ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪ್ರದೇಶ ದುರುಪಯೋಗಕ್ಕೆ ಬಿಡಲಾರೆ

Last Updated 18 ಅಕ್ಟೋಬರ್ 2012, 19:05 IST
ಅಕ್ಷರ ಗಾತ್ರ

ಕಾವೇರಿ ಜಲ ವಿವಾದಕ್ಕೆ ಕಾಡಿನ ನಾಶವೇ ಕಾರಣ: ಭಾರದ್ವಾಜ್

ಬೆಂಗಳೂರು: `ರಾಜ್ಯದ ಅರಣ್ಯ ಪ್ರದೇಶ ದುರುಪಯೋಗ ಮಾಡಿಕೊಳ್ಳಲು ಯಾರಾದರೂ ಮುಂದಾದರೆ ಯಾವುದೇ ಕಾರಣಕ್ಕೂ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗುಡುಗಿದರು.

ಅರಣ್ಯ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಜಂಟಿಯಾಗಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ 58ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಅರಣ್ಯದ ನಾಶದಿಂದಲೇ ಬಹಳಷ್ಟು ಸಮಸ್ಯೆಗಳು ಉದ್ಭವವಾಗಿದ್ದು, ಕಾವೇರಿ ವಿವಾದಕ್ಕೂ ಮರಗಳ ಸಂಖ್ಯೆ ಕ್ಷೀಣಗೊಂಡಿದ್ದೇ ಕಾರಣವಾಗಿದೆ. ಮರಗಳು ಕಡಿಮೆ ಆಗಿದ್ದರಿಂದ ಕಾವೇರಿ ಪ್ರದೇಶದಲ್ಲಿ ಮಳೆ ಅಭಾವ ಉಂಟಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಜಲ ವಿವಾದ ದೊಡ್ಡದಾಗಿ ಬೆಳೆದಿದೆ~ ಎಂದು  ವಿಶ್ಲೇಷಿಸಿದರು.

`ಕಾವೇರಿ ಉಗಮ ಪ್ರದೇಶದಲ್ಲಿ ಇನ್ನುಮುಂದೆ  ಮರ ಕಡಿಯಲು ಅವಕಾಶ ನೀಡಬಾರದು~ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

`ಗಂಗಾ ನದಿ ನೀರನ್ನು ಪವಿತ್ರ ಎನ್ನುತ್ತಲೇ ನಾವು ಅದನ್ನು ಉಪಯೋಗಿಸಿದರೆ ಕ್ಯಾನ್ಸರ್ ಬರುವಷ್ಟು ಮಾಲಿನ್ಯ ಮಾಡಿ ಬಿಟ್ಟಿದ್ದೇವೆ~ ಎಂದು ಹೇಳಿದರು.

`ನರಭಕ್ಷಕ ಹುಲಿಗಳನ್ನು ಬೇಟೆಯಾಡಿದ್ದ ಜಿಮ್ ಕಾರ್ಬೆಟ್ ಅವರನ್ನು ನಾನು ಭೇಟಿ ಮಾಡಿದ್ದೆ. ಅವರ ಪರಿಸರ ಕಳಕಳಿ ಅನನ್ಯ. ಕಾಡಿನ ಎಷ್ಟೋ ಕೌತುಕಗಳನ್ನು ನಾನು ಅವರಿಂದ ಕೇಳಿ, ಅವರ ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಕಾಡಿನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಇಂತಹ ಸಾಹಿತ್ಯ ಪೂರಕ~ ಎಂದರು.

ರಾಜ್ಯ ವನ್ಯಜೀವಿ ಮಂಡಳಿಯ ಸಹ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಮಾತನಾಡಿ, `ರಾಜ್ಯದಲ್ಲಿ 1200 ಚದರ ಕಿ.ಮೀ. ಪ್ರದೇಶವನ್ನು ಈ ವರ್ಷ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ~ ಎಂದು ಹೆಮ್ಮೆಯಿಂದ ಹೇಳಿದರು. `ಅರಣ್ಯ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ ಜೊತೆ-ಜೊತೆಗೆ ಹೆಜ್ಜೆ ಹಾಕುವುದು ಕಷ್ಟಸಾಧ್ಯ. ಆದರೆ, ಕಾಡನ್ನು ಉಳಿಸಿಕೊಳ್ಳುವುದೇ ನಮ್ಮ  ಆದ್ಯತೆ ಆಗಬೇಕು~ ಎಂದು ಹೇಳಿದರು.

ಶಾಸಕ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಕೆ. ವರ್ಮಾ, ದೀಪಕ್‌ಶರ್ಮಾ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್. ಶ್ರೀಧರನ್, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕಾರ್ಯದರ್ಶಿ ಮೋಹನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT