ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಗಣಿಗಾರಿಕೆ: ಲೋಕಾಯುಕ್ತ ತನಿಖೆ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕನಕಪುರದಿಂದ ಚಾಮರಾಜನಗರದವರೆಗೂ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಚರ್ಚಿಸಿ ಅಗತ್ಯವೆನಿಸಿದರೆ ಲೋಕಾಯುಕ್ತ ತನಿಖೆಗೆ ವಹಿಸಲಾಗುವುದು~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಶುಕ್ರವಾರ ಇಲ್ಲಿ ಹೇಳಿದರು.

`ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಆ ಭಾಗದಲ್ಲಿ ಏನೇನು ಆಗುತ್ತಿದೆ ಎಂಬ ಬಗ್ಗೆ ಮೊದಲು ಅಧ್ಯಯನ ಮಾಡುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ತರಿಸಿಕೊಂಡು ನಂತರ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ~ ಎಂದು ಸುದ್ದಿಗಾರರಿಗೆ ತಿಳಿಸಿದರು.

`ಕನಕಪುರ ಸುತ್ತಮುತ್ತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಡೆಯವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಲವರು ದೂರು ನೀಡಿದ್ದಾರೆ. ಈ ವಿಷಯ ಅರಿತು ಶಿವಕುಮಾರ್ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರ ಮೇಲೆ ಒತ್ತಡ ಹೇರಿ, ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ~ ಎಂದರು.

`ರಾಜಕೀಯ ಉಳಿವಿಗಾಗಿ ಷಡ್ಯಂತ್ರ ನಡೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೆಗಾಸಿಟಿ ಯೋಜನೆ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದರು. ಇದರಲ್ಲಿ ನನ್ನ ಪಾತ್ರವಿಲ್ಲ ಎಂಬುದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ತನಿಖೆಗೆ ಆದೇಶಿಸಿದರು. ಆದರೆ ನಾನು ಆ ರೀತಿ ಸೇಡಿನ ರಾಜಕಾರಣ ಮಾಡುವುದಿಲ್ಲ. ಅಕ್ರಮಗಳನ್ನು ತಡೆಯಲು ಅಧಿಕಾರಿಗಳ ಬದಲಾವಣೆ ಸೇರಿದಂತೆ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಕ್ರಮ ಕೈಗೊಳ್ಳುತ್ತೇನೆ~ ಎಂದರು.

`ಮೆಗಾಸಿಟಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ. ಕಂದಾಯ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಕ್ರಿಮಿನಲ್ ಅಪರಾಧ ಎಸಗಿಲ್ಲ. 3-4 ದಿನಗಳ ಹಿಂದೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿಯಾಗಿ ಈ ಮಾಹಿತಿ ನೀಡಿದ್ದೇನೆ. ಅಲ್ಲದೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗಲೇ ಪ್ರಮಾಣ ಪತ್ರದಲ್ಲಿ ಈ ಎಲ್ಲ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ~ ಎಂದು ಸ್ಪಷ್ಟಪಡಿಸಿದರು.

`ಆರೋಪಗಳಿಂದ ನಾನು ವಿಚಲಿತನಾಗಿಲ್ಲ. ಕೆಲವು ಪತ್ರಿಕೆಗಳು ಸತ್ಯಕ್ಕೆ ದೂರವಾದ ವರದಿಗಳನ್ನು ಪ್ರಕಟಿಸಿವೆ. ಆ ಪತ್ರಿಕೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT