ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿಯ ಆಕ್ರಂದನ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

 ಅಂದು- ತೊರೆಯಲ್ಲಿ ಸ್ನಾನ, ದಡದಲ್ಲಿ ರಾಮದೇವರ ಧ್ಯಾನ, ನಾಗರಕೆರೆಯಲ್ಲಿ ತೆಪ್ಪೋತ್ಸವ... ಅವೆಲ್ಲ ವೈಶಾಖದ ದಿನಗಳು. ವರ್ಷದಲ್ಲಿ ಆರು ತಿಂಗಳು ಕಾಲುವೆಯಲ್ಲಿ ಜುಳುಜುಳು ನೀರು. ಗದ್ದೆ ಬಯಲಿನಲ್ಲಿ ವರ್ಷಪೂರ್ತಿ ಬೆಳೆ... ಕಣಜದ ತುಂಬಾ ಧಾನ್ಯ. ಸಿರಿ ಸಂಪತ್ತಿನ ಯುಗ!

ಇಂದು- ಅಲೆಗಳ ಮೇಲೆ ನಗರಿಗರ ತ್ಯಾಜ್ಯದ ನರ್ತನ. ಶುದ್ಧ ನೀರೆಷ್ಟೆಂದು ಕಣ್ಣಳತೆಯಲ್ಲಿ ಸೋಸಲಾಗದ ಸ್ಥಿತಿ. ಕೆಲವೆಡೆ ನದಿಪಾತ್ರವೇ ನಾಪತ್ತೆ. ನದಿಯೋ ಚರಂಡಿಯೋ ಎಂಬ ಜಿಜ್ಞಾಸೆ. ಕೈಗಾರೀಕರಣದ ಪರಿಣಾಮ ಘೋರ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಜೀವಗಳು ಅರ್ಕಾವತಿ ನದಿಯ ವೈಭವವನ್ನು ಈಗಲೂ ಮುತ್ತು ಪೋಣಿಸಿದಂತೆ ಮೆಲುಕು ಹಾಕುತ್ತಾರೆ. ಅದೆಷ್ಟೋ ಬರಗಾಲಗಳನ್ನು ಎದುರಿಸಲು ರೈತರಿಗೆ ನೆರವಾಗುತ್ತಿದ್ದ ಅರ್ಕಾವತಿ ನದಿಯನ್ನು ಅವರೆಲ್ಲಾ `ಜೀವಗಂಗೆ~ ಎನ್ನುತ್ತಾರೆ. ಆದರೆ, ಮೂರು ದಶಕದಲ್ಲಿ ಅದು ಹದಗೆಟ್ಟಿರುವುದನ್ನು ನೋಡಿದರೆ ಅವರ ಕರುಳು ಚುರ‌್ರೆನ್ನುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಅರ್ಕಾವತಿ ನದಿಯ ಉಗಮ ಸ್ಥಾನ. 190 ಕಿ.ಮೀ ಹರಿಯುವ ಈ ನದಿ, ಒಟ್ಟು 375 ಜಲಸಂಗ್ರಹಗಾರಗಳನ್ನು (ಇಂಗು ಕೆರೆ, ಚೆಕ್ ಡ್ಯಾಂ) ದಾಟುತ್ತದೆ. 45 ದೊಡ್ಡ ಕೆರೆಗಳನ್ನು ಹಾಯ್ದು, ಮೂರು ಜಲಾಶಯಗಳನ್ನು ಸಂಪರ್ಕಿಸುತ್ತದೆ. ನಂತರ ಕನಕಪುರ ಸಮೀಪದ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ. ಕಾಲುವೆ, ತೊರೆ, ಚಿಕ್ಕತೊರೆಗಳ ಮೂಲಕ ಹರಿಯುವ ಅರ್ಕಾವತಿ ನದಿ ಒಮ್ಮಮ್ಮೆ ಗುಪ್ತಗಾಮಿನಿಯಾಗುತ್ತದೆ.

ಮೊದಲ ಮುಖ
ನಂದಿಬೆಟ್ಟದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಅರ್ಕಾವತಿ ನದಿ ನೀರು 15 ಕಿ.ಮೀ ಹರಿಯುವ ವೇಳೆಗೆ `ಕಪ್ಪು ಸುಂದರಿ~ಯಾಗುತ್ತದೆ. ಬಾಶೆಟ್ಟಿಹಳ್ಳಿಯಲ್ಲಿರುವ ಕೈಗಾರಿಕೆಗಳು ಹೊರಚೆಲ್ಲುವ ರಾಸಾಯನಿಕಯುಕ್ತ ತ್ಯಾಜ್ಯದ `ಪ್ರಸಾದ~ವೇ ನದಿ ನೀರಿನ ಬಣ್ಣ ಬದಲಾಗಲು ಕಾರಣ. ಈ ತ್ಯಾಜ್ಯ ಬಣ್ಣವನ್ನಷ್ಟೇ ಅಲ್ಲ, ನದಿ ನೀರಿನ ಗುಣವನ್ನೂ ಕಳಪೆಯಾಗಿಸಿದೆ.

ಪರಿಣಾಮ ವೀರಾಪುರ ಸೇರಿದಂತೆ ಮಜರಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳೆಂಟು ಹಳ್ಳಿಗಳಲ್ಲಿ ಅಂತರ್ಜಲ ಕಲುಷಿತಗೊಂಡಿದೆ. ಜನರಲ್ಲಿ ಗಂಟಲು ಬೇನೆ, ಚರ್ಮ ವ್ಯಾಧಿ, ಮಕ್ಕಳಲ್ಲಿ ಶ್ವಾಸಕೋಶದ ಸೋಂಕಿನಂತಹ ಕಾಯಿಲೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದು ವೈದ್ಯ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ವಿಜಯ್‌ಕುಮಾರ್ ಕೊಡುವ ಚಿತ್ರಣ.

ದೊಡ್ಡಬಳ್ಳಾಪುರದಿಂದ ಮೂರ‌್ನಾಲ್ಕು ದಿಕ್ಕುಗಳಲ್ಲಿ ಹರಿಯುವ ಅರ್ಕಾವತಿ ನದಿ, ಹೆಸರಘಟ್ಟ ಕೆರೆಯಲ್ಲಿ ಸಂಗಮವಾಗುತ್ತದೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯನೀರು ನದಿ ಕಾಲುವೆಗಳ ಮೂಲಕ ಈ ಕೆರೆ ಸೇರಿ ನೀರನ್ನು ಕಲುಷಿತಗೊಳಿಸುತ್ತಿದೆ.

ಎರಡನೇ ಮುಖ
ಹೆಸರಘಟ್ಟ ದಾಟಿದ ನಂತರ ಅರ್ಕಾವತಿ ನದಿ ಸರಣಿ ಕೆರೆಗಳೊಂದಿಗೆ ತಿಪ್ಪಗೊಂಡನಹಳ್ಳಿ ಜಲಾಶಯದ ಕಡೆಗೆ ಹರಿಯುತ್ತದೆ. ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ನದಿ ನೀರಿನ ಕಾಲುವೆ ಸೇರುತ್ತಿದೆ. ಜಿಂದಾಲ್ ಸಮೀಪದ ಕಾಲುವೆಗಳಲ್ಲಿ `ಮಾಲಿನ್ಯದ ರೌದ್ರಾವತಾರ~ ನೋಡಬಹುದು.

ಈ ನೀರು ಮಾದಾವರ ಕೆರೆ ಮೂಲಕ ಕಿತ್ನಹಳ್ಳಿ, ಚನ್ನಮಾರಯ್ಯನಹಳ್ಳಿಯ ಬಂಡೆಗಳ ನಡುವೆ ಹರಿಯುವ ನದಿ ಕಾಲುವೆಯಲ್ಲಿ ಬೆರೆಯುತ್ತದೆ. ಹೀಗೆ ಹರಿಯುವ ಕಲುಷಿತ ನೀರು, ದುರ್ವಾಸನೆಯಿಂದಾಗಿ ಮಾದಾವರ ಹಾಗೂ ಸುತ್ತಲಿನ ಗ್ರಾಮಸ್ಥರು ಚರ್ಮ ರೋಗ, ಆಸ್ತಮಾದಂತಹ ವ್ಯಾಧಿಗಳಿಂದ ಬಳಲುತ್ತಿದ್ದಾರೆ.

ವರ್ಷದ ಹಿಂದೆ ಕಾರ್ಖಾನೆಗಳ ತ್ಯಾಜ್ಯ ನೀರು ಮಾದಾವರ ಕೆರೆಗೆ ಸೇರುತ್ತಿದ್ದಾಗ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದರಿಂದ ಎಚ್ಚೆತ್ತುಕೊಂಡ ಕಾರ್ಖಾನೆಯವರು ತ್ಯಾಜ್ಯ ನೀರನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದರು. ಆದರೆ ತ್ಯಾಜ್ಯ ನೀರಿನ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ ಎನ್ನುತ್ತಾರೆ ಸ್ವರಾಜ್ ಸಂಸ್ಥೆಯ ದೊಡ್ಡಿ ಶಿವರಾಮ್.

ಅಪಾರ ರಾಸಾಯನಿಕ ಉಳಿಕೆ

2010ರಲ್ಲಿ ಕಾವೇರಿ ನೀರಾವರಿ ನಿಗಮ ಅರ್ಕಾವತಿ ನದಿ ಮಾಲಿನ್ಯ ಕುರಿತು ಅಧ್ಯಯನ ನಡೆಸಿತು. ಮಾದಾವರ, ಸಿದ್ದನ ಹೊಸಹಳ್ಳಿ, ದಾಸನಪುರ, ತೋಟದ ಗುಡ್ಡದಹಳ್ಳಿ, ಅಡಕಮಾರನಹಳ್ಳಿ ಮತ್ತು ಚೋಳನಾಯಕನಹಳ್ಳಿ ವ್ಯಾಪ್ತಿಯ ಕೈಗಾರಿಕೆಗಳ ತ್ಯಾಜ್ಯ ನೀರು ನದಿ ಕಾಲುವೆಗಳಲ್ಲಿ ಹರಿಯುತ್ತಿರುವ ಅಂಶ ಈ ಅಧ್ಯಯನದಿಂದ ಬೆಳಕಿಗೆ ಬಂತು. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಅರ್ಕಾವತಿ ನದಿ ನೀರು ಕಲುಷಿತಗೊಳಿಸುತ್ತಿದ್ದ ದಾಸನಪುರ ಸಮೀಪದ ತಂಬಾಕು ಮಿಶ್ರಣ ಹಾಗೂ ಪ್ಯಾಕಿಂಗ್ ಕಂಪೆನಿಯೊಂದನ್ನು ಮುಚ್ಚಲು ಹೈಕೋರ್ಟ್ ಆದೇಶಿಸಿದೆ.

ಕಿತ್ನಹಳ್ಳಿ ಹಾಗೂ ಚನ್ನಮಾರಯ್ಯನಹಳ್ಳಿ ವ್ಯಾಪ್ತಿಯಲ್ಲಿ ಅರ್ಕಾವತಿ ಕಾಲುವೆಗೆ ಸೇರುವ ನೀರಿನಲ್ಲಿ ಅಪಾರ ಪ್ರಮಾಣದ ರಾಸಾಯನಿಕಗಳ ಉಳಿಕೆ ಪತ್ತೆಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಶಾಸಕ ನರೇಂದ್ರ ಬಾಬು ಈ ನೀರನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತಪಾಸಣೆಗೆ ಒಳಪಡಿಸಿದ್ದಾರೆ. ವರದಿ ಪ್ರಕಾರ ಒಂದು ಲೀಟರ್ ನೀರಿನಲ್ಲಿ 2390 ಮಿ.ಗ್ರಾಂ ಘನತ್ಯಾಜ್ಯವಿದೆ (500 ಮಿ.ಗ್ರಾಂ ನಿಗದಿತ ಟಿಡಿಎಸ್ ಇರಬಹುದು). 528 ಮಿ.ಗ್ರಾಂ (300 ಮಿ.ಗ್ರಾಂ ನಿಗದಿತ ಮಟ್ಟ) ಗಡಸುತನವಿದೆ.

ಅತಿಯಾದ ಕ್ಲೋರೈಡ್, ಕಬ್ಬಿಣದ ಅಂಶ, ಇನ್ನಿತರ ರಾಸಾಯನಿಕ ಇರುವುದು ಬೆಳಕಿಗೆ ಬಂದಿದೆ. ಇದೇ ನೀರು ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿ, ಬೆಂಗಳೂರಿನ ಶೇ 20ರಷ್ಟು ನಾಗರಿಕರು ಕಲುಷಿತ ನೀರು ಕುಡಿಯುವಂತಾಗಿದೆ ಎಂದು ಬಾಬು ಬೇಸರ ವ್ಯಕ್ತಪಡಿಸುತ್ತಾರೆ.

ರೇಷ್ಮೆ ಕೈಗಾರಿಕೆಗಳ ಕೊಳಚೆ
ಸರಣಿ ಕೆರೆಗಳನ್ನು ಸಂಪರ್ಕಿಸುತ್ತಾ, ತೊರೆಗಳ ಮೂಲಕ ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಜಲಾಶಯಗಳನ್ನು ದಾಟಿ ಸಾಗುವ ಅರ್ಕಾವತಿ ನದಿ ಮುಂದೆ ರಾಮನಗರದ ರೇಷ್ಮೆ ಫಿಲೇಚರ್ ಘಟಕಗಳ ತ್ಯಾಜ್ಯ ಹಾಗೂ ನಗರದ ಹೊಲಸಿನೊಂದಿಗೆ ಸೇರಿಕೊಳ್ಳುತ್ತದೆ. `ತ್ಯಾಜ್ಯ ನೀರಿನಿಂದ ಒಂದೆಡೆ ನದಿ ಕಲುಷಿತಗೊಳ್ಳುತ್ತಿದ್ದರೆ, ಇನ್ನೊಂದೆಡೆ ಜಮೀನಿನ ಮಣ್ಣು ವಿಷಮಯವಾಗುತ್ತಿದೆ. ಭತ್ತಕ್ಕೆ ರೋಗ ಹೆಚ್ಚು~ ಎನ್ನುತ್ತಾರೆ ರಾಮನಗರ ಸಮೀಪದ ಅಚ್ಚಲು ಗ್ರಾಮದ ಕೃಷಿಕ ಉಮೇಶ್.

ಮುಂದೆ ಇದೇ ಕಲುಷಿತ ಅರ್ಕಾವತಿ ಕನಕಪುರ ತಾಲ್ಲೂಕು ದೊಡ್ಡಮುದುವಾಡಿಯಲ್ಲಿ ವೃಷಭಾವತಿ ನದಿಯನ್ನು ಸೇರಿಕೊಳ್ಳುತ್ತದೆ. ಕೊಳಕಾದ ವೃಷಭಾವತಿ ನದಿ, ಶುಭ್ರವಾದ ಸುವರ್ಣಮುಖಿ ನದಿಯೊಂದಿಗೆ ಸೇರಿ ಕಾವೇರಿಯಲ್ಲಿ ಸಂಗಮವಾಗುತ್ತವೆ. ಇತ್ತೀಚೆಗೆ ಕೇಂದ್ರ ಜಲ ಆಯೋಗ ಕಾವೇರಿ ನದಿ ಕಲುಷಿತವಾಗಿರುವ ಕುರಿತು ವರದಿ ನೀಡಿದೆ. ಈ ಕೊಳೆಯ ಹಿಂದೆ ಅರ್ಕಾವತಿ, ಹೇಮಾವತಿ, ಯಗಚಿ ಉಪನದಿಗಳು ಮಲಿನವಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಇಷ್ಟೆಲ್ಲ ಮಲಿನದ ಆಗರವಾಗಿರುವ ಅರ್ಕಾವತಿ ಪುನಶ್ಚೇತನಕ್ಕೆ ಸಾಕಷ್ಟು ಪ್ರಯತ್ನಗಳು ನಡೆದಿವೆ. ಈ ಪ್ರಯತ್ನ ಹೋರಾಟಕ್ಕೆ ನಾಂದಿ ಅಷ್ಟೇ. ಇದರ ಜೊತೆಗೆ ನದಿ ಪಾತ್ರದ ಗ್ರಾಮಗಳಲ್ಲಿ ನದಿ ಕುರಿತು ಜಾಗೃತಿ ಮೂಡಬೇಕು. ನದಿ ಕಲುಷಿತಗೊಳಿಸುತ್ತಿರುವವರ ವಿರುದ್ಧ ದನಿ ಎತ್ತಬೇಕು. ನದಿ ಅಂಚಿನಲ್ಲೇ ನಾಗರಿಕತೆ ಆರಂಭಿಸಿರುವ ಎಲ್ಲರೂ ನದಿ ಉಳಿವಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು.


ಪುನಶ್ಚೇತನದ ಪ್ರಯತ್ನಗಳು
ಕಲುಷಿತ ಅರ್ಕಾವತಿ ನದಿ ಪುನಶ್ಚೇತನಕ್ಕೆ ಆಗ್ರಹಿಸಿ 2003ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಅವರ ಮಾರ್ಗದರ್ಶನದಲ್ಲಿ ಪಾದಯಾತ್ರೆ ಕೈಗೊಳ್ಳಲಾಯಿತು. ಆರಂಭದಿಂದಲೂ ಸ್ವರಾಜ್ ಸಂಸ್ಥೆ ಈ ಹೋರಾಟದಲ್ಲಿ ಕೈಜೋಡಿಸಿದೆ. ಸಂಸ್ಥೆಯ ದೊಡ್ಡಿ ಶಿವರಾಮ್ ನೇತೃತ್ವದ ತಂಡ ಎರಡು ಬಾರಿ ನದಿ ಪಾತ್ರದುದ್ದಕ್ಕೂ ಪಾದಯಾತ್ರೆ ಮಾಡಿ, ನದಿ ಪಾತ್ರದ ರೈತರಿಗೆ, ಜನಪ್ರತಿನಿಧಿಗಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

`ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ~ ಮತ್ತು `ಗ್ಲೋಬಲ್ ಅಕಾಡೆಮಿ ಟೆಕ್ನಾಲಜಿ~ ಸಂಸ್ಥೆಗಳು ಡಾ.ವೈ.ಲಿಂಗರಾಜು ಅವರ ನೇತೃತ್ವದಲ್ಲಿ ನದಿ ಪುನಶ್ಚೇತನದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿವೆ. ಮೇಲ್ಮನೆ ಉಪಸಭಾಪತಿ ವಿಮಲಾಗೌಡ ನೇತೃತ್ವದ ಸಮಿತಿ `ಅರ್ಕಾವತಿ ಮತ್ತು ಕುಮದ್ವತಿ ನದಿ ಪಾತ್ರಗಳ ಅಧ್ಯಯನ ನಡೆಸಿ ಇತ್ತೀಚೆಗಷ್ಟೇ ಸಭಾಪತಿಯವರಿಗೆ ವರದಿ ಸಲ್ಲಿಸಿದೆ. ಎರಡೂ ನದಿಗಳ ಪುನಶ್ಚೇತನಕ್ಕಾಗಿ ಕೆಲವು ಶಿಫಾರಸುಗಳನ್ನು ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT