ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸೇರುತ್ತಿದೆ ಜಲಾಶಯದ ನೀರು!

ಅತ್ತಿವೇರಿ ಪಕ್ಷಿಧಾಮಕ್ಕೆ ನಿರ್ವಹಣೆಯ ಕೊರತೆ
Last Updated 9 ಡಿಸೆಂಬರ್ 2013, 8:35 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಈಗ ವಲಸೆ ಹಕ್ಕಿಗಳ ಕಲರವ ಕೇಳಿಬರುತ್ತಿದೆ. ಅಷ್ಟೇ ಜೋರಾಗಿ ಜಲಾಶಯದ ಸುತ್ತಮುತ್ತಲಿನ ಸಮಸ್ಯೆಗಳು ಮಾರ್ದನಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ ಅಗತ್ಯದಷ್ಟು ನೀರು ಸಂಗ್ರಹವಾಗಿದೆ. ಆದರೆ ದುರಸ್ತಿ ಕಾಣದ ಜಲಾಶಯದ ದಡಭಾಗದಿಂದ ಸಂಗ್ರಹಗೊಂಡಿರುವ ನೀರು ಕಾಲುವೆ ಮೂಲಕ ಅರಣ್ಯಕ್ಕೆ ಸೇರುತ್ತಿದೆ ಎಂಬ ಆರೋಪ ಅತ್ತಿವೇರಿ ಗ್ರಾಮಸ್ಥರಿಂದ ಕೇಳಿಬರುತ್ತಿದೆ.

‘ಜಲಾಶಯದ ದಡಭಾಗದಲ್ಲಿ ನೀರು ಸೋರಿಕೆ ಸ್ಥಳವನ್ನು ಚಿಕ್ಕ ನೀರಾವರಿ ಇಲಾಖೆಯವರು ಪತ್ತೆ ಹಚ್ಚಿ ಸೂಕ್ತಕ್ರಮ ಕೈಗೊಂಡಿದ್ದರೇ ನೀರು ಪೋಲಾಗುತ್ತಿರಲಿಲ್ಲ. ಹಲವು ಬಾರಿ ಈ ಬಗ್ಗೆ ಹೇಳಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಕೊನೆಪಕ್ಷ ಪೋಲಾಗುತ್ತಿರುವ ನೀರನ್ನು ರೈತರ ಹೊಲಗದ್ದೆಗಳಿಗೆ ಬರುವಂತೆ ಮಾಡಿದರೂ ನೀರು ಉಪಯೋಗವಾಗುತ್ತಿತ್ತು. ರೈತರ ಕೂಗು ಅರಣ್ಯರೋದನವಾಗುತ್ತಿದೆ’ ಎಂದು ಅತ್ತಿವೇರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ ದೂರುತ್ತಾರೆ.

‘ದಡಭಾಗದಲ್ಲಿ ಆಳೆತ್ತರ ಬೆಳೆದ ನಿರುಪಯುಕ್ತ ಗಿಡಗಂಟಿಗಳು ಕಾಲುದಾರಿಯನ್ನು ಮುಚ್ಚಿಹಾಕಿವೆ. ಅವುಗಳನ್ನು ಕತ್ತರಿಸಿ ಜಲಾಶಯದ ಸೊಬಗನ್ನು ಹೆಚ್ಚಿಸಬೇಕಾದವರು ಕಂಡು ಕಾಣದಂತೆ ವತಿರ್ಸುತ್ತಿದ್ದಾರೆ. ಇದೇ ರೀತಿ ನೀರು ಸೋರಿಕೆಯಾದರೆ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ವಲಸೆ ಹಕ್ಕಿಗಳು ಮತ್ತೊಂದು ಕಡೆ ವಲಸೆ ಹೋಗುವದರಲ್ಲಿ ಅನುಮಾನವಿಲ್ಲ’ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಪಕ್ಷಿಧಾಮಕ್ಕೆ ಸಂಚಾರದ ಕೊರತೆ:  ಇಲ್ಲಿನ ಪಕ್ಷಿಧಾಮಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಖಾಸಗಿ ವಾಹನಗಳಲ್ಲೇ ಪಕ್ಷಿಧಾಮಕ್ಕೆ ಬಂದು ಹೋಗಬೇಕಾದ ಅನಿವಾರ್ಯತೆಯಿದೆ. ಕಿತ್ತು ಹೋದ ಡಾಂಬರು ರಸ್ತೆ ಅತ್ತಿವೇರಿ ಪಕ್ಷಿಧಾಮಕ್ಕೆ ಬರುವ ಪಕ್ಷಿಪ್ರಿಯರನ್ನು ಸ್ವಾಗತಿಸುತ್ತಿದೆ. ವಲಸೆ ಹಕ್ಕಿಗಳನ್ನು ವೀಕ್ಷಿಸಲು ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಮಯ ಪೂರಕವಾಗಿದ್ದರೂ ಸಾರಿಗೆ ವ್ಯವಸ್ಥೆಯಿಲ್ಲದೇ ಹಗಲಿನಲ್ಲಿ ಬಂದು ಹೋಗುವ ಪ್ರವಾಸಿಗರಿಗೆ ಪಕ್ಷಿಗಳು ಗೋಚರಿಸದೇ ಕೇವಲ ಉದ್ಯಾನವನದಲ್ಲಿ ಕಾಲ ಕಳೆದು ಮರಳಬೇಕಾದ ಪರಿಸ್ಥಿತಿ. ಅರಣ್ಯ ಇಲಾಖೆಯವರು ಹಾಕಿರುವ ನಾಮಫಲಕದಲ್ಲಿ ಕಂಡುಬರುವ ಹಕ್ಕಿಗಳು ಒಂದಾದರೂ ಕಾಣಬಹುದೇ ಎನ್ನುವ ಕುತೂಹಲ ಪ್ರವಾಸಿಗರಲ್ಲಿ ಕಾಡದೇ ಇರಲಾರದು.

ದಾಂಡೇಲಿ ವನ್ಯ ಜೀವಿಗೆ ಹಸ್ತಾಂತರಿಸಲು ಆಗ್ರಹ: ಮುಂಡಗೋಡ ತಾಲ್ಲೂಕಿನಲ್ಲಿ ಅತ್ತಿವೇರಿ ಪಕ್ಷಿಧಾಮವಿದ್ದರೂ ಸಹಿತ ಇದರ ನಿರ್ವಹಣೆ ರಾಣೆಬೆನ್ನೂರ ವನ್ಯಜೀವಿ ಘಟಕಕ್ಕೆ ನೀಡಲಾಗಿದೆ. ಇದರಿಂದ ಪಕ್ಷಿಧಾಮದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವಿದೆ. ಇದನ್ನು ದಾಂಡೇಲಿ ವನ್ಯಜೀವಿ ಘಟಕಕ್ಕೆ ಹಸ್ತಾಂತರಿಸಿದರೇ ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂಬ ನಿರೀಕ್ಷೆ ಗ್ರಾಮಸ್ಥರದ್ದು. ಈ ಕುರಿತು ಶಾಸಕರಿಗೆ ಇತ್ತೀಚೆಗೆ ಮನವಿಯನ್ನು ನೀಡಲಾಗಿದೆ.

ದರ ಕಡಿತಕ್ಕೆ ಒತ್ತಾಯ: ಪಕ್ಷಿಧಾಮ ವೀಕ್ಷಣೆಗೆ ಪ್ರತಿ ವ್ಯಕ್ತಿಗೆ ತಲಾ ₨ 50 ನಿಗದಿಗೊಳಿಸಿರುವುದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅಡ್ಡಿಯಾಗಿದೆ ಎನ್ನಲಾಗಿದೆ.

‘ಖಾಸಗಿ ವಾಹನಗಳನ್ನು ತೆಗೆದುಕೊಂಡು ಅಷ್ಟು ದೂರದಿಂದ ಬಂದು ಇಷ್ಟು ಪ್ರವೇಶ ಹಣವನ್ನು ನೀಡುವುದು ಸಮಂಜಸವಲ್ಲ. ಅಲ್ಲದೇ ಪಕ್ಷಿಗಳು ಕಾಣದೇ ಹೋದರೆ ಬಂದಿದ್ದು ವ್ಯರ್ಥವಾಗುತ್ತದೆ. ಈ ಬಗ್ಗೆ ಪ್ರವೇಶ ದರವನ್ನು ಕಡಿತಗೊಳಿಸಬೇಕು’ ಎಂದು ಪಕ್ಷಿಪ್ರಿಯ ಹುಬ್ಬಳ್ಳಿಯ ಆನಂದ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT