ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಶಿಣದ ಬೆಲೆ ದಿಢೀರ್ ಕುಸಿತ

Last Updated 2 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಚಾಮರಾಜನಗರ:ತಮಿಳುನಾಡಿನ ವಿಧಾನಸಭಾ ಚುನಾವಣೆ ಪರಿಣಾಮ ಗಡಿ ಜಿಲ್ಲೆಯಲ್ಲಿ ಅರಿಶಿಣದ ಬೆಲೆ ದಿಢೀರ್ ಕುಸಿತ ಕಂಡಿದ್ದು, ಬೆಳೆಗಾರರು ದಿಕ್ಕೆಟ್ಟಿದ್ದಾರೆ. 15 ದಿನದ ಹಿಂದೆ ಒಂದು ಕ್ವಿಂಟಲ್ ಅರಿಶಿಣಕ್ಕೆರೂ,17 ಸಾವಿರ ಧಾರಣೆಯಿತ್ತು. ಪ್ರಸ್ತುತ ರೂ, 7,500 ರಿಂದ ರೂ,9,500ಕ್ಕೆ ಇಳಿದಿದೆ. ಈಗ ತಮಿಳುನಾಡಿನಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಇದರಿಂದ ಅಲ್ಲಿನ ವ್ಯಾಪಾರಿಗಳು ಹಣದೊಂದಿಗೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಖರೀದಿಗೆ ಬರಲು ತೊಡಕಾಗಿದೆ. ಇದು ಬೆಲೆ ಕುಸಿತಕ್ಕೆ ಮೂಲ ಕಾರಣ.ಜಿಲ್ಲೆಯಲ್ಲಿ ವಾರ್ಷಿಕವಾಗಿ ಅರಿಶಿಣದ ಸರಾಸರಿ ಉತ್ಪಾದನೆ 35 ಸಾವಿರ ಟನ್. ಪ್ರಸಕ್ತ ವರ್ಷ ಮಳೆಯಾಶ್ರಿತ ಪ್ರದೇಶ ಸೇರಿದಂತೆ  ಒಟ್ಟು 25 ಸಾವಿರ ಎಕರೆಯಲ್ಲಿ ಅರಿಶಿಣ ಬೆಳೆಯಲಾಗಿದೆ. ಹಾಗಾಗಿ, ಈ ವರ್ಷ ಉತ್ಪಾದನೆ ಪ್ರಮಾಣ 40 ಸಾವಿರ ಟನ್ ದಾಟಿದೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಅರಿಶಿಣ ಉತ್ಪಾದನೆಗೆ ಚಾಮರಾಜನಗರ ಪ್ರಸಿದ್ಧಿ ಪಡೆದಿದೆ. ಆದರೆ, ಇಲ್ಲಿ ಸುಸಜ್ಜಿತ ಮಾರುಕಟ್ಟೆ ಹಾಗೂ  ಸಂಸ್ಕರಣಾ ಘಟಕವಿಲ್ಲ. ಇದರ ಪರಿಣಾಮ ಜಿಲ್ಲೆಯ ಬೆಳೆಗಾರರು ಈರೋಡ್ ಮಾರುಕಟ್ಟೆಯತ್ತ ಬಸ್ ಹತ್ತುವುದು ಸಾಮಾನ್ಯ.ಚುನಾವಣೆ ಘೋಷಣೆ ನಂತರ ಈರೋಡ್ ಮಾರುಕಟ್ಟೆಯಲ್ಲೂ 22 ಲಕ್ಷ ಚೀಲ ಅರಿಶಿಣ ಮಾರಾಟವಾಗಿಲ್ಲ. ಅಲ್ಲಿ ಆವಕವಾಗುವ ಅರ್ಧದಷ್ಟು ಅರಿಶಿಣ ಮುಂಬೈಗೆ ಪೂರೈಕೆಯಾಗುತ್ತದೆ. ಪ್ರಸ್ತುತ ವಹಿವಾಟು ಸ್ಥಗಿತಗೊಂಡಿದ್ದು, ಖರೀದಿಗೆ ಜಿಲ್ಲೆಯತ್ತ ವ್ಯಾಪಾರಿಗಳು ಬರುತ್ತಿಲ್ಲ. ಈರೋಡ್ ಮಾರುಕಟ್ಟೆಗೆ ಒಂದು ಕ್ವಿಂಟಲ್ ಅರಿಶಿಣ ಸಾಗಾಟಕ್ಕೆ ಇಲ್ಲಿನ ಬೆಳೆಗಾರರು ಕನಿಷ್ಠ ರೂ,200 ಸಾರಿಗೆ ವೆಚ್ಚ ಭರಿಸಬೇಕು. ಜಿಲ್ಲೆಯಲ್ಲಿ ಮಾರುಕಟ್ಟೆ ಇಲ್ಲದ ಪರಿಣಾಮ ಬೆಳೆಗಾರರು ನೆರೆಯ ರಾಜ್ಯದ ಮಾರುಕಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಪ್ರತಿವರ್ಷವೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ಆದಾಯ ನಷ್ಟವಾಗುತ್ತಿದ್ದರೂ, ಸುಸಜ್ಜಿತವಾದ ಪ್ರತ್ಯೇಕ ಮಾರುಕಟ್ಟೆ ಸ್ಥಾಪಿಸುವ ಪ್ರಯತ್ನ ಇಂದಿಗೂ ನಡೆದಿಲ್ಲ.

ತಮಿಳುನಾಡು ವ್ಯಾಪಾರಿಗಳು ಜಿಲ್ಲೆಯ ಬೆಳೆಗಾರರಿಗೆ ಅರಿಶಿಣ ಬಿತ್ತನೆಗೂ ಮೊದಲೇ ಕೈಸಾಲ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಬಿತ್ತನೆ ಅರಿಶಿಣ, ಔಷಧಿ ಸೇರಿದಂತೆ ಇತರೇ ಖರ್ಚಿಗೆ ಮುಂಗಡವಾಗಿಯೇ ಎಕರೆಯೊಂದಕ್ಕೆ ಕನಿಷ್ಠ ರೂ,1 ಲಕ್ಷ ದ ವರೆಗೆ ಸಾಲ ನೀಡುತ್ತಾರೆ. ಸಾಲ ಪಡೆದ ರೈತರು ಅನಿವಾರ್ಯವಾಗಿ ಈರೋಡ್ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುವಂತಹ ದಯನೀಯ ಸ್ಥಿತಿ ಸೃಷ್ಟಿಸುತ್ತಿದ್ದಾರೆ. ‘ಪ್ರಸ್ತುತ ಅರಿಶಿಣದ ಬೆಲೆ ಕುಸಿದಿದೆ. ತಮಿಳುನಾಡಿನ ವ್ಯಾಪಾರಿಗಳು ಖರೀದಿಗೆ ಬರುತ್ತಿಲ್ಲ. ಜತೆಗೆ, ಮುಂಗಡವಾಗಿ ಅಲ್ಲಿನ  ವ್ಯಾಪಾರಿಗಳಿಂದ ಕೈಸಾಲ ಪಡೆದಿರುವ ಬೆಳೆಗಾರರು ಈರೋಡ್ ಮಾರುಕಟ್ಟೆಗೆ ಹೋಗುವುದು ಸಹಜ. ಪ್ರತಿ ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೂ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿನ ಮಾರುಕಟ್ಟೆಯತ್ತ ಬೆಳೆಗಾರರನ್ನು ಸೆಳೆಯಲು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಹಾಗೂ ಕಾರ್ಯಾಗಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಶ್ರೀಕಂಠಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT