ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಮ್ಮನ ಕೈರುಚಿ ಇಷ್ಟ'

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸಂಜೆಯಾಗುತ್ತಿದ್ದಂತೆ ಒರಾಯನ್ ಮಾಲ್ ಜನರನ್ನು ತುಂಬಿಕೊಳ್ಳುತ್ತಿತ್ತು. ಕ್ರಿಕೆಟ್ ತಾರೆಯರು ಬರುತ್ತಾರೆಂಬ ಸುದ್ದಿ ತಿಳಿದಿದ್ದೇ, ಮಹಡಿ ಮೇಲೆಲ್ಲಾ ಆವರಿಸಿದ್ದ ಜನ ಖುಷಿಯಿಂದ ಜೋರಾಗಿ ಕೂಗುತ್ತಿದ್ದರು.

ರಾಜಸ್ತಾನ್ ರಾಯಲ್ಸ್ ಮಾಲಕಿ ಶಿಲ್ಪಾ ಶೆಟ್ಟಿ ಅವರು `ಪ್ರೊವೋಗ್' ಬ್ರಾಂಡ್ ಜೊತೆಗೂಡಿ ವಿನ್ಯಾಸಗೊಳಿಸಿ ಹೊರತಂದಿರುವ ವಿನೂತನ ಕ್ರೀಡಾ ಉಡುಗೆಗಳ ಸಂಗ್ರಹ `ಫ್ಯಾನ್‌ವೇರ್ ಕಲೆಕ್ಷನ್' ಬಿಡುಗಡೆ ಮಾಡಲೆಂದು ಅಲ್ಲಿಗೆ ಆಗಮಿಸಿದ್ದರು ರಾಜಸ್ತಾನ್ ರಾಯಲ್ಸ್ ತಂಡದ ಶ್ರೀಶಾಂತ್, ಸ್ಟುವರ್ಟ್ ಬಿನ್ನಿ ಮತ್ತು ಶೇನ್ ವಾಟ್ಸನ್.

`ಪ್ರೊವೋಗ್‌ನಲ್ಲಿ ತುಂಬಾ ಒಳ್ಳೆ ಸಂಗ್ರಹವಿದೆ. ಮಕ್ಕಳು, ಹುಡುಗರಿಗೆ ಉತ್ತಮ ಆಯ್ಕೆ. ಅದರಲ್ಲೂ ರಾಯಲ್ ಬ್ಲೂ ಬಣ್ಣದ ಬಟ್ಟೆಗಳು ಕಣ್ಸೆಳೆಯುತ್ತಿವೆ' ಎಂದು ಪ್ರೊವೋಗ್‌ನ ವಿನೂತನ ಸಂಗ್ರಹದ ಬಗ್ಗೆ ಔಪಚಾರಿಕವಾಗಿ ಮಾತನಾಡಿದ ಶ್ರೀಶಾಂತ್, ನಂತರ `ಮೆಟ್ರೊ'ದೊಂದಿಗೆ ತಮ್ಮ ಬಗ್ಗೆ ಖಾಸಗಿ ಬದುಕಿನ ಬಗ್ಗೆ ಮಾತನಾಡಿದರು...

ನಿಮ್ಮ ಫಿಟ್‌ನೆಸ್ ಹೇಗೆ ಕಾಪಾಡಿಕೊಳ್ಳುತ್ತೀರಿ?
ಕ್ರೀಡೆಯಲ್ಲಿದ್ದ ಮೇಲೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ವ್ಯಾಯಾಮದ ಜೊತೆ ಗಂಭೀರವಾಗಿ ಡಯಟ್ ಪಾಲಿಸಲೇಬೇಕಾಗುತ್ತದೆ. ಸೀಸನ್‌ಗೆ ತಕ್ಕಂತೆ ಡಯಟ್‌ನಲ್ಲಿ ತೊಡಗಿಕೊಳ್ಳುತ್ತೇನೆ. ಬೇಕಾಬಿಟ್ಟಿ ತಿನ್ನದೆ, ತುಂಬಾ ಎಚ್ಚರಿಕೆಯಿಂದ ಆಹಾರ ಸೇವಿಸುತ್ತೇನೆ. ಆಗ ದೇಹ ಫಿಟ್ ಆಗಿರುತ್ತದೆ. ಕೆಲವೊಮ್ಮೆ ದಿನಕ್ಕೆ 8ರಿಂದ 9 ಗಂಟೆ ವ್ಯಾಯಾಮ ಮಾಡಿದ್ದೂ ಇದೆ.

ಒತ್ತಡದಿಂದ ಹೊರಬರಲು ಆಯ್ದುಕೊಂಡದ್ದು?
ಸರ್ಜರಿ ಆದ ಮೇಲೆ ಹೆಚ್ಚು ವ್ಯಾಯಾಮ ಮಾಡಬಾರದಲ್ವಾ? ಅದಕ್ಕೆ ಯೋಗದಲ್ಲಿ ತೊಡಗಿಕೊಂಡಿದ್ದೇನೆ. ಯೋಗ ಮನಸ್ಸಿಗೆ ನೆಮ್ಮದಿ ನೀಡುವುದರಿಂದ ಇದೇ ಉತ್ತಮ ಮಾರ್ಗ ಎಂಬುದು ನನ್ನ ಅಭಿಪ್ರಾಯ.

ನಿಮ್ಮಿಷ್ಟದ ತಿಂಡಿ ತಿನಿಸು?
ಮನೆಯೂಟ ನನಗಿಷ್ಟ. ಆದರೆ ನಾನು ಮನೆಯಲ್ಲಿ ಇರುವುದೇ ಕಡಿಮೆ. ಬೇರೆ ಬೇರೆ ಊರಿನಲ್ಲಿ ಇರುವುದೇ ಹೆಚ್ಚು. ಅಪರೂಪಕ್ಕೊಮ್ಮೆ ಮನೆಯಲ್ಲಿದ್ದಾಗ ಅಮ್ಮ ರುಚಿ ರುಚಿಯಾದ ಅಡುಗೆ ಮಾಡಿಕೊಡುತ್ತಾರೆ. ಅಮ್ಮನ ಕೈ ಅಡುಗೆಯೇ ನನಗೆ ತುಂಬಾ ಇಷ್ಟ. ಅಮ್ಮ ಮಾಡಿದ ಎಲ್ಲಾ ಊಟವನ್ನೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇನೆ.

ಬೆಂಗಳೂರೆಂದರೆ...
ಬೆಂಗಳೂರಿಗೂ ನನಗೂ 16 ವರ್ಷಗಳ ನಂಟಿದೆ. ಬೆಂಗಳೂರು ಕೂಲ್ ಸಿಟಿ. ಇಲ್ಲಿನ ಜನರೂ ನನಗೆ ತುಂಬಾ ಇಷ್ಟವಾಗುತ್ತಾರೆ. ನಾನು ಇಲ್ಲೇ ಹೆಚ್ಚು ಕಾಲ ಕಳೆಯುತ್ತೇನೆ. ನನಗೆ ಬೆಂಗಳೂರು ಒಂದು ರೀತಿ ತವರು ಮನೆಯಂತೆ ಅನಿಸುತ್ತದೆ.

ಇಷ್ಟದ ಸ್ಥಳ?
ಕೊಚ್ಚಿ, ಬೆಂಗಳೂರು, ಜೈಪುರ...

ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ ಅನುಭವ ಹೇಗಿದೆ?
ಸದ್ಯಕ್ಕೆ ಮಲಯಾಳಂ ಚಿತ್ರದಲ್ಲಿ ಮಝಾವ್ಲ್ಲಿಲಿನಿಯತ್ತಂ ವಾರೆ (Mazhavilliniattam Vare) ನಟಿಸುತ್ತಿದ್ದೇನೆ. ಜೂನ್‌ನಿಂದ ಇದರ ಚಿತ್ರೀಕರಣ ಶುರುವಾಗಲಿದೆ. ಅಭಿನಯ ಒಂದು ರೀತಿ ಭಿನ್ನ ಅನುಭವ ನೀಡುತ್ತಿದೆ. ಕ್ರಿಕೆಟ್‌ನಿಂದ ಜನರಿಗೆ ಪರಿಚಿತನಾಗಿದ್ದೇನೆ. ಇದೀಗ ಸಿನಿಮಾದಿಂದ ಜನರಿಗೆ ಇನ್ನಷ್ಟು ಹತ್ತಿರವಾಗುತ್ತೇನೆ ಎಂದು ಭಾವಿಸಿದ್ದೇನೆ. ಕ್ರಿಕೆಟ್ ಹೊರತಾಗಿಯೂ ಜನರಿಗೆ ಇನ್ನೂ ಏನನ್ನಾದರೂ ನೀಡಬೇಕೆಂದು ಹೊರಟಿದ್ದೇನೆ. ಸಿನಿಮಾ ಮೂಲಕ ಜನರಿಗೆ ಸಂದೇಶವನ್ನೂ ನೀಡುತ್ತಿರುವುದು ಖುಷಿ ತಂದಿದೆ.

ಬಾಲಿವುಡ್‌ನಿಂದ ಅವಕಾಶ ಬಂದಿದೆಯೇ?
ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಭವಿಷ್ಯ ಏನಾಗುತ್ತದೋ ಯಾರಿಗೆ ಗೊತ್ತು? ಆದರೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು ಎಂಬುದಂತೂ ಸತ್ಯ.

ನೃತ್ಯದ ಗೀಳು ಹುಟ್ಟಿದ್ದು ಹೇಗೆ?
ನೃತ್ಯವೆಂದರೆ ನನಗೆ ಚಿಕ್ಕಂದಿನಿಂದಲೂ ಹುಚ್ಚು. ನನ್ನದು ಕಲಾವಿದರ ಕುಟುಂಬವಾದ್ದರಿಂದ ರಕ್ತದಲ್ಲೇ ನೃತ್ಯದ ನಂಟೂ ಬೆಳೆದುಬಂದಿದೆ. ಆಗಾಗ್ಗೆ ಹಾಡುವುದನ್ನೂ ರೂಢಿಸಿಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT