ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸರ ದರ್ಬಾರು!

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

‘ಇಲ್ಲಿ ನಿಂತು ನಾಯಕನನ್ನು ಗುರಾಯಿಸುತ್ತಾ ಇರಬೇಕು’ ಎಂದು ನಿರ್ದೇಶಕರು ಸೂಚನೆ ನೀಡಿದ್ದರು. ನಾಯಕನನ್ನು ಗುರಾಯಿಸುತ್ತಲೇ ಇದ್ದರು, ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದ ಈ ನಟ. ಕ್ಯಾಮೆರಾ ಕಟ್‌ ಎಂದದ್ದೂ ತಿಳಿಯಲಿಲ್ಲ. ಬ್ರೇಕ್‌ನಲ್ಲಿ ಟೀ ಹೀರುತ್ತಾ ಕುಳಿತಿದ್ದಾಗಲೂ ನಾಯಕನನ್ನು ಗುರಾಯಿಸುತ್ತಿದ್ದರು. ‘ಹಾಗೆ ಗುರಾಯಿಸಬೇಡಯ್ಯಾ... ಸಾಕು. ಹೆದರಿಕೆ ಆಗುತ್ತೆ’ ಎಂದ ಮೇಲಷ್ಟೇ ಗೊತ್ತಾಗಿತ್ತು, ತಾನು ಗುರಾಯಿಸಿದ್ದು ಸಾಕು ಎಂದು!

ನೋಡಲಿಕ್ಕೆ ಭಯ ಹುಟ್ಟಿಸುವಂತಿರುವ ವ್ಯಕ್ತಿಯೊಳಗಿನ ಮುಗ್ಧತೆಗೆ ಮೇಲಿನ ಪ್ರಸಂಗ ಒಂದು ಉದಾಹರಣೆಯಷ್ಟೇ. ಹಾಸ್ಯ ಪಾತ್ರವೇ ಇರಲಿ, ಖಳನ ಪಾತ್ರದಲ್ಲಿ ಕೊಚ್ಚುವ ಪಾತ್ರವೇ ಇರಲಿ, ಮುಖದಲ್ಲಿನ ಮುಗ್ಧತೆ ಮರೆಯಾಗುವುದಿಲ್ಲ. ಈ ಕಾರಣಕ್ಕೇ ಪ್ರತಿ ಪಾತ್ರದಲ್ಲಿಯೂ ಇಷ್ಟವಾಗುತ್ತಾರೆ ಅರಸು ಮಹಾರಾಜ್‌. ಅರಸು ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 11 ವರ್ಷಗಳಾದವು. ಈ ಅವಧಿಯಲ್ಲಿ ಅಂದಾಜು 80 ಸಿನಿಮಾಗಳಲ್ಲಿ ನಟಿಸಿರುವ ಅವರದು ದೇಹಾಕಾರಕ್ಕೆ ವಿರುದ್ಧವಾದ ಮನಸು. ಕಪ್ಪನೆಯ, ದುಂಡು ದೇಹದ ಅರಸು ಎದುರಿಗೆ ಬಂದಾಗ ‘ನಿನ್ನನ್ನು ನೋಡಿದರೆ ಭಯ ಆಗುತ್ತದೆ’ ಎಂದು ತಮಾಷೆ ಮಾಡುತ್ತಾರಂತೆ ದುನಿಯಾ ಸೂರಿ.

ದೇಹಾಕೃತಿಯೇ ತಮಗೆ ವರದಾನ ಎಂದು ನಂಬಿರುವವರು ಅರಸು. ಅಂದಹಾಗೆ, ಅರಸು ಮಹಾರಾಜ್‌ ಎನ್ನುವುದು ಅವರ ಮೂಲ ಹೆಸರಲ್ಲ. ಜಡೆ ಮಾಯಸಂದ್ರದಲ್ಲಿ ಹುಟ್ಟಿದ ಈ ಮಹಾರಾಜರ ಹೆಸರು ನಾಗರಾಜ್‌ ಅರಸು. ತಂದೆ ಚಿಕ್ಕರಸು. ಸಿನಿಮಾರಂಗದಲ್ಲಿ ನಾಗರಾಜ್‌ ಹೆಸರಿನವರ ಸಂಖ್ಯೆ ಅಧಿಕ ಎಂಬ ಕಾರಣಕ್ಕೆ ಅರಸು ಎನ್ನುವುದಕ್ಕಷ್ಟೇ ಹೆಸರನ್ನು ತುಂಡರಿಸಿಕೊಂಡರು.

ಫೇಸ್‌ಬುಕ್‌ನಲ್ಲಿ ಅಕೌಂಟ್‌ ಸೃಷ್ಟಿಸುವಾಗ ‘ಮಹಾರಾಜ್‌’ ಅನ್ನು ಸೇರಿಸಿಕೊಂಡರು. ‘ದ್ಯಾವ್ರೇ’ ಚಿತ್ರದಲ್ಲಿ ಅವರು ತಮ್ಮ ತಂದೆಯ ಹೆಸರಿನ ಪಾತ್ರದಲ್ಲಿಯೇ (ಚಿಕ್ಕರಸು) ಕಾಣಿಸಿಕೊಂಡಿರುವುದು ವಿಶೇಷ.

ತಾಯಿ ಶಿಕ್ಷಕಿಯಾದರೂ ಅರಸು ಓದಿದ್ದು ಮೂರನೇ ತರಗತಿ. ಓದಬೇಕು ಎಂಬ ಅಮ್ಮನ ಒತ್ತಾಯ ಹೆಚ್ಚಾದದ್ದಕ್ಕೆ ಶಾಲೆಯನ್ನೇ ತ್ಯಜಿಸಿದರು. ತುಸು ಮೊಂಡು ಸ್ವಭಾವದ ಒಬ್ಬನೇ ಮಗನನ್ನು ಸರಿದಾರಿಗೆ ತರಲು ಅಮ್ಮನಿಗೆ ಸಾಧ್ಯವಾಗಲೇ ಇಲ್ಲ. ‘ಚಿಕ್ಕ ವಯಸ್ಸಿಗೇ ದಾರಿ ತಪ್ಪಿದ ಮಗ ನಾನು’ ಎಂದು ನಗುತ್ತಾರೆ ಅರಸು.

12ನೇ ವಯಸ್ಸಿಗೆ ಬೆಂಗಳೂರಿನತ್ತ ಮುಖ ಮಾಡಿದ ಅವರು, ಪೀಣ್ಯದ ಫ್ಯಾಬ್ರಿಕೇಷನ್‌ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಸ್ಟಂಟ್‌ ಮಾಸ್ಟರ್‌ ಗಣೇಶ್‌ ಎನ್ನುವವರು ನೋಡಿದರೆ ಭಯ ಹುಟ್ಟಿಸುವಂತಿರುವ ದೇಹವೊಂದನ್ನು ಹುಡುಕುತ್ತಿದ್ದರು. ಆಗ ಕಣ್ಣಿಗೆ ಬಿದ್ದಿದ್ದೇ ಇವರು. ‘ಸಿನಿಮಾದಲ್ಲಿ ನಟಿಸುತ್ತೀಯಾ’ ಎಂದು ಕೇಳಿದಾಗ, ಯಾರು ಬಿಡುತ್ತಾರೆ ಇಂಥ ಅವಕಾಶ ಎಂದು ತಕ್ಷಣವೇ ಹೂಂಗುಟ್ಟಿದರು. ‘ಪ್ರಾಣ’ ಚಿತ್ರದಲ್ಲಿ ಕ್ಯಾಮೆರಾ ಮುಂದೆ ನಿಂತರು. ಆಗ ನಡೆದದ್ದೇ ಮೇಲೆ ಹೇಳಿರುವ ಪ್ರಸಂಗ. ‘ಗುರಾಯಿಸಬೇಡ, ಹೆದರಿಕೆ ಆಗುತ್ತದೆ’ ಎಂದವರು ನಟ ಪ್ರೇಮ್‌. ಅದು ಅವರಿಗೂ ಮೊದಲ ಚಿತ್ರ.

‘ಪ್ರಾಣ’ದ ಬಳಿಕ ಮತ್ತೆ ಐದು ವರ್ಷ ಚಿತ್ರರಂಗ ಕರೆಯಲಿಲ್ಲ. ಫ್ಯಾಬ್ರಿಕೇಷನ್‌ ಕೆಲಸ ಮುಂದುವರಿಸಿದ್ದ ಅರಸು ಅವರ ದಿಕ್ಕು ಬದಲಿಸಿದ್ದು ‘ವಂಶಿ’ ಚಿತ್ರ. ಅಲ್ಲಿಂದ ಅವರು ಉದ್ಯೋಗಕ್ಕೆ ಹಿಂದಿರುಗುವ ಅಗತ್ಯ ಬೀಳಲಿಲ್ಲ. ಈಗ ನಟನೆಯೇ ಅವರ ವೃತ್ತಿ. ಯೋಗರಾಜ್‌ ಭಟ್‌, ಸೂರಿ, ಓಂಪ್ರಕಾಶ್‌ರಾವ್‌, ಮಿಲನ ಪ್ರಕಾಶ್‌, ಸತ್ಯ ಮುಂತಾದವರು ಕರೆದು ಅವಕಾಶಗಳನ್ನು ಕೊಟ್ಟರು.

ಈಗ ಅವರಿಗೆ ಅಭಿನಯಕ್ಕೆ ಅವಕಾಶವಿರುವ ಪಾತ್ರಗಳು ಸಿಗುತ್ತಿವೆ. ‘ದ್ಯಾವ್ರೇ’ ಅದಕ್ಕೆ ಉತ್ತಮ ನಿದರ್ಶನ. ಈ ಚಿತ್ರದಲ್ಲಿ ಅರಸು ಸಹ ನಿರ್ದೇಶಕನ ಕೆಲಸವನ್ನೂ ಮಾಡಿದ್ದಾರೆ. ‘ದ್ಯಾವ್ರೇ’ಯಲ್ಲಿ ಈ ದಪ್ಪನೆಯ ದೇಹವನ್ನು ಮೊದಲ ಬಾರಿಗೆ ಅಳಿಸುವ ಪ್ರಯತ್ನ ಮಾಡಿದೆವು. ತುಂಬಾ ಇಷ್ಟ ಮತ್ತು ಕಷ್ಟಪಟ್ಟು ಮಾಡಿದ ಸಿನಿಮಾ. ಆದರೆ ಜನ ನನ್ನ ಅಳುವನ್ನು ಮೆಚ್ಚಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿಯುತ್ತಾರೆ ಅರಸು.

ವೈವಿಧ್ಯಮಯ ಪಾತ್ರಗಳ ಜೊತೆಗೆ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಬೇಕು ಎಂಬ ಕನಸು ಅವರಲ್ಲಿದೆ. ಮೂರ್ನಾಲ್ಕು ಕಥೆಗಳು ಅವರಲ್ಲಿವೆ. ಆದರೆ ಬರೆಯುವುದು? ಉದ್ದನೆಯ ಸಂಭಾಷಣೆಗಳನ್ನು ಒಪ್ಪಿಸುವಾಗಲೂ ಓದಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಮೂರನೇ ಕ್ಲಾಸಿಗೇ ಓದಿಗೆ ಶರಣು ಹೊಡೆದದ್ದಕ್ಕೆ ಈಗ ವ್ಯಥೆ ಪಡುತ್ತಿದ್ದಾರೆ ಅವರು. ಬರೆಯಲು ಬರುವಂತಿದ್ದರೆ ಇಷ್ಟೊತ್ತಿಗೆ ಆ ಕಥೆಗಳನ್ನು ಬರೆದಿರುತ್ತಿದ್ದೆ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ. ಭಟ್ಟರೂ ‘ಕಥೆ ಹೇಳಬೇಡ, ಬರೆದು ತೋರಿಸು’ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ.

ಸಿನಿಮಾದಲ್ಲಿ ಗಳಿಸಿದ್ದೆಲ್ಲವನ್ನೂ ಕೂಡಿಟ್ಟು ಜಡೆ ಮಾಯಸಂದ್ರದಲ್ಲಿ ಮನೆ ಕಟ್ಟಬೇಕು ಎಂಬ ಗುರಿ ಅವರದು. ತಮ್ಮ ಸಿನಿಮಾ ಪಯಣದ ಪ್ರಗತಿಯನ್ನು ಕಹಿ ಘಟನೆಗಳನ್ನು ನೆನೆಯುತ್ತಾ ಅವರು ಬಿಡಿಸಿಡುವುದು ಹೀಗೆ; ಚಿತ್ರೀಕರಣ ಸ್ಥಳದಲ್ಲಿ ಊಟ ಕೊಡುವಾಗ ಮೂರು ವಿಭಾಗಗಳಿರುತ್ತದೆ. ಒಂದು ಜೂನಿಯರ್‌ ಆರ್ಟಿಸ್ಟ್‌ಗಳಿಗೆ. ನೀರು ನೀರಾದ ಮೊಸರು, ಸ್ವಲ್ಪ ಅನ್ನ, ಸಾಂಬಾರು. ತುಸು ಬೆಳೆದ ಕಲಾವಿದರಿಗೆ ಗಟ್ಟಿ ಮೊಸರು, ಹಪ್ಪಳ, ಉಪ್ಪಿನ ಕಾಯಿ. ಇನ್ನು ದೊಡ್ಡ ಮಟ್ಟದ ಕಲಾವಿದರಿಗೆ ನಾನ್‌ವೆಜ್ಜು, ಗ್ರೇವಿ. ‘ನಾನೀಗ ನೀರು ಮೊಸರಿನ ವಿಭಾಗವನ್ನು ದಾಟಿ ಗಟ್ಟಿ ಮೊಸರಿನ ಕ್ಯೂಗೆ ಬಂದು ನಿಂತಿದ್ದೇನೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT