ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ರೋದನ...

Last Updated 9 ಜನವರಿ 2011, 10:15 IST
ಅಕ್ಷರ ಗಾತ್ರ

ದಾಟಿತು ನೂರು ದಿನ, ಮುಗಿಯಲಿಲ್ಲ ‘ಅರಣ್ಯ ರೋದನ...’
ನೂರನೇ ದಿನದ ಆಚರಣೆ ಎಂದರೆ ಅದು ಸಂಭ್ರಮ ಪಡುವ ಸಮಯ. ಆದರೆ ಈ ಮಕ್ಕಳ ಪಾಲಿಗೆ ಮಾತ್ರ 100ನೇ ದಿನ ದುಃಖ ಮಡುಗಟ್ಟಿಸುವ ಹೊತ್ತು. ಕರ್ನಾಟಕದ ಶಿರಸಿ ಮತ್ತು ಪೊನ್ನಂಪೇಟೆಯ ಅರಣ್ಯ ಕಾಲೇಜುಗಳ ಮಕ್ಕಳು ತಮ್ಮ ಬೇಡಿಕೆ ಮುಂದಿಟ್ಟು ಸೆಪ್ಟೆಂಬರ್ 27ರಿಂದ ಆರಂಭಿಸಿದ್ದ ಮುಷ್ಕರಕ್ಕೆ ಜನವರಿ 4ರಂದು 100ನೇ ದಿನ. ಉತ್ತಮ ಭವಿಷ್ಯದ ಜೊತೆಗೆ ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸುವ ಆಶಯ ಹೊತ್ತು ಅರಣ್ಯಶಾಸ್ತ್ರ ಕಾಲೇಜು ಸೇರಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಭವಿಷ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಪರಿಣಾಮವಾಗಿ ಈಗ ಅತಂತ್ರ. ಹೀಗಾಗಿ ನ್ಯಾಯಕೋರಿ ಮುಷ್ಕರದ 106ನೆ ದಿನವಾದ 2011ರ ಜನವರಿ 10ರಂದು 350ಕ್ಕೂ ಹೆಚ್ಚು ಮಕ್ಕಳು ಬೆಂಗಳೂರಿಗೆ ನಿರಶನಕ್ಕಾಗಿಯೇ ಬರುತ್ತಿದ್ದಾರೆ.

ಕರ್ನಾಟಕದಲ್ಲಿ ಅರಣ್ಯ ನಿರ್ವಹಣೆಯಂತಹ ಅಪರೂಪದ ಶಿಕ್ಷಣ ಒದಗಿಸುವ ಕಾಲೇಜುಗಳು ಇರುವುದು ಕೇವಲ ಎರಡು. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶಿರಸಿ ಅರಣ್ಯ ವಿಜ್ಞಾನ ಕಾಲೇಜು ಮತ್ತು ಬೆಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಪೊನ್ನಂಪೇಟೆಯ ಅರಣ್ಯ ಕಾಲೇಜು. 25 ವರ್ಷಗಳ ಹಿಂದೆ ಈ ಎರಡು ಅರಣ್ಯ ಕಾಲೇಜುಗಳನ್ನು ಆರಂಭಿಸಿದ್ದು ರಾಜ್ಯದಲ್ಲಿ ಅರಣ್ಯ ನಿರ್ವಹಣೆಯ ಶಿಕ್ಷಣ ಪಡೆದ ಮಾನವ ಸಂಪನ್ಮೂಲವನ್ನು ಹೆಚ್ಚಿಸಿಕೊಂಡು ಅರಣ್ಯಗಳ ಸಂರಕ್ಷಣೆ, ನಿರ್ವಹಣೆಯಲ್ಲಿ ವೃತ್ತಿ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ.

ಆದರೆ ಇಂತಹ ಶಿಕ್ಷಣ ಒದಗಿಸುವುದಕ್ಕಾಗಿ ಸರ್ಕಾರವೇ ಸುರಿಯುತ್ತಿರುವ ಕೋಟ್ಯಂತರ ರೂಪಾಯಿ ಹಣ ಈಗ ನೀರ ಮೇಲಣ ಹೋಮ. ಏಕೆಂದರೆ ಬಿಎಸ್‌ಸಿ (ಕೃಷಿ) ಮತ್ತು ಬಿಎಸ್‌ಸಿ (ತೋಟಗಾರಿಕೆ) ಪದವಿಗಳಿಗೆ ಸಮಾನವಾದ ಈ ಬಿಎಸ್‌ಸಿ (ಅರಣ್ಯಶಾಸ್ತ್ರ) ಶಿಕ್ಷಣ ಪಡೆದ ಮಕ್ಕಳು ತಿಪ್ಪರಲಾಗ ಹೊಡೆದರೂ ಅವರಿಗೆ ರಾಜ್ಯದ ಅರಣ್ಯ ಇಲಾಖೆಯಲ್ಲಿಯೇ ಸೂಕ್ತ ಕೆಲಸ ಸಿಗುತ್ತಿಲ್ಲ. ಹೀಗಾಗಿ ಶಿರಸಿ ಮತ್ತು  ಪೊನ್ನಂಪೇಟೆಯ ಅರಣ್ಯ ಕಾಲೇಜುಗಳ ಮಕ್ಕಳು ನೂರು ದಿನಗಳ ಹಿಂದೆ ಶಿರಸಿ ಮತ್ತು ಪೊನ್ನಂಪೇಟೆಯಲ್ಲಿ ತಮ್ಮ ಕಾಲೇಜುಗಳ ಆವರಣದಲ್ಲೇ ಮುಷ್ಕರ ಆರಂಭಿಸಿದರು.

ನೇರ ನೇಮಕಾತಿಗೆ ಪರಿಗಣಿಸಿ:

ಅವರ ಬೇಡಿಕೆ ತುಂಬಾ ಸರಳ ಮತ್ತು ನೇರ. ‘ವಲಯ ಅರಣ್ಯ ಅಧಿಕಾರಿ (ಆರ್‌ಎಫ್‌ಓ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳಿಗೆ ಅರಣ್ಯಶಾಸ್ತ್ರ ಪದವಿಯಾದ ಬಿಎಸ್ಸಿ (ಫಾರೆಸ್ಟ್ರಿ) ಇದನ್ನು ನೇರ ನೇಮಕಾತಿಗೆ ಏಕೈಕ ಅರ್ಹತೆಯನ್ನಾಗಿ ಮಾಡಿ, ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತನ್ನಿ’ ಅಂತ ಅಷ್ಟೆ.

ತೋಟಗಾರಿಕೆ, ಕೃಷಿ, ರೇಷ್ಮೆ ಪದವೀಧರರಿಗೆ ಸಂಬಂಧಿಸಿದ ಇಲಾಖೆಯ ತಾಂತ್ರಿಕ ಹುದ್ದೆಗಳಿಗೆ ತತ್ಸಮ ಪದವಿ ನಿಗದಿಪಡಿಸಿದಂತೆ ಅರಣ್ಯ ಪದವೀಧರರಿಗೂ ಅವಕಾಶ ಕಲ್ಪಿಸಬೇಕು. ತಮಿಳುನಾಡು, ಜಾರ್ಖಂಡ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಒರಿಸ್ಸಾ ರಾಜ್ಯಗಳಂತೆ ಕರ್ನಾಟಕದಲ್ಲೂ ಅರಣ್ಯ ಇಲಾಖೆಯ ತಾಂತ್ರಿಕ ಹುದ್ದೆಗಳ ನೇರ ನೇಮಕಾತಿಗೆ ಅರಣ್ಯ ಪದವಿಯನ್ನು ಏಕೈಕ ಮಾನದಂಡವಾಗಿ ಪರಿಗಣಿಸಬೇಕು ಎಂಬುದು ಈ ವಿದ್ಯಾರ್ಥಿಗಳ ಆಗ್ರಹ. ವಾಸ್ತವವಾಗಿ ಈ ಒತ್ತಾಯವನ್ನು  ಅವರು ಕಳೆದ 10 ವರ್ಷಗಳಿಂದ ಆಗಾಗ ಮಾಡುತ್ತಲೇ ಬಂದಿದ್ದಾರೆ. ಆದರೆ ಅದನ್ನು ಕೇಳುವವರು ಬೇಕಲ್ಲ? ಹೀಗಾಗಿ ಈ ಸಲ ಮಕ್ಕಳು ಮತ್ತೆ ರಸ್ತೆಗೆ ಇಳಿದರು. ಸೆಪ್ಟೆಂಬರ್ 27ರಿಂದ ತಮ್ಮ ಕಾಲೇಜುಗಳ ಎದುರು ಮೌನವಾಗಿ ಧರಣಿ ಕುಳಿತರು. ತರಗತಿಗಳನ್ನು ಬಹಿಷ್ಕರಿಸಿದರು.

ಅರಣ್ಯ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ತಮ್ಮದೇ ನೆತ್ತರಿನಲ್ಲಿ ಮನವಿ ಪತ್ರಗಳನ್ನು ಬರೆದು ಕಳುಹಿಸಿದರು. ಭೂತ ದಹನವನ್ನೂ ಮಾಡಿದರು- ಆದರೆ ಬೇರೆಯವರದ್ದಲ್ಲ, ತಮ್ಮದೇ ಸ್ವಯಂ ಭೂತ ದಹನ. ಅರಣ್ಯಶಾಸ್ತ್ರ ಪದವೀಧರನ ಪ್ರತಿಕೃತಿ ತಯಾರಿಸಿ, ರಸ್ತೆಗಳಲ್ಲಿ ಅದರ ಅಂತ್ಯಯಾತ್ರೆ ನಡೆಸಿ ಕೊನೆಗೆ ಚಿತೆಗೆ ಏರಿಸಿ ದಹನ ಮಾಡಿದರು.  ಪೊನ್ನಂಪೇಟೆಯ ಅರಣ್ಯ ಕಾಲೇಜು ಇರುವ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ಕೊಟ್ಟರು. ಅದು ಈಡೇರಲಿಲ್ಲ.

 ಪರಿಣಾಮ: ಅರಣ್ಯಶಾಸ್ತ್ರ ವಿದ್ಯಾರ್ಥಿಗಳ ಈ ಮುಷ್ಕರ ತಿಂಗಳುಗಟ್ಟಲೆ ನಡೆದರೂ ನಿಜವಾಗಿಯೂ ‘ಅರಣ್ಯ ರೋದನ’ವೇ ಆಗಿ ಬಿಟ್ಟಿತು. ಆಳುವ ಪಕ್ಷದ ಮಂತ್ರಿಗಳು, ಸದಸ್ಯರಿಗೆ ಅಧಿಕಾರ ಉಳಿಸಿಕೊಳ್ಳುವ ಚಿಂತೆಯಾದರೆ, ಅದನ್ನು ಹೇಗಾದರೂ ಉರುಳಿಸುವುದು ಹೇಗೆಂಬ ಚಿಂತೆ ವಿರೋಧ ಪಕ್ಷಗಳದ್ದು. ಇವರ ಮೇಲಾಟಗಳ ಮಧ್ಯೆ ಅತಂತ್ರವಾದದ್ದು ಅರಣ್ಯ ವಿದ್ಯಾರ್ಥಿಗಳ ಭವಿಷ್ಯ.

ಈ ಎಲ್ಲ ತೊಳಲಾಟಗಳ ಮಧ್ಯೆ ಅತಂತ್ರ ಸ್ಥಿತಿಯಲ್ಲೇ ಕಾಡಿನ ಬದಿಯ ಪುಟ್ಟ ಪಟ್ಟಣಗಳನ್ನು ಬಿಟ್ಟು ರಾಜಧಾನಿಯತ್ತ ಹೊರಟಿದ್ದಾರೆ ಈ ಅರಣ್ಯ ಕಾಲೇಜುಗಳ ಮಕ್ಕಳು. ಬೆಂಗಳೂರಿಗೆ ಬಂದು ಜನವರಿ 10ರಿಂದ ರಾಜಧಾನಿಯಲ್ಲೇ ಮುಷ್ಕರ ಹೂಡಬೇಕೆಂಬುದು ಈಗ ಅವರ ತೀರ್ಮಾನ.ತಮ್ಮ ನ್ಯಾಯಯುತ ಬೇಡಿಕೆಗೆ ರಾಜಧಾನಿಯಲ್ಲಿನ ಸಹೃದಯಿಗಳ ಬೆಂಬಲ ಲಭಿಸೀತು, ಆಗಲಾದರೂ ಸರ್ಕಾರ ಸ್ಪಂದಿಸೀತು ಎಂಬುದು ಅವರ ಆಸೆ.

ಆಧ್ಯಯನ ಸಮಿತಿಯೆಂಬ ಪ್ರಹಸನ..!

ವಿದ್ಯಾರ್ಥಿಗಳ ಮುಷ್ಕರ ಆರಂಭವಾದ ಒಂದೂವರೆ ತಿಂಗಳ ಬಳಿಕ ನವೆಂಬರ್ 9ರಂದು ವಿದ್ಯಾರ್ಥಿ ಸಮಸ್ಯೆಯ ಚರ್ಚೆಗಾಗಿ ಅರಣ್ಯ ಸಚಿವರ ಕಚೇರಿಯಲ್ಲಿ ಅರಣ್ಯ ಸಚಿವ ವಿಜಯಶಂಕರ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆದು ಅಧ್ಯಯನ ಸಮಿತಿಯನ್ನು ರಚಿಸಲಾಯಿತು.

ವಿದ್ಯಾರ್ಥಿ ಧುರೀಣರ ಆಗ್ರಹದ ಬಳಿಕ ಸಮಿತಿಗೆ ಇಬ್ಬರು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಲಾಯಿತು. ಆದರೆ ಸಮಿತಿ ರಚನೆಯಾದಾಗ ವಿದ್ಯಾರ್ಥಿಗಳನ್ನು ಸೇರಿಸಲೇ ಇಲ್ಲ. ಸಚಿವರ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಉಭಯ ವಿಶ್ವ ವಿದ್ಯಾಲಯಗಳ ಕುಲಪತಿಗಳು ಮತ್ತು ಶಿರಸಿ, ಪೊನ್ನಂಪೇಟೆ ಅರಣ್ಯ ಕಾಲೇಜಗಳ ಡೀನ್‌ಗಳು ಇರಬೇಕೆಂದೂ ನಿರ್ಧರಿಸಲಾಗಿತ್ತು. ಆದರೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಹೆಸರು ಇರಲಿಲ್ಲ.

ಕುಲಪತಿಗಳು ಮತ್ತು ಡೀನ್‌ಗಳು ವಿದ್ಯಾರ್ಥಿಗಳ ಬೇಡಿಕೆ ಪರ ನಿಲ್ಲಬಹುದು ಎಂಬ ಅನುಮಾನ ಕಾಡುತ್ತಿದ್ದಂತೆಯೇ ಅಧಿಕಾರಿಗಳು ಆಟವಾಡಿದರು.ಕುಲಪತಿಗಳು, ಡೀನ್‌ಗಳ ಮೇಲೆ ಅಧಿಕಾರ ಹೊಂದಿದ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು  ಸೇರಿಸಿ ಹೊಸ ಸಮಿತಿಯ (ಎರಡನೇ) ಪಟ್ಟಿ ಪ್ರಕಟಿಸಿದರು.

ಈ ಸಮಿತಿ ಡಿಸೆಂಬರ್ 9ರ ಮೊದಲು ವರದಿ ಸಲ್ಲಿಸಬೇಕೆಂದು ತೀರ್ಮಾನಿಸಲಾಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯೆಯೇ ಕಲಾಪ ನಡೆಸಿದ ಸಮಿತಿ ನಿಗದಿತ ದಿನಾಂಕಕ್ಕೆ ಮೊದಲೇ ವರದಿಯನ್ನೂ ಸಲ್ಲಿಸಿತು. ಆದರೆ ಆ ವರದಿಯಲ್ಲಿ ಏನಿದೆ ಎಂಬುದು ಮಾತ್ರ ಇಂದಿಗೂ ನಿಗೂಢ...!

ಮಾನವ ಹಕ್ಕು ಆಯೋಗದ ನೋಟಿಸ್

ಅರಣ್ಯ ವಿದ್ಯಾರ್ಥಿಗಳ ಬೇಡಿಕೆ ಹಾಗೂ ಮುಷ್ಕರದ ಬಗ್ಗೆ ಸವಿವರವಾಗಿ 3-10-2010ರ ‘ಪ್ರಜಾವಾಣಿ’ ಶಿಕ್ಷಣ ಪುರವಣಿಯಲ್ಲಿ ಬಂದ ಬರಹ ತುರುವೇಕೆರೆಯ ಸಿದ್ಧಲಿಂಗೇಗೌಡ ಅವರ ಮನ ಕಲಕಿತು. ಅವರು ಈ ಲೇಖನವನ್ನೇ ಆಧರಿಸಿ 13-10-2010ರಂದು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದರು.

ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಮಾನವ ಹಕ್ಕು ಆಯೋಗ 26-10-2010ರಂದು ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿತು. ಕೃಷಿ ಇಲಾಖಾ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರು ಮತ್ತು ಧಾರವಾಡ ಕೃಷಿ  ವಿಶ್ವ ವಿದ್ಯಾಲಯಗಳ ಕುಲಪತಿಗಳಿಗೆ ವಾರದೊಳಗೆ ವರದಿ ನೀಡುವಂತೆ ಸೂಚಿಸಿ 25-11-2010ರಂದು ಪತ್ರ ಬರೆದು ಕೈತೊಳೆದುಕೊಂಡರು.
ಆಯೋಗಕ್ಕೆ ಸಮರ್ಪಕ ಉತ್ತರ ಮಾತ್ರ ಎಲ್ಲಿಂದಲೂ ಬರಲೇ ಇಲ್ಲ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT