ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಶಿನಗೇರಿ ಆರೋಗ್ಯ ಕೇಂದ್ರಕ್ಕೆ ಬೀಗ!

Last Updated 18 ಅಕ್ಟೋಬರ್ 2012, 10:35 IST
ಅಕ್ಷರ ಗಾತ್ರ

ಮುಂಡಗೋಡ: ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ತಾಲ್ಲೂಕಿನ ಅರಿಶಿನಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಬಿದ್ದಿದೆ.

ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಲಾಗಿದ್ದರೂ ಸೂಕ್ತ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುಚ್ಚಿರುವ ಪರಿಣಾಮ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಎದುರಿಸುವಂತಾಗಿದೆ.

ತಾಲ್ಲೂಕಿನ ಅರಿಶಿಣಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಳೆದ ಐದಾರು ವರ್ಷಗಳ ಹಿಂದೆಯೇ ಉದ್ಘಾಟನೆ ಮಾಡಲಾಗಿತ್ತು. ಉದ್ಘಾಟನೆಯಾದ ಕೆಲ ತಿಂಗಳು ಕಾರ್ಯನಿರ್ವಹಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನಂತರ ಬಂದ ಆಗಿದೆ. ಈಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಗಿಡಗಂಟಿಗಳು ಕಟ್ಟಡದೆತ್ತರ ಬೆಳೆದಿವೆ. ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿ ಯಾವುದು ಎಂದು ಹುಡುಕಬೇಕಾದ ಪರಿಸ್ಥಿತಿಯಿದೆ. ಅರಿಶಿಣಗೇರಿ ಗ್ರಾಮಸ್ಥರು ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆಗೆ ಬರಬೇಕು. ಇಲ್ಲವೇ ಪಕ್ಕದ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯವಿದೆ.

`ವರ್ಷಕ್ಕೊಮ್ಮೆ ಗಿಡಗಂಟಿಗಳನ್ನು ಸ್ವಚ್ಛ ಮಾಡಿ ಕಟ್ಟಡಕ್ಕೆ ಸುಣ್ಣಬಣ್ಣ ಬಳೆಯುತ್ತಾರೆ. ನಂತರ ಕಟ್ಟಡಕ್ಕೆ ಬೀಗ ಹಾಕಲಾಗುತ್ತದೆ. ಕಟ್ಟಡದ ಹಿಂಬದಿಯ ಬಾಗಿಲು ಹಾಳಾಗಿದ್ದು ಒಳಗಿರುವ ವಸ್ತುಗಳು ದಾರಿಹೋಕರ ಪಾಲಾಗುತ್ತಿವೆ. ಈ ಬಗ್ಗೆ ಹಲವು ಸಲ ಮನವಿ ಸಲ್ಲಿಸಿದರೂ ಸಂಬಂಧಿಸಿದವರು ಗಮನ ಹರಿಸಿಲ್ಲ. ರಾತ್ರಿ ಸಮಯದಲ್ಲಿ ತೊಂದರೆ ಕಾಣಿಸಿಕೊಂಡರೆ 8-10 ಕಿ.ಮೀ. ದೂರದ ತಾಲ್ಲೂಕು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆಯಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು~ ಎಂದು ಗ್ರಾಮದ ಲಕ್ಷ್ಮಣ ಹೇಳುತ್ತಾರೆ.

ಮಳಗಿ, ಕಾತೂರ, ಹುನಗುಂದ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇಲ್ಲಿಯೂ ಸಹ ವೈದ್ಯರ ಕೊರತೆ ಕಾಡುತ್ತಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ವಾರದಲ್ಲಿ ಎರಡು ದಿನ ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ  ವೈದ್ಯ ಸಿಬ್ಬಂದಿಯದ್ದಾಗಿದೆ. ಗ್ರಾಮೀಣ ಭಾಗದ ಜನರು ಮಾತ್ರ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನೇ ನಂಬಿದ್ದಾರೆ.

ತಾಲ್ಲೂಕು ಮಟ್ಟದ ಆಸ್ಪತ್ರೆಯಲ್ಲಿಯೂ ಸಹ 11 ವೈದ್ಯ ಹುದ್ದೆಗಳಲ್ಲಿ ಆರು ಹುದ್ದೆಗಳು ಖಾಲಿಯಿವೆ. ಪ್ರತಿದಿನ 300ಕ್ಕೂ ಹೆಚ್ಚು ರೋಗಿಗಳು ಬರುವ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವ ಕಳಿಸಲಾಗಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT