ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ನೀತಿ: ಭಾರತದಿಂದ ಪಾಠ ಕಲಿಯಬೇಕು- ಹಿಲರಿ ಕ್ಲಿಂಟನ್

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): `ಅಮೆರಿಕವು ಜಾಗತಿಕವಾಗಿ  ಶಕ್ತಿಶಾಲಿ ಸ್ಥಾನದಲ್ಲಿರಬೇಕಿದ್ದರೆ ತನ್ನ ಆರ್ಥಿಕ ನೀತಿಯನ್ನು ವಿದೇಶಾಂಗ ನೀತಿಯ ಪ್ರಧಾನ ಅಂಶವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ನಾವು ಬ್ರೆಜಿಲ್ ಮತ್ತು ಭಾರತಗಳಿಂದ  ಪಾಠ ಕಲಿಯುವ ಅಗತ್ಯವಿದೆ~ ಎಂದು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
`ಎಕನಾಮಿಕ್ ಕ್ಲಬ್ ಆಫ್ ನ್ಯೂಯಾರ್ಕ್~ನಲ್ಲಿ  `ಆರ್ಥಿಕ ರಾಜತಾಂತ್ರಿಕತೆ~ ಕುರಿತ ಅವರು ಮಾತನಾಡಿದರು.

ಅಮೆರಿಕದ `ರಾಜತಾಂತ್ರಿಕ ವರಿಷ್ಠ ಮಂಡಳಿ~ಯು ಜಾಗತಿಕವಾಗಿ ಆರ್ಥಿಕ ನಾಯಕತ್ವ ಬಲಗೊಳಿಸಲು ಹಾಗೂ ಆಂತರಿಕವಾಗಿ ಆರ್ಥಿಕ ಪುನಶ್ಚೇತನ ನೀಡಲು ಬಯಸುತ್ತದೆ. ಆ ಮೂಲಕ ರಾಷ್ಟ್ರದ ಆರ್ಥಿಕ ಕ್ಷೇತ್ರದಲ್ಲಿ ಆಗುವ ಪ್ರತಿಯೊಂದು ಪರಿಷ್ಕರಣೆಯನ್ನು ವಿಶ್ವದ ಪ್ರತಿಯೊಂದು ರಾಯಭಾರ ಕಚೇರಿಗೂ ತಲುಪಿಸುತ್ತದೆ ಎಂದರು.

ಜಾಗತಿಕವಾಗಿ ಪ್ರಬಲ ರಾಷ್ಟ್ರಗಳಾಗಿ ಹೊರಹೊಮ್ಮುತ್ತಿರುವ ಭಾರತ ಮತ್ತು ಬ್ರೆಜಿಲ್‌ಗಳು ಆರ್ಥಿಕ ನೀತಿಯನ್ನು  ವಿದೇಶಾಂಗ ನೀತಿಯ ಪ್ರಧಾನ ಅಂಶವಾಗಿ ಪರಿಗಣಿಸುತ್ತವೆ.  ಹಾಗೆಯೇ ಅಮೆರಿಕ ಕೂಡ ತನ್ನ ವಿದೇಶಾಂಗ ನೀತಿಯ ಪ್ರತಿಯೊಂದು ಪ್ರಮುಖ ಹಂತದಲ್ಲಿ ಆರ್ಥಿಕ ದೃಷ್ಟಿಕೋನ ಅಳವಡಿಸಲು ಆದ್ಯತೆ ನೀಡಬೇಕು ಎಂದರು.

`ಈ ಎರಡು ರಾಷ್ಟ್ರಗಳ ನಾಯಕರು ಆಂತರಿಕವಾಗಿ ಎದುರಿಸುವ ಸವಾಲುಗಳಿಗೆ ನೀಡುವಷ್ಟೇ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಿಸಬೇಕಾದ ಸವಾಲುಗಳಿಗೂ ನೀಡುತ್ತಾರೆ. ಇಂತಹ ಯಾವುದೇ ಸವಾಲುಗಳಿಗೆ ಮುಖಾಮುಖಿಯಾಗುವ ಮೊದಲು ಅದರಿಂದ ತಮ್ಮ ರಾಷ್ಟ್ರದ ಆರ್ಥಿಕ ಪ್ರಗತಿಯ ಮೇಲಾಗುವ ಪರಿಣಾಮದ ಕುರಿತು ಚಿಂತಿಸುತ್ತಾರೆ. ಇಂತಹ ಪರಿಪಾಠವನ್ನು ನಾವು ಅನುಸರಿಸಬೇಕು~ ಎಂದರು.

ಜಾಗತಿಕ ನಿರ್ವಹಣಾ ಕಾರ್ಯತಂತ್ರ ಮತ್ತು ಜಾಗತಿಕ ಆರ್ಥಿಕ ಚಟುವಟಿಕೆಯು ವಿಶ್ವದ ಪೂರ್ವ ಭಾಗಕ್ಕೆ ಆಕರ್ಷಿತವಾಗುತ್ತಿದೆ. ಆದ್ದರಿಂದ ಅಮೆರಿಕ ಕೂಡ ಏಷ್ಯಾ ಪೆಸಿಫಿಕ್ ವಲಯದತ್ತ ಮುಖ ಮಾಡಿದೆ ಎಂದರು.

`ಬಂಡವಾಳ ಹೂಡಿಕೆ: ಶೀಘ್ರ ಮಾತುಕತೆ~
ನ್ಯೂಯಾರ್ಕ್ (ಪಿಟಿಐ): ಭಾರತವನ್ನು `ಏಷ್ಯಾ ಹುಲಿ~ ಎಂದು ಬಣ್ಣಿಸಿರುವ ಒಬಾಮ ಆಡಳಿತ, `ಮುಂದಿನ ಪೀಳಿಗೆ~ಯ ದ್ವಿಪಕ್ಷೀಯ ಬಂಡವಾಳ ಹೂಡಿಕೆ ಒಪ್ಪಂದ ಕುರಿತು ಭಾರತದೊಂದಿಗೆ ಶೀಘ್ರವೇ ತಾಂತ್ರಿಕ ಮಾತುಕತೆ ಆರಂಭಿಸಲಾಗುವುದು ಎಂದು ಹೇಳಿದೆ.

ಅಮೆರಿಕದ ವಿದೇಶಾಂಗ ಇಲಾಖೆ ಮತ್ತು ವಾಣಿಜ್ಯ ಪ್ರತಿನಿಧಿಗಳ ಇಲಾಖೆ ದ್ವಿಪಕ್ಷೀಯ ಬಂಡವಾಳ ಹೂಡಿಕೆ ಒಪ್ಪಂದಗಳ (ಬಿಐಟಿ) ಕುರಿತು ಮಾತು ಕತೆ ನಡೆಸಲಿವೆ.

`ಶೀಘ್ರದಲ್ಲಿ ಅಮೆರಿಕವು ಭಾರತದೊಂದಿಗೆ  ನೂತನ ಬಿಐಟಿ ಬಗ್ಗೆ ತಾಂತ್ರಿಕ ಮಟ್ಟದ ಮಾತುಕತೆಯನ್ನು ಆರಂಭಿಸಲಿದೆ~ ಎಂದು ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಶುಕ್ರವಾರ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಸೇರಿದ್ದ ಸಭೆಯಲ್ಲಿ ಹೇಳಿದರು.

ರಾಷ್ಟ್ರಕ್ಕೆ ಕೋಟ್ಯಂತರ ಡಾಲರ್ ಬಂಡವಾಳ ಆಕರ್ಷಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ಅಮೆರಿಕ ಈ ಒಪ್ಪಂದಗಳ ಬಗ್ಗೆ ಗಮನ ಹರಿಸುತ್ತಿದೆ.

ಭಾರತ ಮತ್ತು ಚೀನಾದಲ್ಲಿ ಅಮೆರಿಕದ ಕಂಪೆನಿಗಳು ಬಂಡವಾಳ ಹೂಡುವುದರಿಂದಲೂ ರಾಷ್ಟ್ರಕ್ಕೆ ಲಾಭವಿದೆ ಎಂದು ಕ್ಲಿಂಟನ್ ವಿವರಿಸಿದರು.

ವಿದೇಶಗಳಲ್ಲಿ ಬಂಡವಾಳ ಹೂಡುವುದರಿಂದ ಅಮೆರಿಕದ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ ಎಂಬ ಟೀಕೆಗಳು ಸಾಮಾನ್ಯವಾಗಿ ಅಮೆರಿಕದಲ್ಲಿ ಕೇಳಿ ಬರುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಮೆರಿಕವು ತನ್ನ ಆಂತರಿಕ ಅರ್ಥವ್ಯವಸ್ಥೆಯ ಅಭಿವೃದ್ಧಿ ಕಡೆಗೆ ಗಮನಕೊಡಬೇಕು ಎಂದು ಹಲವರು ಪ್ರತಿಪಾದಿಸುತ್ತಿದ್ದಾರೆ. ಆದರೆ  ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ನಮ್ಮ ಪ್ರತಿ ಸ್ಪರ್ಧಿಗಳೂ ಸುಮ್ಮನೆ ಕೂತಿಲ್ಲ. ನಾವೂ ಕೂಡ ವಿರಮಿಸಲು ಸಾಧ್ಯವಿಲ್ಲ~ ಎಂದು ಹಿಲರಿ ಅಭಿಪ್ರಾಯಪಟ್ಟರು.

ವಿದೇಶಿ ನೆಲೆಗಳಲ್ಲಿ ಅಮೆರಿಕದ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ತೈಲಕ್ಕಾಗಿ ರಫ್ತನ್ನು ಅವಲಂಬಿಸಿರುವುದು ಹಾಗೂ ರಾಷ್ಟ್ರೀಯ ಸಾಲದ ಸಮಸ್ಯೆ ರಾಷ್ಟ್ರಕ್ಕೆ ಆರ್ಥಿಕ ಸವಾಲುಗಳನ್ನು ಒಡ್ಡುವ ಜತೆಗೆ ವಿದೇಶಾಂಗ ನೀತಿಯ ಮೇಲೂ ದುಷ್ಪರಿಣಾಮ ಬೀರಬಹುದು ಎಂಬುದನ್ನು ನಾವು ಮನಗಾಣಬೇಕಿದೆ ಈ ಅಸ್ಥಿರತೆಯು ಬೇರೆ ರಾಷ್ಟ್ರಗಳಿಗೆ ನಮ್ಮ ವಿರುದ್ಧ ಮೇಲುಗೈ ಸಾಧಿಸಲು ಅವಕಾಶ ಕಲ್ಪಿಸಲಿದೆ ಎಂದರು.

`ಭವಿಷ್ಯದಲ್ಲಿ ಇವು ಅಮೆರಿಕದ ಜಾಗತಿಕ ನಾಯಕತ್ವಕ್ಕೆ ಸವಾಲಾಗಿ ಕಾಡಬಹುದು~ ಎಂದೂ ಎಚ್ಚರಿಸಿದರು.
`ಆರ್ಥಿಕ ಸ್ಥಿತಿ ಉತ್ತಮಗೊಳಿಸಲು,  ಮೂಲಸೌಕರ್ಯ ಒದಗಿಸಲು, ಸಾಲ ಪ್ರಮಾಣ ಕುಗ್ಗಿಸಲು ನಾವು ಕಾರ್ಯಪ್ರವೃತ್ತರಾಗಿದ್ದು,  ಹೊಸ ದಾರಿಗಳ ಹುಡುಕಾಟದಲ್ಲಿದ್ದೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT