ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವತ್ತೆರಡು ವರ್ಷಗಳ ಪ್ರೇಮ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಉಪ್ಪಿನಕಾಯಿ ಮೋಚಿ~ ತಾನೊಬ್ಬ ನಟನಾಗುತ್ತೇನೆ ಎಂದು ಕನಸು ಕೂಡ ಕಂಡಿರದ ಕಾಲ. ಅಪ್ಪನ ಜವಳಿ ಅಂಗಡಿಯಲ್ಲಿ ವ್ಯವಹಾರ ನೋಡಿಕೊಂಡಿದ್ದರು. ಆದರೆ 12 ವರ್ಷದವರಿದ್ದಾಗಲೇ ಕೆ.ವಿ.ಅಯ್ಯರ್ ಅವರ ಮಾಸ್ತರಿಕೆಗೆ ಮಾರು ಹೋಗಿದ್ದರು. ಇತ್ತ ಮನೆಯಲ್ಲಿ ಕಟ್ಟುನಿಟ್ಟು.

ನಾಟಕ ಆಡುವುದಿರಲಿ ನೋಡುವುದು ಕೂಡ ತಪ್ಪು ಎಂದು ಭಾವಿಸುತ್ತಿದ್ದ ಕಾಲ. ನಾಟಕ ಸಿನಿಮಾ ಎಂದರೆ ಕೆಲಸಕ್ಕೆ ಬಾರದವರು ಮಾಡುವ ಕೆಲಸ ಎಂದು ಬಹುತೇಕರು ಅಂದುಕೊಂಡಿದ್ದರು. ಲೋಕನಾಥ್ ಮನೆಯಲ್ಲಿ ರೆಬೆಲ್ ಸ್ಟಾರ್! ಎಲ್ಲರದೂ ಒಂದು ಯೋಚನೆಯಾದರೆ ಅವರದು ಮತ್ತೊಂದು ಯೋಚನೆ. ಆದರೆ ಎಂದೂ ತಂದೆ ತಾಯಿಯ ಮಾತಿಗೆ ಎದುರಾಡದ ವಿನಯ.

ರತ್ನದಂತಹ ಹುಡುಗಿ
ಆ ವಿನಯವೇ ಅವರ ಪಾಲಿಗೆ ವರದಾನವಾಯಿತು. ಅಣ್ಣನಿಗೆ ಆಗಲೇ ಮದುವೆಯಾಗಿತ್ತು. ಇನ್ನು ತಮ್ಮ ಸರದಿ ಎಂಬ ಅರಿವೂ ಇತ್ತು. ಒಂದು ದಿನ ಮನೆಯವರೆಲ್ಲ ಸೇರಿ `ಮೈಸೂರಿನಲ್ಲಿ ನಾಳೆ ಒಂದು ಮದುವೆ ಕಣಯ್ಯ. ಹೊರಡು~ ಎಂದರು. ಲೋಕನಾಥ್ ತುಂಟತನದಿಂದ `ಯಾರದು?~ ಎಂದು ಕೇಳಿದರು. `ಇನ್ನಾರದ್ದು? ನಿನ್ನದೇ. ನಡಿ ನಡಿ, ತಮಾಷೆ ಮಾಡಬೇಡ~ ಎಂಬ ಉತ್ತರ! ಯಾರು ಹುಡುಗಿ, ಎಲ್ಲಿಯವಳು ಎಂಬುದು ಕೂಡ ವರನಿಗೆ ಗೊತ್ತಿರಲಿಲ್ಲ. `ನಾನು ಹುಡುಗಿಯನ್ನೇ ನೋಡಿಲ್ಲವಲ್ಲ~ ಎನ್ನುವ ಪ್ರಶ್ನೆ. `ನೀನೇನು ನೋಡುವುದು? ನೋಡಬೇಕಾದವರೆಲ್ಲಾ ನೋಡಿಯಾಗಿದೆ, ನಡಿ ನಡಿ~ ಎಂಬ ಮಾರುತ್ತರ.
ಅದು 1949 ಜೂನ್ 12. ಮದುವೆ ಮಂಟಪದಲ್ಲಿಯೇ ಗಂಡು ಹೆಣ್ಣಿಬ್ಬರೂ ಪರಸ್ಪರ ಮುಖ ನೋಡಿದ್ದು. ಎರಡು ಸಾವಿರ ರೂಪಾಯಿಯಲ್ಲಿ ಮದುವೆ ಮುಗಿಯಿತು. ಅರವತ್ತೆರಡು ವರ್ಷಗಳ ಹಿಂದಿನ ಮದುವೆಯ ಲಗ್ನ ಪತ್ರಿಕೆ ಈಗಲೂ `ಚೆಲುವ ಹಾಡಿಗೆ ಒಲವು ಸೇರಿಕೊಂಡ...~ ಕತೆ ಹೇಳುತ್ತಿದೆ.

ಹುಡುಗಿ ಗಂಗಮ್ಮ ತುಮಕೂರಿನವರು. ಲೋಕನಾಥ್ ಅವರ ತಾಯಿ ಕೂಡ ಅದೇ ಊರಿನವರು. `ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು~ ತಂದಿದ್ದೇನೆ ಎಂಬಂತೆ ತಾಯಿಗೆ ಹೆಮ್ಮೆ. ಎರಡೂ ಮನೆಯವರು ಸಂಬಂಧಿಕರಲ್ಲ, ಪರಿಚಿತರು. ಗಂಗಮ್ಮ ತಾಯಿಯಿಲ್ಲದ ಹುಡುಗಿ. ಅಜ್ಜಿಯೇ ಹೊಟ್ಟೆ ಬಟ್ಟೆ ಕಟ್ಟಿ ಸಲಹಿದ್ದರು. ಮದುವೆಯ ಸಂದರ್ಭದಲ್ಲಿ ಅಜ್ಜಿ ಹೇಳಿದ ಮಾತು: ಮೊಮ್ಮಗಳ ಕಣ್ಣಲ್ಲಿ ನೀರು ತರಿಸಬೇಡ. ಲೋಕನಾಥ್ ಮಾತು ಕೊಟ್ಟರು.

ಮದುವೆಯ ನಂತರ ಗಂಡು ಹೆಣ್ಣು ಒಟ್ಟಿಗೆ ಇರಬಾರದೆಂಬುದು ನಿಯಮ. ಆ ನಿಯಮಕ್ಕೆ ಬದ್ಧರಾಗಿ ಸತತ ಇಬ್ಬರೂ ದೂರ ಉಳಿದಿದ್ದು ಸತತ ಏಳು ವರ್ಷಗಳ ಕಾಲ! ಹುಡುಗ ಬೆಂಗಳೂರಿನಲ್ಲಿ. ಹುಡುಗಿ ತುಮಕೂರಿನಲ್ಲಿ. ಮೇಘವೂ ಇಲ್ಲ, ಸಂದೇಶವೂ ಇಲ್ಲ.

ಗಂಗಮ್ಮನವರು ಸೊಸೆಯಾಗಿ ಕಾಲಿಟ್ಟಿದ್ದು 48 ಮಂದಿ ಇದ್ದ ಕೂಡು ಕುಟುಂಬಕ್ಕೆ. ಆ ವೇಳೆಗೆ ಲೋಕನಾಥ್ ಒಳಗೆ ಪುಟ್ಟ ಕಲಾವಿದನೊಬ್ಬ ಕೈಕಾಲು ಆಡಿಸುತ್ತಿದ್ದ. ಮನೆಯಲ್ಲಿ ಹತ್ತು ಗಂಟೆ ನಂತರ ಯಾರೇ ಬಂದರೂ ಒಳಗೆ ಸೇರಿಸುತ್ತಿರಲಿಲ್ಲ. ಟಿ.ಪಿ.ಕೈಲಾಸಂ ಅವರ ನಾಟಕ `ತಾಳಿಕಟ್ಟೋ ಕೂಲೀನೇ~ ನಾಟಕದ ತಾಲೀಮು ನಡೆಯುತ್ತಿದೆ.
 
ನಿರ್ದೇಶಕರ ಜತೆ ಮಾತನಾಡುತ್ತಾ ಆಡುತ್ತಾ ಲೋಕನಾಥ್ ಅವರಿಗೆ ಸಮಯ ಸರಿದದ್ದೇ ಗೊತ್ತಿಲ್ಲ. ಮನೆಗೆ ಬಂದು ನೋಡುತ್ತಾರೆ ಮುಚ್ಚಿದ ಬಾಗಿಲು. ಆಗೆಲ್ಲಾ `ಚ್‌ಚ್~ ಎಂದು ಸದ್ದು ಮಾಡಿ,  ಕಿಟಿಕಿಯ ಬಳಿ ತನ್ನ ಇರುವನ್ನು ಪ್ರಕಟಪಡಿಸಿದಾಗ ಕದ್ದು ಬಾಗಿಲು ತೆಗೆಯುತ್ತಿದ್ದುದು ಅವರ ಪತ್ನಿ.

ಒಲವು ದೇವರ ಹೆಸರು
ಹದಿ ಹರೆಯದ ಆ ಹುಡುಗಿಗೆ ಮಾವ ಏನೆಂದುಕೊಂಡಾರೆಂಬ ಭಯ. ಜತೆಗೆ ಮನೆಯ ಗಂಡಸರು ಹೊರಗೆ ದುಡಿಯುತ್ತಿದ್ದಾಗ ಇವರು ಪಾರ್ಟು ಮಾಡುತ್ತಾರೆ. ಬೇರೆಯವರ ಅಸಡ್ಡೆಗೆ ಗುರಿಯಾಗುವುದಿಲ್ಲವೇ ಎಂಬ ಅಳುಕು. `ನಾನು ನಟಿಸುತ್ತೇನೆ. ಇದರಿಂದ ಬೇಸರವೇ?~ ಎಂಬ ಪ್ರಶ್ನೆಯನ್ನೂ ಲೋಕನಾಥ್ ಕೇಳಿದ್ದರು. `ಬೇಸರವಿಲ್ಲ, ಆದರೆ ಲೋಕ ಕೊಂಕಾಡೀತು~ ಎನ್ನುವ ಕಳವಳ ವ್ಯಕ್ತಪಡಿಸಿದರು. `ಎಲ್ಲರಂತೆ ನಾನಲ್ಲ~ ಎನ್ನುವುದು ಗಂಡನ ಸಮಾಧಾನ.

ಚಿತ್ರರಂಗದ ಕದ ತಟ್ಟಿದಾಗ ಮನೆಯಲ್ಲಿ ಅಪಸ್ವರ. ಇಷ್ಟರಲ್ಲಿ ವ್ಯವಹಾರದ ಕಾರಣಕ್ಕೆ ಕೂಡು ಕುಟುಂಬದಲ್ಲಿ ಬಿರುಕುಗಳೆದ್ದಿದ್ದವು. ಅವರು ಸಂಪೂರ್ಣವಾಗಿ ಕಲಾವಿದನಾಗಿ ತೊಡಗಿಕೊಂಡದ್ದು ಬೇರೆ ಮನೆ ಮಾಡಿದ ನಂತರ.

ಗಂಗಮ್ಮ, ಅವರ ನೆಂಟರಿಗೆಲ್ಲಾ ಪುಟ್ಟಗಂಗಾ ಆಗಿದ್ದರು. ಆದರೆ ಲಗ್ನ ಪತ್ರಿಕೆಯಲ್ಲಿ ಕೇವಲ ಗಂಗಮ್ಮ ಎಂಬ ಹೆಸರಿತ್ತು. ಮದುವೆಯ ದಿನ ಹೆಣ್ಣಿನ ನಿಜವಾದ ಹೆಸರೇನು ಎಂದು ಕೇಳಿಕೊಳ್ಳುವ ತವಕ ಲೋಕನಾಥರಿಗೆ. `ನಿನ್ನ ಹೆಸರೇನು?~ ಎಂದು ಕೇಳಿದರು.

ಇದು ಇವರಿಬ್ಬರ ನಡುವೆ ನಡೆದ ಮೊದಲ ಮಾತು. ಹೆಣ್ಣು ತನ್ನ ಅಜ್ಜಿಯ ಪಡಿಯಚ್ಚು. ಗಂಡ ಊಟ ಮಾಡಿದ ನಂತರವೇ ಊಟ ಮಾಡುವ ರೂಢಿ. ಅದು ಯಾವ ಮಟ್ಟಿಗೆ ಇದೆ ಎಂದರೆ ಲೋಕನಾಥ್ ತಿಂಗಳುಗಟ್ಟಲೆ ಶೂಟಿಂಗ್ ಎಂದು ಹೊರಗಿದ್ದಾಗಲೂ ಅವರ ಊಟವಾಯಿತೆಂದು ತಿಳಿದ ಬಳಿಕವೇ ಇವರ ಊಟ.
 
ಅರವತ್ತೆರಡು ವರ್ಷಗಳ ಸುದೀರ್ಘ ಯಾನದ ಬಳಿಕವೂ ಈ ರೂಢಿ ಚಾಲ್ತಿಯಲ್ಲಿದೆ. `ಇದು ಕೇವಲ ಕಂದಾಚಾರವಲ್ಲ. ಆಕೆ ನನ್ನ ಮೇಲಿಟ್ಟ ಪ್ರೀತಿ ಮತ್ತು ಗೌರವ~ ಎನ್ನುತ್ತಾರೆ ಅಂಕಲ್ ಲೋಕನಾಥ್. `ನನ್ನದು ಊಟ ಆಯಿತು ತಾಯಿ, ನೀನು ಮಾಡು~ ಎಂದ ನಂತರವೇ ಮಡದಿಗೆ ಅನ್ನ ಗಂಟಲಿಗಿಳಿಯುತ್ತದೆ.

ಬಿಸಿಲೊಳಗೆ ನೆಳಲೊಳಗೆ ಪಕ್ಕದಲಿ...
ಒಮ್ಮೆ ಗಾಂಧಿಬಜಾರಿನಲ್ಲಿ ಗಂಡ ಹೆಂಡತಿ ತರಕಾರಿ ತರಲು ಹೋಗಿದ್ದರು. ಹಿಂದಿನಿಂದ ಯಾರೋ `ತೆಂಗಿನಮರ, ತುಂಬೆಗಿಡ ಒಟ್ಟಿಗೆ ಹೋಗುತ್ತಿವೆ~ ಎಂದು ಕಿಚಾಯಿಸಿದರು. ಲೋಕನಾಥ್ ಎತ್ತರವಾಗಿದ್ದರೆ ಅವರ ಅರ್ಧದಷ್ಟು ಎತ್ತರ ಗಂಗಮ್ಮನವರದು. ಅಂದಿನಿಂದ ಅವರೊಟ್ಟಿಗೆ ಹೋಗಲು ನಿರಾಕರಿಸಿದರು ಗಂಗಮ್ಮ.
 
`ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬಾರದು~ ಎಂದು ಬುದ್ಧಿ ಹೇಳಿದರೂ ಕೇಳಲಿಲ್ಲ! ಹೆಂಡತಿಗೆ ಮನೆಯೇ ವಿಶ್ವ. ಮಕ್ಕಳು ಮರಿ ಜತೆ ಸುತ್ತಾಡುವಂತೆ ಸಲಹೆ ನೀಡಿದರೂ ಅವರು ಕೇಳುವವರಲ್ಲ. `ನೀವಿಲ್ಲದ್ದು ಎಂಥಾದ್ದು~ ಎಂಬ ಕಾಯಂ ಘೋಷವಾಕ್ಯ ಗಂಗಮ್ಮನವರಿಂದ.

`ಈಕೆ ತುಂಬಾ ಧೈರ್ಯವಂತೆ. ಯಾವತ್ತೂ ಇಂಥದ್ದು ಬೇಕು ಎಂದು ಕೇಳಿದವಳಲ್ಲ. ಹೆಚ್ಚಿಗೆ ಏನಾದರೂ ಬಟ್ಟೆ ಬರೆ ತಂದರೆ ಇಷ್ಟೇಕೆ ತಂದಿರಿ ಎಂದು ತಗಾದೆ ತೆಗೆಯುತ್ತಾಳೆ. ಅಷ್ಟೂ ವರ್ಷಗಳು ಮನೆ ನಡೆಸಿದವಳು ಇವಳು. ಹೆಸರಿಗೆ ನಾನು ಯಜಮಾನ. ಆಕೆ ನನ್ನ ಯಜಮಾನರು~ ಎನ್ನುವಾಗ ಲೋಕನಾಥ್ ಕೆನ್ನೆ ಕೆಂಪಾಗುತ್ತದೆ.

ಗಂಗಮ್ಮ ತುಂಬು ಗರ್ಭಿಣಿ. ಬಾವಿಯಲ್ಲಿ ನೀರು ಸೇದುತ್ತಿದ್ದಾರೆ! ನೆರೆಹೊರೆಯವರಿಂದ ಬೈಗುಳ. ಹಾಗೆಲ್ಲಾ ಕೆಲಸ ಮಾಡಿಸಬಾರದು ಎಂಬ ಎಚ್ಚರಿಕೆ. ಆದರೆ ಗಂಗಮ್ಮನವರಿಗೆ `ಹೆಚ್ಚು ಕೆಲಸ ಮಾಡಿದರೆ ಹೆರಿಗೆ ಸಲೀಸಾಗುತ್ತದೆ~ ಎಂದು ಯಾರೋ ಹೇಳಿದ ನೆನಪು. ಅದೇ ದಿನ ಆಸ್ಪತ್ರೆಗೆ ಕರೆದೊಯ್ದಾಗ ಕೈಯಲ್ಲಿತ್ತು ಗಂಡು ಮಗು.

ಕಾಲ ಕ್ರಮೇಣ ಅವರು ಐದು ಮಕ್ಕಳ ತಾಯಿಯಾದರು. ಹಾಲು ತರುವುದರಿಂದ ಹಿಡಿದು ಬ್ಯಾಂಕಿಗೆ ಹಣ ಕಟ್ಟುವವರೆಗೆ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಲೋಕನಾಥ್ ಮನೆಯಲ್ಲಿ ಅನ್ಯಮನಸ್ಕರಾಗಿ ಕುಳಿತಿದ್ದಾಗ `ಏನು ಒಳಗೆ ಕ್ಯಾರೆಕ್ಟರೈಸೇಷನ್ ನಡೀತಿದೆಯಾ?~ ಎನ್ನುತ್ತಿದ್ದರು. ಇವರು ಹೌದೋ ಇಲ್ಲವೋ ಎಂಬಂತೆ ತಲೆ ಆಡಿಸಿದಾಗ, `ಮನಸ್ಸಿಗೆ ಹಚ್ಚಿಕೊಳ್ಳಬೇಡಿ~ ಎಂಬ ಪ್ರೀತಿಯ ಮಾತು.

ಇಬ್ಬರೇ ಸಿನಿಮಾಗೆ ಹೋಗಿದ್ದು ಇಲ್ಲವೇ ಇಲ್ಲವಂತೆ. ಲೋಕವೇ ಮಾತನಾಡುವ `ಭೂತಯ್ಯನ ಮಗ ಅಯ್ಯು~ ಚಿತ್ರದ ಚಮ್ಮಾರನ ಪಾತ್ರ ಅದೇಕೋ ಏನೋ ಗಂಗಮ್ಮನವರಿಗೆ ಈವರೆಗೂ ಹಿಡಿಸಿಲ್ಲ. ಅವರು ಬಹುವಾಗಿ ಮೆಚ್ಚಿದ್ದು `ಅರುಣರಾಗ~ದ ನಾಯಕಿಯ ತಂದೆಯ ಪಾತ್ರ.
 
ಗಂಗಮ್ಮ ಸೊಗಸಾಗಿ ಅಡುಗೆ ಮಾಡುತ್ತಾರೆ ಎನ್ನುವುದನ್ನು ಬಾಯಲ್ಲಿ ನೀರಾಡುವಂತೆ ಹೇಳುತ್ತಾರೆ ಅವರ ಸಂಗಾತಿ. ಬಿಸಿಬೇಳೆಬಾತು,  ಸೊಪ್ಪುಗಳನ್ನು ಹಾಕಿ ಮಾಡುವ `ಮಶಪ್ಪು~ ಇವರಿಗಿಷ್ಟ. ಲೋಕನಾಥ್ ಮಾಡುವ ಉಪ್ಪಿನಕಾಯಿ ಅವರಿಗಿಷ್ಟ. `ಅಂಕಲ್~ ಉಪ್ಪಿನಕಾಯಿ ಮಾಡಬಹುದು, ಆದರೆ ತಿನ್ನುವಂತಿಲ್ಲ.
 
ಡಾಕ್ಟರ್ ಮಾಡಿದ ಅಪ್ಪಣೆ ಹಾಗೂ `ಯಜಮಾನರ~ ಆಜ್ಞೆಯನ್ನು ಮೀರುವಂತಿಲ್ಲ. ಹಾಗೆಂದು ಲೋಕನಾಥ್ ಸಿಟ್ಟು ಕೂಡ ಮಾಡಿಕೊಳ್ಳುವಂತಿಲ್ಲ. ಆಗೆಲ್ಲಾ ಅವರಿಗೆ ಗಂಗಮ್ಮನವರ ಅಜ್ಜಿ ಕಣ್ಮುಂದೆ ನಿಲ್ಲುತ್ತಾರೆ. ಹಿಂದೆ ಕೊಟ್ಟ ಮಾತು ನೆನಪಿಸುತ್ತಾರೆ! 

ಬಯಲು ಸೀಮೆಯ ಜಾಣ...
ಗಂಗಮ್ಮನವರಿಗೆ ಮಾತು ಗೊತ್ತಿಲ್ಲ. ಪಕ್ಕದಲ್ಲೇ ಇದ್ದ ಅವರು `ನಾವೆಂದೂ ರನ್ನ ಚಿನ್ನ ಅಂದವರಲ್ಲ~ ಎಂದಷ್ಟೇ ಹೇಳಿದರು. ಇವರು `ಏನ್ರೀ~ ಎನ್ನುತ್ತಾರೆ ಅವರು ಓಗೊಡುತ್ತಾರೆ. ಇಬ್ಬರೂ ಹೆಸರಿಟ್ಟು ಕರೆಯರು. ಲೋಕನಾಥ್ ಮನೆಯ ಹೆಸರು `ಪುಟ್ಟಿ~. ಅದು ಅವರ ಎದೆಯೊಳಗಿರುವ ಪುಟ್ಟಗಂಗಾಳ ಹೆಸರು. ಇಂಥ ಗಂಗಮ್ಮನವರಿಗೆ ಲೋಕನಾಥ್ `ದ್ರೋಹ~ ಬಗೆದದ್ದೂ ಇದೆ. ಅವರಿಗೆ ಹೃದಯಾಘಾತವಾಗಿತ್ತು.
 
ಮನೆಯ ಎಲ್ಲರಿಗೂ ಅದು ಹೊಸ ಆಘಾತ. ಯಾರಿಗೆ ಏನು ಮಾಡಬೇಕೆಂದು ಗೊತ್ತಿಲ್ಲ. ನಾಲ್ಕೈದು ವರ್ಷದ ಮೊಮ್ಮಗಳು `ಅಜ್ಜಾ ಹೆದರಬೇಡಿ. ದೇವರು ಇನ್ನೊಬ್ಬ ದೇವರಿಗೆ ಕೆಡಕು ಬಯಸಲಾರ~ ಎಂದು ದೊಡ್ಡವರಂತೆ ನುಡಿದಿದ್ದಳು. ವೈದ್ಯರು ನೆರವಿಗೆ ಬಂದರು. ಮನೆ ಬಿಟ್ಟು ಕದಲಬಾರದು ಎಂದರು.
 
ಮಾರನೆಯ ದಿನವೇ ನಾಟಕ ಪ್ರದರ್ಶನ. ನಿರ್ದೇಶಕ ಪ್ರಸನ್ನ ಅವರಿಗೆ ಆತಂಕ. ಲೋಕನಾಥ್ ಭರವಸೆ ಕೊಟ್ಟರು. `ಮನೆಗೆ ಮಾತ್ರ ತಿಳಿಸಬೇಡ. ನೀನು ಹೇಳಿದ ಸಮಯಕ್ಕೆ ಬರುತ್ತೇನೆ~ ಎಂದರು. ಹೃದಯದ ಬೇನೆ ಮರೆತು ಬಣ್ಣ ಹಚ್ಚಿದರು. `ಇದೇ ಆಕೆಗೆ ಮಾಡಿದ ದ್ರೋಹ~ ಎನ್ನುವಾಗ ಗಂಗಮ್ಮ ಅವರ ಸಮೀಪ ಇರಲಿಲ್ಲ!

`ಆಕೆಯ ಮುಂದೆ ಹೇಳಬಾರದು. ಅದೃಷ್ಟಕ್ಕಿಂತ ಹೆಚ್ಚಾಗಿ ಶ್ರಮದ ಮೇಲೆ ನಂಬಿಕೆ ಇಟ್ಟವನು ನಾನು. ಈ ಮದುವೆಗೆ ನಾನು ಒಪ್ಪದಿದ್ದರೆ ಎಂಥ ಸಂಗಾತೀನ ಮಿಸ್ ಮಾಡಿಕೊಳ್ಳುತ್ತಿದ್ದೆ ಅನ್ನಿಸುತ್ತದೆ. ಎಲ್ಲರಿಗಿಂತ ಹೆಚ್ಚು ಅದೃಷ್ಟವಂತ ನಾನು~ ಎಂಬ ತೃಪ್ತಿಯ ನಗೆ ಚೆಲ್ಲುತ್ತಾರೆ.

ಎಷ್ಟು ತಿಳಿದರೆ ಅಷ್ಟು ಚೆಲುವು
ಲೋಕನಾಥ್ ಕೆಲಹೊತ್ತು ಪ್ರೀತಿ ಪ್ರೇಮದತ್ತಲೂ ಹೊರಳಿದರು. `ಆಕೆ ಉಪವಾಸವಿದ್ದರೆ ನನಗೆ ದಿಗಿಲು. ನಾನು ಉಪವಾಸ ಕೆಟ್ಟರೆ ಆಕೆಗೆ ದಿಕ್ಕೇ ತೋಚದು. ನಮ್ಮಂತಹ ಜೋಡಿ ಸಿಗುವುದು ವಿರಳಾತಿವಿರಳ. ಮನಸ್ಸಿನ ಹೊಂದಾಣಿಕೆ ಅತಿ ಮುಖ್ಯ. ಅದು ಸಾಧ್ಯವಾದರೆ ಮನಸ್ಸು ಒಡೆಯದು~ ಎಂದರು.

`ಇತ್ತೀಚೆಗೆ ಆಕೆಗೆ ರಕ್ತದೊತ್ತಡ ಹೆಚ್ಚಾಯಿತು. ನನಗೆ ಒಮ್ಮೆಲೇ ಕತ್ತಲು ಕವಿಯಿತು. ಅದುವರೆಗೂ ಮುಂದಿನ ದಿನಗಳ ಬಗ್ಗೆ ಯೋಚಿಸಿಯೇ ಇರಲಿಲ್ಲ. ಈ ವಯಸ್ಸಿನಲ್ಲಿ ಆಕೆಯನ್ನು ಕಳೆದುಕೊಂಡರೆ ನನ್ನ ಗತಿಯೇನು? ಅಥವಾ ನಾನೇ ಇಲ್ಲವಾದರೆ ಆಕೆಯ ಪಾಡೇನು? ಹಾಗಾಗುವುದು ಸಾಧ್ಯವೇ ಇಲ್ಲ...~- ಹಾಗೆ ಮಾತನಾಡುತ್ತಿದ್ದುದು ಸ್ವತಃ ಲೋಕನಾಥ್ ಅಲ್ಲ, ಅವರ ತುಂಬು ಬದುಕು.
 
ಮಕ್ಕಳಲ್ಲಿ ಕೆಲವರು ವಿದೇಶದಲ್ಲಿ ನೆಲೆಸಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನಲ್ಲಿಯೇ ಇದ್ದಾರೆ. ಇಬ್ಬರ ಸಂಸಾರಕ್ಕೆ ಮುತ್ತುಗಳಂತೆ ಮಕ್ಕಳಿದ್ದಾರೆ. ಚೂರೂ ನೋವಾಗದಂತೆ ನೋಡಿಕೊಳ್ಳುತ್ತಾರೆ.

ಲೋಕನಾಥ್ ಬಗ್ಗೆ ಟೀವಿಯಲ್ಲೋ ಪತ್ರಿಕೆಗಳಲ್ಲೋ ಏನಾದರೂ ಬರೆದಿದ್ದರೆ ಅದನ್ನು ಖುದ್ದು ತರಿಸಿಕೊಂಡು ಮೊದಲು ಓದುವವರು ಗಂಗಮ್ಮ. ಹೀಗೆ ಅರವತ್ತೆರಡು `ಚೈತ್ರಗಳ ತಳಿರ ಕನಸು~ ಸಾಕಾರಗೊಂಡಿದೆ.

`ಒಂದರ್ಥದಲ್ಲಿ ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕಿನಂತೆಯೇ ನಮ್ಮ ಬದುಕು. ಆದರೆ ಆ ಮಹಾನುಭಾವ ಕವಿತೆ ಬರೆದರು. ನನಗೆ ಬರೆಯಲಾಗಲಿಲ್ಲ ಅಷ್ಟೇ ವ್ಯತ್ಯಾಸ~ ಎನ್ನುತ್ತ ಲೋಕನಾಥ್ `ಪುಟ್ಟಿ~ಯನ್ನೊಮ್ಮೆ ಕಣ್ಣುತುಂಬಿಕೊಂಡರು.

***
ಪ್ರೇಮಕ್ಕೆ ರೂಪಕವಾಗಿ ಮಹಲುಗಳನ್ನು, ಎಲ್ಲಿಯದೋ ಕಥೆಗಳನ್ನು ನಾವು ಉದಾಹರಿಸುತ್ತೇವೆ. ಆದರೆ ನಮ್ಮ ನಡುವೆಯೇ ಇರುವ ಲೋಕನಾಥ್ ಅವರ `ಅರವತ್ತೆರಡು ವರ್ಷಗಳ ಪ್ರೇಮ~ ಎಲ್ಲಕ್ಕಿಂತ ದೊಡ್ಡದೆನ್ನಿಸುತ್ತದೆ. ಅದು ಜೀವಂತ ಪ್ರೇಮರೂಪಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT