ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಶಾಸ್ತ್ರ ಶಾಲೆ: ಜಿಂದಾಲ್ ಹಿಂದೆ ಸರಿಯಲು ಕುಲಪತಿ ಅದಕ್ಷತೆ ಕಾರಣ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ಅರ್ಥ ಶಾಸ್ತ್ರ ಶಾಲೆ ಸ್ಥಾಪನೆ ಯೋಜನೆಯಿಂದ ಜಿಂದಾಲ್ ಸಮೂಹವು ಹಿಂದೆ ಸರಿಯಲು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್ ಅವರ ಅದಕ್ಷತೆಯೇ ಮುಖ್ಯ ಕಾರಣ~ ಎಂದು ವಿ.ವಿ.ಯ ಸಿಂಡಿಕೇಟ್ ಸದಸ್ಯ ಪ್ರೊ.ಕೆ.ವಿ.ಆಚಾರ್ಯ ಟೀಕಿಸಿದ್ದಾರೆ.

`ಉದ್ದೇಶಿತ ಯೋಜನೆಯ ಬಗ್ಗೆ ಪ್ರಾರಂಭದಿಂದಲೂ ಕುಲಪತಿಯವರು ಪಾರದರ್ಶಕವಾಗಿ ನಡೆದುಕೊಂಡಿಲ್ಲ. ಅದರ ಪರಿಣಾಮವೇ ಪ್ರಸ್ತಾವದ ಹಂತದಲ್ಲೇ ಯೋಜನೆ ಮುಗ್ಗರಿಸಿ ಬಿದ್ದಿದೆ~ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

`ಚೀಲದಲ್ಲಿದ್ದ ಬೆಕ್ಕು ಹೊರ ಬಂದಾಗಿದೆ. ಪ್ರಭುದೇವ್ ಅವರು ತಮ್ಮ ತಪ್ಪಿಗೆ ಇತರರ ಮೇಲೆ ಆರೋಪ ಹೊರಿಸುತ್ತಿದ್ದಾರೆ~ ಎಂದು ಮಾರ್ಮಿಕವಾಗಿ ಹೇಳಿರುವ ಅವರು, `ಉದ್ದೇಶಿತ ಶಾಲೆಯು ವಿ.ವಿ ಕಾಯ್ದೆ ಚೌಕಟ್ಟಿನಲ್ಲಿದೆಯೇ? ಎಂದು ಶೈಕ್ಷಣಿಕ ಪರಿಷತ್ತು ಮತ್ತು ಸಿಂಡಿಕೇಟ್ ಸದಸ್ಯರು ಪ್ರಶ್ನಿಸಿದ್ದನ್ನೇ ಅಪರಾಧವೆಂದು ಕುಲಪತಿಯವರು ಬಿಂಬಿಸುತ್ತಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

`ಮೊದಲಿನಿಂದಲೂ ವಿ.ವಿ.ಯ ಶೈಕ್ಷಣಿಕ ವಲಯವನ್ನು ಕುಲಪತಿಯವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ವಿ.ವಿ.ಯ ಭವಿಷ್ಯದ ಶೈಕ್ಷಣಿಕ ಯೋಜನೆಗಳ ಬಗ್ಗೆ ಕುಲಪತಿಯವರಿಗೆ ಸ್ಪಷ್ಟ ಚಿತ್ರಣ ಇಲ್ಲ. ಪರಿಣಾಮ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ (ಯುಜಿಸಿ) 50 ಕೋಟಿ ರೂಪಾಯಿ ವಿಶೇಷ ಅನುದಾನ ಪಡೆಯುವಲ್ಲಿ ಕುಲಪತಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ~ ಎಂದು ಅವರು ಹೇಳಿದ್ದಾರೆ.

`ಸದಾ ಪ್ರಚಾರಕ್ಕಾಗಿ ಹಂಬಲಿಸುವ ಪ್ರಭುದೇವ್ ಅವರು ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ವಿ.ವಿ. ಆವರಣದಲ್ಲಿ ಸೈಕಲ್ ಪಥ, ಭುವನೇಶ್ವರಿ ಪ್ರತಿಮೆ, 50 ಕೋಟಿ ರೂಪಾಯಿ ವೆಚ್ಚದ ಮಾಧ್ಯಮ ಶಾಲೆ, ಪೌರ ಜ್ಞಾನ ಕೋರ್ಸ್, ಭಯೋತ್ಪಾದನಾ ನಿಗ್ರಹ ಶಾಲೆ ಮೊದಲಾದವುಗಳನ್ನು ಸ್ಥಾಪಿಸು ವುದಾಗಿ ದಿಢೀರ್ ಹೇಳಿಕೆ ನೀಡುತ್ತಾರೆ. ಇವುಗಳಲ್ಲಿ ಯಾವುದೊಂದು ಇದುವರೆಗೆ ಕಾರ್ಯಗತವಾಗಿಲ್ಲ~ ಎಂದು ಅವರು ಲೇವಡಿ ಮಾಡಿದ್ದಾರೆ.

`ವಿ.ವಿ.ಯ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಸ್ವಲ್ಪವೂ ಆಸಕ್ತಿ ಇಲ್ಲದ ಕುಲಪತಿಯವರು ಪ್ರತಿನಿತ್ಯ ಕಚೇರಿಗೆ ಹೋಗಿ, ಪತ್ರಿಕಾ ಹೇಳಿಕೆಗಳನ್ನು ನೀಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ~ ಎಂದು ಅವರು ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT