ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನನ್ನು ಅರ್ಥ ಮಾಡಿಕೊಳ್ಳಿ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರಪಂಚದ ಇತರ ಯಾವುದೇ ದೇಶದ ಮಹಿಳೆಗಿಂತ ಭಾರತೀಯ ಮಹಿಳೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾಳೆ ಎಂಬ ಆತಂಕಕಾರಿ ಅಂಶ ಮತ್ತೊಮ್ಮೆ ಹೊರಬಿದ್ದಿದೆ. ಬೇರೆ ದೇಶಗಳಲ್ಲಿ ಮಹಿಳೆಯರು ದಿನದ ಕೆಲವು ಗಂಟೆಗಳಾದರೂ ತಮಗಾಗಿ ಮೀಸಲಿಟ್ಟುಕೊಳ್ಳುತ್ತಾರೆ ಅಂತಹ ಭಾಗ್ಯ ನಮ್ಮ ಭಾರತೀಯ ಮಹಿಳೆಗಿಲ್ಲ ಎಂಬುದೇ ನೋವಿನ ಸಂಗತಿ.

ಒತ್ತಡದ ಸ್ಥಿತಿಗೆ ಒಳಗಾಗುವ ಮೊದಲ ಮಹಿಳೆ `ಅಮ್ಮ~. ಸದಾ ತನ್ನ ಮಕ್ಕಳ ಏಳಿಗೆಗಾಗಿ, ಕುಟುಂಬದ ಹಿತಕ್ಕಾಗಿ ತನ್ನೆಲ್ಲಾ ಸಮಯವನ್ನು ಮೀಸಲಿಡುವ ಅವಳು ಅನೇಕ ಸಮಸ್ಯೆಗಳ ಸುಳಿಯಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಾಳೆ. ಅವಳ ಈ ಸ್ಥಿತಿಗೆ ಮುಖ್ಯವಾದ ಕಾರಣಗಳು ನಮ್ಮ ಆಹಾರ ಪದ್ಧತಿ, ಕುಟುಂಬದವರ ಅಸಹಕಾರ, ಭಾವನೆಗೆ ಸ್ಪಂದಿಸದ ಮನಸುಗಳಿರಬಹುದು. ಇಂತಹ ಸಂದರ್ಭದಲ್ಲಿ ಅವಳ ಆರೋಗ್ಯದಲ್ಲಿ ಏರು-ಪೇರು ಕಾಣಿಸಿಕೊಳ್ಳುವುದರೊಂದಿಗೆ ಮಾನಸಿಕವಾಗಿಯೂ ಕುಗ್ಗುತ್ತಾಳೆ.

ನಮ್ಮ ವೈವಿಧ್ಯಮಯ ಆಹಾರ ಪದ್ಧತಿಯಿಂದಾಗಿಯೇ ಪ್ರತಿ ದಿನ ಗೊಂದಲಕ್ಕೆ ಒಳಗಾಗುತ್ತಾಳೆ. ಒಬ್ಬರಿಗೆ ಇಷ್ಟವಾಗಿದ್ದು ಇನ್ನೊಬ್ಬರಿಗೆ ಇಷ್ಟವಾಗದೇ ಇದ್ದಾಗ, ಮಾಡಿದ ಆಹಾರ ಪದಾರ್ಥ ಖರ್ಚಾಗದೇ ಉಳಿದು ಹೋದಾಗ, ಎರಡು, ಮೂರು ಬಗೆಯ ಅಡುಗೆ ಮಾಡುವಾಗ ಗಲಿಬಿಲಿಗೊಳ್ಳುತ್ತಾಳೆ. ಖರ್ಚು-ವೆಚ್ಚ ಹೆಚ್ಚಾಯಿತೆಂದು ಮನೆಯ ಹಿರಿಯರಿಂದ ಬೈಸಿಕೊಳ್ಳುತ್ತಾಳೆ. ಆದರೆ ವಿದೇಶಗಳಲ್ಲಿ ಬ್ರೆಡ್, ಜಾಮ್, ಜ್ಯೂಸ್, ಹಣ್ಣುಗಳಿಂದಲೇ ಉಪಹಾರ ಮುಗಿದುಹೋಗುವುದರಿಂದ ಅವರಿಗೆ ಈ ಸಮಸ್ಯೆ ಇಲ್ಲ.

ಇನ್ನು ಕುಟುಂಬದ ವಿಷಯಕ್ಕೆ ಬಂದರೆ ಮನೆಯಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳಿದ್ದರೆ ಅವಳಿಗೆ ಒತ್ತಡ ಇನ್ನೂ ಹೆಚ್ಚು ಅವರನ್ನು ಸರಿಯಾದ ಸಮಯಕ್ಕೆ ತಯಾರು ಮಾಡುವ, ಶುಚಿತ್ವ ಕಾಪಾಡುವ, ವಿದ್ಯಾಭ್ಯಾಸದಲ್ಲಿ ಸಹಕರಿಸುವ ಮತ್ತು ಉತ್ತಮ `ಮಾರ್ಗದರ್ಶನ~ ನೀಡುವ ಗುರುತರವಾದ ಹೊಣೆ ಅವಳ ಹೆಗಲ ಮೇಲಿರುತ್ತದೆ. ಇವೆಲ್ಲವನ್ನು ಸರಿದೂಗಿಸುವ ಧಾವಂತದಲ್ಲಿ ಅವಳಿಗೆ ಸಹಕರಿಸುವವರ ಸಂಖ್ಯೆ ಬಹುಶಃ ವಿರಳ.

“ಪ್ರೀತಿಯ ಅಮ್ಮ”ನ ಒತ್ತಡ ಕಡಿಮೆ ಮಾಡಲು ಮಕ್ಕಳು ಹೀಗೆ ಮಾಡಬಹುದು. ಅಮ್ಮಂದಿರು ಮಕ್ಕಳಿಗೆ ಈ ವಿಷಯ ಕುರಿತು ಮನಗಾಣಿಸಬೇಕು. ಮಕ್ಕಳಿಗೆ ಇದನ್ನು ಓದಲು ಅಮ್ಮಂದಿರು ಹೇಳಬಹುದು. 

* ಬೆಳಿಗ್ಗೆ ಅಮ್ಮನೇ ಬಂದು ನಿಮ್ಮನ್ನು ಏಳಿಸಲಿ ಎಂದು ಕಾಯಬೇಡಿ. ಅಲರಾಂ ಇಟ್ಟುಕೊಂಡು ನೀವೇ ಸ್ವತಃ ಎದ್ದು ತಯಾರಾಗುವುದನ್ನು ಕಲಿಯಿರಿ. ಮುಂದಿನ ದಿನಗಳಲ್ಲಿ ಈ ಹವ್ಯಾಸ ನಿಮಗೆ ಉಪಯೋಗವಾಗಲಿದೆ.

* ಬೆಳಿಗ್ಗೆ ಅಮ್ಮ ತಯಾರಿಸಿದ ಊಟ-ಉಪಾಹಾರವನ್ನು ನಿಮ್ಮ ಊಟದ ಡಬ್ಬಿಗಳಲ್ಲಿ ನಿಮಗೆಷ್ಟುಬೇಕೋ ಅಷ್ಟನ್ನು ನೀವೇ ತುಂಬಿಸಿಕೊಳ್ಳಿ (ಯಾವುದೇ ಕಾರಣಕ್ಕೂ ಆಹಾರ ಪದಾರ್ಥವನ್ನು ಚೆಲ್ಲಬೇಡಿ. ಎಷ್ಟೋ ಮಕ್ಕಳು ಹಸಿವಿನಿಂದ ನರಳುತ್ತಿರುವುದನ್ನು ಮರೆಯಬೇಡಿ).

* ನೀರಿನ ಬಾಟಲ್ ತೊಳೆದು ನೀವೇ ನೀರು ತುಂಬಿಸಿಕೊಂಡು ಬ್ಯಾಗ್‌ನಲ್ಲಿ ಹಾಕಿಕೊಳ್ಳಿ.

* ಹೋಂವರ್ಕ್ ಮಾಡಿಸಲು ಅಮ್ಮನೇ ಬರಬೇಕೆಂದು ದುಂಬಾಲು ಬೀಳಬೇಡಿ. ಸ್ವತಃ ನೀವೇ ಓದಿ-ಬರೆದು ಅರ್ಥವಾಗದಿದ್ದನ್ನು ಮಾತ್ರ ಕೇಳಿ ತಿಳಿದುಕೊಳ್ಳಿ.

* ಶಾಲೆ-ಕಾಲೇಜಿಗೆ ಬಿಟ್ಟು ಬರಲು ಅಮ್ಮನೇ ಬರಬೇಕು ಎಂದು ಒತ್ತಾಯಿಸಬೇಡಿ. ದಿನಪತ್ರಿಕೆ, ಕಂಪ್ಯೂಟರ್‌ನಲ್ಲಿ ಮುಖ ಹುದುಗಿ ಕುಳಿತ `ಅಪ್ಪ~ನನ್ನು ಕರೆದುಕೊಳ್ಳಿ.

* ಅಮ್ಮ ತಯಾರಿಸಿದ ಅಡುಗೆಯಲ್ಲಿ ಸ್ವಲ್ಪ-ಹೆಚ್ಚು ಕಡಿಮೆಯಾದರೆ ಕೂಗಾಡಿ ರಂಪ ಮಾಡಬೇಡಿ. `ಉಪವಾಸದ~ ಬೆದರಿಕೆ ಒಡ್ಡಬೇಡಿ. ಸ್ವಲ್ಪ ಹೊಂದಿಕೊಳ್ಳಿ.

* ಕೋಪ ಬಂದಾಗ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದಾಗ ಅಮ್ಮನೇ ಬಂದು ಅದನ್ನೆಲ್ಲಾ ಜೋಡಿಸಲಿ ಎಂದು ಕಾಯಬೇಡಿ. ಕೋಪ ತಣಿದ ಮೇಲೆ ಅದನ್ನೆಲ್ಲಾ ನೀವೇ ಜೋಪಾನವಾಗಿ ಜೋಡಿಸಿಡಿ.

* ನಾಳೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಹಿಂದಿನ ದಿನವೇ ಹುಡುಕಿಟ್ಟುಕೊಂಡು ತಯಾರಾಗಿರಿ. ಹೊರಡುವ ವೇಳೆ ನಿಮಗೆ ಬೇಕಾದ ವಸ್ತುಗಳ ಹುಡುಕುತ್ತಾ ವೇಳೆ ಹಾಳು ಮಾಡಿಕೊಳ್ಳಬೇಡಿ.

* ಸಾಹಿತ್ಯ ಓದಲು, ಸಂಗೀತ ಕೇಳಲು, ಅವಳಿಗಿಷ್ಟವಾದ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ. ಪ್ರತಿಯೊಬ್ಬ ಅಮ್ಮನಲ್ಲಿಯೂ ಒಂದು `ಪ್ರತಿಭೆ~ ಇದೆ. ಅದನ್ನು ಗುರುತಿಸಿ.

ಅಮ್ಮನಿಗೂ ಒಂದು ಮನಸ್ಸಿದೆ, ಭಾವನೆ ಇದೆ. ನೆನಪಿಡಿ. ಮನೆಯ ನಾಲ್ಕು ಗೋಡೆಗಳ ಮಧ್ಯೆ, ಕಚೇರಿಯಲ್ಲಿ  ಕಂಪ್ಯೂಟರ್, ಮೇಲಧಿಕಾರಿಗಳ ನಡುವೆ ಪ್ರತೀದಿನ ಹೋರಾಟ ನಡೆಸುವ ಅವಳ ಭಾವನೆಗೆ ಸ್ಪಂದಿಸುವ ಮನಸ್ಸುಗಳೇ ವಿರಳವಾಗಿವೆ.

ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ ಅವು ಅಲ್ಪ-ಸ್ವಲ್ಪ ಬಿಡುವಿನ ವೇಳೆಯನ್ನು ಕಸಿದುಕೊಂಡಿವೆ. ಇವುಗಳೆಲ್ಲದರ ಪರಿಣಾಮವಾಗಿ ಭಾವನೆ ಅನಾವರಣಗೊಳ್ಳದೇ `ಮೌನ~ದತ್ತ ಅವಳನ್ನು ಎಳೆದೊಯ್ದು ಒಂದು ರೀತಿಯ ಖಿನ್ನತೆಯ ಭಾವ ಅವಳನ್ನು ಆವರಿಸುವಂತೆ ಮಾಡಿವೆ. ಭಾವನೆಗಳನ್ನು ಅವಳೊಂದಿಗೆ ಹಂಚಿಕೊಳ್ಳುವ ಮನಸುಗಳು ಇಲ್ಲದೇ ಹೋದಾಗ ಸಮಾಜದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಭವಿಷ್ಯದ ಅನಾಹುತಗಳಿಗೆ ಅವಕಾಶ ಕೊಡದೇ ಅವಳ ಭಾವನೆಗೆ ಸ್ಪಂದಿಸಿ, ಪ್ರೀತಿಸಿ.... ಸಹಕರಿಸಿ....

ದೇಶ, ಭಾಷೆ, ಆಚಾರ-ವಿಚಾರಗಳಲ್ಲಿ ಎಷ್ಟೆ ಬದಲಾವಣೆಯಾದರೂ “ಅಮ್ಮ” ಮಾತ್ರ ಬದಲಾಗುವುದಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT