ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೊತ್ತಿಗೆ ಬಿಟ್ಟು ಪಂಚಾಯಿತಿಗೆ ಒಲಿದ ಮನ!

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಡಿ.ಜಯದೇವರಾಜೇ ಅರಸ್‌ ಮೂಲತಃ ರಾಜಮನೆತನಕ್ಕೆ ಸೇರಿದವರು. ಹುಟ್ಟುವಾಗಲೇ ಅಧಿಕಾರ ಅವರ ಕಾಲ ಬುಡದಲ್ಲಿಯೇ ಇತ್ತು. ಅವರ ತಂದೆ ಬ್ರಿಟಿಷ್‌ ಸರ್ಕಾರದಲ್ಲಿ ಅಮಲ್ದಾರ್‌ ಆಗಿದ್ದವರು. ಆದರೂ ಜಯದೇವರಾಜೇ ಅರಸ್‌ ಅವರು ಬ್ರಿಟಿಷ್‌ ಸರ್ಕಾರದ ವಿರುದ್ಧ ಹೋರಾ­ಡಿ­ದರು. ಮೈಸೂರು ಅರಸೊತ್ತಿಗೆ ವಿರುದ್ಧವೂ ಗುಡುಗಿದವರು. ಗಾಂಧೀಜಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಮನಸೋತ ಅವರು ಗ್ರಾಮ ಪಂಚಾ­ಯಿತಿ ಬಲವರ್ಧನೆಗೆ ಶ್ರಮಿಸಿದರು.

ವಿಧಾನ ಪರಿಷತ್‌ ಸದಸ್ಯ, ವಿಧಾನಸಭೆ ಸದಸ್ಯರಾಗಿದ್ದರು. ಪ್ರದೇಶ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ನಂತರ ಹಿನಕಲ್‌ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ ಅದನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡಿದರು. ಪ್ರಧಾನಿಗಳಾಗಿದ್ದ ನೆಹರೂ, ಇಂದಿರಾ­ಗಾಂಧಿ, ರಾಜೀವಗಾಂಧಿ ಅವರಿಗೆ ಹತ್ತಿರವಾಗಿದ್ದರೂ ಅವರ ನೋಟ ಗ್ರಾಮ ಪಂಚಾಯಿತಿ ಕಡೆಗೇ ಇತ್ತು.

ಜಯದೇವರಾಜೇ ಅರಸ್‌ 1959ರಿಂದ 65ರವರೆಗೆ ಹಿನಕಲ್‌ ಗ್ರೂಪ್‌ ಪಂಚಾಯಿತಿಯ ಅಧ್ಯಕ್ಷ­ರಾಗಿದ್ದರು. 1965ರಿಂದ 67ರವರೆಗೆ ಮೈಸೂರು ತಾಲ್ಲೂಕು ಬೋರ್ಡ್‌ ಅಧ್ಯಕ್ಷ­ರಾಗಿದ್ದರು. 1973ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದಾಗ ಅದಕ್ಕೆ ಸ್ಪರ್ಧಿಸಿ­ದರು. ಆಗ ಒಂದೇ ಕ್ಷೇತ್ರದಿಂದ ಇಬ್ಬರನ್ನು ಆಯ್ಕೆ ಮಾಡುವ ಅವಕಾಶ­ವಿತ್ತು. ಜಯದೇವರಾಜೇ ಅರಸ್‌ ಮತ್ತು ನಜೀರ್‌ ಸಾಬ್‌ ಅವರು ಸ್ಪರ್ಧಿಸಿದ್ದರು. ಆಗಿನ ಪ್ರಧಾನಿ ಇಂದಿರಾ­ಗಾಂಧಿ  ಮೈಸೂರು ಜೆ.ಕೆ. ಮೈದಾನ­ದಲ್ಲಿ ಈ ಇಬ್ಬರು ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ್ದರು. ಇಬ್ಬರೂ ಗೆಲುವು ಸಾಧಿಸಿದರು.

1978ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಾದಾಗ ಚಾಮುಂಡೇಶ್ವರಿ ಕ್ಷೇತ್ರ ಉದಯ­ವಾಯಿತು. ಆಗ ಕಾಂಗ್ರೆಸ್‌ (ಐ) ಪಕ್ಷದಿಂದ ಜಯದೇವರಾಜೇ ಅರಸ್‌, ರೆಡ್ಡಿ ಕಾಂಗ್ರೆಸ್‌ನಿಂದ ಕೆಂಪೀರೇಗೌಡ, ಜನತಾ ಪಕ್ಷದಿಂದ ಎಂ.ರಾಜಶೇಖರ ಮೂರ್ತಿ ಅವರು ಸ್ಪರ್ಧಿಸಿದರು. ಜಯದೇವರಾಜೇ ಅರಸ್‌ ಚಾಮುಂಡೇಶ್ವರಿ ಕ್ಷೇತ್ರದ ಮೊದಲ ಶಾಸಕರಾದರು. ನಂತರ 1983ರಲ್ಲಿ ಸಿದ್ದರಾಮಯ್ಯ ಎದುರು ಸೋತರು.

1978ರಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯದರ್ಶಿ­ಯಾಗಿದ್ದ ಅರಸ್‌ 1992ರಲ್ಲಿ ಪ್ರಾಧಿಕಾರದ ಅಧ್ಯಕ್ಷರೂ ಆದರು. 1983ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷ ಪಂಚಾಯತ್‌­ರಾಜ್‌ ಕಾಯ್ದೆಯನ್ನು ಜಾರಿಗೊಳಿಸಿತು. 1985ರಲ್ಲಿ ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪರಿಷತ್‌ಗೆ ಚುನಾವಣೆ ನಡೆಯಿತು. ಆಗ ಜಿಲ್ಲಾ ಪರಿಷತ್‌ಗೆ ನಿಲ್ಲುವ ಅವಕಾಶ ಇದ್ದರೂ ಅರಸ್‌ ಅವರು ಮೈಸೂರು ತಾಲ್ಲೂಕು ಹಿನಕಲ್‌ ಗ್ರಾಮದಿಂದ ಮಂಡಲ್‌ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಿಂತು ಗೆದ್ದು ಹಿನಕಲ್‌ ಮಂಡಲ ಪಂಚಾಯಿತಿಯ ಅಧ್ಯಕ್ಷರೂ ಆದರು.

ಮಂಡಲ ಪಂಚಾಯಿತಿ ಸದಸ್ಯರು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯವನ್ನು ಹೊಂದಲೇಬೇಕು ಎಂದು ಸೂಚಿಸಿ ಅದರಲ್ಲಿ ಯಶಸ್ವಿ­ಯಾದರು. ಮಂಡಲ ಪಂಚಾಯಿತಿ ವ್ಯಾಪ್ತಿಯಲ್ಲಿ ಬಯಲು ಶೌಚಾಲಯ­ವನ್ನು ನಿಷೇಧಿಸಿದರು. ಇದೇ ಅವಧಿ­ಯಲ್ಲಿ ಹಿನಕಲ್‌ನಲ್ಲಿ ಪೌರಕಾರ್ಮಿಕ­ರಿಗೆ ವಸತಿ ಯೋಜನೆ ಜಾರಿಗೆ ಬಂತು. ಅವರಿಗೆ ಪ್ರತ್ಯೇಕ ಬಡಾವಣೆ ನಿರ್ಮಾಣ­ವಾಯಿತು. ಜನತಾ ಮನೆಗಳನ್ನು ನಿರ್ಮಿಸಿ ಹಿನಕಲ್‌ ಮಂಡಲ ಪಂಚಾಯಿತಿ ಗುಡಿಸಲು ರಹಿತ ­ಮಂಡಲ ಎಂಬ ಖ್ಯಾತಿ ಗಳಿಸಿತು. ನಜೀರ್‌ ಸಾಬ್‌ ಪ್ರೇರಣೆಯಿಂದ ಎಲ್ಲೆಡೆ ಕೊಳವೆ ಬಾವಿಗಳು ಬಂದವು. ಮಂಡಲ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆಯ­ಲಾಯಿತು.

ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಆದಾಯ ಇರುವ ಮಂಡಲ ಪಂಚಾಯಿತಿ ಎಂಬ ಖ್ಯಾತಿಗೆ ಒಳಗಾ­ಗಿದ್ದ ಹಿನಕಲ್‌ ಪಂಚಾಯಿತಿ­ಯಲ್ಲಿ ಹಣ ದುರುಪಯೋಗವಾಗ­ದಂತೆ ಮತ್ತು ತೆರಿಗೆ ಸಂಗ್ರಹ ಕುಸಿತ­ವಾಗದಂತೆ ಅರಸ್‌ ನೋಡಿಕೊಂಡರು. ಮಂಡಲ ಪಂಚಾಯಿತಿ ಸಭೆ ಹಾಗೂ ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಿ­ದರು. ಉಪ ತಹಶೀಲ್ದಾರ್‌ ಮಟ್ಟದ ಅಧಿಕಾರಿಯನ್ನು ಮಂಡಲ ಪಂಚಾಯಿತಿ ಕಾರ್ಯದರ್ಶಿಯನ್ನಾಗಿ ಮಾಡಿ­ಕೊಂಡರು. ಹಿನಕಲ್‌ ಮಾದರಿ ಪಂಚಾಯಿತಿ ಆಯಿತು.

ಹಿನಕಲ್‌ ಪಂಚಾಯಿತಿಯನ್ನು ನೋಡಲು 1989ರಲ್ಲಿ ಅಮೆರಿಕದ ನಿಯೋಗವೊಂದು ಬಂತು. ಅದರ ನೇತೃತ್ವ ವಹಿಸಿದ್ದ ಆಲ್ಬರ್ಟ್ ‘ಭಾರತದಲ್ಲಿ ನಾವು ನೋಡಿದ ಪಂಚಾಯಿತಿಗಳಲ್ಲಿಯೇ ಹಿನಕಲ್‌ ಪಂಚಾಯಿತಿ ಅತ್ಯುತ್ತಮವಾದದ್ದು’ ಎಂದು ಪ್ರಮಾಣ ಪತ್ರ ನೀಡಿದರು. ಅರಸ್‌ ಅವರಿಗೆ ಮೊದಲಿನಿಂದಲೂ ಗ್ರಾಮ ಸ್ವರಾಜ್ಯದ ಕಲ್ಪನೆ ಇದ್ದಿದ್ದರಿಂದಲೇ ಅವರು 1962ರಲ್ಲಿಯೇ ಕರ್ನಾಟಕ ಪಂಚಾಯತ್‌ ಪರಿಷತ್‌ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಇದರ ಉದ್ಘಾಟನೆಗೆ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ, ಎಸ್‌.ಕೆ.ಮೆಹತಾ ಮುಂತಾದವರು ಬಂದಿದ್ದರು. ಅಖಿಲ ಭಾರತ ಪಂಚಾಯತ್‌ ಪರಿಷತ್‌ ಉಪಾಧ್ಯಕ್ಷ­ರಾಗಿಯೂ ಅವರು ಕೆಲಸ ಮಾಡಿ­ದ್ದಾರೆ. 1973ರಲ್ಲಿಯೇ ಬೆಂಗಳೂರಿ­ನಲ್ಲಿ ಪಂಚಾಯತ್‌ ರಾಜ್‌ ಸಮಾವೇಶ­ವನ್ನು ನಡೆಸಿದರು. ಪಂಚಾಯತ್‌ಗಳಲ್ಲಿ ನಡೆಯುವ ವಿದ್ಯಮಾನವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ 1968ರಲ್ಲಿಯೇ ಅವರು ‘ಪಂಚಾಯತ್‌­ವಾಣಿ’ ಎಂಬ ಪತ್ರಿಕೆಯನ್ನೂ ಹೊರ ತಂದರು.

ನೆಹರೂ, ಇಂದಿರಾಗಾಂಧಿ ಅವರಿಗೆ ಹತ್ತಿರವಾಗಿದ್ದ ಜಯದೇವರಾಜೇ ಅರಸ್‌ ರಾಜೀವ ಗಾಂಧಿ ಅವರಿಗೂ ಪ್ರೀತಿಪಾತ್ರರಾಗಿದ್ದರು. ರಾಜೀವಗಾಂಧಿ ಪಂಚಾಯತ್ ರಾಜ್‌ಗಾಗಿ  ಸಂವಿಧಾನ ತಿದ್ದುಪಡಿ ಮಾಡಲು ಮುಂದಾದಾಗ ಜಯದೇವರಾಜೇ ಅರಸ್‌ ಕೂಡ ಸಾಕಷ್ಟು ಸಲಹೆಗಳನ್ನು ನೀಡಿದ್ದರು.
ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನು­ದಾನ ನೀಡಬೇಕು, ಕಾರ್ಯದರ್ಶಿಗೆ ಇರುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಬೇಕು, ಮಹಿಳೆ ಮತ್ತು ಇತರ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ಅವರು ನಂಬಿದ್ದರು. 1995ರಲ್ಲಿ ಬೆಂಗಳೂರಿನಲ್ಲಿ ಗ್ರಾಮ ಪಂಚಾಯಿತಿ ಮಹಿಳಾ ಅಧ್ಯಕ್ಷರ ಸಮ್ಮೇಳನ ನಡೆದಾಗಲೂ ಸಾಕಷ್ಟು ಉಪಯುಕ್ತ ಸಲಹೆಗಳನ್ನು ಅವರು ನೀಡಿದ್ದರು.

ಶಂಕರ್‌ ದಯಾಳ್‌ ಶರ್ಮಾ ಅವರು ರಾಷ್ಟ್ರಪತಿ ಆಗುವುದಕ್ಕೆ ಮೊದಲಿನಿಂದಲೂ ಜಯದೇವರಾಜೇ ಅರಸ್‌ ಅವರೊಂದಿಗೆ ಸ್ನೇಹ ಇತ್ತು. ಅವರು ರಾಷ್ಟ್ರಪತಿಯಾಗಿದ್ದಾಗ ಒಮ್ಮೆ ಮೈಸೂರಿಗೆ ಬಂದಿದ್ದರು. ಆಗ ಅರಸ್‌ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಬಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶರ್ಮಾ ಅವರು ಅರಸ್‌ ಅವರನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದರು. ಆಗ ಅರಸ್‌ ಅವರು ಶರ್ಮಾ ಅವರನ್ನು ಮೈಸೂರು ಲಲಿತ್‌ ಮಹಲ್‌ ಹೆಲಿಪ್ಯಾಡ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದಾಗಿ 10–15 ದಿನಗಳಲ್ಲಿ ಅಂದರೆ 1995ರ ಅಕ್ಟೋಬರ್‌ 8ರಂದು ಅರಸ್‌ ನಿಧನರಾದರು. ಅರಸ್‌ ಅವರ ಗೌರವಾರ್ಥ ರಾಜೀವ್‌ ಗಾಂಧಿ ಪ್ರತಿಷ್ಠಾನ, ಕರ್ನಾಟಕ ಪಂಚಾಯತ್‌ ಪರಿಷತ್‌ ಆಶ್ರಯದಲ್ಲಿ ಮೈಸೂರಿನಲ್ಲಿ 1995ರ ಡಿಸೆಂಬರ್‌ 25ರಿಂದ 3 ದಿನಗಳ ಪಂಚಾಯತ್‌ ಕಾರ್ಯಾಗಾರ ನಡೆಸಿತು.

ರಕ್ತ ಕರಗಿಸಿದ ನಗು!
ಜಯದೇವರಾಜೇ ಅರಸ್‌ ಅವರಿಗೆ ರಕ್ತ ಕ್ಯಾನ್ಸರ್‌ ಆಗಿತ್ತು. ರಕ್ತ ಹೆಪ್ಪು­ಗಟ್ಟಿ ಸರಾಗವಾಗಿ ಹರಿಯು­ತ್ತಿರ­ಲಿಲ್ಲ. ಅದಕ್ಕಾಗಿ ಸಾಕಷ್ಟು ಚಿಕಿತ್ಸೆಯೂ ಆಗಿತ್ತು. ಅವರು ಬಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯು­ತ್ತಿದಾಗ ಹಿನಕಲ್‌ ಗ್ರಾಮದ ಜನರು ಬಂದು ಅವರನ್ನು ನೋಡಿ­ಕೊಂಡು ಹೋಗುತ್ತಿದ್ದರು. ಆಗ ಒಂದಿಷ್ಟು ಮಂದಿ ತಮಾಷೆಗಾಗಿ ‘ಬುದ್ದಿ, ನಿಮ್ಮನ್ನು ಮತ್ತೆ ಹಿನಕಲ್‌ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡು­ತ್ತಾರೆ’ ಎಂದರಂತೆ. ಇದನ್ನು ಕೇಳಿದ ಅರಸ್‌ ಜೋರಾಗಿ ನಕ್ಕ­ರಂತೆ. ಈ ನಗುವಿನಿಂದ ಹೆಪ್ಪು­ಗಟ್ಟಿದ ರಕ್ತ ಕರಗಿ ಸರಾಗವಾಯಿತು ಎಂದು ಅವರ ಶಿಷ್ಯ ಲಕ್ಷ್ಮೀಕಾಂತ­ರಾಜೇ ಅರಸ್‌ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT