ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಯಿಂದ ಜನಸಭೆಗೆ

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗಾಯತ್ರಿ ದೇವಿ ರಾಜಮನೆ­ತನದಿಂದ ಬಂದು ವಿರೋಧ ಪಕ್ಷದ ಸದಸ್ಯೆಯಾಗಿ ಲೋಕ­ಸಭೆ ಪ್ರವೇಶಿಸಿದ ಮಹಿಳೆ. 1919ರಲ್ಲಿ ಪಶ್ಚಿಮ ಬಂಗಾಳದ ಕೂಚ್‌ ಬಿಹಾರದ ರಾಜಮನೆತನದಲ್ಲಿ ಜನಿಸಿದ ಈ ರಾಜಕುಮಾರಿ,  ಜೈಪುರ ರಾಜಮನೆ­ತನದ ಎರಡನೇ ಮಾನ್‌ಸಿಂಗ್‌ ಅವರ ಮೂರನೇ ಪತ್ನಿ.

1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ 562 ಮಹಾರಾಜರಲ್ಲಿ 20 ಮಂದಿ ರಾಜತಾಂತ್ರಿಕ ಸೇವೆಗೆ ಹೋದರು, 40 ಮಂದಿ ರಾಜ­ಕೀಯಕ್ಕೆ ಬಂದರು, ಆದರೆ ರಾಜಕೀಯದಲ್ಲಿ ಜೈಪುರದ ಈ ರಾಣಿ ಮಾಡಿದ ಪರಿಣಾಮ ಬೇರೆ ರಾಜಮನೆತನ­ದ­ವರು ಮಾಡಲಿಲ್ಲ ಎಂದು ಅಂದಿನ ಪತ್ರಿಕೆಗಳು ಬರೆದವು.

ಪ್ರಪಂಚದ 10 ಅತಿ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಪರಿಗಣಿತರಾಗಿದ್ದವರು ಗಾಯತ್ರಿ ದೇವಿ. ನಟ ಅಮಿತಾಭ್ ಬಚ್ಚನ್ ಪಟ್ಟಿ ಮಾಡಿ­ರುವ  ಮರೆಯಲಾಗದ ಮಹಿಳೆಯರಲ್ಲಿ ಈಕೆ ಒಬ್ಬರು. ಶ್ರೀಮಂತೆ– ಸುಂದರಿ– ಮೇಧಾವಿ– ‘ಮೊದಲ ದರ್ಜೆ ರಾಜಕಾರಣಿ’ ಎಂದು ಅವರನ್ನು ಆ ಕಾಲದ ಪತ್ರಿಕೆಗಳು ವರ್ಣಿಸಿ­ದ್ದವು.

ಆಕೆ ಮತ್ತು ರಾಜ ಇಬ್ಬರೂ ರಾಜಾಜಿ ಯವರ ಸ್ವತಂತ್ರ ಪಕ್ಷ ಸೇರಿದರು. ಗಾಯತ್ರಿ­ದೇವಿ ರಾಜಸ್ತಾನ­ದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಿ­ದರು. ಆಗ ರಾಜಾಜಿ ತಮ್ಮ ಪಕ್ಷದ ಪತ್ರಿಕೆಯಲ್ಲಿ ಗಾಯತ್ರಿಯವರನ್ನು ಝಾನ್ಸಿ ರಾಣಿಗೆ ಹೋಲಿಸಿದ್ದರು. ರಾಜಸ್ತಾನದ ಹೆಂಗಸರು ಪರದೆಯ ಹಿಂದೆ ಇರಬೇಕಿದ್ದ ಪರಿಸ್ಥಿತಿ­ಯಲ್ಲಿ ಆಕೆ  ರಾಜಸ್ತಾನದ ಜೈಪುರದಿಂದ ಸ್ವತಂತ್ರ ಪಕ್ಷದ ಟಿಕೆಟಿನಿಂದ ಲೋಕಸಭಾ  ಚುನಾವಣೆ ಎದು­ರಿಸಿ ಕಾಂಗ್ರೆಸ್‌ ವಿರುದ್ಧ 1962, 1967, 1971ರಲ್ಲಿ ಸತತವಾಗಿ ವಿಜಯಿಯಾದದ್ದು ವಿಶೇಷ.

ಇವರು 1962ರಲ್ಲಿ ಅವರು ಶೇ.78 ಮತಗಳನ್ನು ಪಡೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. ಚಲಾಯಿಸ­ಲಾದ 2,46,516 ಮತಗಳಲ್ಲಿ ಇವರಿಗೆ 192,909 ಮತಗಳು ಬಂದಿದ್ದವು! 1975ರ ತುರ್ತು ಪರಿಸ್ಥಿತಿ­ಯಲ್ಲಿ ತೆರಿಗೆ ಪಾವತಿಸಿಲ್ಲ ಎಂಬ ಸುಳ್ಳು ಆರೋಪದ ಮೇಲೆ ಅವರು ಬಂಧನಕ್ಕೆ ಒಳಗಾಗಿ 5 ತಿಂಗಳು ತಿಹಾರ್ ಜೈಲಿನಲ್ಲಿದ್ದರು. 1999 ರಲ್ಲಿ ತೃಣಮೂಲ ಕಾಂಗ್ರೆಸ್ ಅವರನ್ನು ಕೂಚ್ ಬಿಹಾರ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನೀಡಿದ ಆಹ್ವಾನಕ್ಕೆ ಅವರು ಪ್ರತಿಸ್ಪಂದಿಸಲಿಲ್ಲ.

ಪೋಲೋ, ಕುದುರೆ ಸವಾರಿ ಮತ್ತು ಶಿಕಾರಿ ಪ್ರಿಯೆಯಾಗಿದ್ದ ಗಾಯತ್ರಿದೇವಿ ಜೈಪುರದಲ್ಲಿ ಬಾಲಕಿ­ಯರ ಸಾರ್ವಜನಿಕ ಶಾಲೆ ತೆರೆದರು, ಜೈಪುರ ಸಾಂಪ್ರ­ದಾ­ಯಿಕ ಕುಂಭಕಲೆಯ (ಬ್ಲೂ ಪಾಟರಿ) ಉಳಿವಿಗೆ ಶ್ರಮಿಸಿದರು.

‘A Princess Remembers: The Memoirs of the Maharani of Jaipur’ ಇದು ಅವರ ಆತ್ಮಕತೆ. 90 ವರ್ಷ ಜೀವಿಸಿದ್ದ ಆಕೆ 2009ರಲ್ಲಿ ನಿಧನ­ರಾದರು. ರಾಜವೈಭವ, ಪ್ರಜಾಪ್ರಾತಿನಿಧ್ಯ ಎರ­ಡನ್ನೂ ಪ್ರತಿನಿಧಿಸಿದ ಇತಿಹಾಸದ ಸಂಧಿ ಕಾಲದಲ್ಲಿದ್ದ ಸಂಸದೆ –ಮಹಾರಾಣಿ ಗಾಯತ್ರಿದೇವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT