ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಜಮೀನು ಕೈಗಾರಿಕೆಗೆ!

Last Updated 21 ಫೆಬ್ರುವರಿ 2011, 8:00 IST
ಅಕ್ಷರ ಗಾತ್ರ

ಕೊಪ್ಪಳ: ಅರಣ್ಯ ಭೂಮಿಯನ್ನು ಅಕ್ರಮ- ಸಕ್ರಮ ಯೋಜನೆಯಡಿ ರೈತರಿಗೆ ನೀಡಿ, ಕಾನೂನುಬಾಹಿರವಾಗಿ ಅದನ್ನು ಪರಭಾರೆ ಮಾಡಲಾಗಿದ್ದು, ಸದರಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಸ್ವಾಧೀನಪಡಿಸಿಕೊಂಡು, ಚೀನಾ ಮೂಲದ ಸಿಂಡಿಯಾ ಕಂಪೆನಿಗೆ ನೀಡಿದ ಅಂಶ ಬೆಳಕಿಗೆ ಬಂದಿದೆ.
ರೆಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆಯಲ್ಲಿ ಉದ್ದೇಶಪೂರ್ವಕವಾಗಿ ಅಕ್ರಮ ಸಕ್ರಮ ಜಮೀನು ಎಂದು ನಮೂದು ಮಾಡದೇ ಕೈಗಾರಿಕೆಗಳಿಗೆ ನೀಡಿರುವುದು ಈ ಪ್ರಕರಣದಿಂದ ಬಯಲಾಗಿದೆ.

ಸದರಿ ಕಂಪೆನಿ ತಾಲ್ಲೂಕಿನ ಕುಣಿಕೇರಿ ಹಾಗೂ ಹಿರೇಬಗನಾಳ ಗ್ರಾಮಗಳ ನಡುವಿನ ಈ ಜಮೀನಿನಲ್ಲಿ ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಎಂಬ ಉಕ್ಕು ಸಂಸ್ಕರಣಾ ಘಟಕ ಸ್ಥಾಪನೆ ಮಾಡುತ್ತಿದೆ. ಇದಕ್ಕಾಗಿ ಈ ಜಮೀನು ನೀಡಲಾಗಿದೆ.

ವಿವರ: ಅರಣ್ಯ ಇಲಾಖೆಯು ತಾಲ್ಲೂಕಿನ ಕುಣಿಕೇರಿ ಗ್ರಾಮದಲ್ಲಿ ಸರ್ವೆ ನಂ.84/ಅ ನಡಿ 19 ಎಕರೆ 8 ಗುಂಟೆ   ಹಾಗೂ 42/ಅ ನಂತೆ 35.23 ಎಕರೆ ಜಮೀನನ್ನು ಹೊಂದಿದೆ. 2004-05ರ ವರೆಗಿನ ಪಹಣಿ ಪತ್ರಿಕೆಯಲ್ಲಿನ ವಿವರಗಳು ಈ ಜಮೀನು ‘ಗಟ್ಟಿಗಾಯರಾಣ ಸರ್ಕಾರಿ ಅರಣ್ಯ ಖಾತೆ’ಗೆ ಸೇರಿದ್ದು ಎಂದು ಸ್ಪಷ್ಟಪಡಿಸುತ್ತವೆ.

ಆದರೆ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ ನಿಯಮಗಳು 1998ರ ಅನ್ವಯ) ಕಾಯ್ದೆಯಡಿ 25.6.2004ರಂದು ಸ.ನಂ. 84/ಅ ರಲ್ಲಿನ 19 ಎಕರೆ 8 ಗುಂಟೆ ಜಮೀನನ್ನು ನಾಲ್ಕು ಜನ ಅಕ್ರಮ ಸಾಗುವಳಿಗಾರರಿಗೆ ತಲಾ 4 ಎಕರೆ 32 ಗುಂಟೆಯಂತೆ ಸಾಗುವಳಿ ಮಾಡಲು ಕೊಪ್ಪಳ ತಹಸೀಲ್ದಾರರು ಹಂಚಿಕೆ ಮಾಡಿದ್ದಾರೆ.ಗ್ರಾಮದ ಈರಮ್ಮ ಹನುಮಗೌಡ ಪಾಟೀಲ, ಪೀರಾಂಬಿ ಮೌಲಾಸಾಬ, ಎಂ.ರಾಜಲಕ್ಷ್ಮಿ ಗಂಡ ರಮೇಶ ಹಾಗೂ ಲಕ್ಷ್ಮವ್ವ ಗಂ. ಶೇಷಪ್ಪ ಕ್ಷತ್ರಿಯ ಎಂಬುವವರೇ ತಲಾ 4 ಎ-8 ಗುಂಟೆ ಜಮೀನು ಪಡೆದ ಫಲಾನುಭವಿಗಳು.

ಕಾಯ್ದೆಯಂತೆ ಸಾಗುವಳಿಗಾಗಿ ಸ್ವಾಧೀನಕ್ಕೆ ತೆಗೆದುಕೊಂಡ ದಿನದಿಂದ (ಈ ಪ್ರಕರಣದಲ್ಲಿ 25.6.2004) 15 ವರ್ಷಗಳ ಅವಧಿಯವರೆಗೆ ಈ ಜಮೀನನ್ನು ಪರಭಾರೆ ಮಾಡುವಂತಿಲ್ಲ. ಈ ಅಂಶವನ್ನು ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಮೇಲಿನ ಫಲಾನುಭವಿಗಳಿಗೆ ನೀಡುವಾಗ ಹೊರಡಿಸಿದ ಆದೇಶದಲ್ಲಿ ತಹಸೀಲ್ದಾರರು ಸ್ಪಷ್ಟವಾಗಿ ಹೇಳಿದ್ದಾರೆ.ಆದರೆ, ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಅಕ್ರಮ-ಸಕ್ರಮದಡಿ ಈ ಫಲಾನುಭವಿಗಳಿಗೆ ನೀಡಿರುವುದನ್ನು ವಿವರಿಸುವ ಪಹಣಿ ಪತ್ರಿಕೆಯ ಕಾಲಂ ಸಂಖ್ಯೆ 11 (ಇತರೆ ಹಕ್ಕುಗಳು ಮತ್ತು ಋಣಗಳು) ರಲ್ಲಿ ಈ ಅಂಶವನ್ನು ನಮೂದು ಮಾಡಿಲ್ಲ.

ಈ ಹಂತದಿಂದಲೇ, ಅರಣ್ಯ ಇಲಾಖೆಗೆ ಸೇರಿದ ಈ ಜಮೀನನ್ನು ಹಂತಹಂತವಾಗಿ ಪರಭಾರೆ ಮಾಡುತ್ತಾ ಬಂದಿರುವುದು ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಅಕ್ರಮ-ಸಕ್ರಮ ಯೋಜನೆಯಡಿ ಪಡೆದ ಅರಣ್ಯ ಇಲಾಖೆಯ ಜಮೀನನ್ನು 15 ವರ್ಷಗಳ ಕಾಲ ಪರಭಾರೆ ಮಾಡಬಾರದು ಎಂಬ ಕಾನೂನು ಇದ್ದರೂ, 2007-08ನೇ ಸಾಲಿನಲ್ಲಿ ಮೇಲೆ ತಿಳಿಸಿದ ನಾಲ್ವರು ಫಲಾನುಭವಿಗಳು ತಮ್ಮ ಜಮೀನನ್ನು ಮೆ ಹಂಪಿ ಇಂಡಸ್ಟ್ರೀಸ್ ಲಿ. ಕೊಪ್ಪಳ ಎಂಬ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ನಾಲ್ವರ ಪೈಕಿ ಎಂ.ರಾಜಲಕ್ಷ್ಮಿ ಎಂಬುವವರು 3 ಎ- 6 ಗುಂಟೆ ಹಾಗೂ ಉಳಿದ ಮೂವರು ತಲಾ 4 ಎ- 32 ಗುಂಟೆ ಸೇರಿದಂತೆ ಒಟ್ಟು 17 ಎ -22 ಗುಂಟೆ  ಜಮೀನನ್ನು ಹಂಪಿ ಇಂಡಸ್ಟ್ರೀಸ್‌ಗೆ ಮಾರಾಟ ಮಾಡಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ.

ಆದರೆ, ಅದೇ ವರ್ಷ ಕೆ.ಐ.ಎ.ಡಿ.ಬಿ,ಯು ಈ 17 ಎ- 22 ಗುಂಟೆ ಜಮೀನನ್ನು ಮೆ ಹಂಪಿ ಇಂಡಸ್ಟ್ರೀಜ್ ಲಿ. ನಿಂದ ಸ್ವಾಧೀನಪಡಿಸಿಕೊಂಡಿದೆಯಲ್ಲದೇ, ಸದರಿ ಜಮೀನನ್ನು ಸಿಂಡಿಯಾ ಕಂಪನಿಗೆ ಉಪಯೋಗಿಸಲು ನೀಡಿದೆ!ಇನ್ನು, ಗ್ರಾಮದ ಬಳಿ ಅರಣ್ಯ ಇಲಾಖೆ ಹೊಂದಿರುವ 35 ಎಕರೆ 23 ಗುಂಟೆ (ಸ.ನಂ. 42/ಅ) ಜಮೀನು ಸಹ ಇದೇ ರೀತಿ ಅಕ್ರಮ-ಸಕ್ರಮ ಕಾಯ್ದೆಯಡಿ ಸಾಗುವಳಿಗೆ ನೀಡಿದ್ದು, ಸದರಿ ಜಮೀನು ಸಹ ಪರಭಾರೆಯಾಗಿ, ಕೊನೆಗೆ ಸಿಂಡಿಯಾ ಕಂಪೆನಿ ಸುಪರ್ದಿಗೆ ಹೋಗಿರುವುದು ದೃಢಪಟ್ಟಿದೆ.

ಒತ್ತಾಯ: ಅರಣ್ಯ ಇಲಾಖೆಗೆ ಸೇರಿದಂತೆ ಈ ಜಮೀನಿನ ಅಕ್ರಮ ಪರಭಾರೆ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ವಹಿವಾಡು ನಡೆದಿದೆ. ಸರ್ಕಾರಿ ಜಮೀನುಗಳನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡುವ ವ್ಯವಸ್ಥಿತ ಮಾಫಿಯಾ ಜಿಲ್ಲೆಯಲ್ಲಿ ಬಹಳ ದಿನಗಳಿಂದ ಕಾರ್ಯನಿರತವಾಗಿದೆ ಎಂದು ಎ.ಐ.ಟಿ.ಯು.ಸಿ ಜಿಲ್ಲಾ ಮುಖಂಡ ಬಸವರಾಜ ಶೀಲವಂತರ ದೂರುತ್ತಾರೆ.

ಖೊಟ್ಟಿ ಫಲಾನುಭವಿಗಳನ್ನು ಸೃಷ್ಟಿಸಿ ಈ ರೀತಿ ಸರ್ಕಾರಿ ಜಮೀನಿನ ಪರಭಾರೆ ಮಾಡಲಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 2004ರಿಂದ ಇಲ್ಲಿಯವರೆಗೆ ದಾಖಲೆಗಳ ಪರಿಶೀಲನೆ ಹಾಗೂ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳುವುದು. ಅಲ್ಲದೇ, ಕಾನೂನುಬಾಹಿರವಾಗಿ ಪರಭಾರೆಯಾಗಿರುವ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲು ಸಹ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT