ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿವಾದಕ್ಕೆ ಬಿಜೆಪಿ ಮರುಜೀವ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರವಸೆ ನೀಡಿರುವ ಬಿಜೆಪಿ, ಈ ಮೂಲಕ ದೇವಾಲಯ ವಿವಾದಕ್ಕೆ ಮರುಜೀವ ನೀಡಿದೆ. ಇದೇ ವೇಳೆ, 20 ಲಕ್ಷ ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್ ಪಕ್ಷ ಉದ್ಯೋಗದ ಆಶ್ವಾಸನೆ ನೀಡಿದೆ.

ರಾಜ್ಯದಲ್ಲಿ ಹೊಂದಿದ್ದ ಪ್ರಭಾವವನ್ನು ಮರಳಿ ಗಳಿಸಲು ಹರಸಾಹಸ ಪಡುತ್ತಿರುವ ಬಿಜೆಪಿ, ಹಿಂದೊಮ್ಮೆ ರಾಷ್ಟ್ರ ರಾಜಕೀಯದಲ್ಲಿ ಪಕ್ಷಕ್ಕೆ ಗಮನಾರ್ಹ ಪ್ರಚಾರ ತಂದುಕೊಟ್ಟಿದ್ದ ಅಯೋಧ್ಯೆ ವಿವಾದಕ್ಕೇ ಮತ್ತೆ ಒತ್ತು ನೀಡಿದೆ.
ಇದರ ಜೊತೆಗೆ, ಪ್ರತಿ ಬಿಪಿಎಲ್ ಕುಟುಂಬಕ್ಕೂ ಹಸು ನೀಡುವುದಾಗಿ ಹೇಳಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಕ್ಕೆ ಸೇರಿದ ಮಹಾತ್ಮರ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಘೋಷಿಸುವ ಮೂಲಕ, ರಾಜ್ಯದ ಆಡಳಿತಾರೂಢ ಬಿಎಸ್‌ಪಿಗೂ ಸೆಡ್ಡು ಹೊಡೆಯಲು ಮುಂದಾಗಿದೆ.

ಬಿಎಸ್‌ಪಿಯು ಸಾರ್ವಜನಿಕರ ಕೋಟ್ಯಂತರ ರೂಪಾಯಿಯಲ್ಲಿ ಕೇವಲ ದಲಿತ ಮುಖಂಡರ ಸ್ಮಾರಕ ಮತ್ತು ಪ್ರತಿಮೆಗಳನ್ನು ನಿರ್ಮಿಸುತ್ತಿದೆ ಎಂದು  ಖಂಡಿಸಿದೆ. ನೆಹರು-ಗಾಂಧಿ ಕುಟುಂಬವನ್ನು ವೈಭವೀಕರಿಸಲು ಕಾಂಗ್ರೆಸ್ ಪಕ್ಷವು ಸಾರ್ವಜನಿಕರ ಆಸ್ತಿಪಾಸ್ತಿ ಮತ್ತು ಯೋಜನೆಗಳಿಗೆ ಅವರ ಹೆಸರಿಡುವ ಕೆಟ್ಟ ಸಂಪ್ರದಾಯಕ್ಕೆ ಚಾಲನೆ ನೀಡಿತ್ತು. ಈಗ ಆ ಸಂಪ್ರದಾಯವನ್ನು ರಾಜ್ಯದಲ್ಲಿ ಬಿಎಸ್‌ಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ದೂರಿದೆ.

ಪಕ್ಷದ ನಾಯಕಿ ಉಮಾ ಭಾರತಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮುಖಂಡರಾದ ಕಲ್‌ರಾಜ್ ಮಿಶ್ರಾ, ಮುಕ್ತಾರ್ ಅಬ್ಬಾಸ್ ನಕ್ವಿ ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ವ್ಯಂಗ್ಯ: ಅಯೋಧ್ಯೆ ವಿವಾದಕ್ಕೆ ಮರು ಜೀವ ಕೊಡುವ ಬಿಜೆಪಿ ಪ್ರಯತ್ನವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೂ ಬಿಜೆಪಿ ಹಸು ಕೊಡುತ್ತದೆ ಎಂದಾದರೆ ಖಂಡಿತವಾಗಿಯೂ ಆ ಹಸು ಹಾಲು ಕೊಡುವಂತಹದ್ದು ಮಾತ್ರ ಆಗಿರುವುದಿಲ್ಲ ಎಂದು ವ್ಯಂಗ್ಯವಾಡಿದೆ. ರಾಜ್ಯದ ಅಭಿವೃದ್ಧಿಗಾಗಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ಯೋಜನೆಗಳಿಗೇ ಕಾಂಗ್ರೆಸ್ ಪ್ರಣಾಳಿಕೆ ಮಹತ್ವ ನೀಡಿದೆ.

ಪ್ರಿಯಾಂಕಾ ಎಂದರೆ ನಮಗಿಷ್ಟ...
ರಾಯ್ ಬರೇಲಿ/ ಅಮೇಥಿ (ಪಿಟಿಐ):
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮುಖಭಾವ ಹೋಲುವ ಅವರ ಮೊಮ್ಮಗಳಾದ ಪ್ರಿಯಾಂಕಾ ವಾದ್ರಾ ಅವರು ರಾಜಕೀಯ ಪ್ರವೇಶಿಸಬೇಕು ಎಂಬುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಹುತೇಕ ಮತದಾರರ ಅಪೇಕ್ಷೆಯಾಗಿದೆ.

`ನಾವು ರಾಹುಲ್ ಗಾಂಧಿ ಅವರಿಗಿಂತಲೂ ಪ್ರಿಯಾಂಕಾ ಅವರನ್ನೇ ಹೆಚ್ಚು ಇಷ್ಟಪಡುತ್ತೇವೆ. ಏಕೆಂದರೆ ಅವರು ಕಾರಿನಿಂದ ಇಳಿದು ನಮ್ಮತ್ತ ಬರುತ್ತಿದ್ದರೆ ಸ್ವತಃ ಇಂದಿರಾ ಗಾಂಧಿ ಅವರೇ ಬರುತ್ತಿದ್ದಾರೆ ಎಂಬ ಭಾವನೆ ನಮಗೆ ಬರುತ್ತದೆ~ ಎಂದು ಇಲ್ಲಿನ ಅಂಗಡಿ ಮಾಲೀಕ ಘನಶ್ಯಾಮ್ ಪಾಠಕ್ ಹೇಳುತ್ತಾರೆ.

ಕೈಗಾರಿಕೆಗಳ ಜೀರ್ಣೋದ್ಧಾರಕ್ಕೆ ವಿಶೇಷ ಪ್ಯಾಕೇಜ್
ಡೆಹ್ರಾಡೂನ್ (ಪಿಟಿಐ):
ಉತ್ತರಾಖಂಡದಲ್ಲಿ ಕೈಗಾರಿಕೆಗಳ ಜೀರ್ಣೋದ್ಧಾರಕ್ಕಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಗಾಗಲೇ ತಿರಸ್ಕರಿಸಿದೆ. ಆದರೆ, ರಾಜ್ಯದಲ್ಲಿ ಮತದಾನಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿರುವಾಗ ಬಿಜೆಪಿ ಈ ವಿಷಯವನ್ನು ಮತದಾರರ ಮುಂದೆ ಪ್ರಸ್ತಾಪಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ.

`ರಾಜ್ಯದಲ್ಲಿ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಬೇಡಿಕೆಯನ್ನು ತಳ್ಳಿಹಾಕುವ ಮೂಲಕ ಕೇಂದ್ರದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ~ ಎಂದು ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರ ರ‌್ಯಾಲಿಗಳಲ್ಲಿ ಪ್ರಮುಖವಾಗಿ ಈ ವಿಷಯವನ್ನು ಪಕ್ಷ ಪ್ರಸ್ತಾಪ ಮಾಡುತ್ತಿದೆ.
 

ಮಣಿಪುರ ವಿಧಾನಸಭೆಗೆ ಇಂದು ಮತದಾನ
ಇಂಫಾಲ (ಪಿಟಿಐ):
ಉಗ್ರರ ಕರಿನೆರಳಿನ ಮಧ್ಯೆ ಮಣಿಪುರ ವಿಧಾನಸಭೆಗೆ ಶನಿವಾರ ಮತದಾನ ನಡೆಯಲಿದ್ದು, ಹೊಸ ವರ್ಷ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ಮತದಾನ ಪ್ರಕ್ರಿಯೆಗೆ ಒಳಪಡಲಿರುವ ಮೊದಲ ರಾಜ್ಯ ಇದಾಗಿದೆ.

60 ಸದಸ್ಯ ಬಲದ ವಿಧಾನಸಭೆಗೆ ನಡೆಯುವ ಮತದಾನಕ್ಕೆ ಕೆಲ ಉಗ್ರ ಸಂಘಟನೆಗಳು ಅಡ್ಡಿಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಒಟ್ಟು 279 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಜನವರಿ 30ರಂದು ಮತ್ತು ಗೋವಾದಲ್ಲಿ ಮಾರ್ಚ್ 3ರಂದು ಮತದಾನ ನಡೆಯಲಿದೆ. ಫೆಬ್ರುವರಿಯಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿರುವ ಉತ್ತರ ಪ್ರದೇಶದಲ್ಲಿ, ಮಾರ್ಚ್ 3ರಂದು ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ. ಮಾರ್ಚ್ 6ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT