ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಗ್ಯ ಬಿಳಿಗಾಯಿ ಮಾರಾಟ!

Last Updated 21 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಕೆಲ ವರ್ಷಗಳ ಹಿಂದೆ ಒಣಮೆಣಸಿನಕಾಯಿಯಲ್ಲಿಯ ಬಿಳಿಗಾಯಿ ಮಾರಾಟವಾಗುತ್ತಿರಲಿಲ್ಲ. ಈಗ ಕಿಲೋಗೆ 40-50 ರೂಪಾಯಿಗೆ ಬಿಳಿಗಾಯಿ ಮಾರಾಟವಾಗುತ್ತಿದೆ. ಇದರೊಂದಿಗೆ ಗುಣಮಟ್ಟವಲ್ಲದ, ಬಳಸಲೂ ಯೋಗ್ಯವಲ್ಲದ, ಪೌಡರ್ ಆಗದ, ಪೌಡರ್ ಆದರೂ ತಿನ್ನಲು ಯೋಗ್ಯವಲ್ಲದ ಬಿಳಿಗಾಯಿ ಲೋಡ್‌ಗಟ್ಟಲೆ ದೆಹಲಿ, ಅಹಮ್ಮದಾಬಾದ್, ಮುಂಬೈ, ಕೊಲ್ಲಾಪುರ, ಸಾಂಗ್ಲಿ ಮೊದಲಾದ ಕಡೆ ಹೋಗುತ್ತಿದೆ.

’ಯಾರೂ ಕೇಳದ ಮಾಲು ಈಗ ಲಾರಿಗಟ್ಟಲೆ ಮಾರಾಟವಾಗುತ್ತಿದೆ ಎಂದರೆ ಅದು ಕಲಬೆರಕೆಗೆ ಇರಬಹುದು. ಇದನ್ನು ತಡೆಗಟ್ಟಬೇಕು. ಈ ಬಗ್ಗೆ ತನಿಖೆ ಆಗಬೇಕು’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ಖರೀದಿಸಿ ಖಾರದಪುಡಿ ಮಾರುವ ವ್ಯಾಪಾರಿ.

ಖಾರದಪುಡಿ ಬಳಕೆ ಹೆಚ್ಚುತ್ತಲೇ ಇದೆ. ಆದರೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ತಾಲ್ಲೂಕಿನಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತಿದೆ.

ಆದರೆ ’ಹವಾಮಾನದ ವೈಪರಿತ್ಯ, ಕೂಲಿಕಾರರ ಸಮಸ್ಯೆ, ಕಾಡುವ ಮುಟಗಿ ರೋಗದಿಂದಾಗಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಮೂರು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು. ಈಗ 40 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಕಡಿಮೆ ಆಗಲಿದೆ’ ಎನ್ನುವ ವಾಸ್ತವ ಅಂಶ ಹೇಳಿದರು ಧಾರವಾಡ ಜಿಲ್ಲೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಉಮೇಶ ಮಿರ್ಜಿ.

ಧಾರವಾಡ ಜಿಲ್ಲೆ ಬಿಟ್ಟರೆ ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ ಮೊದಲಾದ ಜಿಲ್ಲೆಗಳಲ್ಲಿ ಅಲ್ಪಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ರಾಸಾಯನಿಕ ಗೊಬ್ಬರ ಬಳಸುವುದರಿಂದ  ಗುಣಮಟ್ಟ, ಬಣ್ಣ ಹಾಗೂ ರುಚಿಯನ್ನು ಮೆಣಸಿನಕಾಯಿ ಕಳೆದುಕೊಂಡಿದೆ. ಜೊತೆಗೆ ಒಟ್ಟು ಬೆಳೆಯುವ ಮೆಣಸಿನಕಾಯಿಯಲ್ಲಿ ಶೇ. 35ರಷ್ಟು ಮಾತ್ರ ಉತ್ತಮ ಹಾಗೂ ಮಧ್ಯಮ ಮಟ್ಟದ್ದು. ಉಳಿದ ಶೇ. 65ರಷ್ಟು ಬಿಳಿಗಾಯಿ. ಇದರಲ್ಲಿ ಶೇ. 50ರಷ್ಟು ತಿನ್ನಲು ಯೋಗ್ಯ ಇರುವುದಿಲ್ಲ.

ಆದರೂ ಬಿಳಿಗಾಯಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಮೆಣಸಿನಕಾಯಿಯ ಸುಗ್ಗಿ ಕಾಲದಲ್ಲಿ ದಿನಕ್ಕೆ ಅಂದಾಜು ಎಂಟರಿಂದ 10 ಲಾರಿಗಳಲ್ಲಿ ಲೋಡ್ ಆಗಿ ಇಲ್ಲಿಯ ಎಪಿಎಂಸಿಯಿಂದ ವಿವಿಧೆಡೆ ಸಾಗಾಟವಾಗುತ್ತದೆ. ಅಂದರೆ 100 ಟನ್ ಬಿಳಿಗಾಯಿ ದಿನವೊಂದಕ್ಕೆ ಸಾಗಾಟವಾಗುತ್ತದೆ. ಈಗಲೂ ನಿತ್ಯ 2-3 ಲೋಡ್ ಬಿಳಿಗಾಯಿ ಹಾವೇರಿ ಜಿಲ್ಲೆಗೆ ಹಾಗೂ ಹೊರರಾಜ್ಯಕ್ಕೆ ಹೋಗುತ್ತಿದೆ.

ಹುಬ್ಬಳ್ಳಿ, ಬ್ಯಾಡಗಿ, ಹಾವೇರಿ, ರಾಣೆಬೆನ್ನೂರ, ಗದಗ ಮೊದಲಾದೆಡೆ ಬಿಳಿಗಾಯಿಯನ್ನು ಪುಡಿ ಮಾಡಲಾಗುತ್ತದೆ. ಜನರ ಸೇವನೆಗೆ ಸಿದ್ಧಗೊಳ್ಳುವ ಬಿಳಿಗಾಯಿ ಪುಡಿಗೆ ಗುಂಟೂರ ಮೆಣಸಿನಕಾಯಿ ಪುಡಿ ಬೆರೆಸಿ ಮಾರಾಟ ಮಾಡಲಾಗುತ್ತಿದೆ.

ಹೀಗೆ ಸಿದ್ಧಗೊಳ್ಳುವ ಖಾರದಪುಡಿ ಮುಂಬೈ, ಪುಣೆ, ಸಾಂಗ್ಲಿ, ದೆಹಲಿ, ಇಂದೋರ್ ಜೊತೆಗೆ ಹೊರದೇಶಕ್ಕೂ ರಫ್ತಾಗುತ್ತಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಸರ್ಕಾರದಿಂದ ಉತ್ತಮ ಗುಣಮಟ್ಟದ ಖಾರದಪುಡಿ ಮಾರಲಾಗುತ್ತಿದೆ ಎಂಬ ಪ್ರಮಾಣಪತ್ರ ಪಡೆದ ಕಂಪೆನಿಗಳು ಕೂಡಾ ಬಿಳಿಗಾಯಿ ಪುಡಿ ಸೇರಿಸಿ ಮಾರಾಟ ಮಾಡುತ್ತಿವೆ ಎನ್ನುವ ಆರೋಪಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT