ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಸಾಮಿ ಕೆರೆಗೆ ಕಾಯಕಲ್ಪ ಸಾಧ್ಯವಾದೀತೇ?

Last Updated 19 ಏಪ್ರಿಲ್ 2011, 9:05 IST
ಅಕ್ಷರ ಗಾತ್ರ

ಹೊನ್ನಾವರ: ಪುರಾಣ ಪ್ರಸಿದ್ಧ ರಾಮತೀರ್ಥಕ್ಕೆ ಸಮೀಪದ ಬೃಹದಾಕಾರದ ಅರೆಸಾಮಿ ಕೆರೆಯ ಹೂಳೆತ್ತಬೇಕು; ಆ ಮೂಲಕ ಸುತ್ತಮುತ್ತಲ ಪ್ರದೇಶಗಳ ನೀರಿನ ಬವಣೆಯನ್ನು ನೀಗಿಸಬೇಕು ಎನ್ನುವ ಬಹುಕಾಲದ ಬೇಡಿಕೆಗೆ ಇದೀಗ ಕಾಲ ಕೂಡಿ ಬಂದಿದೆ.ಕೆರೆಯ ಅಭಿವೃದ್ಧಿಯಾಗುತ್ತಿದೆ ಎಂಬ ಸಂತೋಷ ಒಂದು ಕಡೆಯಾದರೂ ಕೆರೆಯ ಅಭಿವೃದ್ಧಿಗೆ ಮೀಸಲಾದ ಹಣ ಸಾಕಾಗುವುದಿಲ್ಲ ಎಂಬುದೇ ಸದ್ಯದ ಆತಂಕ.

ಅರೆಸಾಮಿ ಕೆರೆ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ಈ ಭಾಗದ ಕರಿಕಾನ ಪರಮೇಶ್ವರಿ ಗ್ರಾಮ ಅರಣ್ಯ ಸಮಿತಿ ಹೋರಾಟ ನಡೆಸುತ್ತಲೇ ಬಂದಿತ್ತು. ಹಲವಾರು ಅಡ್ಡಿಗಳನ್ನು ಎದುರಿಸಿ, ನಿರಂತರ ಪ್ರಯತ್ನ ಮಾಡಿದ್ದರ ಫಲ ಎಂಬಂತೆ ಇತ್ತೀಚೆಗೆ ಅರಣ್ಯ ಇಲಾಖೆಯೂ ಅರಣ್ಯ ಸಮಿತಿಯ ಪ್ರಯತ್ನಕ್ಕೆ ನೈತಿಕ ಬೆಂಬಲ ನೀಡಿತು; ಜೊತೆಗೆ ಕೆರೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿ ಕೆರೆಯ ಸುತ್ತಲಿನ ನೂರಾರು ಹೆಕ್ಟೇರ್ ಜಾಗವನ್ನು ಪವಿತ್ರವನದ ಅಡಿಯಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಲ್ಲಿಸಿತ್ತು.

ಇವೆಲ್ಲವುಗಳ ನಡುವೆ ಇದೀಗ ಮುಖ್ಯಮಂತ್ರಿಯವರು ರಾಜ್ಯದ ಕೆರೆಗಳ ಹೂಳು ತೆಗೆಸಿ, ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ ಅನುದಾನ ನೀಡಿರುವುದು ಅರೆಸಾಮಿ ಕೆರೆಗೂ ವರವಾಗಿ ಪರಿಣಮಿಸಿದ್ದು; ಇಲ್ಲಿಯ ಗ್ರಾಮ ಅರಣ್ಯ ಸಮಿತಿ ಹಾಗೂ ಪರಿಸರಪ್ರಿಯರಲ್ಲಿ ಸಂಚಲನವನ್ನುಂಟುಮಾಡಿದೆ. ಕನಿಷ್ಠ 25 ಗುಂಟೆ ವಿಸ್ತೀರ್ಣದ ಕೆರೆಯನ್ನು ಈ ಅನುದಾನದಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು 39 ಗುಂಟೆ ವಿಸ್ತೀರ್ಣದ ಪುರಾತನ ಕಾಲದ ಅರೆಸಾಮಿ ಕೆರೆ ಸಹಜವಾಗಿಯೇ ಅನುದಾನದ ಸಿಂಹಪಾಲು ಪಡೆವುದೆಂಬುದು ಇವರ ನಿರೀಕ್ಷೆ.

ನಿರೀಕ್ಷೆಯಂತೆ, ಅರೆಸಾಮಿ ಕೆರೆಯ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿ ವಿನಿಯೋಗಿಸಲು ಅಂದಾಜಿಸಲಾಗಿತ್ತು ಎನ್ನಲಾಗಿದೆ. ಆದರೆ ಕಾಮಗಾರಿಯನ್ನು ಇದೇ ಬರುವ ಮೇ 31ರೊಳಗೆ ತುರ್ತಾಗಿ ಮುಗಿಸಬೇಕಿರುವುದರಿಂದ ಈ ಮೊತ್ತವನ್ನು ಇದೀಗ 50 ಲಕ್ಷ ರೂಪಾಯಿಗೆ ಕಡಿತಗೊಳಿಸಲಾಗಿದೆ. ತುರ್ತಾಗಿ ಕಾಮಗಾರಿ ಮುಗಿಸಬೇಕೆಂಬ ಕಾರಣಕ್ಕಾಗಿ. ನ್ಯಾಯವಾಗಿ ಸಿಗಬೇಕಾದ ಹಣದ ಮೊತ್ತವನ್ನು ಕಡಿತಗೊಳಿಸುವುದಕ್ಕೆ ಅರಣ್ಯ ಸಮಿತಿಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೆರೆಯ ಸಂಪೂರ್ಣ ಅಭಿವೃದ್ಧಿಗೆ 3 ಕೋಟಿ, 40 ಲಕ್ಷ ರೂಪಾಯಿ ಬೇಕಿದ್ದು ಇದಕ್ಕಾಗಿ ಅಂದಾಜು ಪತ್ರ ತಯಾರಿಸಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಹೀಗೆ ಅಗತ್ಯಕ್ಕಿಂತ ತೀರ ಕಡಿಮೆ ಹಣ ಖರ್ಚು ಮಾಡುವುದು ಗುತ್ತಿಗೆದಾರರಿಗೆ ಮಾತ್ರ ಪ್ರಯೋಜನವಾಗಬಹುದೇ ಹೊರತು ಕೆರೆಯ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ದೂರುತ್ತಾರೆ ಅರಣ್ಯ ಸಮಿತಿಯ ಸದಸ್ಯರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT