ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ ಚರ್ಚೆ ನಡೆದೀತೇ?

ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಮೊದಲ ಅಧಿವೇಶನ
Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನಮಂಡಲದ ಚಳಿಗಾಲದ ಅಧಿವೇಶನ ಬುಧವಾರ ಬೆಳಗಾವಿಯಲ್ಲಿ ಆರಂಭ ಆಗಲಿದೆ. ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಮೊದಲ ಅಧಿವೇಶನವಾದ ಕಾರಣ  ಎಲ್ಲರ ದೃಷ್ಟಿ ಇತ್ತ ನೆಟ್ಟಿದೆ.

ರಾಜಧಾನಿಯ ವಿಧಾನಸೌಧದ ಪ್ರತಿರೂಪದಂತೆ, ಬೆಳಗಾವಿಯಿಂದ 10 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ಇರುವ ದಿಣ್ಣೆಯೊಂದರ ಮೇಲೆ ಸುವರ್ಣ ವಿಧಾನಸೌಧ ಇದೆ. ಹೊಸ ಸೌಧ. ಆಹ್ಲಾದಕರ ಪರಿಸರ. ಒಳಗೆ ನಡೆಯುವ ಚರ್ಚೆಯೂ ಔಚಿತ್ಯದ ನಿಟ್ಟಿನಲ್ಲಿ ಹೊಸ ಆಯಾಮ ಪಡೆಯಬಹುದೆ?

ಅಂತಹದೊಂದು ಸಂದೇಶವನ್ನು ರಾಜ್ಯದ ಜನತೆಗೆ ಇಲ್ಲಿಂದ ರವಾನಿಸಬೇಕು ಎಂಬುದು ವಿಧಾನಸಭೆ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರ ಆಶಯ. `ಅರ್ಥಪೂರ್ಣ ಚರ್ಚೆಗೆ ಸದಸ್ಯರು ಪಕ್ಷಭೇದ ಇಲ್ಲದೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ' ಎಂದು ಮಂಗಳವಾರ ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್, ಸುದ್ದಿಗಾರರೊಂದಿಗೆ ವಿಶ್ವಾಸದ ಮಾತನ್ನಾಡಿದರು.

ಅಧಿವೇಶನದ ಮೊದಲ ದಿನದ ಕಲಾಪವು ಸಂತಾಪ ಸೂಚನೆಯೊಂದಿಗೆ ಆರಂಭವಾಗಲಿದೆ. ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಈ ಅಧಿವೇಶನದಲ್ಲಿ ಒಟ್ಟು 16 ಮಸೂದೆಗಳು ಚರ್ಚೆಗೆ ಬರಲಿವೆ.

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮಗೊಳಿಸುವ ಉದ್ದೇಶದ ಮಸೂದೆಗೆ ಕಳೆದ ಅಧಿವೇಶನದಲ್ಲಿಯೇ ಅಂಗೀಕಾರ ದೊರೆತಿತ್ತು. ಆದರೆ, ತಾಂತ್ರಿಕ ಕಾರಣ ಮುಂದೊಡ್ಡಿ ರಾಜ್ಯಪಾಲರು ಅದನ್ನು ಮರುಪರಿಶೀಲನೆಗೆ ಹಿಂದಿರುಗಿಸಿದ್ದರು. ಆ ಮಸೂದೆ ಅದೇ ರೂಪದಲ್ಲಿ ಈಗ ಪುನಃ ಮಂಡನೆ ಆಗಲಿದೆ.

ಚುನಾವಣೆ ಹೊಸಿಲಲ್ಲಿರುವ ಕಾರಣ `ಅಕ್ರಮ-ಸಕ್ರಮ' ಮಸೂದೆಯನ್ನು ಈ ಅಧಿವೇಶನದಲ್ಲೇ ಅಂಗೀಕರಿಸಲು ಸರ್ಕಾರ ಪಣ ತೊಟ್ಟಿದೆ. ಇದಕ್ಕೆ ಪೂರಕ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ನೀಡುವ ಆರು ಮಸೂದೆಗಳು ಮಂಡನೆ ಆಗಲಿವೆ.

ಬತ್ತಳಿಕೆ: ಸರ್ಕಾರಕ್ಕೆ ನೀರಿಳಿಸಲು ಬೇಕಾದ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ತುಂಬಿಕೊಂಡು ಪ್ರತಿಪಕ್ಷಗಳು ಸಜ್ಜಾಗಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ, ರೈತರ ಸಾಲ ಮನ್ನಾ ಯೋಜನೆ ಜಾರಿಯಲ್ಲಿನ ಲೋಪದೋಷ, ಆಡಳಿತದ ಮೇಲೆ ಆಡಳಿತಾರೂಢ ಬಿಜೆಪಿ ಅಂತಃಕಲಹದ ಪರಿಣಾಮ...ಇವೇ ಮೊದಲಾದವುಗಳು ವಿರೋಧ ಪಕ್ಷಗಳ ಕೈಗೆ ಅಸ್ತ್ರ ಒದಗಿಸಿವೆ.

ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಎಸ್. ಯಡಿಯೂರಪ್ಪ ಪಕ್ಷ ತೊರೆದು ಕರ್ನಾಟಕ ಜನತಾ ಪಕ್ಷದ ಸಾರಥ್ಯ ವಹಿಸಿರುವ ಅಂಶವೂ ಸರ್ಕಾರವನ್ನು ಒಂದು ರೀತಿ ಅಡಕತ್ತರಿಗೆ ಸಿಲುಕಿಸಿದೆ. ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರವನ್ನು ಉರುಳಿಸುವ ಉದ್ದೇಶ ತಮಗೆ ಇಲ್ಲ ಎಂದು ಯಡಿಯೂರಪ್ಪ ಹೇಳುತ್ತಿರುವುದರ ಹಿಂದೆ ಸರ್ಕಾರದ ಉಳಿವಿನ ಕುರಿತ ಕಾಳಜಿಗಿಂತ ತಮ್ಮ ಬೆಂಬಲಿಗ ಸಚಿವ, ಶಾಸಕರ `ಹಿತರಕ್ಷಣೆ'ಯ ಕಾಳಜಿಯೇ ಮುಖ್ಯವಾಗಿದೆ ಎಂದು ಪ್ರತಿಪಕ್ಷಗಳ ಮುಖಂಡರು ದೂರುತ್ತಾರೆ. ಯಡಿಯೂರಪ್ಪ ಜತೆ ಗುರುತಿಸಿಕೊಂಡಿರುವ ಹಲವು ಶಾಸಕರು, ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ನೂಕಿದೆ. ವಿರೋಧ ಪಕ್ಷಗಳ ಮುಖಂಡರಲ್ಲಿ ಹುರುಪು ಹೆಚ್ಚಿಸಿದೆ. ಕೆಲವೇ ತಿಂಗಳುಗಳಲ್ಲಿ ಚುನಾವಣೆ ಎದುರಾಗಲಿರುವ ಕಾರಣ, ಇನ್ನು ಮುಂದೆ ಶಿಸ್ತಿನ ಕ್ರಮದ ಭೀತಿ ಇರುವುದು ಸಾಧ್ಯವೇ ಇಲ್ಲ. ಅದರ ದುರ್ಲಾಭದ ದನಿ ಸದನದಲ್ಲೂ ಮೊಳಗಿದರೆ ಸರ್ಕಾರ ಪೇಚಿಗೆ ಸಿಲುಕಬಹುದು.

ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯ ಕುರಿತು ಮಾತುಗಳು ಕೇಳಿಬರುತ್ತಿವೆ. ಬುಧವಾರ ಬೆಳಿಗ್ಗೆ ನಡೆಯಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಇದು ತೀರ್ಮಾನ ಆಗಲಿದೆ.

ಇದೇ 9ರಂದು ಹಾವೇರಿಯಲ್ಲಿ ಯಡಿಯೂರಪ್ಪ ತಮ್ಮ ಹೊಸ ಪಕ್ಷದ ಸಮಾವೇಶ ಆಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲೂ ವಾಗ್ಬಾಣಗಳು ವಿನಿಮಯ ಆಗಬಹುದು. ವಿಸ್ತರಿಸದೆ ಹೋದಲ್ಲಿ ಈ ಚಳಿಗಾಲದ ಅಧಿವೇಶನ ಇದೇ 12ಕ್ಕೆ ಅಂತ್ಯಗೊಳ್ಳಲಿದೆ.

ಸುವರ್ಣಸೌಧದ ತಂತಿಬೇಲಿಗೆ ತಾಗಿಕೊಂಡೇ ಹೊಲಗಳು ಹಸಿರಿನಿಂದ ನಳನಳಿಸುತ್ತಿವೆ. ಇಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನದ ಕಲಾಪವೂ ಅದೇ ರೀತಿ ಹಸಿರಾಗಲಿ ಎಂಬುದು ಸೌಧಕ್ಕೆ ಜಮೀನು ನೀಡಿರುವ ಹಲಗಾ-ಬಸ್ತವಾಡ ಗ್ರಾಮಗಳ ಜನರ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT