ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ: ಚೀನಾದಿಂದ ಮತ್ತೆ ಕ್ಯಾತೆ

Last Updated 17 ಜನವರಿ 2011, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಅರುಣಾಚಲ ಪ್ರದೇಶವು ‘ವಿವಾದಿತ ಪ್ರದೇಶ’ ಎಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಚೀನಾ ಹೇಳುವ ಮೂಲಕ ಭಾರತದ ಅವಿಭಾಜ್ಯ ಅಂಗದ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ಅರುಣಾಚಲ ಪ್ರದೇಶವು ‘ಟಿಬೆಟ್‌ನ ದಕ್ಷಿಣ ಭಾಗ’ ಎಂದು ಪರಿಗಣಿಸಿರುವ ಚೀನಾ ಕಳೆದ ವಾರ ಅಲ್ಲಿನ ಇಬ್ಬರು ಕ್ರೀಡಾಟುಗಳಿಗೆ ಜೋಡಿಸಿದ (ಸ್ಟ್ಯಾಪಲ್ಡ್) ವೀಸಾ ನೀಡಿದೆ. ಆದರೆ ಭಾರತ ಈ ವೀಸಾವನ್ನು ತಿರಸ್ಕರಿಸಿದೆ.

‘ಭಾರತ-ಚೀನಾ ಗಡಿ ವಿಚಾರದಲ್ಲಿ ಚೀನಾದ ನಿಲುವು ಸ್ಥಿರವಾಗಿದೆ. ಭಾರತದ ಪೂರ್ವ ಭಾಗದ ಅರುಣಾಚಲ ಪ್ರದೇಶ ವಿವಾದಿತ ಪ್ರದೇಶವೆಂದು ದೇಶ ಪರಿಗಣಿಸಿದ್ದು, ಆ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಕಚೇರಿ ತಿಳಿಸಿದೆ. ಅರುಣಾಚಲ ಪ್ರದೇಶ ಚೀನಾದ ಭಾಗವಾಗಿರುವುದರಿಂದ ಅಲ್ಲಿನ ಜನರಿಗೆ ತಾನು ವೀಸಾ ನೀಡುವುದಿಲ್ಲ ಎಂದು ಚೀನಾ ಹೇಳಿತ್ತು. ಇದೀಗ ಜೋಡಿಸಿದ ವೀಸಾ ನೀಡಿರುವುದರಿಂದ ಅರುಣಾಚಲ ಪ್ರದೇಶದ ವಿಚಾರದಲ್ಲಿ ದೇಶದ ನಿಲುವು ಬದಲಾಗಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದವು. ಅದಕ್ಕಾಗಿ ಚೀನಾ ಈ ಹೇಳಿಕೆ ನೀಡಿದೆ. ಆದರೆ ವೀಸಾ ನೀಡಿಕೆಯಲ್ಲಿನ ತನ್ನ ನಿಲುವಿನಲ್ಲಿ ಬದಲಾವಣೆ ಆಗಿರುವುದಕ್ಕೆ ಅದು ಸ್ಪಷ್ಟ ಕಾರಣವನ್ನು ನೀಡಿಲ್ಲ.

ಚೀನಾದ ಫುಜಾನ್ ಪ್ರಾಂತ್ಯದಲ್ಲಿ ನಡೆದ ವೇಟ್‌ಲಿಫ್ಟಿಂಗ್ ಗ್ರ್ಯಾನ್‌ಪ್ರೀಯಲ್ಲಿ ಪಾಲ್ಗೊಳ್ಳಲು ಬಯಸಿದ್ದ ಅರುಣಾಚಲ ಪ್ರದೇಶದ ಇಬ್ಬರು ಕ್ರೀಡಾಪಟುಗಳಿಗೆ ಜೋಡಿಸಿದ ವೀಸಾ ನೀಡಿದ್ದರಿಂದ ಉಂಟಾಗಿರುವ ವಿವಾದಕ್ಕೆ ಸ್ಪಷ್ಟನೆ ರೂಪದಲ್ಲಿ ಸಚಿವಾಲಯ ಈ ಹೇಳಿಕೆ ನೀಡಿದೆ. ಚೀನಾದ ಈ ವರ್ತನೆ ಪ್ರತಿಭಟಿಸಿದ್ದ ಭಾರತ ತಾನು ಇಂತಹ ವೀಸಾಗಳಿಗೆ ಗೌರವ ನೀಡುವುದಿಲ್ಲ ಎಂದು ಹೇಳಿ ಅದನ್ನು ಈಗಾಗಲೇ ತಿರಸ್ಕರಿಸಿದೆ.

ಈ ಪ್ರದೇಶದಲ್ಲಿನ ಗಡಿ ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತ-ಚೀನಾಗಳು ಇದುವರೆಗೆ 14 ಸುತ್ತಿನ ಮಾತುಕತೆಗಳನ್ನು ನಡೆಸಿದ್ದರೂ ಹೆಚ್ಚಿನ ಯಶಸ್ಸು ದೊರೆತಿಲ್ಲ. ವೀಸಾ ನೀಡಿಕೆಯಲ್ಲೂ ಅದು ನಿರ್ದಿಷ್ಟ ಕ್ರಮ ಅನುಸರಿಸುತ್ತಿಲ್ಲ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರಿಗೆ ಸಲಹೆಗಾರರಾಗಿರುವ ಐಎಎಸ್ ಅಧಿಕಾರಿ ವಿಶಾಲ್ ನಬಂ ಅವರು 2006ರಲ್ಲಿ ಒಂದು ತಿಂಗಳ ಕಾಲ ಚೀನಾಕ್ಕೆ ಪ್ರವಾಸಿ ವೀಸಾದ ಮೇಲೆ ಭೇಟಿ ನೀಡಿ ಬಂದಿದ್ದರು.

ಆದರೆ 2007ರಲ್ಲಿ ಅವರಿಗೆ ಐಎಎಸ್ ಅಧಿ ಕಾರಿ ಎಂಬ ನೆಲೆಯಲ್ಲಿ ಇಂತಹ ವೀಸಾ ನೀಡಲು ಚೀನಾ ನಿರಾಕರಿಸಿತ್ತು. ಅರುಣಾಚಲ ಪ್ರದೇಶ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲೂ ಚೀನಾ ಮೂಗು ತೂರಿಸುತ್ತಿದ್ದು, ಅಲ್ಲಿನ ಜನರಿಗೆ ಸಹ ಜೋಡಿಸಿದ ವೀಸಾ ನೀಡಿ ಭಾರತದಿಂದ ತೀವ್ರ ಆಕ್ಷೇಪ ಎದುರಿಸಿದೆ. ಈಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಪ್ರಧಾನಿ ವೆನ್ ಜಿಯಾಬೊ ಅವರ ಗಮನಕ್ಕೆ ಈ ವಿಚಾರವನ್ನು ತಂದಾಗ ಈ ಬಗ್ಗೆ ತಾವು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.


ಚೀನಾದ ಈ ವರ್ತನೆಯ ಬಗ್ಗೆ ಸರ್ಕಾರಿ ಸ್ವಾಮ್ಯದ ಚೀನಾ ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆಯ ಹಿರಿಯ ಸಂಶೋಧಕ ರಾಮ್ ಯಿನ್ ಅವರು ಇದೊಂದು ಚೀನಾದ ‘ವ್ಯಾವಹಾರಿಕ’ ಕ್ರಮ ಎಂದು ಹೇಳಿದ್ದಾರೆ.  ಅರುಣಾಚಲ ಭಾಗದ ಜನರು ಚೀನಾಕ್ಕೆ ತೆರಳುವುದಕ್ಕೆ ಅವಕಾಶ ನೀಡಲು ಜೋಡಿಸಿದ ವೀಸಾ ಒದಗಿಸಲಾಗಿದೆ ಎಂದು ಹೇಳಿರುವ ಅವರು, ಇಂತಹ ವೀಸಾ ಪಡೆದವರಿಗೆ ಚೀನಾಕ್ಕೆ ತೆರಳಲು ಭಾರತ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.  ವಿವಾದ ಕೊನೆಗೊಳಿಸಲು ಎರಡೂ ದೇಶಗಳು ಯತ್ನಿಸಬೇಕು. ಅಲ್ಲಿಯ ತನಕ ಅರುಣಾಚಲ ಜನತೆ ಚೀನಾಕ್ಕೆ ಭೇಟಿ ನೀಡುವುದನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ವೀಸಾ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT