ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ... ಮದುವೆ ಕುದುರೆ!

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಮೆಹೆಂದಿ ಲಗಾಕೆ ರಖ್‌ನಾ.. ಡೋಲಿ ಸಜಾ ಕೆ ರಖನಾ...~ ಜೋರು ಹಾಡು. ಬಿಳಿಕುದುರೆಯ ಮೇಲೆ ಕೂತ ಗಂಡಿನ ಮುಖ ಕಾಣುತ್ತಿಲ್ಲ. ಪುಷ್ಪಾಲಂಕಾರ ಅದನ್ನು ಮುಚ್ಚಿದೆ. ಜನನಿಬಿಡ ರಸ್ತೆ. ವಾಹನಗಳ ಹಾರ್ನ್ ಸದ್ದು.
 

ಅಷ್ಟರ ನಡುವೆಯೇ ಮದುವೆ ದಿಬ್ಬಣ ಹೊರಟವರ ಹರ್ಷೋದ್ಗಾರ. ಹಿಂದಿ ಹಾಡಿಗೆ ಅಬಾಲವೃದ್ಧರೆಲ್ಲಾ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದರೆ, ಬಂಧುವೊಬ್ಬ ಟ್ರಾಫಿಕ್ ಕಿರಿಕಿರಿ ತಪ್ಪಿಸುತ್ತಲೇ ಮದುವೆ ಸಂಭ್ರಮಕ್ಕೆ ಅನುವು ಮಾಡಿಕೊಡುತ್ತಾರೆ.

ಇಷ್ಟೆಲ್ಲಾ ಗೋಜಲು, ಗೊಂದಲ, ಸದ್ದಿನ ನಡುವೆಯೂ ಬಿಳಿಕುದುರೆ ಕಿಂಚಿತ್ತೂ ವಿಚಲಿತವಾಗದೆ ಗಂಡನ್ನು ಮದುವೆಮನೆ ಮುಟ್ಟಿಸಬೇಕು. ಈ ಸಂಪ್ರದಾಯವಿರುವವರ ಮದುವೆ ಬೆಂಗಳೂರಿಗೆ ಹೊಸತೇನಲ್ಲ. ಆ ಕುದುರೆಗಳ ಹಿಂದೆ ಇರುವ ಕತೆ ಮಾತ್ರ ಕುತೂಹಲಕಾರಿ. 

ಕೆಲ ಸಮುದಾಯಗಳಲ್ಲಿ ಮದುಮಗನನ್ನು ವಿವಾಹ ಮುಹೂರ್ತಕ್ಕೆ ದಿಬ್ಬಣದಲ್ಲಿ ಕರೆತರಲು ಕುದುರೆಗಳನ್ನು ಬಳಸುತ್ತಾರೆ. ಅದಕ್ಕಾಗಿ ಬಾಡಿಗೆ ಕುದುರೆಗಳು ಸಿಗುತ್ತವೆ. ಕುದುರೆಯನ್ನೇರಿ ಕುಳಿತ ವರ ಸಾಕ್ಷಾತ್ `ರಾಜ~ನಂತೆ ಕಾಣುವ ಆ ಕ್ಷಣವನ್ನು ನೋಡುವುದೇ ಒಂದು ಸೊಗಸೆಂಬುದು ಈ ರೂಢಿ ಅನುಸರಿಸುವವರ ನಂಬಿಕೆ. ಕುದುರೆ ಬಿಳಿ ವರ್ಣದ್ದೇ ಆಗಿರಬೇಕು ಎಂಬ ಪರಂಪರಾಗತ ಆಚರಣೆಗೆ ಇಂದಿಗೂ ಬೆಲೆ.

ಮದುವೆಯಷ್ಟೇ ಅಲ್ಲದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆಗಳಲ್ಲಿ ಕುದುರೆಗಳನ್ನು, ಸಾರೋಟುಗಳನ್ನು ಇಂದಿಗೂ ಬಳಸಲಾಗುತ್ತಿದೆ. ಇಂಥ ಕಾರ್ಯಕ್ರಮಗಳಿಗೆ ಕುದುರೆಗಳನ್ನು ಒದಗಿಸುವ ಮಂದಿಯೂ ನಗರದ ಅನೇಕ ಬಡಾವಣೆಗಳಲ್ಲಿ ಕಾಣಸಿಗುತ್ತಾರೆ.

ಇದನ್ನೇ ವೃತ್ತಿಯನ್ನಾಗಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ಯಾಲೇಸ್ ಗುಟ್ಟಹಳ್ಳಿ, ಬನಶಂಕರಿ, ಮುನಿರೆಡ್ಡಿಪಾಳ್ಯ, ಹಲಸೂರು, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಶಿವಾಜಿನಗರ ಪೊಲೀಸ್ ಸ್ಟೇಷನ್ ಸಮೀಪ ಕಾಕ್‌ಬರ್ನ್ ರಸ್ತೆಯಲ್ಲಿರುವ ಕುದುರೆ ಶೆಡ್‌ಗಳಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ.

ಮೆರವಣಿಗೆಗೆ ಬಳಸುವ ಕುದುರೆಗೆ ಸ್ನಾನ ಮಾಡಿಸಿ, ಅದರ ಬೆನ್ನಿನ ಮೇಲೆ ಕೆಂಪು ಬಣ್ಣದ ವಸ್ತ್ರವನ್ನು ಹಾಕಲಾಗುತ್ತದೆ. ಸುಂದರವಾದ ಕೆಂಪು ಬಣ್ಣದ ಮುಖವಾಡ, ಕಿವಿಪಟ್ಟಿ, ಕಾಲು ಹಾಗೂ ಕೊರಳುಪಟ್ಟಿ ತೊಡಿಸಿ ಪಟ್ಟದಕುದುರೆಯಂತೆ ಸಿಂಗಾರ ಮಾಡುತ್ತಾರೆ. ಕುದುರೆಯ ಜೊತೆಗೆ ದೊಡ್ಡ ಛತ್ರಿಯನ್ನು ಹಿಡಿದುಕೊಂಡು ಮದುಮಗನನ್ನು ಕೂರಿಸಿಕೊಂಡು ಕಲ್ಯಾಣ ಮಂಟಪಕ್ಕೆ ಕರೆತರುವ ಸನ್ನಿವೇಶವಂತೂ ರಾಜವೈಭವವನ್ನು ನೆನಪಿಸುತ್ತದೆ.

`ಐವತ್ತು ವರ್ಷಗಳಿಂದ ನಾವು  ಈ ಕಸುಬು ಮಾಡುತ್ತಿದ್ದೇವೆ. ನಮ್ಮ ಅಜ್ಜನ ಕಾಲದಿಂದಲೂ ಕುದುರೆಗಳನ್ನು ಸಾಕುವ, ಬಾಡಿಗೆ ನೀಡುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ~ ಎನ್ನುತ್ತಾರೆ ಕುದುರೆಗಳ ಮಾಲೀಕ ಸಾದಿಕ್.

ರಾಜಸ್ತಾನದ ರಜಪೂತರು, ಮರಾಠಿಗರು, ಪಂಜಾಬ್‌ನ ಸಿಂಧಿಗಳ ಮದುವೆಗಳಲ್ಲಿ ಕುದುರೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹೈದರಾಬಾದ್‌ನಲ್ಲಿ ಮುಸ್ಲಿಂ ಸಮುದಾಯದವರೂ ಮದುವೆಗಳಲ್ಲಿ ಕುದುರೆಗಳನ್ನು ಬಳಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಬಳಸುವುದಿಲ್ಲ. ಇತ್ತೀಚೆಗೆ ಕೆಲ ಶೆಟ್ಟರು ಹಾಗೂ ಅಗರ್‌ವಾಲ್ ಸಮುದಾಯದವರು ಮದುವೆಗೆ ಕುದುರೆಗಳನ್ನು ಬಳಸುತ್ತಿದ್ದಾರೆ. ಬಿಳಿ ಬಣ್ಣದ ಕಟ್ಟುಮಸ್ತಾದ ಕುದುರೆಗಳಿಗೆ ಬೇಡಿಕೆ ಹೆಚ್ಚು ಎಂದು ಹೇಳುತ್ತಾರೆ.

ಇವರ ಬಳಿ ಹದಿನೈದು ಕುದುರೆಗಳಿವೆ. ಅವುಗಳೆಲ್ಲವನ್ನು ಮದುವೆ ಇನ್ನಿತರೆ ಸಮಾರಂಭಗಳಿಗೆ ಬಾಡಿಗೆ ನೀಡುತ್ತಾರೆ. ಐದರಿಂದ ಹತ್ತು ವರ್ಷದ ಕುದುರೆಗಳನ್ನು ಹೆಚ್ಚಾಗಿ ಮದುವೆಗಳಿಗೆ ಬಳಸಲಾಗುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದ ಕುದುರೆ ಮರಿಗಳನ್ನು ತರಲಾಗುತ್ತದೆ. 3 ವರ್ಷದ ಮರಿಗಳನ್ನು ತಂದು ಅವುಗಳಿಗೆ ಸೂಕ್ತ ತರಬೇತಿ ನೀಡಿ, ಮೆರವಣಿಗೆಗಳಲ್ಲಿ ಗಾಬರಿಯಾಗದಂತೆ ಸಹಕರಿಸುವ ರೀತಿಯಲ್ಲಿ ಪಳಗಿಸಲಾಗುತ್ತದೆ.

ಸಾಹಿತ್ಯ ಸಮ್ಮೇಳನ, ಮದುವೆಗಳು, ಧಾರ್ಮಿಕ ಸಮಾರಂಭಗಳ ಮೆರವಣಿಗೆಗಳ ಸಂದರ್ಭದಲ್ಲಿ ಈ ಕುದುರೆಗಳಿಗೆ ಬೇಡಿಕೆ ಇರುತ್ತದೆ. ಉಳಿದಂತೆ ಜಟಕಾಗಳಿಗೂ ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ಕೆಲ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣಕ್ಕೆ ಈ ಕುದುರೆಗಳನ್ನು ಬಳಸಿಕೊಂಡಿದ್ದಾರೆ. ಇತ್ತೀಚೆಗೆ `ಸಂಗೊಳ್ಳಿ ರಾಯಣ್ಣ~ ಚಿತ್ರದ ಚಿತ್ರೀಕರಣಕ್ಕೂ ಬಾಡಿಗೆ ಕೊಟ್ಟಿದ್ದೆ ಎನ್ನುತ್ತಾರೆ ಅವರು.

ಮದುವೆ ಕುದುರೆಗಳಿಗೆ ಸಾವಿರ ರೂಪಾಯಿಯಿಂದ ಒಂದೂವರೆ ಸಾವಿರ ರೂ.ವರೆಗೆ ಬಾಡಿಗೆ ಇದೆ. ಕೆಲವು ಮಧ್ಯವರ್ತಿಗಳ ಮೂಲಕವೂ ಆರ್ಡರ್ ಸಿಗುತ್ತದೆ. ಆದರೆ ಅವರಿಗೂ ಕಮಿಷನ್ ನೀಡಬೇಕು. ಆಗ ನಮಗೆ ನಷ್ಟವಾಗುತ್ತದೆ ಎಂದು ಅಲವತ್ತುಕೊಳ್ಳುತ್ತಾರೆ.
ದೂರದ ಸ್ಥಳಗಳಿಗೆ ಕುದುರೆಗಳನ್ನು ಕಳುಹಿಸಬೇಕಾದರೆ ಬಾಡಿಗೆ ಹೆಚ್ಚು. ಹತ್ತಿರದ ಸ್ಥಳಗಳಿಗೆ ಕಡಿಮೆ ಬಾಡಿಗೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಸಾದಿಕ್.

`ನಮ್ಮ ಬಳಿ ಇರುವ 17 ಕುದುರೆಗಳು, ನಾಲ್ಕು ಸಾರೋಟುಗಳನ್ನು ಮದುವೆಗಳಿಗೆ ಬಾಡಿಗೆ ನೀಡುತ್ತೇವೆ. ಜನ ಬಿಳಿ ಕುದುರೆಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ~ ಎನ್ನುತ್ತಾರೆ ಡಿ.ಜೆ.ಹಳ್ಳಿ ಟ್ಯಾನರಿ ರಸ್ತೆಯಲ್ಲಿ ಕುದುರೆಗಳನ್ನು ಬಾಡಿಗೆ ನೀಡುವ ಜಬ್ಬೀರ್.

ಇಂಥ ಕುದುರೆಗಳನ್ನು ಒದಗಿಸುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಗರದ ಮಧ್ಯ ಭಾಗದಲ್ಲಿ ಕುದುರೆ ಶೆಡ್‌ಗಳು ಇರುವುದರಿಂದ ಅನೇಕ ಬಾರಿ ಸ್ಥಳಾಂತರ ಮಾಡಲಾಗಿದೆ. ಹಾಗಾಗಿ ಕುದುರೆಗಳ ಪೋಷಣೆಗೆ ಸೂಕ್ತ ಸ್ಥಳದ ಸಮಸ್ಯೆ ಎದುರಾಗಿದೆ.
 
ಮಹಾನಗರ ಪಾಲಿಕೆ ಕುದುರೆ ಶೆಡ್‌ಗಳಿಗೆ ಶಾಶ್ವತ ಸ್ಥಳವನ್ನು ನೀಡಬೇಕು. ಇದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಕುಟುಂಬಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂಬುದು ಕುದುರೆ ಬಾಡಿಗೆ ನೆಚ್ಚಿಕೊಂಡು ಬದುಕುತ್ತಿರುವವರ ಅಹವಾಲು.              
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT