ ನೀಡುವಂತೆ ಸೂಚಿಸಲಾಗಿದೆ.

ಅಮೆರಿಕ ರಾಜತಾಂತ್ರಿಕ ಸಿಬ್ಬಂದಿಗೆ ನೀಡಲಾಗಿರುವ ವಿಮಾನ ನಿಲ್ದಾಣಗಳ ಪಾಸ್‌ಗಳನ್ನು  ಹಿಂತೆಗೆದು­ಕೊಳ್ಳ­ಲಾ­ಗಿದೆ. ಮದ್ಯ ಸೇರಿದಂತೆ ಇತರ ವಸ್ತು­ಗಳನ್ನು ವಿದೇಶಗಳಿಂದ ಆಮದು ಮಾಡಿ­ಕೊಳ್ಳುವುದರ ಮೇಲಿನ ವಿನಾಯ್ತಿ­­ಯನ್ನೂ ರದ್ದು ಮಾಡಲಾಗಿದೆ.

ಕಾನ್ಸುಲ್‌  ಕಚೇರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳ ಮನೆಗಳಲ್ಲಿ ನೇಮಕ ಮಾಡಿಕೊಂಡಿರುವ ಮನೆಗೆಲ­ಸದ ಸಹಾಯಕ ಸಿಬ್ಬಂದಿ ಸೇರಿದಂತೆ ಭಾರತೀಯ  ಉದ್ಯೋಗಿಗಳಿಗೆ ನೀಡುವ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳ ಎಲ್ಲ ಮಾಹಿತಿಯನ್ನೂ ನೀಡುವಂತೆ ಸೂಚಿಸಿದೆ.

ಅಮೆರಿಕದ ಶಾಲೆಗಳ ಲ್ಲಿರುವ ಭಾರತದ ಶಿಕ್ಷಕರು ಮತ್ತು ಸಿಬ್ಬಂದಿಗೆ ನೀಡು­ತ್ತಿರುವ ಸಂಬಳ, ಬ್ಯಾಂಕ್‌ ಖಾತೆ, ವೀಸಾ ಮಾಹಿತಿ ಒಳಗೊಂಡಂತೆ ಸಮಗ್ರ  ವಿವರಗಳನ್ನು ಒದಗಿಸುವಂತೆ ಸೂಚಿ­ಸಿದೆ. ಇದರ ಹೊರತಾಗಿ ನವ­ದೆಹಲಿಯ ನ್ಯಾಯ­ಮಾರ್ಗ­ದಲ್ಲಿ­ರುವ ಅಮೆರಿಕ ರಾಯಭಾರ ಕಚೇರಿ ಬಳಿಯ ಸಂಚಾರ ಬ್ಯಾರಿಕೇಡಗಳನ್ನು ತೆರವುಗೊಳಿಸುವ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಲಾಗಿದೆ.

ಈ  ನಡುವೆ  ನವದೆಹಲಿಗೆ ಭೇಟಿ ನೀಡಿದ ಅಮೆರಿಕದ ಸಂಸತ್‌ ಸದಸ್ಯ­ರನ್ನು ಒಳಗೊಂಡ ಉನ್ನತ ನಿಯೋಗದ ಭೇಟಿಗೆ  ಗಣ್ಯರು ನಿರಾಕರಿಸುವ ಮೂಲಕ ಅಮೆರಿಕದ ಅನಾಗರಿಕ ಕ್ರಮಕ್ಕೆ ಭಾರಿ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರು ಮಂಗಳವಾರ ನಿಗದಿಯಾಗಿದ್ದ ಅಮೆರಿಕ ಸಂಸದರ ನಿಯೋಗದೊಂದಿಗಿನ ಭೇಟಿ­ಯನ್ನು ರದ್ದು­ಗೊಳಿಸಿದರು.

ಇದೇ ಕಾರಣಕ್ಕಾಗಿ ಸೋಮವಾರ ಲೋಕಸಭೆಯ ಸ್ಪೀಕರ್‌ ಮೀರಾ ಕುಮಾರ್‌ ಅವರೂ ನಿಯೋಗದ ಭೇಟಿಗೆ ನಿರಾಕರಿಸಿದ್ದರು.

ಅಮೆರಿಕಕ್ಕೆ ತಿರುಗೇಟು
ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೂಡಾ ನಿಯೋಗದ ಭೇಟಿಯನ್ನು ನಿರಾಕರಿಸಿದ್ದಾರೆ.

ರಾಜತಾಂತ್ರಿಕ ಮಾರ್ಗದಲ್ಲಿಯೇ  ತಿರುಗೇಟು ನೀಡುವ ಮೂಲಕ  ದೇವಯಾನಿ ಖೋಬ್ರಾಗಡೆ ಪ್ರಕರಣ­ವನ್ನು ಭಾರತ ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಸಂದೇಶ ರವಾನಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

ತಂದೆ ಭೇಟಿ: ಈ ನಡುವೆ ದೇವಯಾನಿ ತಂದೆ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಉತ್ತಮ್‌ ಖೋಬ್ರಾಗಡೆ, ಸುಶೀಲ್‌ ಕುಮಾರ ಶಿಂಧೆ ಅವರನ್ನು ಭೇಟಿ ಮಾಡಿ ತಮ್ಮ ಮಗಳಿಗೆ  ನೆರವು ನೀಡುವಂತೆ ಕೋರಿದರು.

ಎರಡು ರಾಷ್ಟ್ರಗಳ ರಾಜಕೀಯ ಭಿನ್ನಾಭಿಪ್ರಾಯಕ್ಕೆ ತಮ್ಮ ಮಗಳು ಬಲಿಪಶುವಾಗಿದ್ದಾಳೆ. ಅವಳ ರಕ್ಷಣೆ ಹೊಣೆ ಸರ್ಕಾರದ್ದು. ಹೀಗಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತಕ್ಷಣ ಮಧ್ಯೆಪ್ರವೇಶಿಸಿ ತಮ್ಮ ಮಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರಬೇಕು ಎಂದು ಉತ್ತಮ್‌ ಖೋಬ್ರಾಗಡೆ ಅವರು ಒತ್ತಾಯಿಸಿದರು.

ದೇವಯಾನಿ ಅವರನ್ನು ನಡುರಸ್ತೆಯಲ್ಲಿಯೇ ಕೈಕೋಳ ತೋಡಿಸಿ ಕರೆ­ದೊಯ್ದ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪರಿ­ಣಾಮಕಾರಿ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಈ ಪ್ರಕರಣವನ್ನು ನಿರ್ವಹಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್ ಹೇಳಿದ್ದಾರೆ.

ಸಲಿಂಗಿ ರಾಜತಾಂತ್ರಿಕರ ಬಂಧಿಸಿ

ಅಮೆರಿಕದ ರಾಜತಾಂತ್ರಿಕರ ಜತೆಗೆ ಅವರ ಸಲಿಂಗಿ ಸಂಗಾತಿಗಳಿಗೂ ಭಾರತ ವೀಸಾ ನೀಡಿದೆ. ಸುಪ್ರೀಂ­ಕೋರ್ಟ್ ತೀರ್ಪಿನ ಪ್ರಕಾರ ಭಾರತ­ದಲ್ಲಿ ಸಲಿಂಗ ರತಿ ಶಿಕ್ಷಾರ್ಹ ಅಪರಾಧ­ವಾಗಿದೆ. ಅಮೆರಿಕದ ರಾಜತಾಂತ್ರಿಕರು ಮತ್ತು ಅವರ ಸಲಿಂಗಿ ಸಂಗಾತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿಯ ಯಶವಂತ್‌ ಸಿನ್ಹಾ  ಒತ್ತಾಯಿಸಿದ್ದಾರೆ.

ಅಮೆರಿಕದಲ್ಲಿ ಕಡಿಮೆ ಸಂಬಳ ನೀಡುವುದು ಹೇಗೆ ಅಪರಾಧವಾ­ಗುತ್ತ­ದೆಯೋ ಹಾಗೆ ಭಾರತದಲ್ಲಿ ಸಲಿಂಗ ರತಿ ಶಿಕ್ಷಾರ್ಹ ಅಪರಾಧ. ಹೀಗಾಗಿ ಸರ್ಕಾರ ಅವರನ್ನು ಯಾಕೆ ಬಂಧಿಸಿ, ಶಿಕ್ಷೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT