ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಾಹಿತ್ಯ ಸಮ್ಮೇಳನ 21ರಿಂದ

Last Updated 20 ಜೂನ್ 2011, 6:55 IST
ಅಕ್ಷರ ಗಾತ್ರ

ಶಿರಸಿ : ಪುರಾಣ ಸಂಸ್ಕೃತಿಗಳಲ್ಲಿ ಅರಣ್ಯ ಸಾಹಿತ್ಯದ ಸ್ಥಾನ ಮತ್ತು ಅರಣ್ಯ ಸಾಹಿತ್ಯದ ಪ್ರಮುಖ ಕೃತಿಗಳ ಕುರಿತು ಚಿಂತನೆ ನಡೆಸುವ ಉದ್ದೇಶದಿಂದ ಇದೇ 21 ಮತ್ತು 22ರಂದು ನಗರದ ಅರಣ್ಯ ಕಾಲೇಜಿನ ಸಭಾಭವನದಲ್ಲಿ  ಅರಣ್ಯ ಸಾಹಿತ್ಯ ಸಮ್ಮೇಳನ  ಏರ್ಪಡಿಸಲಾಗಿದೆ.

ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಅರಣ್ಯ ಕಾಲೇಜು  ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕಗಳ ಆಶ್ರಯದಲ್ಲಿ  ಸಮ್ಮೇಳನ  ಆಯೋಜಿಸಲಾಗಿದೆ.

21ರ ಬೆಳಿಗ್ಗೆ 10.30 ಗಂಟೆಗೆ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟಿಸುವರು.  ವಿಜ್ಞಾನ ಮತ್ತು ಪರಿಸರ ಬರಹಗಾರ ನಾಗೇಶ ಹೆಗಡೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಕಾದಂಬರಿಕಾರ ನಾ. ಡಿಸೋಜಾ, ಕನ್ನಡ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದ ಅಧ್ಯಕ್ಷ ರೋಹಿದಾಸ ನಾಯಕ ಪಾಲ್ಗೊಳ್ಳುವರು. ನಂತರ ನಡೆಯುವ `ಪರಂಪರೆ ಮತ್ತು ಕಾನನ~ ಗೋಷ್ಠಿಯಲ್ಲಿ ಉಪನ್ಯಾಸಕ ಉಮಾಕಾಂತ ಭಟ್ಟ `ಕೆರೇಕೈ ವೇದೋಪನಿಷತ್‌ಗಳಲ್ಲಿ ಅರಣ್ಯ~, ವಿಶ್ರಾಂತ ಉಪನ್ಯಾಸಕ ವಿ.ಆರ್.ಜೋಶಿ `ಪುರಾಣಗಳಲ್ಲಿ ಅರಣ್ಯ~, ವೇದ ವಿದ್ವಾಂಸ ನಾಗೇಂದ್ರ ಭಟ್ಟ ಹಿತ್ಲಳ್ಳಿ `ವರಾಹಮಿಹಿರನ ಅರಣ್ಯ ಮಂತ್ರಿಮಂಡಳ~ ಕುರಿತು ಮಾತನಾಡುವರು.

ಚಿಂತಕ ಗಣೇಶ ಭಟ್ಟ ಉಪ್ಪೋಣಿ ಅಧ್ಯಕ್ಷತೆ ವಹಿಸುವರು. 12.30 ಗಂಟೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ `ಮಹಾಕಾವ್ಯಗಳಲ್ಲಿ ಅರಣ್ಯ~, ಕತೆಗಾರ ಶ್ರೀಧರ ಬಳಗಾರ `ಕಾದಂಬರಿಗಳಲ್ಲಿ ಅರಣ್ಯ~, ಜಾನಪದ ವಿದ್ವಾಂಸ ಎನ್.ಆರ್. ನಾಯಕ `ಜಾನಪದ ಸಾಹಿತ್ಯದಲ್ಲಿ ಅರಣ್ಯ~ ಕುರಿತು ಮಾತನಾಡುವರು.

ಕವಿ ಧರಣೇಂದ್ರ ಕುರಕುರಿ ಅಧ್ಯಕ್ಷತೆ ವಹಿಸುವರು. ಲೇಖಕಿ ವೈದೇಹಿ  `ಮಹಿಳೆಯರ ಸಾಹಿತ್ಯದಲ್ಲಿ ಅರಣ್ಯ~,  ವಿಜ್ಞಾನಿ ಕೆ.ಎನ್. ಗಣೇಶಯ್ಯ  `ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಅರಣ್ಯ ಸಂಪನ್ಮೂಲ~ ಕುರಿತು ವಿಷಯ ಮಂಡನೆ ಮಾಡುವರು.

ಸಾಹಿತಿ ಭಾಗೀರಥಿ ಹೆಗಡೆ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ನಿರಂಜನ ವಾನಳ್ಳಿ `ನುಡಿಚಿತ್ರ ಸಾಹಿತ್ಯದಲ್ಲಿ ಅರಣ್ಯ~, ಪ್ರಾಧ್ಯಾಪಕ ಮೋಹನ ಗುಡ್ಡೆ `ಅರಣ್ಯ ವಿಜ್ಞಾನ ಸಾಹಿತ್ಯ~, ಆಯುರ್ವೇದ ಶಾಸ್ತ್ರಜ್ಞ ಡಾ.ಸತ್ಯನಾರಾಯಣ ಭಟ್ಟ `ಆಯುರ್ವೇದ ಸಾಹಿತ್ಯ~ ಕುರಿತು ವಿಚಾರ ಮಂಡಿಸುವರು. ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ಟ ಅಧ್ಯಕ್ಷತೆ ವಹಿಸುವರು.

ಅರಣ್ಯ ಸಾಹಿತ್ಯೋತ್ಸವ: ಜೂ.22ರಂದು ಬೆಳಿಗ್ಗೆ ನಡೆಯಲಿರುವ ಅರಣ್ಯ ಸಾಹಿತ್ಯೋತ್ಸವವನ್ನು ರಾಜ್ಯ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ದಿಕ್ಸೂಚಿ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಸಂಸದ ಅನಂತಕುಮಾರ ಹೆಗಡೆ, ಪತ್ರಕರ್ತ ವಿಶ್ವೇಶ್ವರ ಭಟ್ಟ ಪಾಲ್ಗೊಳ್ಳುವರು. ನಂತರ ನಡೆಯುವ ಗೋಷ್ಠಿಯಲ್ಲಿ ಬೇಟೆ ಸಾಹಿತ್ಯ ಬರಹಗಾರ ಟಿ.ಎಸ್. ರಮಾನಂದ `ಬೇಟೆ ಸಾಹಿತ್ಯ~, ಚಿಂತಕ ಪುಟ್ಟು ಕುಲಕರ್ಣಿ  `ರಾಜನೀತಿ ಮತ್ತು ಅರಣ್ಯ~, ಹಿರಿಯ ವಕೀಲ ಬಿ.ಡಿ.ಹೆಗಡೆ ದೊಡ್ಮನೆ `ಕಾನೂ ಸಾಹಿತ್ಯದಲ್ಲಿ ಅರಣ್ಯ~ ಕುರಿತು ಮಾತನಾಡುವರು. 

ವಿಜ್ಞಾನಿ ಎನ್.ಎ. ಮಧ್ಯಸ್ಥ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1.30 ಗಂಟೆಗೆ ನಡೆಯುವ ಗೋಷ್ಠಿಯಲ್ಲಿ ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ `ಅರಣ್ಯ ಚಳವಳಿ ಮತ್ತು ಸಾಹಿತ್ಯ~, ಹಿರಿಯ ಪತ್ರಕರ್ತ ಶ್ರೀಪಡ್ರೆ `ಸಾಹಿತ್ಯದಲ್ಲಿ ನೀರು, ಹವಾಮಾನ~, ಪ್ರಾಧ್ಯಾಪಕ ಶ್ರೀಧರ ಭಟ್ಟ `ಅರಣ್ಯ: ವರ್ತಮಾನ ದೃಷ್ಟಿ~ ಕುರಿತು ಅಭಿಪ್ರಾಯ ವ್ಯಕ್ತಪಡಿಸುವರು. ನಿವೃತ್ತ ಅರಣ್ಯಾಧಿಕಾರಿ ಎ.ಎನ್. ಯಲ್ಲಪ್ಪರೆಡ್ಡಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT