ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಭಾಷಾ ಅಕಾಡೆಮಿ ಸ್ಥಾಪನೆಗೆ ಬದ್ಧ

Last Updated 11 ಸೆಪ್ಟೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಅರೆಭಾಷಾ ಸಾಂಸ್ಕೃತಿಕ ಹಾಗೂ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭಾನುವಾರ ಇಲ್ಲಿ ಭರವಸೆ ನೀಡಿದರು.

ಕೊಡಗು, ದಕ್ಷಿಣ ಕನ್ನಡ ಗೌಡ ಸಮಾಜ ಮತ್ತು ಗೌಡರ ಚಾವಡಿ ಸಂಯುಕ್ತ ಆಶ್ರಯದಲ್ಲಿ ಅರಮನೆ ಮೈದಾನದ ಟೆನಿಸ್ ಪೆವಿಲಿಯನ್‌ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು  ಮಾತನಾಡಿದರು.

ಕೊಡವ, ಕೊಂಕಣಿ, ತುಳು ಅಕಾಡೆಮಿಗಳ ಮಾದರಿಯಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಸಿರುವ ಅರೆಭಾಷೆ ಗೌಡರ ಸಾಂಸ್ಕೃತಿಕ-ಧಾರ್ಮಿಕ ಹಿನ್ನೆಲೆ, ಆಚಾರ-ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ಅರೆಭಾಷಾ ಸಾಂಸ್ಕೃತಿಕ ಹಾಗೂ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಬೇಕು ಎಂಬ ಸಂಘಟಕರ ಒತ್ತಾಯಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

`ಅರೆಭಾಷೆ ಅಕಾಡೆಮಿ ಸ್ಥಾಪನೆ ಬಹುದಿನಗಳ ಬೇಡಿಕೆ. ಸಮಾಜದ ಹಿರಿಯರ ನಿಯೋಗ ಭೇಟಿ ಮಾಡಿದ ನಂತರ ಅಧಿಕಾರಿಗಳ ಜತೆ ಚರ್ಚಿಸಿ ನಿಯಮಾವಳಿ ಚೌಕಟ್ಟಿನಲ್ಲಿ ಅಕಾಡೆಮಿ ರಚನೆಗೆ ಪ್ರಯತ್ನ ಮಾಡುತ್ತೇನೆ~ ಎಂದು ಅವರು ಆಶ್ವಾಸನೆ ನೀಡಿದರು.

ಕೊಡಗು ಹಾಗೂ ದಕ್ಷಿಣ ಕನ್ನಡ ಗೌಡ ಸಮಾಜಕ್ಕೆ ಎರಡು ಎಕರೆ ಜಮೀನು ನೀಡಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಭೂ ಮಂಜೂರಾತಿ, ಡಿನೋಟಿಫಿಕೇಷನ್, ಗಣಿ ಸಮಸ್ಯೆ ಸರ್ಕಾರವನ್ನು ಸುತ್ತುವರೆದಿವೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ ಜಾಗ ಮಂಜೂರು ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು~ ಎಂದರು.

ಆತುರದ ನಿರ್ಧಾರ ಇಲ್ಲ: `ಅತ್ಯಂತ ಸಂದಿಗ್ಧ ಕಾಲಘಟ್ಟದಲ್ಲಿ ಹಾಗೂ ಒತ್ತಡದ ಮಧ್ಯೆ ನಾನು ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ ಪ್ರತಿಯೊಂದು ಸಂದರ್ಭದಲ್ಲಿಯೂ ಅತ್ಯಂತ ಜಾಗರೂಕತೆಯಿಂದ ಹೆಜ್ಜೆಯನ್ನಿಡಬೇಕಾಗಿದೆ. ಯಾವುದೇ ವಿಚಾರಗಳ ಬಗ್ಗೆ ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ. ಬದಲಿಗೆ, ಪರಾಮರ್ಶಿಸಿ ಪ್ರಜಾತಂತ್ರದ ರಥ ಎಳೆಯಲು ಪ್ರಯತ್ನಿಸುತ್ತೇನೆ. ಅತಿ ವೇಗಕ್ಕೆ ಕಡಿವಾಣ ಹಾಕಿ, ಎಲ್ಲರೂ ಅಪೇಕ್ಷಿಸಿದ ರೀತಿ ಉತ್ತಮ ಆಡಳಿತ ನಡೆಸಲು ಪ್ರಯತ್ನಿಸುತ್ತೇನೆ~ ಎಂದರು.

`ರಾಜಕಾರಣಿಗಳು ಎಂದರೆ ದುಷ್ಟಕೂಟ ಎನ್ನುವ ಕೆಟ್ಟ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಭ್ರಷ್ಟಾಚಾರ ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ಹೋರಾಟಕ್ಕೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿದೆ. ಇನ್ನಾದರೂ ಭ್ರಷ್ಟಾಚಾರಕ್ಕೆ ತಿಲಾಂಜಲಿಯನ್ನಿಡಬೇಕಾಗಿದೆ~ ಎಂದರು.

`ದೇಶದಲ್ಲಿನ ನೂರಾರು ಸಮುದಾಯಗಳು ವಿವಿಧತೆಯಲ್ಲಿ ಏಕತೆ ಸಾಧಿಸಲು ಕಾರಣವಾಗಿವೆ. ಅದರಲ್ಲಿ ಅರೆ ಗೌಡ ಸಮಾಜ ಕೂಡ ಪ್ರಮುಖ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಗೌಡ ಸಮುದಾಯದ ಪರೋಕ್ಷ ಆಶೀರ್ವಾದ ಕೂಡ ನಾನು ಸಿಎಂ ಆಗಲು ಕಾರಣ. ನಾನು ಮುಖ್ಯಮಂತ್ರಿಯಾಗಿದ್ದು ದೊಡ್ಡ ಸಂಗತಿಯಲ್ಲ. ಆ ಸ್ಥಾನವನ್ನು ಇಡೀ ರಾಜ್ಯ ಒಪ್ಪುವ ರೀತಿ ಯಶಸ್ವಿಯಾಗಿ ನಿರ್ವಹಿಸುವುದು ನಮ್ಮ ಮುಂದಿರುವ ಸವಾಲು. ನಿಮ್ಮೆಲ್ಲರ ಭಾವನೆಗಳಿಗೆ ಪೂರಕವಾಗಿ ಆದರ್ಶ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ~ ಎಂದು ಘೋಷಿಸಿದರು.

ಹೋಲಿಸಿಕೊಳ್ಳುವ ಅಗತ್ಯವಿಲ್ಲ: ಸಮಾರಂಭವನ್ನು ಉದ್ಘಾಟಿಸಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ, `ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗೌಡರಿಗೆ ತಮ್ಮದೇ ಆದ ಇತಿಹಾಸವಿದೆ. ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ ಕೂಡ ವಿಭಿನ್ನ. ಹೀಗಾಗಿ, ಅರೆ ಭಾಷಾ ಗೌಡರಿಗೆ ತಮ್ಮದೇ ಆದ ಗೌರವವಿದೆ. ಇದರಿಂದ ಬೇರೆ ಜಿಲ್ಲೆಗಳ ಗೌಡ ಸಮದಾಯದೊಂದಿಗೆ ಹೋಲಿಸಿಕೊಳ್ಳುವ ಅಗತ್ಯವಿಲ್ಲ~ ಎಂದು ಕಿವಿಮಾತು ಹೇಳಿದರು.

`ಜೀವನ ಹಾಗೂ ಉದ್ಯೋಗವನ್ನರಿಸಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗೌಡ ಸಮುದಾಯದವರು ಇದುವರೆಗೆ ಯಾವುದೇ ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಡುವ ಜಾಯಮಾನ ಗೌಡ ಸಮಾಜದ್ದಲ್ಲ. ಇದು ಖುಷಿ ತರುವ ವಿಚಾರ. ಅಂತೆಯೇ, ಮೂಢನಂಬಿಕೆಗಳಿಂದ ಹೊರಬರಲು ಸಮಾಜ ಪ್ರಯತ್ನಿಸಬೇಕು~ ಎಂದರು.

ಈಶಾನ್ಯ ವಲಯದ ಡಿಸಿಪಿ ಬಿ.ಆರ್. ರವಿಕಾಂತೇಗೌಡ ಮಾತನಾಡಿ, `ರಾಜಕೀಯ ಕಾರಣಗಳಿಗಾಗಿ ಹುಟ್ಟಿಕೊಳ್ಳುವ ಸಂಘಟನೆಗಳು ತಾತ್ಕಾಲಿಕ. ಆದರೆ, ಸಂಸ್ಕೃತಿ ಹಾಗೂ ನೈತಿಕತೆಯನ್ನು ಎತ್ತಿಹಿಡಿಯುವಂತಹ ಸಂಘಟನೆಗಳು ಸಮಾಜಕ್ಕೆ ಗೌರವಾನ್ವಿತ ನೆಲೆ ಒದಗಿಸುತ್ತವೆ. ಸಮಾಜದ ಬೇರುಗಳು ಸಡಿಲಗೊಂಡಾಗ ಗಟ್ಟಿಗೊಳಿಸಲು ಇಂತಹ ಸಂಘಟನೆಗಳ ಅಗತ್ಯವಿದೆ~ ಎಂದರು.

ಹಂಪಿ ಕನ್ನಡ ವಿ.ವಿ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ವಿಜಯ್ ತಂಬಂಡ ಪೂಣಚ್ಚ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೌಡ ಸಮುದಾಯ ಬೆಳೆದು ಬಂದ ಹಾದಿಯ ಚರಿತ್ರೆಯನ್ನು ವಿವರಿಸಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಪತ್ನಿ ಡಾಟಿ, ಗೌಡರ ಚಾವಡಿ ಅಧ್ಯಕ್ಷ ಕಾಪಿಲ ಗಿರಿಯಪ್ಪಗೌಡ, ಗೌರವಾಧ್ಯಕ್ಷ ಎಂ.ಬಿ. ಜಯರಾಂ ಹಾಜರಿದ್ದರು. ಕೊಡಗು, ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ನಂಗಾರು ನಿಂಗರಾಜು ಸ್ವಾಗತಿಸಿದರು.

ಇದಕ್ಕೂ ಮುನ್ನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

`ಶಾಕ್~ ನೀಡುವ ದೊಡ್ಡ ಶಕ್ತಿ ನಮ್ಮಲ್ಲಿದೆ!
`ದಕ್ಷಿಣ ಕನ್ನಡ ಜಿಲ್ಲೆಯ ನಾನು ಸಿಎಂ ಆದರೆ, ನಮ್ಮ ಜಿಲ್ಲೆಯವರೇ ಆದ ಶೋಭಾ ಕರಂದ್ಲಾಜೆ ಪ್ರಭಾವಿ ವಿದ್ಯುತ್ ಸಚಿವರಾಗಿದ್ದಾರೆ. ನಮ್ಮವರೇ ಆದ ಕೊಡಗಿನ ಕೆ.ಜಿ. ಬೋಪಯ್ಯ ವಿಧಾನಸಭಾ ಅಧ್ಯಕ್ಷರಾಗಿದ್ದಾರೆ. ಹೀಗಾಗಿ, ಯಾರಿಗೆ ಬೇಕಾದರೂ ಸೂಕ್ತ ಸಮಯದಲ್ಲಿ `ಶಾಕ್~ ಕೊಡುವ ದೊಡ್ಡ ಶಕ್ತಿ ನಮ್ಮಲ್ಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಸ್ಯ ಚಟಾಕಿ ಹಾರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT