ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನಿಗೆ ಥ್ಯಾಂಕ್ ಯು ಹೇಳಿದ್ದೀರಾ?

Last Updated 13 ಮೇ 2012, 19:30 IST
ಅಕ್ಷರ ಗಾತ್ರ

`ಅಮ್ಮನಿಗೊಂದು ಥ್ಯಾಂಕ್ಸ್ ಹೇಳಿ~ ಇಂಥದ್ದೊಂದು ಪ್ರಚಾರವನ್ನು ಪ್ರಾಕ್ಟರ್ ಅಂಡ್ ಗ್ಯಾಂಬಲ್ಸ್ ಕಂಪೆನಿ ಆರಂಭಿಸಿದೆ. ಈ ವರ್ಷದ ಆರಂಭದಲ್ಲಿ ಈ ಕಂಪೆನಿ ಕೈಗೊಂಡ ಸಮೀಕ್ಷೆಯ ಪ್ರಕಾರ ಏಷ್ಯಾದಲ್ಲಿ ಅಮ್ಮನಿಗೆ ಧನ್ಯವಾದ ತಿಳಿಸುವಲ್ಲಿ ಭಾರತೀಯರೇ ಹಿಂದುಳಿದಿದ್ದಾರೆ. 

ಸಮೀಕ್ಷೆಯ ಸತ್ಯಾಸತ್ಯತೆಯು ಸಂಖ್ಯೆಗಳನ್ನೇ ಆಧರಿಸಿದ್ದಲ್ಲಿ ಇದು ಪರಿಪೂರ್ಣವಾಗಿ ಭಾರತೀಯರನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದೇ ಇಲ್ಲ. 12 ದೇಶಗಳಿಂದ 3000 ಮಾದರಿಯನ್ನು ಸಂಗ್ರಹಿಸಿದೆ. ಕೇವಲ 250 ಪ್ರತಿನಿಧಿಗಳು ಒಂದು ದೇಶವನ್ನು ಪ್ರತಿನಿಧಿಸಿದಂತೆ..!

ಇರಲಿ ಈ ಅಂಕಿ ಸಂಖ್ಯೆಗಳೇನೇ ಇರಲಿ, ಅಮ್ಮನ ಬಗ್ಗೆ ಜನರು ವರ್ತನೆ ಹಾಗೂ ಪ್ರತಿಕ್ರಿಯೆಗಳ ಬಗ್ಗೆ ಈ ಸಮೀಕ್ಷೆ ಬೆಳಕು ಚೆಲ್ಲಿದೆ.

ಭಾರತೀಯರು ಅಮ್ಮನನ್ನೇ ನೆಚ್ಚಿನ, ವಿಶ್ವಾಸನೀಯ ಆಪ್ತ ವ್ಯಕ್ತಿ ಎಂದು ಪರಿಗಣಿಸಿದ್ದಾರೆ. ಶೇ 59ರಷ್ಟು. ಎರಡನೆಯ ಸ್ಥಾನದಲ್ಲಿರುವುದು ಫಿಲಿಪ್ಪೀನ್ಸ್ ದೇಶ. ಶೇ 30ರಷ್ಟು ಮಾತ್ರ.

ಸಮೀಕ್ಷೆ ಕೈಗೊಂಡ ದೇಶಗಳಾದ ಭಾರತ, ಚೀನಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಥಾಯ್‌ಲ್ಯಾಂಡ್, ವಿಯೆತ್ನಾಮ್, ಮುಂತಾದ ದೇಶಗಳಲ್ಲಿ ಶೇ 95ಕ್ಕೂ ಹೆಚ್ಚು ಜನರು ತಮ್ಮ ಬದುಕು ರೂಪಿಸಲು ಅಮ್ಮ ಬಹಳಷ್ಟು ತ್ಯಾಗಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 

ಆಧುನಿಕ ಭಾರತೀಯ ಮಹಿಳೆಯರು ತಮ್ಮ ಅಮ್ಮನಂತೆಯೇ ಅವರೂ ತ್ಯಾಗ ಮಾಡಲು ಸಿದ್ಧ ಎಂದೂ ಹೇಳಿದ್ದಾರೆ. ಈ ಪ್ರಮಾಣ ಉಳಿದ ದೇಶಗಳಲ್ಲಿ ಕಡಿಮೆಯಾಗಿದೆ.
ಸಾಮಾಜಿಕ ಬದುಕಿನಲ್ಲಿ ತೊಡಗಿಸಿಕೊಳ್ಳದೇ ಇರುವುದು, ರಜೆ ಇದ್ದಾಗ, ಹೊರ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು, ಎಲ್ಲಕ್ಕಿಂತ ಮುಖ್ಯವಾಗಿ ತಮಗಾಗಿ ಏನೂ ಖರೀದಿಸದೇ ಇರುವುದು ತ್ಯಾಗಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.
ಶೇ 60ರಷ್ಟು ಹೆಣ್ಣುಮಕ್ಕಳು ತಮ್ಮ ಅಮ್ಮನಂತೆಯೇ ಅಮ್ಮನ ಜವಾಬ್ದಾರಿ ನಿರ್ವಹಿಸಲು ಇಷ್ಟ ಪಡುತ್ತಾರೆ.

`ಮದರ್ಸ್‌ ಡೇ~ ಪ್ರಯುಕ್ತ ಅಮ್ಮನಿಗಾಗಿ ಏನಾದರೂ ಕೊಳ್ಳಬೇಕು, ಏನಾದರೂ ಕೊಡಬೇಕು ಎಂದೆನಿಸುವುದೇ ಎಂಬ ಪ್ರಶ್ನೆಗೆ ಭಾರತದಲ್ಲಿ ಶೇ 67ರಷ್ಟು ಜನರು ಒಪ್ಪಿಗೆ ಸೂಚಿಸಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ನಲ್ಲಿ ಅತಿ ಹೆಚ್ಚು ಎಂದರೆ ಶೇ 40ರಷ್ಟು ಜನರು ಪ್ರತಿ ವಾರವೂ ಅವರ ಅಮ್ಮನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರಂತೆ.

ಭಾರತದಲ್ಲಿ ಬಹುತೇಕ ಜನರಿಗೆ ಕೃತಜ್ಞತೆ ಸಲ್ಲಿಸಿರುವ ನೆನಪೂ ಇಲ್ಲವಂತೆ. ಆದರೆ ಇದರರ್ಥ ಭಾರತೀಯರು ಕೃತಜ್ಞರಲ್ಲ ಎಂದಲ್ಲ. ಕಾರಣ ಭಾರತೀಯರೆಲ್ಲರೂ ಅಮ್ಮನ ಸಹಾಯವನ್ನು, ಅಮ್ಮನ ತ್ಯಾಗವನ್ನು, ಅಮ್ಮನನ್ನು ನೆನಪಿಸಿಕೊಳ್ಳಲು ಯಾವುದಾದರೂ ದಿನವೇ ಬೇಕು ಎಂದೇನೂ ಇಲ್ಲ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಶೇ 57ರಷ್ಟು ಜನರು `ಮದರ್ಸ್‌ ಡೇ~ ದಿನ ತಮ್ಮ ಅಮ್ಮನೊಂದಿಗೆ ಸಮಯವೂ ಕಳೆದಿಲ್ಲ ಎಂಬುದನ್ನೂ ಭಾರತೀಯರು ಪ್ರಾಮಾಣಿಕರಾಗಿ ಒಪ್ಪಿಕೊಂಡಿದ್ದಾರೆ.

ನಿಮ್ಮ ಅಮ್ಮನ ಬಗ್ಗೆ ಯಾವಾಗ ಮೆಚ್ಚುಗೆ ವ್ಯಕ್ತಪಡಿಸಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೋರಿಯಾ, ಸಿಂಗಾಪುರ ಹಾಗೂ ಮಲೇಷಿಯಾಗಳಲ್ಲಿ `ಯಾವುದೇ ಸಂದರ್ಭಗಳೂ ಬೇಡ. ಪ್ರತಿದಿನವೂ ಕೃತಜ್ಞತೆ ಸಲ್ಲಿಸಲು ಇಷ್ಟ ಪಡುತ್ತೇವೆ~ ಎಂದು ಹೇಳಿದ್ದಾರೆ. ಆದರೆ ಚೀನಿಯರು ಮಾತ್ರ, `ನಮ್ಮಮ್ಮ ಹೊರಗೆ ಊಟಕ್ಕೆ ಕರೆದೊಯ್ದಾಗ ಮೆಚ್ಚುಗೆ ವ್ಯಕ್ತ ಪಡಿಸುತ್ತೇವೆ ಎಂದು ಹೇಳಿದ್ದಾರೆ.

ಅಮ್ಮನಿಗೆ ಇಷ್ಟವಾಗುವ ಉಡುಗೊರೆ ನೀಡಿ ಧನ್ಯವಾದ ತಿಳಿಸಬಹುದು ಎಂಬುದು ಶೇ 59ರಷ್ಟು ಜನರು ತಿಳಿಸಿದ್ದಾರೆ. ಶೇ 19ರಷ್ಟು ಜನರು ಕೇವಲ ಧನ್ಯವಾದ ಹೇಳಿದರೂ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ 10ರಲ್ಲಿ ಇಬ್ಬರು ಅಮ್ಮನ ಮನೆಗೆಲಸದಲ್ಲಿ ಸಹಾಯ ಮಾಡುವ ಮೂಲಕ ಧನ್ಯವಾದ ತಿಳಿಸಬಹುದು ಎಂದೂ ಹೇಳಿದ್ದಾರೆ.

ಅಮ್ಮಂದಿರು ಎಂಥ ಉಡುಗೊರೆ ಬಯಸುತ್ತಾರೆ ಎಂಬ ಬಗ್ಗೆಯೂ ಈ ಸಮೀಕ್ಷೆ ಬೆಳಕು ಚೆಲ್ಲಿದೆ. ಶೇ 35ರಷ್ಟು ಜನರು ಕೇವಲ ಒಂದು `ಥ್ಯಾಂಕ್ ಯು~ ಹೇಳಿದರೂ ಸಾಕು ಎಂದು ಉತ್ತರಿಸಿದ್ದಾರೆ.

ಶೇ 50ರಷ್ಟು ಜನರು ಅಮ್ಮನಿಗೆ ಉಡುಗೊರೆ ಕೊಡಬೇಕು ಎಂಬ ನಂಬಿಕೆಯೇ ಇಲ್ಲವೆಂದು ತಿಳಿಸಿದ್ದಾರೆ. ಶೇ 32ರಷ್ಟು ಜನ ಅಮ್ಮಂದಿರು ತಮಗಿಷ್ಟವಾದುದನ್ನೇ ಉಡುಗೊರೆಯ ರೂಪದಲ್ಲಿ ಪಡೆಯುವುದು ಚಂದ ಎಂದು ಉತ್ತರಿಸಿದ್ದಾರೆ. ಶೇ 14ರಷ್ಟು ಭಾರತೀಯ ಅಮ್ಮಂದಿರು ಕೊನೆಯ ಪಕ್ಷ ಒಂದು `ಥ್ಯಾಂಕ್ ಯು~ ಕೇಳಬೇಕೆಂದು ಬಯಸಿದ್ದಾರಂತೆ. ಶೇ 8ರಷ್ಟು ಜನರು ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಪಾಲ್ಗೊಳ್ಳಲಿ ಎಂದು ಬಯಸಿದ್ದಾರೆ.

ಅಮ್ಮನ ಆದ್ಯತೆಗಳನ್ನು ಪರಿಶೀಲಿಸಿದ್ದಲ್ಲಿ 12 ದೇಶದ ಅಮ್ಮಂದಿರೂ ತಮ್ಮ ಮಕ್ಕಳ ಆರೋಗ್ಯ, ಶಿಕ್ಷಣ, ಹಾಗೂ ಸಂತೋಷವನ್ನು ಬಯಸುತ್ತಾರಂತೆ.

ಸಮೀಕ್ಷೆಯ ಉತ್ತರಗಳೇನೆ ಇರಲಿ, ವಾತ್ಸಲ್ಯಕ್ಕೆ ಒಂದೇ ಭಾಷೆ. ಅರ್ಥ. ಅದು ಮಕ್ಕಳ ಸಂತೋಷ, ಸ್ವಾಸ್ಥ್ಯ ಹಾಗೂ ಉನ್ನತಿಯಾಗಿದೆ. ಈ ಪ್ರಾರ್ಥನೆಗೆ ಅಮ್ಮಂದಿರ ದಿನವೇ ಆಗಬೇಕೆಂದಿಲ್ಲ.

ಆದರೂ ... ಅಮ್ಮನಿಗೊಮ್ಮೆ ಥ್ಯಾಂಕ್ ಯು ಹೇಳಿದರೆ... ಅಮ್ಮನಿಗೊಂದು ಪುಟ್ಟ ಉಡುಗೊರೆ ನೀಡಿದರೆ... ಆ ತ್ಯಾಗಜೀವಿಗೊಂದು ಸಂತೋಷ ನೀಡಬಹುದು... ಮೇ ತಿಂಗಳ ಎರಡನೆಯ ಭಾನುವಾರ ಅಮ್ಮಂದಿರ ದಿನ. ಶುಭಾಶಯ ತಿಳಿಸಿರದಿದ್ದರೆ ತಡವೇನಾಗಿಲ್ಲ. ಇನ್ನಾದರೂ  ತಿಳಿಸಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT