ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆ ಶತಮಾನದ ಗಂಧರ್ವ ಗಾಯನ

Last Updated 7 ಮೇ 2016, 11:12 IST
ಅಕ್ಷರ ಗಾತ್ರ

ಎಪ್ಪತ್ತರ ಮಗು! ಹೀಗೆಂದು ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರನ್ನು ಬಣ್ಣಿಸಬಹುದೇ? ಮೊಗದಲ್ಲಿನ ನಿರಾಳತೆ ಹಾಗೂ ಮಾತಿನಲ್ಲಿನ ಸಾವಧಾನವನ್ನು ನೋಡಿದರೆ ಬಾಲಸುಬ್ರಹ್ಮಣ್ಯಂ ಮಗುವೇ ಸರಿ. ಅಂದ ಹಾಗೆ, ಚಿತ್ರರಸಿಕರ ಪಾಲಿನ ಈ ಮೆಚ್ಚಿನ ‘ಬಾಲು’ ನಗುನಗುತ್ತಲೇ ತಮ್ಮ ಹಾಡುಗಾರಿಕೆಯ ಐವತ್ತು ವರ್ಷ ಪೂರೈಸಿದ್ದಾರೆ.

ಬಾಲು ಅವರ ಹಾಡುಗಾರಿಕೆಯ ಐವತ್ತು ವರ್ಷಗಳ ಅವಲೋಕನ ಒಂದು ಅರ್ಥದಲ್ಲಿ ನಮ್ಮ ಬದುಕನ್ನು ಹಿಂತಿರುಗಿ ನೋಡಿಕೊಳ್ಳುವ ವಿಧಾನವೂ ಹೌದು. ನಮ್ಮ ಬಾಲ್ಯ, ತಾರುಣ್ಯ, ಪ್ರೌಢ– ಎಲ್ಲ ಅವಸ್ಥೆಗಳಲ್ಲೂ ಬಾಲು ಅವರ ಹಾಡುಗಳು ಜೊತೆಯಾಗಿದ್ದವು. ಆಯಾಕಾಲದ ತವಕ ತಲ್ಲಣಗಳ ಅಭಿವ್ಯಕ್ತಿಗೆ ಅವರು ಹಾಡುಗಳು ನೆಪವಾಗಿ ಒದಗಿ ಬಂದಿದ್ದವು. ಅನನ್ಯ ಕಲಾವಿದನೊಬ್ಬ ತನ್ನ ಪಾತ್ರಗಳ ಮೂಲಕ ಸಹೃದಯರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವಂತೆ, ಬಾಲು ಅವರು ಕೂಡ ತಮ್ಮ ಮಾಂತ್ರಿಕ ಕಂಠದ ಮೂಲಕ ಕನ್ನಡಿಗರನ್ನು ಪ್ರಭಾವಿಸಿದ್ದಾರೆ.

ಹಾಗೆ ನೋಡಿದರೆ ಬಾಲು ಕನ್ನಡಿಗರೇನೂ ಅಲ್ಲ. ಅವರು ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ (1946ರ ಜೂನ್ 4). ಬಾಲ್ಯದಲ್ಲಿ ಸಂಗೀತದ ಹುಚ್ಚು ಹತ್ತಿಸಿಕೊಂಡ ಅವರು, ಕೊಳಲು – ಹಾರ್ಮೋನಿಯಂ ಸೇರಿದಂತೆ ವಿವಿಧ ವಾದ್ಯಗಳ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದಾಗ ಸಂಗೀತದ ಒಲವು ಮತ್ತಷ್ಟು ಗಾಢವಾಯಿತು. ವಿವಿಧ ಸ್ಪರ್ಧೆಗಳ ವೇದಿಕೆಗಳು ಅವರ ಪ್ರತಿಭೆಯನ್ನು ಪುಟಕ್ಕಿಟ್ಟವು.

1966ರಲ್ಲಿ ಎಸ್‌.ಪಿ. ಕೋದಂಡಪಾಣಿ ಸಂಗೀತ ನಿರ್ದೇಶನದ ತೆಲುಗು ಚಿತ್ರವೊಂದಕ್ಕೆ ಹಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಮರು ವರ್ಷವೇ ನರಸಿಂಹರಾಜು ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ನಕ್ಕರೆ ಅದೇ ಸ್ವರ್ಗ’ (1967) ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ‘ನಕ್ಕರದೇ ಸ್ವರ್ಗ’ ಎನ್ನುವ ಶೀರ್ಷಿಕೆಯ ಧ್ವನಿ ಅವರ ಹಾಡುಗಾರಿಕೆಯ ಫಲಿತವೂ ಆಗಿರುವುದನ್ನೂ ಕಳೆದ ಐವತ್ತು ವರ್ಷಗಳಲ್ಲಿ ಚಿತ್ರರಸಿಕರು ಬಲ್ಲರು.

ಬಾಲಸುಬ್ರಹ್ಮಣ್ಯಂ ಅವರ ಸಿನಿಮಾ ಸಾಧನೆಗೆ ಕೇಂದ್ರ ಸರ್ಕಾರದ ‘ಪದ್ಮಭೂಷಣ’, ಕರ್ನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಹಾಡುಗಾರಿಕೆಗಾಗಿ ಆರು ಸಲ ರಾಷ್ಟ್ರಪ್ರಶಸ್ತಿ ಪಡೆದ ಅಗ್ಗಳಿಕೆ ಅವರದು. ಆ ಪ್ರಶಸ್ತಿಗಳಲ್ಲಿ ಕನ್ನಡದ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ಗಾಯನಕ್ಕೆ ಸಂದ ಗೌರವವೂ ಸೇರಿರುವುದು ವಿಶೇಷ.

ಬಾಲು ಅವರಿಗೆ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ. ‘ಕನ್ನಡಿಗರಿಂದ ಸಿಕ್ಕಷ್ಟು ಪ್ರೀತಿ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ’ ಎನ್ನುವುದು ಬಾಲು ಅವರ ಮನದಾಳದ ಮಾತು. ಅವರು ರೂಪಿಸಿದ ‘ಎದೆ ತುಂಬಿ ಹಾಡುವೆನು’ ಕನ್ನಡ ಕಿರುತೆರೆಯ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದು.

ಐವತ್ತು ವರ್ಷ ಎನ್ನುವುದು ಕಲಾವಿದನೊಬ್ಬನ ಪಾಲಿಗೆ ಸ್ಮರಣೀಯವಾದ ಕಾಲಘಟ್ಟ. ಈ ಸಂದರ್ಭವನ್ನು ಇನ್ನಷ್ಟು ಸ್ಮರಣೀಯ ಆಗಿಸಿಕೊಳ್ಳಲು ಬಾಲು ವಿಶ್ವಸಂಚಾರ ಹೊರಟಿದ್ದಾರೆ. ಎಲ್ಲೆಲ್ಲಿ ತಮ್ಮನ್ನು ಬೆಳೆಸಿದ, ಬೆನ್ನುತಟ್ಟಿದ ಅಭಿಮಾನಿಗಳು ಇರುವರೋ ಅಲ್ಲಿಗೆಲ್ಲ ಹೋಗಿ ಹಾಡುವ ಮೂಲಕ ಕೃತಜ್ಞತೆ ಸಲ್ಲಿಸಿ ಬರುವುದು ಈ ದೇಶ ಸಂಚಾರದ ಹಿಂದಿನ ಉದ್ದೇಶ. ಇಂಥ ಅಪೂರ್ವ ಗಾಯಕನಿಗೆ ಏನನ್ನು ತಾನೇ ಕೊಟ್ಟೇವು– ಅವರ ಹಾಡುಗಳನ್ನು ಮತ್ತೆ ಮತ್ತೆ ಕೇಳುವುದರ ಹೊರತಾಗಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT