ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಆಡಳಿತ ರಾಷ್ಟ್ರಕ್ಕೆ ಮಾದರಿ

Last Updated 21 ಆಗಸ್ಟ್ 2012, 7:20 IST
ಅಕ್ಷರ ಗಾತ್ರ

ಚಾಮರಾಜನಗರ: `ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ದಿ.ಡಿ. ದೇವರಾಜ ಅರಸು ನಡೆಸಿದ ಆಡಳಿತ ರಾಷ್ಟ್ರಕ್ಕೆ ಮಾದರಿಯಾಗಿದ್ದು, ಯುವ ರಾಜಕಾರಣಿಗಳು ಅವರ ಆದರ್ಶ ಪಾಲಿಸಬೇಕಿದೆ~ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.

ನಗರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯದ ಹರಿಕಾರ ದಿ.ಡಿ. ದೇವರಾಜ ಅರಸು ಅವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಅರಸು ಅವರ ವ್ಯಕ್ತಿತ್ವ ರಾಜಕಾರಣಿಗಳಿಗೆ ಮಾದರಿಯಾಗ ಬೇಕಿದೆ. ಹಿಂದುಳಿದ ಸಮುದಾಯದಿಂದ ಬಂದ ಅವರು ಎಲ್ಲ ವರ್ಗದ ಏಳಿಗೆಗೆ ದುಡಿದಿದ್ದಾರೆ. 7 ವರ್ಷ ಮುಖ್ಯಮಂತ್ರಿಯಾಗಿ ನಾಡಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಆಡಳಿತದಲ್ಲಿ ಕನ್ನಡಭಾಷೆ ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮೈಸೂರು ರಾಜ್ಯವನ್ನು ವಿಶಾಲ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ್ದು, ಅರಸು ಅವರ ಧೀಮಂತಿಕೆಗೆ ಸಾಕ್ಷಿಯಾಗಿದೆ~ ಎಂದು ಬಣ್ಣಿಸಿದರು.

ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕಡುಬಡವರಿಗೂ ಭೂಮಿಯ ಹಕ್ಕು ನೀಡಿದ್ದು, ಅವರ ಹೆಗ್ಗಳಿಕೆ. ಎಲ್.ಜಿ. ಹಾವನೂರ್ ಅವರ ವರದಿಯನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗದವರಿಗೆ ದಾರಿದೀಪವಾದರು. ಬಡವರ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ರಾಜಕಾರಣಿಯಾಗಿದ್ದರೂ ಹಳ್ಳಿಯಲ್ಲಿ ಕೃಷಿ ಮಾಡುವುದನ್ನು ಮರೆತಿರಲಿಲ್ಲ ಎಂದರು.

ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಶ್ರೇಯ ಅವರಿಗೆ ಸಲ್ಲುತ್ತದೆ. ಬಾಲ್ಯದಿಂದಲೂ ಹೋರಾಟದ ಮೂಲಕ ಬೆಳೆದು ಬಂದ ಅರಸು ಅಜಾತಶತ್ರುವಾಗಿದ್ದರು. ಹಿಂದುಳಿದ ವರ್ಗದ ಮುಖಂಡರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದರು ಎಂದ ಅವರು, ಅರಸು ನಿಧನರಾದ ವೇಳೆ ಅವರ ಹುಟ್ಟೂರಿಗೆ ಪಾರ್ಥಿವ ಶರೀರ ತರುವ ವೇಳೆ ಬಿಡದಿ ಬಳಿ ಸಂಚರಿಸುತ್ತಿದ್ದ ರೈಲನ್ನು ನಿಲುಗಡೆಗೊಳಿಸಿ ಜನರು ಅಂತಿಮ ದರ್ಶನ ಪಡೆದ ನಿದರ್ಶನವೂ ಇದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟಬುದ್ಧಿ ಮಾತನಾಡಿ, `ಅರಸು ಸಾಮಾಜಿಕ ನ್ಯಾಯದ ಹರಿಕಾರರು. ಬಡವರು ಮತ್ತು ಹಿಂದುಳಿದ ವರ್ಗದ ಜನರ ಆಶಾಕಿರಣವಾಗಿದ್ದ ಅವರು, ರಾಜ್ಯದಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ನಾಂದಿ ಹಾಡಿದರು~ ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ. ನಾಗಶ್ರೀ, ಆರ್. ಕಾವೇರಿ, ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ, ಸದಸ್ಯರಾದ ಚಿಕ್ಕಮಹದೇವು, ಕಾಂತಾಮಣಿ, ರತ್ನಮ್ಮ ಹಾಜರಿದ್ದರು.

`ದುರ್ಬಲರಿಗೆ ನೆಲೆ ನೀಡಿದ ಅರಸು~
ಕೊಳ್ಳೇಗಾಲ: `ದುರ್ಬಲರಿಗೆ ರಾಜಕೀಯ ಹಕ್ಕಿನ ನೆಲೆ ಹಾಗೂ ರಾಜಕೀಯ ಜಾಗೃತಿಯನ್ನು ಜಗತ್ತಿಗೆ ತೋರಿಸಿದ ಮುತ್ಸದ್ಧಿ ರಾಜಕಾರಣಿ ಡಿ.ದೇವರಾಜ ಅರಸು~ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಗೌರವ ಅಧ್ಯಕ್ಷ ಎ.ಎಂ. ಮಲ್ಲಿಕಾರ್ಜುನಯ್ಯ ತಿಳಿಸಿದರು.

ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 97ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಮೀಸಲಿನಲ್ಲಿ ಅಧಿಕಾರ ಏರಿದವರು ಹಿಂದೆ ತಿರುಗಿ ತಮ್ಮ ಸಮಾಜದ ಏಳಿಗೆಗೆ ಸಹಾಯ ಹಸ್ತಚಾಚಿದಾಗ ಮಾತ್ರ ಅರಸು ಅವರ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ ಅರಸು ಹಿಂದುಳಿದ ವರ್ಗಗಳ ವೇದಿಕೆ ಪ್ರತಿವರ್ಷ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಬಗ್ಗೆ ವಿವರ ನೀಡಿದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ನಟರಾಜು, ಎ.ಎಚ್.ಗೋವಿಂದ, ಗುರುಸ್ವಾಮಿ, ಎಸ್.ನಟರಾಜು, ಎನ್.ರಾಜೇಶ್, ಟಿ.ಜಾನ್‌ಪೀಟರ್, ಶಿವಮಲ್ಲು ಹಾಗೂ 30 ವರ್ಷಗಳ ಸುದೀರ್ಘ ಸೇವೆಯನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ಸಲ್ಲಿಸಿ ನಿವೃತ್ತಿ ಹೊಂದಿದ ಗುರುನಂಜಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಪ್ರೊತ್ಸಾಹ ಧನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಲ್ಲಯ್ಯ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕೆಡಿಪಿ ನಾಮನಿರ್ದೇಶನ ಸದಸ್ಯ ಬಿ.ಕೆ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಾಮರಾಜು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ನಟರಾಜು, ಡಿ. ಸಿದ್ದರಾಜು, ದೊಡ್ಡಿಂದುವಾಡಿ ಗೋವಿಂದ, ಚಂದ್ರಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT